ಅರ್ನಬ್ ರೇ ಬರೆದ ಮಹಾಭಾರತ್ ಮರ್ಡರ್ಸ್ ಓದುಗರಿಂದ ಹೊಗಳಿಸಿಕೊಂಡ ಕಾದಂಬರಿ. ಬಂಗಾಳಿ ಬರಹಗಾರನ ಅದೇ ಕಾದಂಬರಿ ಆಧರಿಸಿ ಅದೇ ಬಂಗಾಳಿಯಲ್ಲಿ ಅದೇ ಹೆಸರಿನ ವೆಬ್ ಸರಣಿ ಬಂದಿದೆ. ಜೂನ್ 3ರಿಂದ ಪೂರ್ತಿ ಹನ್ನೆರಡೂ ಎಪಿಸೋಡ್‌ಗಳು ಸ್ಟ್ರೀಮ್ ಆಗುತ್ತಿರುವುದು ಬಂಗಾಳಿ ಭಾಷೆಗೇ‌ ಮೀಸಲಾದ ಒಟಿಟಿ Hoichoiನಲ್ಲಿ.

ಮಹಾಭಾರತವೊಂದು ಕಥಾಸಾಗರ, ಪಾತ್ರಗಳ ಆಗರ. ಬದುಕಲ್ಲಿ ಬಂದು ಹೋಗುವ ಎಲ್ಲಾ ಪಾತ್ರಗಳಲ್ಲೂ ಹುಡುಕಿದರೆ ಮಹಾಭಾರತದ ಛಾಯೆ ಅಲ್ಲೊಂದು ಇಲ್ಲೊಂದಂತೂ ಸಿಕ್ಕೇ ಸಿಗುತ್ತದೆ. ಒಬ್ಬನಲ್ಲಿ ಶ್ರೀಕೃಷ್ಣನ ಗುಣ ಕಂಡರೆ ಮತ್ತೊಬ್ಬ ಬಲಭೀಮ, ಕಾರಣಾಂತರಗಳಿಂದ ಕರ್ಣನನ್ನು ನದಿಯಲ್ಲಿ ಬಿಟ್ಟು ಹೋಗುವ ಕುಂತಿ ಬಗ್ಗೆ ಆಗಾಗ್ಗೆ ಪೇಪರಲ್ಲಿ ಓದಿದರೆ, ಮದುವೆಯಾಗಲು ಬಂದ ಗಂಡಿಗೆ ಕಂಡೀಶನ್ ಹಾಕುವ ಗಂಗೆ ಪತ್ರಿಕಾ ವರದಿಗಾರರ ಗಮನಕ್ಕೆ ಬರದಿರಬಹುದು. ಒಲ್ಲದವನ ಜತೆ ಮದುವೆಗಿಂತ ಒಪ್ಪಿಗೆಯಾದವನ ಜತೆ ಸ್ವಇಚ್ಛೆಯಿಂದ ಅಪಹರಣಕ್ಕೆ ಒಳಗಾಗುವುದು ಒಳಿತು ಎಂದು ತೀರ್ಮಾನಿಸಿದ ಸುಭದ್ರೆ ಅಗಾಗ ಟೀವಿಯಲ್ಲಿ ಬರುತ್ತಾಳೆ, ನಂಬಿಕಸ್ಥನಂತೆ ಕಾಣುವ ಶಕುನಿ ನಮ್ಮ ಸುತ್ತಮುತ್ತಲೇ ಇರುತ್ತಾರೆ. ಇಂಥ ಒಂದೊಂದು ಪಾತ್ರವೂ ಒಂದೊಂದು ಸೀರೀಸ್‌ಗೆ ಆಗುವಷ್ಟು ಸರಕು ಎತ್ತಿ ಕೊಡುತ್ತದೆ. ‘ಮಹಾಭಾರತ್ ಮರ್ಡರ್ಸ್’ ಅಂಥದ್ದೇ ಒಂದು ಸರಕು. ಅದೇ ಹೆಸರಿನ ಕಾದಂಬರಿ ಆಧರಿತ ಈ ಸರಣಿ ಎಲ್ಲಿಯೂ ಹಳೇ ಪುರಾಣ ಅನಿಸುವುದಿಲ್ಲ, ಹೊಸ ಗಾನಬಜಾನಾ ಅನ್ನುತ್ತದೆ.

ಆಕೆ ರುಕ್ಸಾನಾ ಅಹ್ಮದ್. ಬೆಳೆದದ್ದು ಸಹಜವಾಗಿ ಮುಸಲ್ಮಾನರ ನಡುವೆಯೇ. ಆದರೆ ವಾರಕ್ಕೊಮ್ಮೆ ಟೀವಿಯಲ್ಲಿ ಪ್ರಸಾರವಾಗುವ ಮಹಾಭಾರತ ಧಾರಾವಾಹಿ ನೋಡುವುದನ್ನು ಅವಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅವಳ ಅಪ್ಪ ಹೇಳುತ್ತಿದ್ದರಂತೆ, “ಮಗಳೇ, ಮಹಾಭಾರತ ಒಂದು ಪವಿತ್ರ ಗ್ರಂಥವಷ್ಟೇ ಅಲ್ಲ, ಮಹಾಭಾರತವೆಂದರೆ ಅದು ಮನುಕುಲದ ಕತೆ. ಮಹಾಭಾರತವೆಂದರೆ ಅದು ರಾಗ-ದ್ವೇಷ, ದುಃಖ-ದುಮ್ಮಾನ, ಅಹಂಕಾರ-ಹತಾಶೆಗಳ ಚಿತ್ರಣ. ಅದು ಸಾರ್ವಕಾಲಿಕ” – ಅಪ್ಪನ ಮಾತನ್ನು ನೆನೆಸಿ “ನಮ್ಮದೂ ಹೆಚ್ಚೂಕಮ್ಮಿ ಇದೇ ಕಥೆ” ಎನ್ನುತ್ತಾಳೆ ಐಪಿಎಸ್ ಅಧಿಕಾರಿ ರುಕ್ಸಾನಾ. ಹೀಗೆ ಆ ಸರಣಿಯ ಕತೆಗೊಂದು ಆರಂಭ.

ಮೊದಲಿಗೆ ಒಬ್ಬಳ ಕೊಲೆ. ಆಕೆ ದ್ರೌಪದಿ, ಓರ್ವ ಚಿತ್ರನಟಿ. ಗಂಡನಿಂದ ಬೇರ್ಪಟ್ಟಿದ್ದಾಳೆ, ವೃತ್ತಿಯಲ್ಲಿ ಆಕೆ ವಯಸ್ಕರ ಸಿನಿಮಾಗಳಲ್ಲಿ ನಟಿಸುವಾಕೆ ಎಂಬ ವಿವರಗಳು ಬರುವಾಗ ಅವಳ ಕೊಲೆ ಹದಗೆಟ್ಟ ವೈಯಕ್ತಿಕ ಸಂಬಂಧದ ಪರಿಣಾಮ ಎಂದು ಭಾಸವಾಗುತ್ತದೆ. ಆದರೆ ಎರಡನೆಯ ಪಾತಕಕ್ಕೆ ಬೃಹತ್ ಕಂಪನಿಯ ಸಿಇಒ ಬಲಿಯಾದಾಗ ವಿಷಯ ಬೇರೇನೋ ಇದೆ‌ ಅನ್ನುತ್ತದೆ ನೋಡುವ ಮನಸು. ಇನ್ನೊಂದು ಹತ್ಯೆಯ ಹೊತ್ತಿಗೆ “ಹಾಗಾದರೆ ನಂತರದ ಕೊಲೆ ಯಾರದ್ದು?” ಎಂಬ ಕುತೂಹಲಕ್ಕೆ ಅದೇ ಮನಸ್ಸು ಬೀಳುತ್ತದೆ. ಸಾಮಾನ್ಯವಾಗಿ ನಾವುಗಳು ಹಿಂಸೆಯನ್ನು ಆಸ್ವಾದಿಸುವ ಮಂದಿಯಲ್ಲ. ಆದಾಗ್ಯೂ ಮುಂದೆ ನಡೆಯಬಹುದಾದ ಕೊಲೆಯ‌ ಬಗ್ಗೆ ಕುತೂಹಲ ಮೂಡುತ್ತದೆ‌ ಎಂದರೆ ನಾವೂ ಹಿಂಸೆಯನ್ನು ಆಸ್ವಾದಿಸಲು ಶುರು ಮಾಡಿದ್ದೇವೆ ಎಂದಲ್ಲ. ಬದಲಾಗಿ ಆ ಕಥಾನಕ ನಮ್ಮನ್ನು ಆವರಿಸುವಲ್ಲಿ ಯಶಸ್ವಿಯಾಗಿದೆ ಎಂದರ್ಥ.

ಇಲ್ಲಿ ಹಿಂಸೆಯನ್ನು ಚಿತ್ರಿಸಿರುವ ಬಗ್ಗೆ ಪ್ರಸ್ತಾಪಿಸಲೇಬೇಕು. ಅದಕ್ಕಾಗಿ ಒಂದು ದೃಶ್ಯ ವಿವರಿಸುತ್ತೇನೆ. ಒಬ್ಬ ಅಡುಗೆ ಮನೆಗೆ ಹೋಗುತ್ತಾನೆ. ಗ್ಯಾಸ್ ಹಚ್ಚಲು ಕಡ್ಡಿ ಗೀರುತ್ತಾನೆ. ಭಗ್ಗನೆ ಬೆಂಕಿ ಹೊತ್ತಿಕೊಂಡು ಆತ ದಾರುಣವಾಗಿ ಸಾಯುತ್ತಾನೆ. ಈ ದೃಶ್ಯದಲ್ಲಿ ಆತನ ಸಾವಿನ ನೋವನ್ನು ನೇರ ತೋರಿಸುವುದಿಲ್ಲ. ಗ್ಯಾಸ್ ಸಿಲಿಂಡರಿನ ಒತ್ತಡಕ್ಕೆ ಪಕ್ಕದ ಕೋಣೆಯವರೆಗೆ ಭುಸ್ಸನೆ ತೂರಿ ಬರುತ್ತದೆ. ಆಹುತಿಯಾದ ಬಡಪಾಯಿಯ ಆಕ್ರಂದನ ಕಳೆದುಹೋಗುವಂತೆ ಹಿನ್ನೆಲೆ ಸಂಗೀತವಿದೆ. ಆದರೂ ನಮಗೆ ಆ ಕೂಗಾಟ ಕಿವಿ ಪಕ್ಕದಲ್ಲೇ ಕೇಳಿದಂತಾಗುತ್ತದೆ. ಬಹುಶಃ ಆತನ ಒದ್ದಾಟ ತೆರೆಯ ಮೇಲೆ ತೋರಿಸಿದ್ದರೂ ಅಷ್ಟು ಪರಿಣಾಮ ಬೀರುತ್ತಿರಲಿಲ್ಲ.

ಇನ್ನೊಂದು ಸನ್ನಿವೇಶದಲ್ಲಿಯೂ ಸಾವು ಸಂಭವಿಸಿದಾಗ ಅದರ ಭೀಕರತೆ ನಮಗೆ ದಾಟಿಸಿರುವ ರೀತಿ ಚೆನ್ನ. ಘಟನೆ ಸ್ಥಳದಲ್ಲಿ ಶವದ ಹತ್ತಿರ ಕ್ಯಾಮರಾ ಕೊಂಡೊಯ್ಯುವುದಿಲ್ಲ. ಬದಲಾಗಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯನ ಬಾಯಲ್ಲಿ ವಿವರ ಹೇಳಿಸಲಾಗುತ್ತದೆ. “ಶ್ವಾಸನಾಳ ತೂತು ಮಾಡಿದ್ದಾನೆ, ಅದೂ ತೀರಾ ಕಲಾತ್ಮಕವಾಗಿ. ಆ ಕಲಾವಿದ ಯಾರು ಅನ್ನೋದು ಗೊತ್ತಿಲ್ಲ. ಆದರೆ ಆತ ಮಹಾ ಕ್ರೂರಿ ಎಂಬುದಂತೂ ನಿಚ್ಚಳ” ಎಂಬ ಸಂಭಾಷಣೆಯ ಮುಂದುವರಿದ ಭಾಗದಲ್ಲಿ ಇನ್ನಷ್ಟು ವಿವರ ಹೇಳುತ್ತಾನೆ.

ಒಂದು ಹಂತದವರೆಗೆ ಕೊಲೆಗಳು ನಮ್ಮ ಕುತೂಹಲ ಹಿಡಿದಿಟ್ಟರೆ ನಂತರದಲ್ಲಿ ಪಾತ್ರಗಳು ಆವರಿಸುತ್ತವೆ. ಮಹಾಭಾರತದಲ್ಲಿ ಕಾಣುವಂತೆಯೇ ಇಲ್ಲಿ ಪ್ರತಿಷ್ಠೆಯಿದೆ, ಅನೈತಿಕತೆಯಿದೆ, ದಬ್ಬಾಳಿಕೆಯಿದೆ, ಹಿಂಸೆಯಿದೆ. ಮಹಾಭಾರತ ಓದುವಾಗ ದೈಹಿಕ ಹಿಂಸೆ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಮಾನಸಿಕ ಹಿಂಸೆಯ ತೀವ್ರತೆ ಅರ್ಥವಾಗುತ್ತದೆ. ಅದೇ ತೀವ್ರತೆಯನ್ನು ಈ ಸರಣಿಯಲ್ಲೂ ಕಾಣಬಹುದು. ನಾಟಕ ಅಭ್ಯಾಸ ಮಾಡುವಾಗ ಪಾಪದ ಹುಡುಗನೊಬ್ಬನನ್ನು ಸಂಗಡಿಗರು ಕಿಚಾಯಿಸುವಲ್ಲಿ ಕಾಲೇಜಿನ ರ್ಯಾಗಿಂಗ್‌ ದೃಶ್ಯ ನೋಡುವಾಗ ಆಗುವುದಕ್ಕಿಂತ ಹೆಚ್ಚಿನ ಹಿಂಸೆಯ ಅನುಭವವನ್ನು ನೋಡುಗನಿಗೆ ದಾಟಿಸುತ್ತದೆ.

ಈ ಸೀರೀಸ್‌ನಲ್ಲಿ ಆರಂಭದಿಂದ ಕೊನೆಯವರೆಗೆ ತೆರೆಯನ್ನು ಆವರಿಸುವ ಪ್ರಮುಖ ಪಾತ್ರಗಳು ಎರಡು. ಪವಿತ್ರೋ ಚಟರ್ಜಿ ಎಂಬ ರಾಜಕಾರಣಿಯ ಪಾತ್ರ ನಿರ್ವಹಿಸಿದ ಸಾಸ್ವತಾ ಚಟರ್ಜಿಯದ್ದು ನಮ್ಮ ಅನಂತ ನಾಗ್‌ರಂಥ ಅಭಿನಯ. ಕಣ್ಣು, ಹಣೆಯ ಮೇಲಿನ‌ ನೆರಿಗೆ, ಸಣ್ಣದೊಂದು ನಗುವಿನಲ್ಲೇ ಎಲ್ಲವನ್ನೂ ಹೇಳಿಬಿಡುವ ನಟನೆಯದು. ಇನ್ನೊಂದೆಡೆ ರುಕ್ಸಾನಾ ಅಹ್ಮದ್‌ ಪಾತ್ರ. ಆಕೆಯಿಲ್ಲಿ ಧರ್ಮರಾಯನಿಗೆ ರೂಪಕ. ದಾರಿ ತಪ್ಪಲು ಅವಕಾಶ, ಸಂದರ್ಭ ಎದುರು ಬಂದಾಗಲೂ ಆಕೆ ದಾರಿ ತಪ್ಪುವುದಿಲ್ಲ. ಆಚಾರವಿಲ್ಲದ ಗಂಡನನ್ನೂ ಸಹಿಸಿಕೊಳ್ಳುತ್ತಾಳೆ. ಹಾಗೆಂದು ಬಲಹೀನ ಹೆಂಗಸಲ್ಲ ಅವಳು, ಗಂಡ ಎಂಬ ಧಿಮಾಕಿನಲ್ಲೇ ಆತ ಪೊಲೀಸ್ ವಿಚಾರಣಾ ಕೊಠಡಿಯಲ್ಲಿಯೂ ಜಬರ್ದಸ್ತಿ ತೋರಿಸುವಾಗ ಅವನ್ನಿವಳು ಥಂಡಿಯಾಗಿ ಎದುರಿಸುತ್ತಾಳೆ. ಆ ಪಾತ್ರಕ್ಕೆ ನ್ಯಾಯ ಒದಗಿಸಿದ ಪ್ರಿಯಾಂಕ ಸರ್ಕಾರ್ ಈ ಹಿಂದಿನ ಸಿನಿಮಾಗಳ ಮೂಲಕ ಬಂಗಾಳಿ ಹುಡುಗರ ಪಾಲಿಗೆ ಹೃದಯಗೆದ್ದ ಚೆಲುವೆ. ಆ ಇಮೇಜನ್ನೂ ಮೀರಿ ಇಲ್ಲಿ ತಾಯಿಯ ಪಾತ್ರವನ್ನಾಕೆ ಆಯ್ಕೆ ಮಾಡಿಕೊಂಡದ್ದು ನೋಡುಗರ ಸೌಭಾಗ್ಯ ಅನಿಸುವಂತಿದೆ‌ ಅಭಿನಯ.

ಅರ್ನಬ್ ರೇ ಅವರ ಕಾದಂಬರಿ ಮಹಾಭಾರತ್ ಮರ್ಡರ್ಸ್‌ನಲ್ಲಿ ಘಟನೆಗಳು ಮತ್ತು ಪಾತ್ರದ ವಿವರಗಳು ಜತೆಜತೆಗೇ ಸಾಗುತ್ತವೆ. ಕಾದಂಬರಿ ರೂಪಕ್ಕೆ ಆ ಸೂತ್ರ ಸೈ. ಹಾಗೆಂದು ಸರಣಿಯಲ್ಲೂ ಅದೇ ಸೂತ್ರ ಅನುಸರಿಸಿಲ್ಲ. ಪಾತ್ರಗಳ ಒಳ ವಿವರಗಳಿಗೆ ಕೈ ಹಾಕುವುದು ಕೊನೆಯ ಎರಡು ಆವೃತ್ತಿಗಳಲ್ಲಿ. ಅಲ್ಲಿಯವರೆಗೆ ವೇಗದಿಂದ ಸಾಗುವ ಸರಣಿ ಕೊನೆಯ ಹಂತದಲ್ಲಿ ನಿಧಾನಗತಿಗೆ ವರ್ಗವಾಗುತ್ತದೆ. ಆದರೆ ಆ ಹೊತ್ತಿಗೆ ಕುತೂಹಲದ ಮಜಲು ಬದಲಾಗುವ ಕಾರಣ ನಿಧಾನಗತಿ ಬೋರು ಹೊಡೆಸುವುದಿಲ್ಲ. ಸಬ್ ಟೈಟಲ್ ಇರುವುದರಿಂದ ಭಾಷೆ ಅಡ್ಡಗಾಲಾಗುವುದಿಲ್ಲ. 25 ನಿಮಿಷಗಳ ಒಳಗೇ ಮುಗಿಯುವ ಎಪಿಸೋಡುಗಳು ಹುರಿದ ಶೇಂಗಾದಂತೆ. ನೋಡನೋಡುತ್ತಿದ್ದ ಹಾಗೆಯೇ ಖಾಲಿ.

LEAVE A REPLY

Connect with

Please enter your comment!
Please enter your name here