ಇಲ್ಲಿ ಅಂಬರ್ ನಿರಪರಾಧಿಯೇ? ಬಹುಶಃ ಅಲ್ಲ. ಒಟ್ಟಾರೆಯಾಗಿ ನೋಡಿದರೆ ಆ ಸಂಬಂಧ ಒಂದು ಟಾಕ್ಸಿಕ್ ಸಂಬಂಧ. ಪರಸ್ಪರರನ್ನು ಹುಚ್ಚರಂತೆ ಕಾಡಿಸುವ, ಪ್ರೀತಿಸುವ ಸಂಬಂಧ – ‘Johney Vs Amber’ ಡಾಕ್ಯುಮೆಂಟರಿ Discovery Plusನಲ್ಲಿ ಸ್ಟ್ರೀಮ್ ಆಗುತ್ತಿದೆ.
‘ಹಾತ್ ಚೂಟೆ ತೋ ಭೀ ರಿಶ್ತಾ ನಹೀ ತೋಡಾ ಕರತೆ ಹೈ’ ಇದು ಗುಲ್ಜಾರ್ ಹಾಡಿನ ಒಂದು ಸಾಲು – ಕೈಗಳು ಬೇರ್ಪಟ್ಟರೂ ಸಂಬಂಧಗಳನ್ನು ಮುರಿದುಕೊಳ್ಳಬಾರದು. ಆದರೆ ಕೈಜಾರಿದ ಸಂಬಂಧಗಳನ್ನು ಕೈ ಮೀರದಂತೆ ಉಳಿಸಿಕೊಳ್ಳುವುದೇನು ಅಷ್ಟು ಸುಲಭವೆ? ಯಾವ ಬೇರ್ಪಡುವಿಕೆಯೂ ಸರಳವಲ್ಲ. ಸಂಬಂಧಗಳ ಒಂದು ವಾಸ್ತವ ಎಂದರೆ ಅದು ಒಬ್ಬರ ನಿರ್ಧಾರ ಅಲ್ಲ, ಅಲ್ಲಿ ಇಬ್ಬರು ಭಾಗಿಯಾಗಿರುತ್ತಾರೆ. ಕೈಬಿಡಿಸಿಕೊಳ್ಳಬೇಕು ಎಂದು ಒಬ್ಬರಿಗೆ ಅನ್ನಿಸಿದ ಕ್ಷಣದಲ್ಲಿ ಇನ್ನೊಬ್ಬರು ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿರಬಹುದು. ಆಗ ಕೈ ಕಳಚಿಕೊಳ್ಳುವಿಕೆ ಸರಳವಲ್ಲ. ಅಕಸ್ಮಾತ್ ಇಬ್ಬರಿಗೂ ಒಮ್ಮೆಗೇ ಕೈಕಳಚಿಕೊಳ್ಳಬೇಕು ಅನ್ನಿಸಿದರೂ ಆ ಕ್ಷಣದಲ್ಲಿ ಅವರಿಬ್ಬರ ಮನಸ್ಸಿನ ನೆನಪುಗಳಲ್ಲಿ ಸಿಹಿ, ಕಹಿ, ದುಃಖ, ದುಗುಡ ಎಲ್ಲವೂ ಒಂದೇ ತೂಕದಲ್ಲಿ, ಒಂದೇ ನೆಲೆಯಲ್ಲಿ ಇರಲು ಸಾಧ್ಯವೆ? ಒಬ್ಬರ ಮನಸ್ಸಿನಲ್ಲಿಯೇ ಭಾವಗಳ ತೂಕ ಒಂದೊಂದು ಸಮಯಕ್ಕೆ ಒಂದೊಂದು ರೀತಿ ಇರುವಾಗ… ಎಲ್ಲವೂ ಅದೆಷ್ಟು ಗೋಜಲು.
ಹಾಗಾಗಿಯೇ ಯಾವುದೇ ಗಂಡ ಹೆಂಡತಿಯ ನಡುವಿನ ಸಂಬಂಧವನ್ನು ಇದಂಇಥಂ ಎಂದು ಹೇಳಲಾಗುವುದೇ ಇಲ್ಲ. ಹೊರಗಿನ ಸಂಬಂಧಗಳಲ್ಲಿ ಏನೋ ಆಗಿರುವವರು ಮುಚ್ಚಿದ ಬಾಗಿಲಿನ ಹಿಂದೆ ಇನ್ನೇನೋ ಆಗಿರಬಹುದು. ಮಳೆಯೆಲ್ಲಾ ನಿಂತ ಮೇಲೂ, ಮಾತೆಲ್ಲಾ ಮುಗಿದ ಮೇಲೂ ಸತ್ಯ ಇದೆ ಮತ್ತು ಇದು ಮಾತ್ರವೇ ಎಂದು ಹೇಳಲು ಸಾಧ್ಯವಾಗುವುದೇ ಇಲ್ಲ. ಇದು ಯಾವ ವಿಚ್ಛೇದನದ ಪಾಲಿಗೂ ಸಲ್ಲುವ ಸತ್ಯ. ಆದರೆ ಈ ಮಾತನ್ನು ನಿಕಷಕ್ಕೊಡ್ಡಿದ್ದು ಬಹುಶಃ ಈ ದಶಕದ ವಿಚ್ಛೇದನ ಎಂದು ಕರೆಯಬಹುದಾದ ಜಾನಿ ಡೆಪ್ ಮತ್ತು ಅಂಬರ್ ಹಾರ್ಡ್ ನಡುವಿನ ಬಹಿರಂಗ ಕೆಸರೆರೆಚಾಟ. ಇದು ವಿಚ್ಛೇದನದ ನಂತರ ನಡೆದ ಪಂಚಾಯಿತಿ. ವೆಬ್ ಸರಣಿಗಳಲ್ಲಿ ಸೀಸನ್ 1, 2 ಎಂದು ಬಂದ ಹಾಗೆ ಈ ವಿಚ್ಛೇದನ ಸಹ ಒಬ್ಬೆಒಬ್ಬೆಯಾಗಿ ಹೊಸ ವಿವರ, ಧ್ವನಿ, ಚಿತ್ರ, ಸಾಕ್ಷಿಗಳನ್ನು ಒಳಗೊಂಡು, ಇಂದಿನ ದೋಸೆ ಮರುದಿನಕ್ಕೆ ಈರುಳ್ಳಿ ದೋಸೆಯಾಗಿ, ಅದರ ಮರುದಿನಕ್ಕೆ ಪಡ್ಡುವಾಗಿ ಹಳೆಹಿಟ್ಟು ಹೊಸ ರೂಪವನ್ನು ಪಡೆದಂತೆ ಜನರ ಮುಂದೆ ಬರುತ್ತಲಿದೆ. ಮೊನ್ನೆ ಮೊನ್ನೆ ಬಂದ ತೀರ್ಪು ಸದ್ಯದ ಬಿಸಿಬಿಸಿ ದೋಸೆ.
ಆದರೆ ಇದಕ್ಕೂ ಮೊದಲೇ ಇವರಿಬ್ಬರಿಗೂ ಸಂಬಂಧಿಸಿದಂತೆ ಒಂದು ಪ್ರಕರಣ ಇಂಗ್ಲೆಂಡಿನ ಕೋರ್ಟಿನ ಮೆಟ್ಟಿಲೇರಿತ್ತು. ಇವರಿಬ್ಬರ ಬೇರ್ಪಡುವಿಕೆಯ ನಂತರ ಅಲ್ಲಿನ ಪ್ರಭಾವಿ ಪತ್ರಿಕೆ ‘ಸನ್’ ಡೆಪ್ನನ್ನು ‘Wife Beater’ ಎಂದು ಕರೆದಿತ್ತು. ಒಂದು ದಶಕದ ಹಿಂದೆ ಆಗಿದ್ದರೆ ಬಹುಶಃ ಡೆಪ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಈ ಆರೋಪ ಅವನ ಕೆಲಸದ ಕಾಂಟ್ರಾಕ್ಟ್ಗಳ ಮೇಲೆ ಪರಿಣಾಮ ಬೀರುವಂತಾಯಿತು. ಅವನ ಕೈನಿಂದ ಒಂದೆರಡು ಮಹತ್ವದ ಪ್ಪ್ರಾಜೆಕ್ಟ್ಗಳು ಕೈಜಾರಿದವು. ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲೇಬೇಕಾಗಿ ಬಂದು ಡೆಪ್ ನ್ಯಾಯಾಲಯದ ಮೆಟ್ಟಿಲೇರಿದ. ಇಲ್ಲಿ ಆತ ಸಾಬೀತು ಪಡಿಸಿಕೊಳ್ಳಬೇಕಾಗಿದ್ದದ್ದು ಎರಡುಕಡೆ : ಒಂದು ಕಾನೂನಿನ ಕಣ್ಣು, ಇನ್ನೊಂದು ಸಾರ್ವಜನಿಕ ಅಭಿಪ್ರಾಯ. ಅವನ ಮೇಲಿದ್ದ ಪತ್ನಿಪೀಡಕ ಆರೋಪದ ಮಟ್ಟಿಗೆ ಹೇಳುವುದಾದರೆ, ಕಾನೂನಿನ ಕ್ಲೀನ್ ಚಿಟ್ಗಿಂತ ಅವನಿಗೆ ಮುಖ್ಯವಾದದ್ದು ಸಾರ್ವಜನಿಕ ಸದಭಿಪ್ರಾಯ. ಸಾರ್ವಜನಿಕ ಜೀವನದಲ್ಲಿರುವವರಿಗೆ ಅದು ಬಹಳ ಮುಖ್ಯ! ಅದಕ್ಕಾಗಿಯೇ ಏನೇನೋ ತಿಪ್ಪರಲಾಗ ಹಾಕುವವರನ್ನು ನಾವೇ ನೋಡಿದ್ದೇವೆ. ಇದಕ್ಕಾಗಿ 2020ರಲ್ಲಿ ನಡೆದ ಕೋರ್ಟ್ ಕಲಾಪದ ಸುತ್ತಮುತ್ತಲೂ ತಯಾರಾಗಿರುವ ಸರಣಿ ಜಾನಿ ವರ್ಸಸ್ ಆಂಬರ್. ಡಿಸ್ಕವರಿಯಲ್ಲಿ ಇದು ಪ್ರಸಾರವಾಗುತ್ತಿದೆ.
ಇದು ಎರಡು ಭಾಗಗಳ ಡಾಕ್ಯುಮೆಂಟರಿ. ಇಲ್ಲಿ ತೋರಿಸಲಾಗಿರುವುದು ಲಂಡನ್ನಲ್ಲಿ ‘ಸನ್’ ಪತ್ರಿಕೆಯ ವಿರುದ್ಧ ಜಾನಿ ಡೆಪ್ ಮಾಡಿದ್ದ ಆರೋಪದ ವಿಚಾರಣೆ. ಒಂದು ರಾಶಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತದೆ. ಎರಡು ಭಾಗಗಳ ಈ ಡಾಕ್ಯುಮೆಂಟರಿಯಲ್ಲಿ ಮೊದಲ ಭಾಗ ಜಾನಿ ಡೆಪ್ನ ವಾದವನ್ನು ಮಂಡಿಸಿದರೆ, ಎರಡನೆಯ ಭಾಗ ಅಂಬರ್ ದೃಷ್ಟಿಯಲ್ಲಿ ಮಾತನಾಡುತ್ತದೆ. ಎರಡೂ ಪಕ್ಷಗಳ ವಕೀಲರ ಜೊತೆ ಮಾತಕತೆ ಆಡಲಾಗಿದೆ, ವಿಷಯವನ್ನಿಟ್ಟುಕೊಂಡು ಪರ -ವಿರೋಧಗಳ ನೆಲೆಯಲ್ಲಿ ಚರ್ಚಿಸಲಾಗಿದೆ. ಇಬ್ಬರ ಸಂಬಂಧಿಕರು, ಸ್ನೇಹಿತರು ಇಲ್ಲಿ ಮಾತನಾಡುತ್ತಾರೆ. ಡೆಪ್ನ ಸಿಟ್ಟಿನ ಪರಿಣಾಮವನ್ನು ಅಂಬರ್ ರೆಕಾರ್ಡ್ ಮಾಡಿದ ಮೇಲೆ ಅವಳ ಮೇಲೆ ಸುಳಿದ ಆ ಸಣ್ಣ ನಗುವನ್ನು ನಾವು ನೋಡಿದ್ದೇವೆ. ಅವಳನ್ನು ಅಳೆದಿದ್ದೇವೆ. ಆದರೆ ನಾವು ಮರೆಯಲಾಗದ ಇನ್ನೊಂದು ದೃಶ್ಯ ಜಾನಿ ಡೆಪ್, ಕೋಣೆಯ ಕಬೋರ್ಡ್ಗಳನ್ನು ಸಿಟ್ಟಿನಲ್ಲಿ ಒದೆಯುತ್ತಿದ್ದ ರೀತಿ. ಅಂಬರ್ ಎಸೆದ ಬಾಟಲಿಯಿಂದ ಅವನ ಕೈಬೆರಳಿನ ಒಂದು ಭಾಗವೇ ಎದ್ದುಹೋಗಿದೆ. ಅದೇ ಸಮಯದಲ್ಲಿ ಅವನು ತೆಗೆದುಕೊಳ್ಳುತ್ತಿದ್ದ ಡ್ರಗ್ಗಳ ಹೆಸರಿನ ಪಟ್ಟಿ ಗಾಬರಿ ಹುಟ್ಟಿಸುತ್ತದೆ. ಹಾಲಿವುಡ್ಗೆ ಹೊರಗಿನವನಾಗಿದ್ದ ಡೆಪ್ ಇಲ್ಲಿಗೆ ಬಂದು ಹೆಜ್ಜೆಯೂರಿದ್ದು, ಅಪಾರವಾದ ಖ್ಯಾತಿ, ಜನಪ್ರಿಯತೆ ಗಳಿಸಿದ್ದು, ವೆನ್ನಿಸ್ಸಾ ಪ್ಯಾರಡಿಸ್ಳೊಂದಿಗಿನ ತನ್ನ 14 ವರ್ಷಗಳ ಮದುವೆ ಮುರಿದುಕೊಂಡು ತನ್ನ ವಯಸ್ಸಿನ ಸುಮಾರು ಅರ್ಧದಷ್ಟು ವಯಸ್ಸಿನ ಅಂಬರ್ಳನ್ನು ಪ್ರೇಮಿಸಿ ವರಿಸಿದ್ದು ಎಲ್ಲವನ್ನೂ ವಿವರಿಸಲಾಗಿದೆ. ಡೆಪ್ನನ್ನು ಮದುವೆಯಾಗುವ ಮೊದಲು ಇದ್ದ ಅಂಬರ್ಳ ಸಲಿಂಗ ಸಂಬಂಧದ ಬಗ್ಗೆ ಹೇಳಲಾಗಿದೆ, ಅವಳ ವೃತ್ತಿಪರತೆಯನ್ನು ವಿವರಿಸಲಾಗಿದೆ.
ಈ ವಿಚಾರಣೆಯ ಸಂದರ್ಭದಲ್ಲಿ ಡೆಪ್ನದೇ ಕಡೆಯವರಿಂದ ಆಕಸ್ಮಿಕವಾಗಿ ಅವನ ಇಡೀ ಚಾಟ್ ಮೆಸೇಜ್ಗಳ ಸೋರಿಕೆ ಆಗಿಹೋಗಿತ್ತು. ಅದರಲ್ಲಿನ ಒಂದು ಮೆಸೇಜ್ನಲ್ಲಿ ಜಾನಿ ಡೆಪ್, ಅಂಬರ್ಳನ್ನು ಹೇಗೆಲ್ಲಾ ಕೊಲ್ಲಬಯಸುತ್ತೇನೆ ಎಂದು ಸ್ನೇಹಿತನೊಬ್ಬನಿಗೆ ಮಾಡಿದ್ದ ಮೆಸೇಜ್ ಸಹ ಸೇರಿತ್ತು. ಈ ಕೇಸಿನ ಸಂದರ್ಭದಲ್ಲಿ ಅವನ ವಾದಕ್ಕೆ ಹೊಡೆತ ಕೊಟ್ಟ ವಿಷಯದಲ್ಲಿ ಇದೂ ಒಂದಾಗಿತ್ತು. ಈ ಕೇಸಿನಲ್ಲಿ ‘ಸನ್’ ಪತ್ರಿಕೆ ಗೆದ್ದಿತ್ತು. 2020ರ ಈ ವಿಚಾರಣೆಯಲ್ಲಿ ಇಂಗ್ಲೆಂಡಿನ ನ್ಯಾಯಾಲಯ ಕನಿಷ್ಠ 12 ಸಂದರ್ಭಗಳಲ್ಲಿ ಡೆಪ್, ಅಂಬರ್ಳನ್ನು ದೈಹಿಕವಾಗಿ ಹಿಂಸಿಸಿದ್ದಾನೆ ಎನ್ನುವುದನ್ನು ಒಪ್ಪಿ ‘ಸನ್’ ಪತ್ರಿಕೆಯ ವಿರುದ್ಧ ಡೆಪ್ನ ಕೇಸ್ ಅನ್ನು ಹೊಡೆದು ಹಾಕಿತ್ತು.
ಮೊನ್ನೆ ನಡೆದ ಕೇಸ್, ಅಂಬರ್ಳ ಒಂದು ಬರಹದಲ್ಲಿನ ಒಂದು ವಾಕ್ಯದ ಕಾರಣದಿಂದಾಗಿ ತನಗೆ ಅಪಮಾನವಾಗಿದೆ ಎಂದು ಜಾನಿ ಅಮೇರಿಕಾದಲ್ಲಿ ಹಾಕಿದ ಕೇಸ್. ಇಲ್ಲಿ ನ್ಯಾಯಾಲಯದಲ್ಲಿ ನಡೆದ ವಿಚಾರಾಣೆಗೆ ಸಮಾನಾಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸಹ ವಿಚಾರಣೆ ನಡೆಯಿತು. ಅಂಬರ್ ಬರಹದಿಂದ ಡೆಪ್ಗೆ ಮಾನಹಾನಿಯಾಗಿದೆ ಎನ್ನುವುದನ್ನು ಒಪ್ಪಿ ಅವನಿಗೆ ಪರಿಹಾರವನ್ನು ಸಹ ಘೋಷಿಸಲಾಯಿತು. ಈ ಕೋರ್ಟ್ ಕೇಸ್ ಮುಖ್ಯವಾಗುವುದು ಕೇವಲ ಇದೊಂದು ಕೇಸಿಗೆ ಸಂಬಂಧಿಸಿದಂತೆ ಮಾತ್ರವಲ್ಲ. ನಾವಿಲ್ಲಿ ನೆನಪಿಡಬೇಕಾಗಿರುವುದು ಪ್ರತಿಯೊಂದು ಕೇಸ್, ನಂತರದ ಹಲವು ಕೇಸ್ಗಳಿಗೆ ಪ್ರಿಸಿಡೆಂಟ್ ಆಗುತ್ತದೆ, ಇಲ್ಲಿನ ತೀರ್ಪನ್ನು ನಂತರದ ಹಲವು ಕೇಸುಗಳಿಗೆ ಪೂರಕ ದಾಖಲೆಯಾಗಿ ಬಳಸಿಕೊಳ್ಳಲಾಗುತ್ತದೆ ಎನ್ನುವುದು.
ನ್ಯಾಯಾಲಯದಲ್ಲಿ ಯಾವಾಗಲೂ ಸತ್ಯವೇ ಗೆಲ್ಲಬೇಕೆಂದಿಲ್ಲ. ಹಾಗಿದ್ದರೆ ಜಗತ್ತಿನಲ್ಲಿ ಇಷ್ಟು ಫ್ಯಾನ್ಸಿ ಲಾಯರುಗಳು, ಇನ್ವೆಸ್ಟಿಗೇಟರ್ಗಳು, ಒಪೀನಿಯನ್ ಮೇಕರ್ಸ್ಗಳು ಇರುತ್ತಿರಲಿಲ್ಲ. ಯಾವುದೇ ಹೋರಾಟ ಸಮಬಲದ್ದಾಗಿರುವುದಿಲ್ಲ. ಅಧಿಕ ಬಲವುಳ್ಳವರ ಬಳಿ ಅಷ್ಟೇ ಅಧಿಕ ಸಂಪನ್ಮೂಲಗಳೂ ಇರುತ್ತದೆ. ಅದು ಅವರಿಗಿರುವ ಸೋಶಿಯಲ್, ಎಕನಾಮಿಕಲ್ ಮತ್ತು ಪೊಲಿಟಿಕಲ್ ಕ್ಯಾಪಿಟಲ್. ಜಾನ್ ವರ್ಸಸ್ ಸನ್ನಲ್ಲಿ ಗೆದ್ದಿದ್ದು, ಸನ್ ಪತ್ರಿಕೆ, ಜಾನಿ ವರ್ಸಸ್ ಅಂಬರ್ನಲ್ಲಿ ಗೆದ್ದಿದ್ದು ಜಾನಿ.
ನಾವು ಗಮನಿಸಬೇಕಾದ ಇನ್ನೊಂದು ಈ ಕೇಸ್ ನಡೆದ ಅಮೇರಿಕಾದಲ್ಲಿನ ನ್ಯಾಯ ವ್ಯವಸ್ಥೆ. ಜ್ಯೂರಿ ಪದ್ಧತಿಯನ್ನು ಅನುಸರಿಸುವ ಅಲ್ಲಿ ಅವರಲ್ಲೇ ಒಂದು ಗೊತ್ತಾದ ಸಂಖ್ಯೆಯ ನಾಗರೀಕರನ್ನು ಒಂದು ನಿರ್ದಿಷ್ಟ ವ್ಯವಸ್ಥೆಯ ಮೂಲಕ ಆರಿಸಲಾಗುತ್ತದೆ. ಅವರಲ್ಲೇ ಕೆಲವರು, ಅಂದರೆ ಎರಡೂ ಗುಂಪಿನವರೂ ಒಪ್ಪಿಕೊಂಡ ಒಂದಿಷ್ಟು ಜನ ಜ್ಯೂರಿಗಳಾಗುತ್ತಾರೆ. ಇಡೀ ನ್ಯಾಯಾಂಗ ಪ್ರಕ್ರಿಯೆಯ ನಿರ್ದೇಶನವನ್ನು ನ್ಯಾಯಾಧೀಶರು ಮಾಡಿದರೂ ಸಹ, ವಾದ -ಪ್ರತಿವಾದಗಳನ್ನು ಆಲಿಸಿ, ವಕೀಲರು ಮುಂದಿಡುವ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯನಿರ್ಣಯವನ್ನು ನೀಡುವುದು ಆ ಗುಂಪು. ನಾವು ಗಮನಿಸಬೇಕಾದ ವಿಷಯ ಎಂದರೆ ಅವರು ಕಾನೂನು ಪಂಡಿತರಲ್ಲ. ನಮ್ಮನಿಮ್ಮಂಥವರೇ. ನಮ್ಮ ಕಣ್ಣೆದುರಿಗಿಟ್ಟವನ್ನು ಮಾತ್ರ ನೋಡುವವರು. ಹಾಗಾಗಿ ಅವರ ನ್ಯಾಯನಿರ್ಣಯದ ಮೇಲೆ ಬಾಹ್ಯ ಜಗತ್ತು ಅದೆಷ್ಟು ಪ್ರಭಾವ ಬೀರಬಹುದು ಎಂದು ಯೋಚಿಸಬಹುದಾಗಿದೆ. ಸಾಧಾರಣವಾಗಿ ಇಂತಹ ಸೆಲೆಬ್ರಿಟಿ ಕೇಸ್ಗಳ ವಿಚಾರದ ಸಂದರ್ಭದಲ್ಲಿ ಜ್ಯೂರಿಗಳನ್ನು ಸೀಕ್ವೆಸ್ಟರ್ ಅಂದರೆ ಪ್ರತ್ಯೇಕವಾಗಿರಿಸಲಾಗುತ್ತದೆ. ಅಂದರೆ ಹೊರಜಗತ್ತಿನ ಯಾವುದೇ ಸುದ್ದಿ ಮಾಧ್ಯಮ ಅವರ ಮೇಲೆ ಪ್ರಭಾವ ಬೀರದಿರಲಿ ಎನ್ನುವುದು ಅದರ ಉದ್ದೇಶ.
ಆದರೆ ಈ ಕೇಸಿನಲ್ಲಿ ಹಾಗಾಗಿರಲಿಲ್ಲ. ಜಾನಿ ಡೆಪ್ನನ್ನು ಬೆಂಬಲಿಸಿ ಸಾವಿರಾರು ಸಂಖ್ಯೆಯ ಬೇನಾಮಿ ಟ್ವಿಟರ್, ಟಿಕ್ ಟಾಕ್ ಖಾತೆಗಳು ಕೆಲಸ ಮಾಡುತ್ತಿದ್ದವು. ನ್ಯಾಯಾಲಯದ ಹೊರಗಡೆ, ‘ಅಂಬರ್ ನೀನು ಸತ್ತು ಹೋಗು’ ಎನ್ನುವ ಪ್ಲಕಾರ್ಡ್ಗಳು ಕಾಣುತ್ತಿದ್ದವು. ಈ ಕೇಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಂದು ಅಂಶ ಡೆಪ್ನ ವಕೀಲೆ ಕೆಮಿಲ್ ವಾಸ್ಕೆಸ್. ಆಕೆಯ ಜಾಣ್ಮೆ, ಸಾಕ್ಷಿಕಟ್ಟೆಯ ಮೇಲೆ ಆಕೆ ಅಂಬರ್ಳನ್ನು ಸುಳ್ಳುಗಾತಿ ಎನ್ನುವಂತೆ ಸಾಬೀತುಪಡಿಸಿದ ರೀತಿ ಯಾವುದೇ ಕ್ರಾಸ್ ಎಕ್ಸಾಮಿನೇಷನ್ಗೆ ಮಾದರಿ. ಆಕೆಯ ನಿರಾಳವಾದಂತಿದ್ದ, ಆವೇಶಗೊಳ್ಳದಂತಹ ನಡವಳಿಕೆಯ ಹಿಂದೆ ಅಪಾರವಾದ ಹೋಮ್ವರ್ಕ್ ಕಂಡುಬರುತ್ತಿತ್ತು.
ಅಂಬರ್ಳ ಪಕ್ಕ ನಿಂತು ಈಕೆ ತನ್ನ ವಾದವನ್ನು ಮಂಡಿಸುತ್ತಿದ್ದ ರೀತಿಯಲ್ಲಿ ಜ್ಯೂರಿಗಳು ಈಕೆಯ ಮಾತುಗಳನ್ನೇ ನಂಬುತ್ತಿದ್ದರು. ಇಂತಹ ಕೇಸುಗಳಲ್ಲಿ ಲಾಯರ್ ಜೊತೆಜೊತೆಯಲ್ಲಿ ಜ್ಯೂರಿಗಳ ಹಿನ್ನೆಲೆ, ಮುಖಭಾವ, ಭಾವಭಂಗಿ, ಮಾನಸಿಕ ಸ್ಥಿತಿಗಳನ್ನು ಅಭ್ಯಾಸಮಾಡುವ ಒಂದು ಮಲ್ಟಿಮಿಲಿಯನ್ ಡಾಲರ್ ವ್ಯವಸ್ಥೆಯ ಭಾಗವಾಗಿ ಅಲ್ಲಿನ ಇನ್ವೆಸ್ಟಿಗೇಟರ್ಗಳು ಮತ್ತು ಮಾನಸಿಕ ತಜ್ಞರು ಕೆಲಸ ಮಾಡುತ್ತಾರೆ. ಈ ಕಾರಣಕ್ಕಾಗಿ ಸಂಪನ್ಮೂಲಗಳು ಬಹಳ ಮುಖ್ಯವಾಗುತ್ತವೆ. ಇವರಿಬ್ಬರ ನಡುವಿನ ಇನ್ನೊಂದು ವಿಚಿತ್ರದ ಅಂಶ ಎಂದರೆ ಪರಸ್ಪರರನ್ನು ಅವರು ರೆಕಾರ್ಡ್ ಮಾಡಿ ಇಡುತ್ತಿದ್ದ ರೀತಿ. ಧ್ವನಿ, ವೀಡಿಯೋ ರೆಕಾರ್ಡಿಂಗ್ಗಳ ರಾಶಿಯೇ ಇದೆ. ಹೀಗಿರುವಾಗ ಆ ಘಳಿಗೆಗೆ ಯಾರು ರೆಕಾರ್ಡ್ ಮಾಡುತ್ತಿರುತ್ತಾರೋ ಅವರು ತಮಗೆ ಮುಂದೆಂದೋ ನೆರವಾಗುವ ಹಾಗೆಯೇ ಮಾತನಾಡುತ್ತಾರೆ. ಇಬ್ಬರೂ ಕಲಾವಿದರೇ, ಹಾಗಾಗಿ ಇಬ್ಬರೂ ತಮಗೆ ಬೇಕಾದ ಹಾಗೆಯೇ ನಂಬಿಸುವಂತೆ ಮಾತನಾಡಲು ಸಾಧ್ಯ.
ಇಲ್ಲಿ ಅಂಬರ್ ನಿರಪರಾಧಿಯೇ? ಬಹುಶಃ ಅಲ್ಲ. ಒಟ್ಟಾರೆಯಾಗಿ ನೋಡಿದರೆ ಆ ಸಂಬಂಧ ಒಂದು ಟಾಕ್ಸಿಕ್ ಸಂಬಂಧ. ಪರಸ್ಪರರನ್ನು ಹುಚ್ಚರಂತೆ ಕಾಡಿಸುವ, ಪ್ರೀತಿಸುವ ಸಂಬಂಧ. ‘ನಾನು ನಿನ್ನನ್ನು ದೇವರಂತೆ ಕಂಡಿದ್ದೆ’ ಎನ್ನುವ ಡೆಪ್ನ ಮಾತುಗಳನ್ನಾಗಲಿ, ಅಂಬರ್ ಹತ್ತಿರವೂ ಸುಳಿಯಬಾರದು ಎನ್ನುವ ಪ್ರತಿಬಂಧಕಾಜ್ಞೆಯನ್ನು ಪಡೆದ ನಂತರ ಅಂಬರ್ ತಾನೇ ಅದೇ ರಾತ್ರಿ ಡೆಪ್ ಬಳಿಗೆ ಹೋಗಿ ‘ಒಮ್ಮೆ ನಿನ್ನನ್ನು ಅಪ್ಪಬೇಕು, ನಾವಿಬ್ಬರೂ ಹೀಗೆ ಬೇರೆಯಾಗಬಾರದು’ ಎಂದು ಬೇಡಿಕೊಂಡದ್ದನ್ನಾಗಲೀ ಹೇಗೆ ಅರ್ಥೈಸಿಕೊಳ್ಳುವುದು? ಆದರೆ ಅವಳು ನಿರಪರಾಧಿ ಅಲ್ಲ ಎನ್ನುವುದು ಜಾನಿಯನ್ನು ಅಪರಾಧ ಮುಕ್ತನನ್ನಾಗಿಸುವುದಿಲ್ಲ. ಬಹುಶಃ ನಾವು ಮರೆತಿರುವುದು ಮತ್ತು ನೆನಪಿಡಬೇಕಾದದ್ದು ಇದನ್ನು.
ಇದು ಒಂದು ಮಾನನಷ್ಟ ಮೊಕದ್ದಮೆ. ಅದು ನಿರ್ಣಯ ಮಾಡಬೇಕಾದ್ದು ಅಂಬರ್ ಹೇಳಿಕೆಯಿಂದ ಡೆಪ್ಗೆ ಮಾನನಷ್ಟವಾಯಿತೆ, ಡೆಪ್ ಕಡೆಯವರಿಂದ ಅಂಬರ್ಳಿಗೆ ಮಾನನಷ್ಟವಾಯಿತೆ ಎನ್ನುವುದನ್ನು, ಈ ಕೇಸ್ ಅದನ್ನು ಮಾತ್ರ ಪರಿಶೀಲಿಸಿದೆ. ಇಬ್ಬರಲ್ಲಿ ಯಾರಿಗೂ ಇದು ಕ್ಲೀನ್ ಚಿಟ್ ಕೊಟ್ಟಿಲ್ಲ. ಇಬ್ಬರಿಗೂ ಮಾನನಷ್ಟವಾಗಿದೆ ಎಂದು ಒಪ್ಪಿಕೊಂಡಿರುವ ಜ್ಯೂರಿ ಪರಸ್ಪರರು ಇಬ್ಬರಿಗೂ ಹಣ ನೀಡಬೇಕು ಎಂದು ತೀರ್ಪುಕೊಟ್ಟಿದೆ, ಇಬ್ಬರಿಗೂ ನೀಡಬೇಕಾದ ಹಣದ ಮೊತ್ತದಲ್ಲಿ ಮಾತ್ರ ವ್ಯತ್ಯಾಸವಿದೆ. ಅಂದರೆ ಈ ತೀರ್ಪು ಎಲ್ಲೂ ಜಾನ್ ಡೆಪ್ ಪತ್ನಿಪೀಡಕನಲ್ಲ ಎಂದು ಹೇಳಿಲ್ಲ. ಆದರೆ ಸಾರ್ವಜನಿಕ ಅಭಿಪ್ರಾಯ ಅಂಬರ್ಳನ್ನು ಒಬ್ಬ ‘ಮಾದರಿ’ ಪೀಡಿತಳಾಗಿ ಏಕೆ ನೋಡಲು ಸಾಧ್ಯವಿಲ್ಲ ಎಂದು ಕಾರಣಗಳನ್ನು ಕೊಡುತ್ತದೆ. ಅಪಾಯ ಇರುವುದು ಇಲ್ಲಿ. ಪೀಡಿತರು ‘ಹೀಗೆಯೇ’ ಇರಬೇಕು. ಹಾಗಿದ್ದರೆ ಮಾತ್ರ ಅವರಿಗೆ ಪೀಡಿತರ ಸ್ಥಾನಮಾನಗಳು ಲಭಿಸುತ್ತವೆ ಎಂದು ಆಡದೆಯೇ ಅನುಮೋದಿಸುವುದರಲ್ಲಿ.
ಹಿಂದೊಮ್ಮೆ ಡೆಪ್, ಅಂಬರ್ಳನ್ನು ಹೇಗೆಲ್ಲಾ ಕೊಲ್ಲಬಯಸುತ್ತೇನೆ ಎಂದು ಕಳಿಸಿದ ಆ ಟೆಕ್ಸ್ಟ್ ಮೆಸೇಜ್ಗಳ ರೀತಿಯಲ್ಲಿಯೇ ಬಹುಪಾಲು ಆತನ ಬೆಂಬಲಿಗರು ಆಂಬರ್ಳನ್ನು ನೋಡಿದ್ದಾರೆ ಎನ್ನುವುದು ಸಹ ವಾಸ್ತವ. ಅದಕ್ಕೆ ಅಂಬರ್ ನಡವಳಿಕೆ, ಅವಳು ಹೇಳಿದ ಸುಳ್ಳುಗಳು ಸಹ ನೆರವಾಗಿದೆ ಎನ್ನುವುದು ಸಹ ಸತ್ಯ. ಆದರೆ ಇವ್ಯಾವುದೂ ಜಾನಿ ಡೆಪ್ಗೆ ಹಿಂಸಿಸುವ ಅಧಿಕಾರ ನೀಡುವುದಿಲ್ಲ ಎನ್ನುವುದು ಸಹಾ ಅಷ್ಟೇ ಸತ್ಯ. ತನ್ನ ಮೇಲೆ ಕೌಟುಂಬಿಕ ಹಿಂಸೆ ನಡೆಯುತ್ತಿದೆ ಅಥವಾ ನಡೆದಿದೆ ಎಂದು ಮುಂದೆ ಬಂದ ಹೆಣ್ಣಿಗೆ, ಅದು ಅವಳ ವೈಯಕ್ತಿಕ ರೀತಿನೀತಿ, ನಡವಳಿಕೆ, ಮಾತು-ಕೃತಿಗಳ ಪರಿಣಾಮ ಎಂದು ಹೇಳುವುದು ಸಹ ಹಿಂಸೆಯೇ.
ಹೆಂಡತಿ ‘ಪರ್ಫೆಕ್ಟ್’ ಆಗಿಲ್ಲದಿರುವುದು ಗಂಡನಿಗೆ ಆಕೆಯನ್ನು ‘ಹೊಡೆಯುವ’, ‘ಹಿಂಸಿಸುವ’ ಅಧಿಕಾರವನ್ನು ಕೊಡುವುದಿಲ್ಲ. ‘ಅವನಿಗೆ ನಿನ್ನನ್ನು ಕೊಲ್ಲುವ ಎಲ್ಲಾ ಅಧಿಕಾರವೂ ಇತ್ತು’ ಎನ್ನುವ ಅಭಿಮಾನಿಯೊಬ್ಬರ ಒಂದು ಪೋಸ್ಟ್ಗೆ 2,22,200 ಲೈಕ್ಗಳು ಸಿಕ್ಕಿದ್ದವು ಎನ್ನುವ ಒಂದು ವರದಿಯನ್ನು ನೋಡಿದಾಗ ನಮಗೆ ಸಾಮಾಜಿಕವಾಗಿ ಇದೆಂತಹ ಭಾವನೆಯನ್ನು ಹುಟ್ಟುಹಾಕಬಹುದು ಎನ್ನುವ ವಿಷಯದ ಗಂಭೀರತೆ ಅರ್ಥವಾಗುತ್ತದೆ. ಸಾಧಾರಣವಾಗಿ ಹೆಣ್ಣಿನ ಪರ ಇರುವ ಎಲ್ಲರೂ, ಎಲ್ಲವೂ ಆರೋಪಕ್ಕೆ ಗುರಿಯಾದ ಗಂಡು ಯಾರು ಎನ್ನುವ ಕಾರಣಕ್ಕೆ ಅವಳ ವಿರುದ್ಧವಾಗುವ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದೊಂದು ಪವರ್ ಗೇಮ್.
ಅಮೇರಿಕಾದ ‘ಗಾರ್ಡಿಯನ್’ ಪತ್ರಿಕೆಯ ಅಂಕಣಕಾರ್ತಿ ಮೋಯ್ರಾ ಡೋನೆಗಾನ್ ತನ್ನ ಬರಹದಲ್ಲಿ, ಅವರಿಬ್ಬರ ಮದುವೆ ಮುರಿದ ಸಂದರ್ಭದಲ್ಲಿ ಜಾನಿ ಡೆಪ್ ತನ್ನ ಸ್ನೇಹಿತ ಕ್ರಿಸ್ಟಿಯನ್ ಕ್ಯಾರಿನೋಗೆ ಮಾಡಿದ ಒಂದು ಮೆಸೇಜ್ ಕೋಟ್ ಮಾಡುತ್ತಾಳೆ. ಅದರಲ್ಲಿ ಜಾನಿ ಹೀಗೆ ಬರೆದಿದ್ದಾನೆ, ‘ಆಕೆ ಜಾಗತಿಕ ಅಪಮಾನವನ್ನು ಬೇಡಿದ್ದಾಳೆ, ಅವಳಿಗೆ ಅದು ಸಿಕ್ಕೇ ಸಿಗುತ್ತದೆ.’