ನೀನಾಸಂ ಸತೀಶ್ ಅಭಿನಯದ ‘ಅಶೋಕ ಬ್ಲೇಡ್’ ಎನ್ನುವ ವಿಶಿಷ್ಟ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. ವರ್ತರಕು ಮತ್ತು ಕಾರ್ಮಿಕರ ಮಧ್ಯೆ ನಡೆಯುವ ಸಂಘರ್ಷವನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಕಾವ್ಯ ಶೆಟ್ಟಿ ಚಿತ್ರದ ನಾಯಕಿ.
“ದಿನ ಬೆಳಗಾದರೆ ಹಲವು ನಿರ್ದೇಶಕರು ಬಂದು ಕತೆ ಹೇಳುತ್ತಾರೆ. ಆದರೆ, ಈ ಕತೆ ಹುಡುಕಿದ್ದು ನಾನೇ. ಸ್ನೇಹಿತರ ಮೂಲಕ ದಯಾನಂದ್ ಅವರ ಬಳಿ ಒಳ್ಳೆಯ ಕತೆ ಇದೆ ಎಂದು ಕೇಳಿದೆ. ತರಿಸಿ ಓದಿದೆ. ತಕ್ಷಣ ಈ ಚಿತ್ರವನ್ನು ಮಾಡಬೇಕು ಎಂದನಿಸಿತು. ಇದೊಂದು ದೊಡ್ಡ ಕ್ಯಾನ್ವಾಸ್ನ ಚಿತ್ರ. ಒಂದು ಐತಿಹಾಸಿಕ ಯುದ್ಧವಿದೆ. 10 ನಿಮಿಷಗಳ ಕಾಲ ಸಾವಿರ ಜನ ಭಾಗವಹಿಸುವ ಯುದ್ಧ. ಅದನ್ನು ವಿನೋದ್ ಸಮರ್ಥವಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಇದೆ. ಈ ಯುದ್ಧದಲ್ಲಿ ಒಬ್ಬ ಸೂಪರ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ. ಉತ್ತರಖಾಂಡ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾಳೆಯಿಂದ ಚಿತ್ರೀಕರಣ ಶುರುವಾಗಲಿದ್ದು, ನಾನು ಜುಲೈನಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದೇನೆ” ಎಂದರು ನಟ ನೀನಾಸಂ ಸತೀಶ್.
ಅವರು ಹೀರೋ ಆಗಿ ನಟಿಸುತ್ತಿರುವ ‘ಅಶೋಕ ಬ್ಲೇಡ್’ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಆರಂಭಫಲಕ ತೋರಿದರೆ, ಟಿ.ಎನ್.ಸೀತಾರಾಂ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರ ನಿರ್ದೇಶಿಸುತ್ತಿರುವ ವಿನೋದ್ ದೋಂಡಾಳೆ ಮಾತನಾಡಿ, “ನಾನು ಹಲವಾರು ವರ್ಷಗಳಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಿ.ಶೇಷಾದ್ರಿ, ಟಿ.ಎನ್. ಸೀತಾರಾಂ ಅವರ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕ ಮತ್ತು ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ವರ್ಧನ್ ಮತ್ತು ದೀಪಕ್ ನಾಯ್ಡು ಅವರ ಪರಿಚಯವಾಯಿತು. ಮೂರು ಜನ ಸೇರಿ 10 ವರ್ಷಗಳ ಹಿಂದೆ ಒಂದು ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿ, ಹಲವು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದೇವೆ. ಒಂದು ಚಿತ್ರ ನಿರ್ಮಾಣ ಮಾಡುವ ಯೋಚನೆ ಇತ್ತು. ಟಿ.ಕೆ. ದಯಾನಂದ್ ಅವರ ಹತ್ತಿರ ಒಂದೊಳ್ಳೆಯ ಕತೆ ಇದೆ ಎಂದು ಗೊತ್ತಾಯಿತು. ಕತೆ ಕೇಳಿದಾಗ ಬಹಳ ಇಷ್ಟವಾಯಿತು. ಇದೇ ನಮ್ಮ ಸಂಸ್ಥೆಯ ಮೊದಲ ಚಿತ್ರವಾಗಬೇಕು ಎಂದು ತೀರ್ಮಾನಿಸಿ ಚಿತ್ರ ಮಾಡುತ್ತಿದ್ದೇವೆ. ಸತೀಶ್ ನೀನಾಸಂ ಸಹ ಕೈ ಜೋಡಿಸಿದ್ದಾರೆ. ವರ್ತಕರು ಮತ್ತು ಕಾರ್ಮಿಕರ ನಡುವೆ ನಡೆಯುವ ಯುದ್ಧದ ಕುರಿತು ಈ ಚಿತ್ರಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಚಿತ್ರದ ನಾಯಕಿ ಕಾವ್ಯ ಶೆಟ್ಟಿ ಇಲ್ಲಿ ಮೊದಲ ಬಾರಿ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಬಹಳ ಒಳ್ಳೆಯ ಪಾತ್ರ ಇದು. ಚಿತ್ರವು ಎರಡು ಕಾಲಘಟ್ಟಗಳಲ್ಲಿ ನಡೆಯಲಿದೆ” ಎಂದು ಅವಕಾಶಕ್ಕಾಗಿ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದರು. ಚಿತ್ರಕ್ಕೆ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿರುವ ಟಿ.ಕೆ.ದಯಾನಂದ್ ಮಾತನಾಡಿ, “ನನಗೆ ಈ ಕಥೆ ಬಹಳ ವಿಶೇಷ. ಮೈಸೂರು ಸೀಮೆಯಲ್ಲಿ 70ರ ದಶಕದಲ್ಲಿ ನಡೆದ ಒಂದು ಘಟನೆ ಬಗ್ಗೆ ಕೇಳಿದ್ದೆ. ಅದು ಎಲ್ಲೂ ದಾಖಲಾಗಿಲ್ಲ. ಎಲ್ಲೂ ಅದರ ಬಗ್ಗೆ ಉಲ್ಲೇಖವಿಲ್ಲ. ಕೊನೆಗೆ ಆ ಕತೆಯ ವಿವರಗಳನ್ನು ಹುಡುಕಿಕೊಂಡು ಹೋದಾಗ ಹಲವು ಮಹತ್ವದ ವಿಷಯಗಳು ಗೊತ್ತಾದವು. ಇದು ಕನ್ನಡ ನೆಲದ ವೀರರ ಕತೆ. ಯುದ್ಧ ಎಂದರೆ ಯುದ್ಧಭೂಮಿ ಅಥವಾ ಸಾಮ್ರಾಜ್ಯ ವಿಸ್ತರಣೆಯ ಕತೆಯಲ್ಲ. ಎರಡು ಸಮುದಾಯಗಳ ಕುರಿತ ಕತೆ ಇದೆ. ವ್ಯಾಪಾರಿಗಳು ಮತ್ತು ಕಾರ್ಮಿಕರ ನಡುವಿನ ಕತೆ ಇದೆ. ಇದರಲ್ಲಿ ಭಾಗವಹಿಸಿದ ಕೆಲವರನ್ನು ಹುಡುಕಿ ಮಾತಾಡಿಸಿದೆ. ಒಂದಿಷ್ಟು ಮಾಹಿತಿ ಸಿಕ್ಕಿತು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೇನೆ. ಈ ಕತೆ ಎಲ್ಲರಿಗೂ ಇಷ್ಟವಾಗಿದೆ” ಎಂದರು. ಪೂರ್ಣಚಂದ್ರ ತೇಜಸ್ವಿ ಸಂಗೀತ, ಲವಿತ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.