ಪರಂವಃ ಸ್ಟುಡಿಯೋಸ್​ ನಿರ್ಮಾಣದ ‘ಮಿಥ್ಯ’ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಸುಮಂತ್‌ ಭಟ್‌ ಅವರಿಗೆ ಇದು ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ಹನ್ನೊಂದರ ಹರೆಯದ ಬಾಲಕನ ನೋವು ಮತ್ತು ವಿಮೋಚನೆಯ ಕಥೆ ‘ಮಿಥ್ಯ’.

“ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ” ಎನ್ನುತ್ತಾರೆ ನಿರ್ದೇಶಕ ಸುಮಂತ್‌ ಭಟ್‌. ರಕ್ಷಿತ್​ ಶೆಟ್ಟಿ ತಮ್ಮ ‘ಪರಂವಃ ಸ್ಟುಡಿಯೋಸ್‌’ ಬ್ಯಾನರ್‌ನಡಿ ನಿರ್ಮಿಸುತ್ತಿರುವ ಸಿನಿಮಾ ‘ಮಿಥ್ಯ’. ಈ ಚಿತ್ರದ ಮೂಲಕ ಸುಮಂತ್​ ಭಟ್​ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ಚೊಚ್ಚಲ ಪ್ರಯತ್ನವದಲ್ಲಿ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳಲಿದ್ದಾರೆ.

ಮೂಲತಃ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದ ಸುಮಂತ್​ ಭಟ್​ಗೆ ಸಿನಿಮಾ ಪ್ಯಾಶನ್​. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್​ ನಿರ್ಮಾಣದ ‘ಏಕಂ’ ವೆಬ್​ಸೀರೀಸ್​ನ ಏಳು ಕಂತುಗಳಲ್ಲಿ ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಸುಮಂತ್‌. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ ‘ಮಿಥ್ಯ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಮತ್ತು ‘ವಿಕ್ರಾಂತ್​ ರೋಣ’ ಚಿತ್ರಗಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್​ ಶೆಟ್ಟಿ, ಇಲ್ಲಿ ‘ಮಿಥುನ್’​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್​ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ. ‘ಮಿಥ್ಯ’ ಚಿತ್ರಕ್ಕೆ ಉದಿತ್​ ಖುರಾನ ಛಾಯಾಗ್ರಹಣವಿದ್ದು, ಮಿಥುನ್​ ಮುಕುಂದನ್​ ಸಂಗೀತವಿದೆ. ಭುವನೇಶ್​ ಮಣಿವಣ್ಣನ್​ ಸಂಕಲನ, ಶ್ರೇಯಾಂಕ್​ ನಂಜಪ್ಪ ಸೌಂಡ್​ ಡಿಸೈನರ್​ ಆಗಿ ಕಾರ್ಯನಿರ್ವಹಿಸಲಿರುವ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

Previous articleಹಳೆಯ ಸಮಸ್ಯೆಯ ಹೊಸತನದ ನಿರೂಪಣೆ ‘ಡಾರ್ಲಿಂಗ್ಸ್’
Next articleಹುಡುಗಾಟ, ಹುಡುಕಾಟ, ಬದುಕಿನ ಪಾಠ!

LEAVE A REPLY

Connect with



Please enter your comment!
Please enter your name here