JioCinemaದಲ್ಲಿ ಸ್ಟ್ರೀಮ್ ಆಗುತ್ತಿರುವ ‘ಬ್ಲಡಿ ಡ್ಯಾಡಿ’, 2011ರ ಫ್ರೆಂಚ್ ಚಲನಚಿತ್ರ ‘ನುಯಿಟ್ ಬ್ಲಾಂಚೆ’ (ಸ್ಲೀಪ್ಲೆಸ್ ನೈಟ್) ಹಿಂದಿ ರೀಮೇಕ್. ಆಕ್ಷನ್ – ಥಿಲ್ಲರ್ ಆದರೂ ಕೆಲವೊಂದು ದೃಶ್ಯಗಳು ನಮಗೆ ಮುಂದೇನು ಎಂಬ ಹಿಂಟ್ ನೀಡುತ್ತಿರುತ್ತವೆ. ಹೀರೋ ಶಾಹೀದ್ ಕಪೂರ್ ಅವರನ್ನು ಇಷ್ಟಪಡುವವರು ನೋಡಬಹುದಾದ ಸಿನಿಮಾ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೆಹಲಿಯಲ್ಲಿ, ಮಾದಕ ವಸ್ತು ವಿರೋಧಿ ಪೊಲೀಸ್ ಸುಮೈರ್ (ಶಾಹಿದ್ ಕಪೂರ್) ಮತ್ತು ಅವನ ಪಾರ್ಟ್ನರ್ (ಝೈಶಾನ್ ಕ್ವಾದ್ರಿ) ಒಂದು ಕಾರನ್ನು ಹೊಡೆದುರುಳಿಸಿ, ಅದರಲ್ಲಿ ಸಾಗಿಸುತ್ತಿದ್ದ 50 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳುವುದರೊಂದಿಗೆ ಕತೆ ಆರಂಭವಾಗುತ್ತದೆ. ಕೊಕೇನ್ ವಶ ಪಡಿಸಿಕೊಂಡಿದ್ದಾರೆ ಎನ್ನುವಾಗಲೇ ಅತ್ತ ಕಡೆಯಲ್ಲೊಬ್ಬ ಡಾನ್ ಇದ್ದೇ ಇರುತ್ತಾನೆ ಎಂಬುದು ಸುಲಭವಾಗಿ ಊಹಿಸಿಕೊಳ್ಳಬಹುದು. ಇಲ್ಲಿ ಆ ಬ್ಯಾಗ್ ಪಡೆಯುವುದಕ್ಕಾಗಿ ಗುರುಗ್ರಾಮದಲ್ಲಿರುವ ಹೋಟೆಲ್ ಉದ್ಯಮಿ ಸಿಕಂದರ್ (ರೋನಿತ್ ರಾಯ್), ಸುಮೈರ್ ಮಗನನ್ನು ಅಪಹರಣ ಮಾಡುತ್ತಾನೆ. ಬ್ಯಾಗ್ ಹಿಂತಿರುಗಿಸಿದರೆ ಮಾತ್ರ ಮಗನನ್ನು ಜೀವಂತವಾಗಿ ಹೊರಗೆ ಬಿಡುತ್ತೇನೆ ಎಂದು ಸಿಕಂದರ್ ಬೆದರಿಕೆಯೊಡ್ಡಿತ್ತಾನೆ. ಮಗ ನಾಪತ್ತೆಯಾಗಿರುವುದಕ್ಕೆ ಟೆನ್ಶನ್ ಮಾಡಿಕೊಂಡಿರುವ ಅಮ್ಮ ರಿಯಾ (ಸುಪರ್ಣಾ ಮೊಯಿತ್ರಾ), ‘ಎಲ್ಲವೂ ನಿನ್ನಿಂದಲೇ ಆಗಿದ್ದು, ಮಗನನ್ನು ನೋಡಿಕೊಳ್ಳಲು ಕೂಡಾ ನಿನ್ನ ಕೈಯಿಂದ ಆಗುತ್ತಿಲ್ಲವಲ್ಲ’ ಎಂದು ಬೈಯುತ್ತಾಳೆ. ತಾನು ಕಸಿದುಕೊಂಡ ಆ ಬ್ಯಾಗ್ ಅನ್ನು ಹಿಂತಿರುಗಿಸಬೇಕು ಎಂದು ನಿರ್ಧರಿಸಿ ಹೊರಟು ನಿಲ್ಲುತ್ತಾನೆ ಸುಮೈರ್. ಒಂದು ರಾತ್ರಿ ಹೋಟೆಲ್ ಎಮರಾಲ್ಡ್ ಎಟ್ಲಾಂಟಿಸ್‌ನಲ್ಲಿ ನಡೆಯವ ಬೆಕ್ಕು – ಇಲಿ ಆಟವೇ ‘ಬ್ಲಡಿ ಡ್ಯಾಡಿ’ ಕಥಾವಸ್ತು.
JioCinemaದಲ್ಲಿ ಸ್ಟ್ರೀಮ್ ಆಗುತ್ತಿರುವ ‘ಬ್ಲಡಿ ಡ್ಯಾಡಿ’, 2011 ರ ಫ್ರೆಂಚ್ ಚಲನಚಿತ್ರ ‘ನುಯಿಟ್ ಬ್ಲಾಂಚೆ’ (ಸ್ಲೀಪ್ಲೆಸ್ ನೈಟ್) ನ ಹಿಂದಿ ರೀಮೇಕ್. 2015ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಚಿತ್ರ ‘ತೂಂಗಾ ವನಮ್’ನದ್ದು ಇದೇ ಕತೆ. ಇಲ್ಲಿ ಸುಮೈರ್ ತನ್ನ ಮಗನನ್ನು ಕಾಪಾಡಲು ಹೇಗಾದರೂ ಮಾಡಿ NCB ಕಚೇರಿಯಿಂದ ಡ್ರಗ್ಸ್ ತುಂಬಿದ ಬ್ಯಾಗ್ ಹೊರತೆಗೆದುಕೊಂಡು ಬಂದಾಗ, NCBಯಲ್ಲಿನ ಹುಳುಕುಗಳು ಒಂದೊಂದೇ ತೆರೆಯುತ್ತಾ ಹೋಗುತ್ತದೆ. ಸಹೋದ್ಯೋಗಿಗಳಾದ ಅದಿತಿ ರಾವತ್ (ಡಯಾನಾ ಪೆಂಟಿ) ಮತ್ತು ಹಿರಿಯ ಅಧಿಕಾರಿ ಸಮೀರ್ ಸಿಂಗ್ (ರಾಜೀವ್ ಖಂಡೇಲ್ವಾಲ್) ಸುಮೈರ್‌ನ ಬೆನ್ನು ಹತ್ತುತ್ತಾರೆ. ಒಂದು ಹಂತದಲ್ಲಿ, ಪ್ರತಿಯೊಬ್ಬರೂ ಶಂಕಿತರಂತೆ ಕಾಣುತ್ತಾರೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಗೊಂದಲ ಇಲ್ಲಿ ಮೂಡುತ್ತದೆ.
ಎರಡು ಗಂಟೆಗಳ ಸಿನಿಮಾ ಇಲ್ಲಿ ವೇಗ ಪಡೆದುಕೊಂಡರೂ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ, ಹೊಡೆಬಡಿಗಳ ಕಾದಾಟವೇ ಮುಖ್ಯವಾಗಿ ಬಿಡುತ್ತದೆ. ಆಕ್ಷನ್ – ಥಿಲ್ಲರ್ ಸಿನಿಮಾ ಆದರೂ ಕೆಲವೊಂದು ದೃಶ್ಯಗಳು ನಮಗೆ ಮುಂದೇನು ಎಂಬ ಹಿಂಟ್ ನೀಡುತ್ತಿರುತ್ತವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಚಿತ್ರೀಕರಿಸಿದ ಚಿತ್ರವಾಗಿರುವುದರಿಂದ ಮೊದಲಿಗೆ ಮಾಸ್ಕ್, ಲಾಕ್ ಡೌನ್‌ನಿಂದಾಗಿ ಕುಸಿದ ಹೋಟೆಲ್ ವ್ಯಾಪಾರ, ದಂಧೆ ಬಗ್ಗೆ ಮಾತು ಬಂದರೂ ನಂತರ ಹೋಟೆಲ್‌ನಲ್ಲಿ ನಡೆಯುವ ಅದ್ದೂರಿ ಮದುವೆಯಲ್ಲಿ ಇದರ ಪ್ರಸ್ತಾಪವೇ ಇರುವುದಿಲ್ಲ. ಝಗಮಗಿಸುವ ಲೈಟ್, ಐಷಾರಾಮಿ ಹೋಟೆಲ್, ಪಾರ್ಟಿ, ಡಿಜೆ ಸಂಗೀತಗಳ ನಡುವೆ ಹೊಡೆದಾಟ, ಗುಂಡಿನ ದಾಳಿ, ಸಂಚು, ಕೊಲೆ ಎಲ್ಲವೂ ಮುಗಿದು ಬಿಡುತ್ತದೆ.
‘ಬ್ಲಡಿ ಡ್ಯಾಡಿ’ ಎಂಬ ಹೆಸರೇ ಹೇಳುವಂತೆ ಅಪ್ಪನಾಗಿ ಸುಮೈರ್ ತನ್ನ ಮಗನನ್ನು ಕಾಪಾಡಲು ಹಲವರನ್ನು ಕೊಲ್ಲಬೇಕಾಗುತ್ತದೆ. ನಿನಗೆ ಜವಾಬ್ದಾರಿಯೇ ಇಲ್ಲ, ಅಪ್ಪನಾಗಿಯೂ, ಗಂಡನಾಗಿಯೂ ನೀನು ಜವಾಬ್ದಾರಿ ನಿಭಾಯಿಸಿಲ್ಲ ಎಂದು ಹೇಳುವ ವಿಚ್ಛೇದನದ ಮೂಲಕ ದೂರವಾದ ಪತ್ನಿ, ಮಗನ ವಿಷಯದಲ್ಲಿ ಹತ್ತಿರವಾಗಿಯೇ ಇರುತ್ತಾಳೆ. ನಮ್ಮ ಅಮ್ಮ ನಿಮ್ಮ ಬದಲು ಆಕಾಶ್‌ನನ್ನು ಯಾಕೆ ಆಯ್ಕೆ ಮಾಡಿಕೊಂಡಳು ಎಂದು ಅಪ್ಪನಲ್ಲಿ ಸಿಟ್ಟಾಗುವ ಮಗ. ತನ್ನ ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ ಅಪ್ಪ, ಮಗನಿಗಾಗಿ ಸಮಯ ಕೊಡಲು ಸಾಧ್ಯವಾಗದೇ ಇದ್ದರೂ ಮಗನನ್ನು ಕಾಪಾಡಲು ಯಾವುದೇ ಹಂತಕ್ಕೂ ಹೋಗಬಲ್ಲ ಎಂಬ ಭಾವನಾತ್ಮಕ ಎಳೆಯನ್ನು ಆಕ್ಷನ್ ಥ್ರಿಲ್ಲರ್ ಚಿತ್ರಕಥೆಯಾಗಿ ಹೆಣೆಯಲಾಗಿದೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಸಿನಿಮಾದಲ್ಲಿ ಸುಮೈರ್ ಆಕ್ಷನ್ ಹೀರೊ ಪಾತ್ರಕ್ಕೆ ಜೀವ ತುಂಬಿದ ಪ್ರಬುದ್ಧ ನಟನೆ ಶಾಹೀದ್ ಕಪೂರ್‌ನದ್ದು ಆಗಿದ್ದರೂ ಕೆಲವೊಂದು ಫೈಟ್ ದೃಶ್ಯಗಳು ಪೇಲವ ಎಂದೆನಿಸಿಬಿಡುತ್ತವೆ. ಸುಮೈರ್ ಗಟ್ಟಿಗ, ಶಕ್ತಿಶಾಲಿ ಎಂಬಂತೆ ಚಿತ್ರಿಸಲಾಗಿದೆ. ಪ್ರತಿ ಬಾರಿ ಅವನು ತನ್ನ ಮಗನನ್ನು ನೋಡಿದಾಗ ಅಲ್ಲಿ ಭಾವುಕವಾಗುವಂತ ಸಂಗೀತ ಕೇಳಿಬರುತ್ತದೆ. ತನ್ನದೇ ಜಂಜಾಟದಲ್ಲಿದ್ದರೂ ಅವನು ಹೋಟೆಲ್‌ನಲ್ಲಿರುವ ಇಬ್ಬರು ನೇಪಾಳಿ ವಲಸಿಗರಿಗೆ ಬಾಡಿಗೆಗೆ ಸಹಾಯ ಮಾಡುತ್ತಾನೆ. ಬಾತ್ ರೂಂನಲ್ಲಿ ಮಹಿಳೆಯೊಂದಿಗೆ ಬಲವಂತ ಮಾಡುತ್ತಿದ್ದ ಯುವಕನಲ್ಲಿ No Means No ಎಂದು ಬುದ್ದಿ ಹೇಳುತ್ತಾನೆ.
ಇನ್ನಿತರ ಪಾತ್ರಗಳ ಬಗ್ಗೆ ಹೇಳುವುದಾದರೆ ರೋನಿತ್ ರಾಯ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ NCB ಅಧಿಕಾರಿಯಾಗಿದ್ದರೂ ರಾಜೀವ್ ಖಂಡೇವಾಲಾ ನಟನೆ ತೃಪ್ತಿ ಕೊಡುವುದಿಲ್ಲ. ಸ್ಟೈಲಿಷ್ ಆಗಿರುವ ಖಳನಾಯಕನಾಗಿ ಬರುವ ಸಂಜಯ್ ಕಪೂರ್ ಹೆಚ್ಚು ಹೊತ್ತು ನಿಲ್ಲುವುದಿಲ್ಲ.ಈ ಗಂಡಸರ ನಡುವೆ ದಕ್ಷ ಅಧಿಕಾರಿಯಾಗಿ ಡಯಾನಾ ಪೆಂಟಿ ಗಮನ ಸೆಳೆಯುತ್ತಾರೆ. ಶಾಹಿದ್‌ನ ಮಗ ಅಥರ್ವ ಪಾತ್ರದಲ್ಲಿ ನಟಿಸಿರುವ ಬಾಲಕನದ್ದು ಸಿಂಪಲ್ ಮತ್ತು ಉತ್ತಮ ನಟನೆ.
ತಮಾಷೆಯೆಂದರೆ ಆಗಾಗ ಹೊಡೆದಾಟ ಬಡಿದಾಟಗಳಾದರೂ ಗಾಯಗೊಂಡ ಡ್ಯಾಡಿ ಶಾಹೀದ್, ಒಂದು ಕ್ಷಣದಲ್ಲಿ ರಕ್ತ ಸುರಿಸುತ್ತಿದ್ದರೂ ನಂತರದ ಕ್ಷಣದಲ್ಲಿ ಏನೂ ಆಗಿಲ್ಲವೆಂಬಂತೆ ಇರುವುದು. ಕೆಲವೊಮ್ಮೆ ಬಟ್ಟೆಯ ಮೇಲಿನ ರಕ್ತದ ಕಲೆಗಳೂ ಮಾಯವಾಗಿರುತ್ತವೆ. ಒಟ್ಟಾರೆಯಾಗಿ, ಶಾಹಿದ್ ಕಪೂರ್‌ನ ಕೆಲವು ಆಕ್ಷನ್ ಮತ್ತು ಸ್ಟಂಟ್‌ಗಳನ್ನು ನೋಡಬೇಕೆಂದಾದರೆ ‘ಬ್ಲಡಿ ಡ್ಯಾಡಿ’ ನೋಡಬಹುದು.