ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ ರವಿಚಂದ್ರನ್ ನಟಿಸಿರುವ ‘ಕನ್ನಡಿಗ’ ಸಿನಿಮಾ ಡಿಸೆಂಬರ್ 17ರಂದು ZEE5ನಲ್ಲಿ ನೇರವಾಗಿ ಸ್ಟ್ರೀಮ್ ಆಗಲಿದೆ. ನಾಡಿನ ಇತಿಹಾಸ ದಾಖಲಿಸುವ ಲಿಪಿಕಾರರ ಕುರಿತ 1850ರ ಕಾಲಘಟ್ಟದ ಕತೆಯಿದು.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ರವಿಚಂದ್ರನ್ ನಟನೆಯ ‘ಕನ್ನಡಿಗ’ ಸಿನಿಮಾ ನವೆಂಬರ್ ಮೊದಲ ವಾರದಲ್ಲಿ ತೆರೆಗೆ ಬರಬೇಕಿತ್ತು. ಥಿಯೇಟರ್ ಲಭ್ಯತೆ ಹಾಗೂ ಇನ್ನಿತರೆ ಸಮಸ್ಯೆಗಳು ಎದುರಾದ್ದರಿಂದ ಬಿಡುಗಡೆ ಮುಂದೂಡಲ್ಪಟ್ಟಿತು. ಈಗ ಚಿತ್ರವನ್ನು ನೇರವಾಗಿ OTTಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಎನ್.ಎಸ್.ರಾಜಕುಮಾರ್ ನಿರ್ಧರಿಸಿದ್ದಾರೆ. ‘ಜಟ್ಟ’, ‘ಮೈತ್ರಿ’ ಸಿನಿಮಾಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶನದ ಸಿನಿಮಾ ಡಿಸೆಂಬರ್ 17ರಂದು ZEE5ನಲ್ಲಿ ಸ್ಟ್ರೀಮ್ ಆಗಲಿದೆ. “ಇದು 1850ರ ಅವಧಿಯ ಪೀರಿಯಡ್ ಡ್ರಾಮಾ. ಒಂದು ಹೊಸ ಪ್ರಯತ್ನ. ಸಾಮಾನ್ಯವಾಗಿ ಇತಿಹಾಸದಲ್ಲಿ ನಾವು ಕೃತಿಕಾರರನ್ನು ನೆನಪು ಮಾಡಿಕೊಳ್ಳುತ್ತೇವೆ. ಆದರೆ ಲಿಪಿಕಾರರರನ್ನು ಸ್ಮರಿಸುವುದಿಲ್ಲ. ನಮ್ಮ ಸಾಂಸ್ಕೃತಿಕ ರಾಯಭಾರಿಗಳಂತೆ ಕೆಲಸ ಮಾಡಿದ ಸಾಕಷ್ಟು ಲಿಪಿಕಾರರು ಅದೊಂದು ದೇವರ ಕೆಲಸ ಎನ್ನುವಂತೆ ಕಾರ್ಯನಿರ್ವಹಿಸಿದ್ದಾರೆ. ಅಂತಹ ಒಬ್ಬ ಲಿಪಿಕಾರ ‘ಗುಣಭದ್ರ’ನ ಕತೆಯನ್ನು ಇಲ್ಲಿ ಹೇಳುತ್ತಿದ್ದೇವೆ. ನಮ್ಮ ವಚನ, ದಾಸರ ಪದಗಳನ್ನು ಅಚ್ಚು ಹಾಕಿಸಿದ ಕಿಟಲ್ ಕೂಡ ಇಲ್ಲಿ ಬರುತ್ತಾರೆ. ಈ ಟ್ರಾನ್ಸಿಷನ್ ಘಟ್ಟದ ಕತೆಯನ್ನು ‘ಕನ್ನಡಿಗ’ ಚಿತ್ರದಲ್ಲಿ ನಿರೂಪಿಸುವ ಪ್ರಯತ್ನ ಮಾಡಿದ್ದೇವೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಬಿ.ಎಂ.ಗಿರಿರಾಜ್.
ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಶಿವರಾಜಕುಮಾರ್ ಹಾಡಿರುವ ಚಿತ್ರದ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರವಿಚಂದ್ರನ್ ಅವರು ‘ಗುಣಭದ್ರ’ನ ಪಾತ್ರ ನಿರ್ವಹಿಸುತ್ತಿದ್ದು, ಪಾವನಾ, ಜೀವಿಕ, ಜಮ್ಮಿ ಆಲ್ಟರ್, ಬಾಲಾಜಿ ಮನೋಹರ್, ರಾಕ್‌ಲೈನ್ ವೆಂಕಟೇಶ್, ಶೃಂಗ, ಮೈತ್ರಿ ಜಗ್ಗ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.