ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಮಿಥ್ಯ’ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಸುಮಂತ್ ಭಟ್ ಅವರಿಗೆ ಇದು ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ಹನ್ನೊಂದರ ಹರೆಯದ ಬಾಲಕನ ನೋವು ಮತ್ತು ವಿಮೋಚನೆಯ ಕಥೆ ‘ಮಿಥ್ಯ’.
“ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ” ಎನ್ನುತ್ತಾರೆ ನಿರ್ದೇಶಕ ಸುಮಂತ್ ಭಟ್. ರಕ್ಷಿತ್ ಶೆಟ್ಟಿ ತಮ್ಮ ‘ಪರಂವಃ ಸ್ಟುಡಿಯೋಸ್’ ಬ್ಯಾನರ್‌ನಡಿ ನಿರ್ಮಿಸುತ್ತಿರುವ ಸಿನಿಮಾ ‘ಮಿಥ್ಯ’. ಈ ಚಿತ್ರದ ಮೂಲಕ ಸುಮಂತ್ ಭಟ್ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ಚೊಚ್ಚಲ ಪ್ರಯತ್ನವದಲ್ಲಿ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳಲಿದ್ದಾರೆ.
ಮೂಲತಃ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸುಮಂತ್ ಭಟ್ಗೆ ಸಿನಿಮಾ ಪ್ಯಾಶನ್. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಏಕಂ’ ವೆಬ್ಸೀರೀಸ್ನ ಏಳು ಕಂತುಗಳಲ್ಲಿ ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಸುಮಂತ್. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ ‘ಮಿಥ್ಯ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಮತ್ತು ‘ವಿಕ್ರಾಂತ್ ರೋಣ’ ಚಿತ್ರಗಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ, ಇಲ್ಲಿ ‘ಮಿಥುನ್’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ. ‘ಮಿಥ್ಯ’ ಚಿತ್ರಕ್ಕೆ ಉದಿತ್ ಖುರಾನ ಛಾಯಾಗ್ರಹಣವಿದ್ದು, ಮಿಥುನ್ ಮುಕುಂದನ್ ಸಂಗೀತವಿದೆ. ಭುವನೇಶ್ ಮಣಿವಣ್ಣನ್ ಸಂಕಲನ, ಶ್ರೇಯಾಂಕ್ ನಂಜಪ್ಪ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಲಿರುವ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.