ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಅವರ ಕೃತಿಯನ್ನು ಆಧರಿಸಿದ ‘ಡೇರ್‌ ಡೆವಿಲ್‌ ಮುಸ್ತಫಾ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸರಳ ಮತ್ತು ಭಿನ್ನ ರೀತಿಯ ನಿರೂಪಣಾ ಶೈಲಿ ಟ್ರೈಲರ್‌ನ ವಿಶೇಷತೆ. ಶಶಾಂಕ್‌ ಸೋಗಾಲ್‌ ನಿರ್ದೇಶನದ ಚಿತ್ರ ಮೇ 19ರಂದು ತೆರೆಕಾಣಲಿದೆ.

‘ಕನ್ನಡ ಚಿತ್ರರಸಿಕರನ್ನು ಸಾಹಿತಿ ಪೂರ್ಣಚಂದ್ರ ತೇಜಸ್ವೀ ಅವರ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಸಣ್ಣ ಪ್ರಯತ್ನ ನಮ್ಮದು. ಇದಕ್ಕಾಗಿ ಉತ್ಸಾಹಿ ಯುವಕರ ಚಿತ್ರತಂಡ ಅತ್ಯಂತ ಪ್ಯಾಷನೇಟೆಡ್‌ ಆಗಿ ಕೆಲಸ ಮಾಡಿದ್ದೇವೆ. ಇದು ದೊಡ್ಡ ಪರದೆ ಮೇಲೆ ಒಂದೊಳ್ಳೆಯ ಅನುಭವ ನೀಡಲಿದೆ’ ಎನ್ನುತ್ತಾರೆ ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರದ ನಿರ್ದೇಶಕ ಶಶಾಂಕ್ ಸೋಗಾಲ್. ಅವರ ಮಹತ್ವಾಕಾಂಕ್ಷೆಯ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ನಿರೂಪಣೆ ಮತ್ತು ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದೆ. ಅಂದಹಾಗೆ ಇದು ತೇಜಸ್ವಿ ಅವರ ಅಭಿಮಾನಿಗಳೇ ಹಣ ಹಾಕಿ ನಿರ್ಮಿಸಿರುವ ಸಿನಿಮಾ. ವಿಶಿಷ್ಟ ರೀತಿಯಲ್ಲಿ ಪ್ರಚಾರಕಾರ್ಯ ಹಮ್ಮಿಕೊಂಡಿದೆ ಚಿತ್ರತಂಡ. ಮೇ 19ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

‘ಫಟಿಂಗ’ ಕಿರುತಚಿತ್ರದ ಮೂಲಕ ಗಮನ ಸೆಳೆದಿದ್ದ ಶಶಾಂಕ್‌ ಸೋಗಾಲ್‌ ನಿರ್ದೇಶನದ ಚಿತ್ರವಿದು. ಪೂಚಂತೇ ಅವರ ಕಟ್ಟಾಭಿಮಾನಿಯಾದ ಅವರು ಚಿತ್ರಕಥೆ ರಚಿಸಿ ಸಮಾನಮನಸ್ಕ ಗೆಳೆಯರೊಂದಿಗೆ ಸೇರಿ ಚಿತ್ರ ಮಾಡಿದ್ದಾರೆ. ನಾನಾ ಬಗೆಯಲ್ಲಿ ಸಿನಿರಸಿಕರ ಗಮನಸೆಳೆಯುತ್ತಿರುವ ಈ ಸಿನಿಮಾದ ‘ನಿನ್ನಂಥೋರ್ ಯಾರೂ ಇಲ್ವಲ್ಲೋ’ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ಡಾ ರಾಜಕುಮಾರ್‌ ಅವರ ಅನಿಮೇಷನ್‌ ಹಾಡಿಗೆ ವಾಸುಕಿ ವೈಭವ್ ಮತ್ತು ಸಿದ್ದಾರ್ಥ್ ಬೆಳ್ಮಣ್ಣು ದನಿಯಾಗಿದ್ದಾರೆ. ಇದೀಗ ಟ್ರೈಲರ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಾ ಬ್ರೋ ವಾಯ್ಸ್‌ನಲ್ಲಿ ಪೂಚಂತೇ ಪ್ರಪಂಚ ಪರಿಚಯ ಮಾಡಿಕೊಡಲಾಗಿದೆ. ಬಾಲ್ಯದ ಆಟ, ಪಾಠ, ತುಂಟಾಟದ ಡೇರ್ ಡೆವಿಲ್ ಮುಸ್ತಫಾ ಮೊದಲ ನೋಟ ಇಂಪ್ರೆಸೀವ್‌ ಆಗಿದೆ.

ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ನಟ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ಸಾಹಿತ್ಯ ಪ್ರೇಮಿಯಾದ ಧನಂಜಯ್ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೋಸ್‌ ರಾಜ್ಯದೆಲ್ಲೆಡೆ ಸಿನಿಮಾ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾಮರ ಬ್ಯಾನರ್‌ನಡಿ ‘ಡೇರ್ ಡೆವಿಲ್ ಮುಸ್ತಫಾ’ ನಿರ್ಮಾಣವಾಗಿದೆ.

LEAVE A REPLY

Connect with

Please enter your comment!
Please enter your name here