ನಟ ಶಿವರಾಜಕುಮಾರ್‌ ಅರ್ಪಿಸಿ, ಅವರ ಪುತ್ರಿ ನಿವೇದಿತಾ ನಿರ್ಮಿಸಿರುವ ‘ಹನಿಮೂನ್‌’ ವೆನ್‌ ಸರಣಿ ಮೇ 20ರಿಂದ Voot Selectನಲ್ಲಿ ಸ್ಟ್ರೀಮ್‌ ಆಗಲಿದೆ. ನಾಗಭೂಷಣ್‌ ಮತ್ತು ಸಂಜನಾ ಆನಂದ್‌ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಗಭೂಷಣ್‌ ಮತ್ತು ಸಂಜನಾ ಆನಂದ್‌ ನಟನೆಯ ವೆಬ್‌ ಸರಣಿ ‘ಹನಿಮೂನ್‌’ Voot Selectನಲ್ಲಿ ಮೇ 20ರಿಂದ ಸ್ಟ್ರೀಮ್‌ ಆಗಲಿದೆ. ಆರು ಕಂತುಗಳ ವೆಬ್ ಸೀರೀಸ್ ಅನ್ನು ನಟ ಶಿವರಾಜ್ ಕುಮಾರ್ ಅರ್ಪಿಸುತ್ತಿದ್ದಾರೆ. ಅವರ ಪುತ್ರಿ ನಿವೇದಿತಾ ಸರಣಿಯ ನಿರ್ಮಾಪಕಿ. ಇದು ತಿಳಿಹಾಸ್ಯದ ಪ್ರೇಮಕತೆ. ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಾಗಭೂಷಣ್ ಹನಿಮೂನ್ ಸರಣಿಯ ಮುಖ್ಯಪಾತ್ರದಲ್ಲಿದ್ದಾರೆ. ಈ ಸೀರೀಸಿನ ಬರವಣಿಗೆಯೂ ಅವರದ್ದೆ. ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ಇದ್ದಾರೆ. ಹೊಸದಾಗಿ ಮದುವೆಯಾದ ಹುಡುಗನಿಗೆ ದಾರಿ ತೋರಿಸುವ ‘ಸೂತ್ರ’ಧಾರಿಯಾಗಿ ಚಿತ್ರನಿರ್ದೇಶಕ ಲೂಸಿಯಾ ಪವನ್ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟ್ಟಿಗೆ ಇತರೆ ಪಾತ್ರಗಳಲ್ಲಿದ್ದಾರೆ.

ವೆಬ್ ಸರಣಿ ಕುರಿತು ಮಾತನಾಡಿದ ನಟ ಶಿವರಾಜಕುಮಾರ್‌, “ನಮ್ಮ ಸುತ್ತ ಸಾಕಷ್ಟು ಹೊಸ ಕತೆಗಳಿವೆ. ಅಂಥ ಕತೆಗಳನ್ನು ಬೆಂಬಲಿಸುತ್ತಿರುವ Voot ಬಗ್ಗೆ ಮೆಚ್ಚುಗೆ ಇದೆ. ಈ ಪ್ರಾಜೆಕ್ಟಿನಲ್ಲಿ ನನ್ನ ಮಗಳೂ ಕೆಲಸ ಮಾಡಿರೋದ್ರಿಂದ ಹನಿಮೂನ್ ನನ್ನ ಮನಸಿಗೆ ಇನ್ನಷ್ಟು ಹತ್ತಿರವಾಗಿದೆ’ ಎನ್ನುತ್ತಾರೆ. “ಇದು ಅರೇಂಜ್ಡ್‌ ಮ್ಯಾರೇಜುಗಳ ಕತೆ. ಹನಿಮೂನ್ ಅನ್ನುವುದು ಬರೀ ಮಜಾ ಅಲ್ಲ. ಗಂಡು ಹೆಣ್ಣು ತಮ್ಮ ಹೊಸ ಬದುಕನ್ನು ಜೋಡಿಸಿಕೊಳ್ಳುವುದು ಹನಿಮೂನಲ್ಲೇ. ಒಂದಷ್ಟು ಕುತೂಹಲ, ಒಂದಷ್ಟು ಫಜೀತಿ, ಒಂದಷ್ಟು ಗುಟ್ಟುಗಳು, ಒಂದಷ್ಟು ಒದ್ದಾಟಗಳು ಹೊಸ ಜೋಡಿಯೊಂದನ್ನು ಹೇಗೆ ಹತ್ತಿರಕ್ಕೆ ತಂದು ಮುಂದಿನ ಬದುಕಿಗೆ ತಯಾರು ಮಾಡುತ್ತವೆ ಅನ್ನುವುದು ಇಲ್ಲಿನ ಕತೆ. ಹೊಸದಾಗಿ ಮದುವೆಯಾದ ಜೋಡಿಗಳು ಇದರಲ್ಲಿ ತಮ್ಮನ್ನು ತಾವು ಕಾಣುತ್ತಾರೆ” ಎನ್ನುವುದು ಹೀರೋ ನಾಗಭೂಷಣ್‌ ಮಾತು.

Previous articleವೀಕೆಂಡ್‌ಗೆ ZEE5ನಲ್ಲಿ ಮೂರು ಸಿನಿಮಾಗಳು
Next articleಐಪಿಎಲ್‌ ಬೆಟ್ಟಿಂಗ್‌ ಸುತ್ತಲಿನ ಕಣ್ಣೀರಿನ ಕತೆಗಳು

LEAVE A REPLY

Connect with

Please enter your comment!
Please enter your name here