ಈ ಡಾಕ್ಯುಸೀರೀಸ್’ನಲ್ಲಿ ಹೇಳಿರುವ ವಿಷಯಗಳು ಕೇವಲ 25% ಇರಬಹುದೇನೋ. ವೀರಪ್ಪನ್ ಬಗ್ಗೆ ವಿವರಗಳು ಗೊತ್ತಿಲ್ಲದವರಿಗೆ ಈ ಸೀರೀಸ್’ನಲ್ಲಿರುವ ವಿವರಗಳೇ ಮುಖ್ಯವಾಗಿ ಆತ ರಾಬಿನ್‌ಹುಡ್‌ನಂತೆ ಕಂಡರೂ ಅಚ್ಚರಿಯಿಲ್ಲ, ಅದಾಗಬಾರದು. ವೀರಪ್ಪನ್ ಹೀರೋ ಅಂತೂ ಖಂಡಿತ ಅಲ್ಲ. ಈ ಸೀರೀಸ್’ನಲ್ಲಿ ಹೇಳುವಂತೆ ಕೊನೆಕೊನೆಯಲ್ಲಿ ಆತ ಒಂದಷ್ಟು ಸಂಧಾನಕಾರರ ಮಾತುಕಥೆಗಳಿಂದ ಪ್ರೇರಿತನಾಗಿ ತಮಿಳು ಹೋರಾಟಗಾರನಂತೆ ಕಂಡರೂ ಮೂಲತಃ ಆತ ಒಬ್ಬ ಕ್ರಿಮಿನಲ್, ಅಷ್ಟೇ. Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘The Hunt For Veerappan’.

ದೂರದ ಬೆಂಗಳೂರು ಹಾಗಿರಲಿ. ಪಕ್ಕದ ಮೈಸೂರಿಗೆ ಬಂದ ಹೊಸತು. ನನ್ನ ಸಹಪಾಠಿಗಳು ‘ಯಾವೂರು?’ ಅಂತ ಕೇಳಿದಾಗ ‘ಕೊಳ್ಳೇಗಾಲ’ ಅಂದರೆ ಮುಗೀತು. ‘ಓಹೋ.. ವೀರಪ್ಪನ್ ಊರಾ?’ ಅಂತಲೇ ಮೊದಲು ಅವರಿಂದ ಉದ್ಘಾರ ಬರುತ್ತಿದ್ದದ್ದು. ಆಗಿನ್ನೂ ವೀರಪ್ಪನ್ ಬದುಕಿದ್ದ. ಆದರೆ ನಾವು ಎಲ್ಲೇ ಹೋದರೂ ಎಲ್ಲರಿಂದಲೂ ಕೇಳುತ್ತಿದ್ದುದು ‘ವೀರಪ್ಪನ್ ನಿಜವಾಗಲೂ ಕೆಟ್ಟವನಾ? ಅವನನ್ನು ನೀವು ನೋಡಿದ್ದೀರಾ? ಅವನು ಎಲ್ಲರೂ ಹೇಳುವಂತೆ ಕಾಡಿನಲ್ಲೇ ಇರ್ತಾನಾ?’ ಅನ್ನುವ ರೀತಿಯ ಪ್ರಶ್ನೆಗಳನ್ನು.

ವೀರಪ್ಪನ್ ಅತ್ತಲಿನ ಜನರಿಗೆ ಭಯವನ್ನೇನು ಹುಟ್ಟಿಸಿರಲಿಲ್ಲ. ಏಕೆಂದರೆ ಆತ ಕಾಡಿನಲ್ಲಿ ಸಿಕ್ಕ ಜನರನ್ನು ಹೆದರಿಸಿ ಬೆದರಿಸಿ ಕೆಲಸವನ್ನೇನು ಮಾಡಿಸಿಕೊಳ್ಳುತ್ತಿರಲಿಲ್ಲ. ನಿಜಕ್ಕೂ ಜನರು ಹೆದರುತ್ತಿದ್ದದ್ದು ವೀರಪ್ಪನ್ ಆ ಕಾಡುಗಳಲ್ಲಿ ಇರುವುದರಿಂದ ಉಂಟಾದ ಪರಿಸ್ಥಿತಿಯಿಂದಾಗಿ. ಅನೇಕ ಸಂಪನ್ಮೂಲಗಳಿಗೆ ಕಾಡಂಚಿನ ಊರುಗಳ ಜನರು ಕಾಡನ್ನು ಅವಲಂಬಿಸಿದ್ದರಿಂದ STF ಅದೇ ಊರುಗಳಲ್ಲಿ ಬೀಡು ಬಿಟ್ಟಿದ್ದರಿಂದ ಏನಾದರೊಂದು ಕಾರಣಕ್ಕೆ ಜನರನ್ನು ಅನುಮಾನಿಸಿ ಪ್ರಶ್ನಿಸುತ್ತಿದ್ದರು. ಇದು ಒಂದು ಬಗೆಯ ಅಸಮಾಧಾನಕ್ಕೆ ಕಾರಣವಾಗಿತ್ತು. ಊರಿನ ಯಾರೋ ಒಬ್ಬರು ವೀರಪ್ಪನ್’ಗೆ ಸಹಾಯ ಮಾಡಿ ಸಿಕ್ಕಿಕೊಂಡರೆ ಅದರ ಪರಿಣಾಮ ಊರಿನ ಇತರೆ ಜನರ ಮೇಲೂ ಬೀರುತ್ತಿತ್ತು.

ಕೊನೆಕೊನೆಗೆ ಆತ ಶ್ರೀಗಂಧದ ಮರಗಳನ್ನು ಕಡಿಯುವುದನ್ನು ಬಿಟ್ಟುಬಿಟ್ಟ! ಏಕೆಂದರೆ ಇಡೀ ಕಾಡಿನಲ್ಲಿ ಯಾವ ಶ್ರೀಗಂಧದ ಗಿಡವೂ ಉಳಿದಿರಲಿಲ್ಲ! ಹಾಗೆ ಆನೆಗಳ ದಂತಗಳ ಕಥೆಯೂ ಅಷ್ಟೇ. Neflix ಹೊಸದಾಗಿ ಬಿಡುಗಡೆ ಮಾಡಿರುವ ‘The Hunt For Veerappan’ ಸೀರೀಸ್ ಮೂರು ದಶಕಗಳ ಕಾಲ ವೀರಪ್ಪನ್ ಹೇಗೆ ತಮಿಳುನಾಡು-ಕರ್ನಾಟಕ ಪೊಲೀಸ್ ಇಲಾಖೆಗೆ, ಸರ್ಕಾರಗಳಿಗೆ ನಿದ್ರೆಕೆಡಿಸಿದ್ದ ಮತ್ತು ಹೇಗೆ ಕೊನೆಯಾದ ಅನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಸೀರೀಸ್’ನ ಬಹುಮುಖ್ಯ ಇಷ್ಟವಾಗುವ ಅಂಶವೆಂದರೆ ಅಲ್ಲಿನ ಕಾಡನ್ನು ತೋರಿಸಿರುವ ರೀತಿ. ಈ ಹಿಂದೆ ಬಂದ ವೀರಪ್ಪನ್ ಬಗೆಗಿನ ಸಿನಿಮಾಗಳಲ್ಲಿ ಚಾಮರಾಜನಗರ ಜಿಲ್ಲೆಯ ಕಾಡನ್ನು ತೋರಿಸಿರುವ ರೀತಿ ನೈಜವಾಗಿಲ್ಲ. ಅಲ್ಲಿ ಚಿತ್ರೀಕರಿಸುವ ಸಂಕೀರ್ಣಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬೇರೆಡೆಯಲ್ಲಿ ಚಿತ್ರೀಕರಿಸಿ ಅದನ್ನು ಚಾಮರಾಜನಗರದ ಕಾಡು ಅನ್ನುವಂತೆ ತೋರಿಸಲಾಗಿದೆ. ಮಲೆನಾಡಿನ ಕಾಡಿಗೂ ಬಯಲುಸೀಮೆಯ ಕಾಡಿಗೂ ವ್ಯತ್ಯಾಸವಿದೆ. ಆದರೆ ಇಲ್ಲಿ ಹಾಗಾಗಿಲ್ಲ. ಇಲ್ಲಿ ಗೋಪಿನಾಥಂ, ದಿಂಬಂ, ಮಹದೇಶ್ವರ ಬೆಟ್ಟದ ಕಾಡುಗಳನ್ನು, ಅಲ್ಲಿಯ ರಸ್ತೆಗಳ ಹೇರ್’ಪಿನ್ ಬೆಂಡುಗಳನ್ನು ತೋರಿಸುವಾಗ ರೋಮಾಂಚನವಾಗುತ್ತದೆ.

ಮುಖ್ಯವಾಗಿ ರಾಮಾಪುರದ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸರನ್ನು ಕೊಂದದ್ದು, ಒಂದಷ್ಟು ಫಾರೆಸ್ಟ್ ಗಾರ್ಡುಗಳನ್ನು ಅಪಹರಿಸಿದ ಪ್ರಕರಣ, ಶಾಸಕ ನಾಗಪ್ಪ ಅವರ ಅಪಹರಣ – ಹತ್ಯೆ, ಆಗಷ್ಟೇ ವೀರಪ್ಪನ್ ತಮ್ಮ ಮತ್ತು ಇತರೆ ಇಬ್ಬರನ್ನು ಬಂಧಿಸಿ ಮಲೈಮಹದೇಶರ ಬೆಟ್ಟಕ್ಕೆ ವಿಚಾರಣೆಗೆಂದು ಕರೆದೊಯ್ಯುವಾಗ ಅವರೆಲ್ಲರೂ ಸೈನೈಡ್ ತಿಂದು ಸತ್ತಿದ್ದು ಈ ರೀತಿಯ ಅನೇಕ ಬಹುಮುಖ್ಯ ವಿಚಾರಗಳನ್ನು ಇಲ್ಲಿ ಬಿಟ್ಟುಬಿಟ್ಟಿದ್ದಾರೆ. ಆ ವಿಷಯಗಳನ್ನು ಸೇರಿಸಿ ಇನ್ನೊಂದೆರಡು ಕಂತುಗಳು ಜಾಸ್ತಿಯಾಗಿದ್ದರೂ ಆಸಕ್ತಿಕರವಾಗಿಯಂತೂ ಇರುತ್ತಿದ್ದವು. ವೀರಪ್ಪನ್ ಮುಗಿಸುವ ಸಂದರ್ಭವನ್ನು ಸಹ ಮೇಲೆ ಮೇಲೆ ಹೇಳಿ ಮುಗಿಸಲಾಗಿದೆ. ಇನ್ನಷ್ಟು ವಿವರವಾಗಿ ಹೇಳುವಷ್ಟು ಸ್ವಾರಸ್ಯ ಆ ಘಟನೆಗಳಲ್ಲಿವೆ.

ಇನ್ನು ಪೊಲೀಸ್ ಇಲಾಖೆ ವೀರಪ್ಪನ್ ಅನ್ನು ಹಿಡಿಯಲು ಪ್ರಯತ್ನಿಸುವ ಹಾದಿಯಲ್ಲಿ ಅದೆಷ್ಟು ಅಮಾಯಕರಿಗೆ ಚಿತ್ರಹಿಂಸೆ ಕೊಟ್ಟರು, ಕೊಂದರು ಅನ್ನುವುದರ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡಿದ್ದು ಬಹುಮುಖ್ಯ ಅಂಶ. ನೇರಾನೇರ ಶಂಕರ್ ಬಿದರಿ ಕಾರ್ಯರೀತಿಯ ಬಗ್ಗೆ ಮುಚ್ಚಿಡದೆ ಹೇಳಿದ್ದಾರೆ. ಆಗ ವೀರಪ್ಪನ್ ಎಷ್ಟು ಕೆಟ್ಟವ ಅಂತ ಮಾತನಾಡುವುದಕ್ಕಿಂತ ಜನರೆಲ್ಲರೂ ಮಾತನಾಡುತ್ತಿದ್ದದ್ದೇ ಪೊಲೀಸರಿಂದ ಎಷ್ಟು ಅನ್ಯಾಯವಾಗುತ್ತಿದೆ ಅಂತ. ಹೆಂಗಸರನ್ನು ನಗ್ನಗೊಳಿಸಿ ವಿಚಾರಣೆಗೊಳಪಡಿಸಿದ್ದು, ವೀರಪ್ಪನ್ ಬಗ್ಗೆ ಬಾಯಿ ಬಿಡಿಸಲು ಯಾರೋ ಊರಿನವರನ್ನು ಕರೆತಂದು ವಾರಗಟ್ಟಲೆ ಏನೂ ಕೊಡದೆ ಚಿತ್ರಹಿಂಸೆ ಕೊಟ್ಟು ಮೂತ್ರ ಕುಡಿಸಿ… ಇವೆಲ್ಲವನ್ನು ಸಿನಿಮಾಗಳಲ್ಲಷ್ಟೇ ನೋಡಿದ್ದೇವೆ. ಆ ರೀತಿಯ ಪೊಲೀಸರ ಕಾರ್ಯವೈಖರಿ ಕೂಡ ವೀರಪ್ಪನ್ ಇನ್ನಷ್ಟು ಕ್ರೂರಿಯಾಗಲು ಕಾರಣವಾಯಿತು.

ಈ ಡಾಕ್ಯುಸೀರೀಸ್’ನಲ್ಲಿ ಹೇಳಿರುವ ವಿಷಯಗಳು ಕೇವಲ 25% ಇರಬಹುದೇನೋ. ಒಂದೆರಡು ವರ್ಷ ಇನ್ನಷ್ಟು ರೀಸರ್ಚ್ ಮಾಡಿದರೆ ಅದ್ಭುತ ಅನ್ನಿಸುವ ಸ್ವಾರಸ್ಯಕರ ವಿವರಗಳುಳ್ಳ ಮತ್ತೊಂದು ದೀರ್ಘವಾದ ಸೀರೀಸ್ ಮಾಡಬಹುದು. ಅದು ಬರಬೇಕು. ವೀರಪ್ಪನ್ ಬಗ್ಗೆ ವಿವರಗಳು ಗೊತ್ತಿಲ್ಲದವರಿಗೆ ಈ ಸೀರೀಸ್’ನಲ್ಲಿರುವ ವಿವರಗಳೇ ಮುಖ್ಯವಾಗಿ ಆತ ರಾಬಿನ್‌ಹುಡ್‌ನಂತೆ ಕಂಡರೂ ಅಚ್ಚರಿಯಿಲ್ಲ, ಅದಾಗಬಾರದು. ಇಲ್ಲಿ ಆತ ಹೇಳುವ ಕಾರಣಗಳನ್ನೇ ಜನರು ನಂಬಿಕೊಂಡರೆ ಇಂದು ಪ್ರತಿಯೊಬ್ಬರೂ ದಂತಚೋರ, ಕಾಡುಗಳ್ಳ, ಭ್ರಷ್ಟರಾಗಿ ಬದಲಾಗಬೇಕು. ಏಕೆಂದರೆ ವೀರಪ್ಪನ್ ಹೀರೋ ಅಂತೂ ಖಂಡಿತ ಅಲ್ಲ. ಈ ಸೀರೀಸ್’ನಲ್ಲಿ ಹೇಳುವಂತೆ ಕೊನೆಕೊನೆಯಲ್ಲಿ ಆತ ಒಂದಷ್ಟು ಸಂಧಾನಕಾರರ ಮಾತುಕಥೆಗಳಿಂದ ಪ್ರೇರಿತನಾಗಿ ತಮಿಳು ಹೋರಾಟಗಾರನಂತೆ ಕಂಡರೂ ಮೂಲತಃ ಆತ ಒಬ್ಬ ಕ್ರಿಮಿನಲ್. ಅಷ್ಟೇ.

ಆದರೆ ಸಿನಿಮಾ – ಸೀರೀಸ್’ನ ದೃಷ್ಟಿಯಿಂದ ನೋಡಿದರೆ ಆತನ ಬಗೆಗಿನ ವಿವರಗಳು ವೆರಿ ಇಂಟೆರೆಸ್ಟಿಂಗ್! ಆ ಕಾಡಿನ ನಡುವಿನ ಆತನ ಬದುಕು, ಆತ ತೆಗೆದುಕೊಂಡ ಕೆಟ್ಟ ನಿರ್ಧಾರಗಳು, ಎರಡೂ ರಾಜ್ಯದ ಪೊಲೀಸ್ ಇಲಾಖೆಗಳು ಅದಕ್ಕೆ ಪ್ರತಿಕ್ರಿಯಿಸಿದ ರೀತಿ, ಅದರಿಂದಾಗಿ ಉಂಟಾದ ರಾಜಕೀಯ – ಸಾಮಾಜಿಕ ಬದಲಾವಣೆಗಳು, ಜನರಿಗಾದ ತೊಂದರೆಗಳು, ಇತ್ಯಾದಿತ್ಯಾದಿ… ನಿಜಕ್ಕೂ ಯಾವ ಕಾಲ್ಪನಿಕ ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೂ ಇದು ಕಡಿಮೆಯೇನಲ್ಲ! Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘The Hunt For Veerappan’.

LEAVE A REPLY

Connect with

Please enter your comment!
Please enter your name here