ಚಿತ್ರನಿರ್ದೇಶಕ, ಚಿತ್ರಸಾಹಿತಿ ಗೌಸ್ ಪೀರ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ನಾಯಕಿಯಾಗಿ ಇಶಾನ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಕನ್ನಡದಲ್ಲಿ ಗುರುತಿಸಿಕೊಳ್ಳುವ ಇರಾದೆ.
ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಯುವ ಪ್ರತಿಭಾವಂತ ಕಲಾವಿದರ ಪಟ್ಟಿಗೆ ಹೊಸ ಸೇರ್ಪಡೆ ಇಶಾನ. ಚಿತ್ರಸಾಹಿತಿ, ಚಿತ್ರನಿರ್ದೇಶಕ ಗೌಸ್ ಪೀರ್ ಸಾರಥ್ಯದಲ್ಲಿ ತಯಾರಾಗಲಿರುವ ಥ್ರಿಲ್ಲರ್ ಚಿತ್ರದ ಮೂಲಕ ಇಶಾನ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಹಾಗೆ ನೋಡಿದರೆ ಇಶಾನಾಗೆ ಈಗಾಗಲೇ ಬೆಳ್ಳಿತೆರೆ ಪರಿಚಯವಾಗಿದೆ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ತಮಿಳಿನ ‘ರೇಟ್ಲ’ ಸಿನಿಮಾದ ಇಬ್ಬರು ನಾಯಕಿಯರಲ್ಲಿ ಇಶಾನ ಒಬ್ಬರು. ಈ ಸಿನಿಮಾ ಹೀರೋ ಪ್ರಭುದೇವ ಎನ್ನುವುದು ವಿಶೇಷ. ಆರಂಭದಲ್ಲೇ ಪ್ರಭುದೇವ ಅವರಂತಹ ತಾರೆಯೊಂದಿಗೆ ನಟಿಸುತ್ತಿರುವ ಖುಷಿ ಅವರದ್ದು. ಈ ಪ್ಯಾನ್ ಇಂಡಿಯಾ ಸಿನಿಮಾಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ಇದಲ್ಲದೆ ತೆಲುಗಿನ ‘ಕರ್ಮ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ದಿಬಕಿಲ್ಲರ್ ಚಿತ್ರದ ಹೀರೋ.
ಇಶಾನ ಮೂಲತಃ ಉತ್ತರ ಕರ್ನಾಟಕದ ಹುಡುಗಿ. ತಂದೆ ಡಾಕ್ಟರ್. ಅವರ ಕುಟುಂಬ ಬೆಂಗಳೂರಿನಲ್ಲೇ ನೆಲೆಸಿದೆ. ಇಶಾನ ಎಂಬಿಎ ಸ್ನಾತಕೋತ್ತರ ಪದವೀಧರೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಿನಿಮಾ ಅವಕಾಶ ಬಂದರೂ, ವಿದ್ಯಾಭ್ಯಾಸದ ನಂತರ ನಟನೆ ಎಂದು ತಾವೇ ನಿರ್ಬಂಧ ವಿಧಿಸಿಕೊಂಡಿದ್ದರು. ಕಾಲೇಜು ಮುಗಿದ ಕೂಡಲೇ ಇಶಾನ ಚಾಮರಾಜ್ ಮಾಸ್ಟರ್ ಬಳಿ ನಟನೆ ತರಬೇತಿ ಪಡೆದುಕೊಂಡರು. ನಾಯಕನಟಿಯಾಗಲು ಅಗತ್ಯವಿರುವ ಡ್ಯಾನ್ಸ್ , ನಟನೆಯನ್ನು ಕಲಿತು ಕ್ಯಾಮೆರಾ ಎದುರು ನಿಂತರು. ಆರಂಭದಲ್ಲೇ ದೊಡ್ಡ ತಮಿಳು ಸಿನಿಮಾದ ಆಫರ್ ಸಿಕ್ಕಿದೆ. ಒಳ್ಳೆಯ ಕಥೆ ಹಾಗು ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಇಲ್ಲೇ ಗಟ್ಟಿ ನೆಲೆ ಕಂಡುಕೊಳ್ಳುವ ಇರಾದೆ ಅವರದ್ದು.