ನಿನ್ನೆ IFFI ಕಾರ್ಯಕ್ರಮದಲ್ಲಿ ಇಸ್ರೇಲಿ ಚಿತ್ರನಿರ್ದೇಶಕ ನಡಾವ್‌ ಲಾಪಿಡ್‌, ”ಕಾಶ್ಮೀರ್‌ ಫೈಲ್ಸ್‌’ ಪ್ರೊಪಗಾಂಡ ಸಿನಿಮಾ” ಎಂದಿದ್ದರು. ಭಾರಿ ಚರ್ಚೆಗೊಳಗಾಗಿರುವ ಈ ಹೇಳಿಕೆ ಕುರಿತಾಗಿ ಪರ – ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ನಿನ್ನೆ ಗೋವಾದಲ್ಲಿ 53ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) ಕೊನೆಗೊಂಡಿದೆ. ಸಮಾರೋಪ ಸಮಾರಂಭದಲ್ಲಿ ಜ್ಯೂರಿ ಮುಖ್ಯಸ್ಥರೂ ಆಗಿದ್ದ ಇಸ್ರೇಲ್‌ ಚಿತ್ರನಿರ್ದೇಶಕ ನಡಾವ್‌ ಲಾಪಿಡ್‌ ಅವರು ‘ಕಾಶ್ಮೀರ್‌ ಫೈಲ್ಸ್‌’ ಹಿಂದಿ ಸಿನಿಮಾ ಕುರಿತು ಪ್ರಸ್ತಾಪಿಸಿದ್ದರು. “ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರ ವೀಕ್ಷಿಸಿದ ವಾನೆಲ್ಲರೂ ಧಿಗ್ರಮೆಗೊಳಗಾದೆವು. ಪ್ರತಿಷ್ಠಿತ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿದ್ದ ಇದು ಅಸಭ್ಯ ಮತ್ತು ಪ್ರೊಪಗಾಂಡ ಸಿನಿಮಾ ಆಗಿತ್ತು. ಸಿನಿಮಾ ಕಲೆಯ ಕುರಿತಾಗಿ ನಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಅವಶ್ಯ. ಹಾಗಾಗಿ ನಾನು ಈ ಸಿನಿಮಾ ಕುರಿತಾಗಿ ನೇರವಾಗಿ ನನ್ನ ಅಭಿಪ್ರಾಯ ದಾಖಲಿಸಿದ್ದೇನೆ” ಎಂದಿದ್ದರು ನಡಾವ್‌. ಕೇಂದ್ರ ಸಚಿವರೂ ಸೇರಿದಂತೆ ಪ್ರಮುಖ ಕಲಾವಿದರು ವೇದಿಕೆಯಲ್ಲಿದ್ದರು. ಹಾಗಾಗಿ ನಡಾವ್‌ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.

ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ಈ ಹಿಂದಿ ಸಿನಿಮಾ ಮಾರ್ಚ್‌ 11ರಂದು ಥಿಯೇಟರ್‌ಗೆ ಬಂದಿತ್ತು. ZEE ಸ್ಟುಡಿಯೋಸ್‌ ನಿರ್ಮಾಣದ ಚಿತ್ರದಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳಿಂದ ನರಳಿದ ಕಾಶ್ಮೀರಿ ಪಂಡಿತರ ಕುರಿತ ಚಿತ್ರಣವಿತ್ತು. ಅನುಪಮ್‌ ಖೇರ್‌, ದರ್ಶನ್‌ ಕುಮಾರ್‌, ಮಿಥುನ್‌ ಚಕ್ರವರ್ತಿ, ಪಲ್ಲವಿ ಜೋಷಿ, ಪ್ರಕಾಶ್‌ ಬೆಳವಾಡಿ ಅಭಿನಯಿಸಿದ್ದರು. ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ನವೆಂಬರ್‌ 22ರಂದು IFFIನ ಇಂಡಿಯನ್‌ ಪನೋರಮಾ ವಿಭಾಗದಲ್ಲಿ ಸ್ಕ್ರೀನ್‌ ಆಗಿತ್ತು.

ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಹಿರಿಯ ನಟ ಅನುಪಮ್‌ ಖೇರ್‌ ಅವರು ಲಡಾವ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಹೋಲೊಕಾಸ್ಟ್‌ನಿಂದ ನೊಂದ Jews ಕಮ್ಯೂನಿಟಿಯಿಂದ ಬಂದವರು ನಡಾವ್‌. ಹೋಲೋಕಾಸ್ಟ್‌ನಂತೆ ಕಾಶ್ಮೀರಿ ಪಂಡಿತರೂ ಸಂಕಷ್ಟ ಅನುಭವಿಸಿದ್ದಾರೆ. ಈ ನೋವಿನ ಅರಿವಿದ್ದವರು ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ಈ ಹೇಳಿಕೆ ಮೂಲಕ ನೊಂದ ಜನರ ಮನಸ್ಸಿಗೆ ನಡಾವ್‌ ಘಾಸಿ ಉಂಟುಮಾಡಿದ್ದಾರೆ” ಎಂದಿದ್ದಾರೆ ಖೇರ್‌.

ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದರ್ಶನ್‌ ಕುಮಾರ್‌ ಅವರು ಈ ಪ್ರತಿಕ್ರಿಯಿಸುತ್ತಾ, “ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಆದರೆ ಕಾಶ್ಮೀರಿ ಪಂಡಿತರು ಅನುಭವಿಸಿದ ನೋವು ಖಂಡಿತಾ ಸುಳ್ಳಲ್ಲ. ಉಗ್ರಗಾಮಿಗಳ ಆಟಾಟೋಪಕ್ಕೆ ಬಲಿಯಾದ ಪಂಡಿತರು ಇಂದಿಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದು ವಲ್ಗಾರಿಟಿ ಅಲ್ಲ ರಿಯಾಲಿಟಿ” ಎಂದಿದ್ದಾರೆ. ಬಾಲಿವುಡ್‌ನ ಹಿರಿಯ ನಟ ಪರೇಶ್‌ ರಾವಲ್‌ ಈ ವಿವಾದದ ಬಗ್ಗೆ ಮಾತನಾಡುತ್ತಾ, “ಜನರು ನಾನಾ ರೀತಿ ಮಾತನಾಡುತ್ತಾರೆ. ನಾವು ಒಳ್ಳೆಯ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ಹಾಗಾಗಿ ಯಾರೋ ಏನೋ ಅಂದಿದ್ದಕ್ಕೆ ನಾವು ಬೇಸರಿಸಿಕೊಳ್ಳಬೇಕಿಲ್ಲ. ಇದು ನಮಗೆಲ್ಲಾ ಪಾಠವಾಗಬೇಕು” ಎಂದಿದ್ದಾರೆ.

ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿ ನವೋರ್‌ ಗಿಲಾನ್‌ ಅವರೂ ನಿರ್ದೇಶಕ ನಡಾವ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “IFFI ಜ್ಯೂರಿ ಮುಖ್ಯಸ್ಥರಾಗಿ ಸಿಕ್ಕಿರುವ ಗೌರವಕ್ಕೆ ನಡಾವ್‌ ಚ್ಯುತಿ ತಂದಿದ್ದಾರೆ. ಭಾರತೀಯರು ಅತಿಥಿಗಳನ್ನು ದೇವರೆಂದು ಭಾವಿಸುತ್ತಾರೆ. ನೀವು ಈ ನಂಬಿಕೆಯನ್ನು ಹುಸಿಗೊಳಿಸಿದ್ದೀರಿ. ಅಂದಿನ ಕಾಶ್ಮೀರದ ಸೂಕ್ಷ್ಮ ಸಂದರ್ಭಗಳನ್ನು ಚಿತ್ರದಲ್ಲಿ ಸೆರೆಹಿಡಿದಿದ್ದಾರೆ. ನಡಾವ್‌ ಹೇಳಿಕೆಯನ್ನು ನಾನು ಖಂಡಿಸುತ್ತೇನೆ” ಎಂದಿದ್ದಾರೆ ಗಿಲಾನ್‌.

ಚಿತ್ರೋತ್ಸವದ ಜ್ಯೂರಿಗಳಲ್ಲೊಬ್ಬರಾದ ಸುದಿಪ್ತೊ ಸೇನ್‌ ಅವರು ಈ ವಿವಾದದ ಬಗ್ಗೆ ಅಂತರ ಕಾಯ್ದುಕೊಂಡಿದ್ದಾರೆ. “ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಕುರಿತಾದ ನಡಾವ್‌ ಹೇಳಿಕೆ ವೈಯಕ್ತಿಕವಾದದ್ದು. ಜ್ಯೂರಿಯಾಗಿ ನನಗೆ ಚಿತ್ರದ ತಾಂತ್ರಿಕ ಅಂಶಗಳು, ಸಮಾಜ – ಸಾಂಸ್ಕೃತಿಕ ಮಹತ್ವ, ಚಿತ್ರದ ಏಸ್ಥಟಕ್‌ ಅಂಶಗಳನ್ನು ಗಮನಿಸುವ ಟಾಸ್ಕ್‌ ಇತ್ತು. ಯಾವುದೇ ರಾಜಕೀಯ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದಿದ್ದಾರೆ ಸುದಿಪ್ತೊ. ನಡಾವ್‌ ಲಾಪಿಡ್‌ ಹೇಳಿಕೆ ಕುರಿತಾಗಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಜಾರಿಯಲ್ಲಿದ್ದು, ನಡಾವ್‌ ಹೇಳಿಕೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಕಾಣಿಸುತ್ತಿವೆ.

LEAVE A REPLY

Connect with

Please enter your comment!
Please enter your name here