ವಿಶಿಷ್ಟ ಸಿನಿಮಾಗಳ ಮೂಲಕ ತಮ್ಮದೇ ಹಾದಿ ಕಂಡುಕೊಂಡಿರುವ ಸಿಂಪಲ್‌ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ವಿನಯ್‌ ರಾಜಕುಮಾರ್‌, ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ಚಿತ್ರದ ತಾರೆಯರು. ರಾಘವೇಂದ್ರ ರಾಜಕುಮಾರ್‌ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಸಿಂಪಲ್‌ ಸುನಿ ನಿರ್ದೇಶನದಲ್ಲಿ ವಿನಯ್‌ ರಾಜಕುಮಾರ್‌ ನಟಿಸುತ್ತಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಮೈಸೂರಿನಲ್ಲಿ ಚಿತ್ರದ ಕೊನೆಯ ದಿನದ ಚಿತ್ರೀಕರಣ ನಡೆದಿದೆ. ಹೀರೋ ವಿನಯ್‌ ತಂದೆ, ನಟ ರಾಘವೇಂದ್ರ ರಾಜಕುಮಾರ್‌ ಸಿನಿಮಾದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮುಕ್ತಾಯಗೊಳಿಸಿರುವ ಚಿತ್ರತಂಡ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿದೆ. ಚಿತ್ರದ ಬಗ್ಗೆ ನಿರ್ದೇಶಕ ಸುನಿ ಮಾಹಿತಿ ನೀಡಿ, ‘ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಸಂಗೀತಮಯ ಜರ್ನಿ. ಸಿನಿಮಾದಲ್ಲಿ 11 ಹಾಡುಗಳಿವೆ. ವಿವಿಧ ಪ್ರಕಾರದ ಸಂಗೀತ ಹಾಡುಗಳಲ್ಲಿ ಕೇಳಿಸಲಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ತಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದರು.

‘ಈ ಸಿನಿಮಾದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್‌ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ಮಾಡಿಕೊಟ್ಟರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ. ಸುನಿ ಅವರಂತೂ ಒಬ್ಬ ಕಲಾವಿದನಿಗೆ ನಟಿಸಲು ತುಂಬ ಕಂಫರ್ಟ್ ಫೀಲ್ ಕೊಡ್ತಾರೆ. ಆಕ್ಟಿಂಗ್ ಮಾಡಲು ಟ್ರೈ ಮಾಡುವುದು ಬೇಡ. ಅದು ತಾನಾಗಿಯೇ ಬರುತ್ತದೆ’ ಎನ್ನುವುದು ಹೀರೋ ವಿನಯ್‌ ರಾಜಕುಮಾರ್‌ ಅನುಭವ. ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆಯಿದ್ದು, ಸಂಗೀತ ಸಂಯೋಜಕ ವೀರ್‌ ಸಮರ್ಥ್‌ ಅವರ ಜವಾಬ್ದಾರಿ ದೊಡ್ಡದಿದೆ. ವೀರ್‌ ಸಮರ್ಥ್‌ ಮಾತನಾಡಿ, ‘ನನ್ನ ಸಿನಿಮಾ ಕರಿಯರ್‌ನ ಅತ್ಯಂತ ಉತ್ಕೃಷ್ಟ ಸಂಗೀತ ಸಿನಿಮಾ ಇದು. ಸಿನಿಮಾದಲ್ಲಿ 11 ಹಾಡುಗಳಿದ್ದು, ಚಿತ್ರಕಥೆ ಮಧ್ಯೆ ಚಿಕ್ಕ ಚಿಕ್ಕ ಬೀಟ್ ಬರುತ್ತವೆ. 2 ಗಂಟೆ 20 ನಿಮಿಷಗಳ ಸಿನಿಮಾದ ಪ್ರತೀ ಸೀನ್‌ಗಳು ಮ್ಯೂಸಿಕ್ ಜೊತೆ ಕನೆಕ್ಟ್ ಆಗುತ್ತವೆ’ ಎನ್ನುತ್ತಾರೆ.

ಹಿರಿಯ ನಟ, ಚಿತ್ರನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಸುನಿ ಅವರ ಸಿನಿಮಾಗಳಲ್ಲಿ ನನ್ನ ಮಗ ನಟಿಸುತ್ತಿರುವುದು ದೊಡ್ಡ ವಿಷಯ. ಸಂಗೀತ ಅಂದರೆ ಏಳು ಸ್ವರಗಳು ಇರುತ್ತವೆ. ನನ್ನ ಒಂದು ಸ್ವರವಾಗಿ ಸೇರಿಸಿಕೊಂಡಿದ್ದಾರೆ. ಅದು ಸಂತೋಷ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸುಗಮವಾಗಿ ನಡೆಯಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಮೈಸೂರು ರಮೇಶ್‌ ನಿರ್ಮಾಣದ ಈ ಚಿತ್ರದ ಇಬ್ಬರು ನಾಯಕಿಯರಾಗಿ ಸ್ವಾತಿಷ್ಠ ಕಷ್ಣನ್‌ ಮತ್ತು ಮಲ್ಲಿಕಾ ಸಿಂಗ್‌ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಚಿತ್ರದ ಇತರೆ ಪ್ರಮುಖ ಕಲಾವಿದರು. ಆದಿ ಸಂಕಲನ, ಕಾರ್ತೀಕ್‌ ಕ್ಯಾಮೆರಾ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here