ಪಿ ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿರುವ ‘ಆಚಾರ್ & ಕೋ’ ಸಿನಿಮಾ ಜುಲೈ 28ಕ್ಕೆ ತೆರೆಗೆ ಬರಲಿದೆ. ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಸೇರಿದಂತೆ ಚಿತ್ರದ ತಾಂತ್ರಿಕ ವಿಭಾಗಗಳಲ್ಲಿ ಬಹುಪಾಲು ಮಹಿಳೆಯರೇ ಕೆಲಸ ಮಾಡಿರುವುದು ವಿಶೇಷ.
‘ಮಹತ್ವಾಕಾಂಕ್ಷೆಯ ಸಹೋದರಿಯರು ಒಂದು ಕಡೆ ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ಇನ್ನೊಂದು ಕಡೆ ತಮ್ಮ ಬೇರುಗಳನ್ನೂ ಬಿಡದೆ ಹೇಗೆ ಯಶಸ್ವಿಯಾಗುತ್ತಾರೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ’ ಎನ್ನುತ್ತಾರೆ ‘ಆಚಾರ್ & ಕೋ’ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ. PRK ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿರುವ ಸಿನಿಮಾ ಜುಲೈ 28ರಂದು ತೆರೆಕಾಣುತ್ತಿದೆ. ‘ಎಲ್ಲಾ ವರ್ಗದ ಪ್ರೇಕ್ಷಕರನ್ನು ಮುಟ್ಟುವಂತಹ, ಎಲ್ಲರಿಗೂ ಆಪ್ತವಾಗುವಂಥ ಕಥೆಯನ್ನು ಮಾಡಿದ್ದೇವೆ.ಹೊಸ ಬಗೆಯ ಕಥೆಗಳಿಗೆ ವೇದಿಕೆಯಾಗುತ್ತೇವೆ ಎಂಬ ನಮ್ಮ ಬದ್ಧತೆಯನ್ನು ಈ ಚಿತ್ರವೂ ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರತಿಭಾವಂತ ಮಹಿಳಾ ತಂತ್ರಜ್ಞರಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಚಿತ್ರ ನಮಗೆ ಮತ್ತು ಇಡೀ ಚಿತ್ರರಂಗಕ್ಕೆ ಅತ್ಯಂತ ಸ್ಮರಣೀಯವಾಗಿದೆ’ ಎನ್ನುತ್ತಾರೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್.
60ರ ದಶಕದ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಕತೆಯಿದು. ಒಂದು ಕುಟುಂಬ ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತದೆ? ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನೂ ಹೇಗೆ ನಿಭಾಯಿಸಿ ಗೆಲ್ಲುತ್ತದೆ ಎಂಬುದನ್ನು ಹೇಳುವ ಭಾವನಾತ್ಮಕ ಪಯಣ. ಅರವತ್ತರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ವಿನೂತನ ಆಲೋಚನೆಯೊಂದನ್ನು ಯಶಸ್ವಿಯಾಗಿಸಲು ಹೋರಾಡುವ ಈ ಚಿತ್ರದಲ್ಲಿ ಭಾವುಕತೆಯಷ್ಟೇ ಹಾಸ್ಯವೂ ಇದೆ. ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಇಡೀ ಸಮಾಜಕ್ಕೆ ಒಂದು ಪ್ರೇರಣೆಯೂ ಇದೆ ಎನ್ನುವುದು ಚಿತ್ರತಂಡದ ಆಶಯ. ಸೂಕ್ತ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60, 70ರ ದಶಕಗಳ ಬೆಂಗಳೂರನ್ನು ತೆರೆಯ ಮೇಲೆ ಮರುಸೃಷ್ಟಿ ಮಾಡಲಾಗಿದೆ.
ಚಿತ್ರದ ಮತ್ತೊಂದು ವಿಶೇಷತೆ ಅಂದರೆ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು. ಈ ಚಿತ್ರಕ್ಕೆ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಮತ್ತು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದಾರೆ. ಸಿಂಧು ಶ‍್ರೀನಿವಾಸಮೂರ್ತಿ ಈ ಚಿತ್ರದ ಬರವಣಿಗೆ, ನಿರ್ದೇಶನದ ಜವಾಬ್ದಾರಿಯ ಜೊತೆಗೆ ತಾವೇ ಮುಖ್ಯ ಪಾತ್ರವನ್ನೂ ನಿರ್ವಹಿಸಿರುವುದು ವಿಶೇಷ. ಈ ಬಗ್ಗೆ ಮಾತನಾಡುವ ನಿರ್ಮಾಪಕಿ ಅಶ್ವಿನಿಯವರು, ‘ಸಿಂಧು ಅವರ ಕ್ರಿಯಾಶೀಲತೆ ಮತ್ತು ಸಿನಿಮಾದ ಬಗ್ಗೆ ಅವರಿಗಿರುವ ಬದ್ಧತೆಯೇ ನಾವು ಅವರೊಂದಿಗೆ ಕೈ ಜೋಡಿಸಲು ಮುಖ್ಯ ಕಾರಣ. ನಿರ್ಮಾಣದ ಪ್ರತೀ ಹಂತದಲ್ಲೂ ಅತ್ಯಂತ ನಾಜೂಕಾಗಿ ಕೆಲಸ ಮಾಡಿರುವ ಸಿಂಧು ಅವರ ಆಲೋಚನೆಗಳು ಅದ್ಭುತವಾಗಿ ಸಿನಿಮಾ ರೂಪ ತಳೆದಿದೆ. ಅದು ಎಲ್ಲಾ ಪ್ರೇಕ್ಷಕರನ್ನೂ ತಲುಪುತ್ತದೆ’ ಎನ್ನುತ್ತಾರೆ.
ಸಿನಿಮಾ ಟ್ರೈಲರ್, ಹಾಡುಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ. PRK ಪ್ರೊಡಕ್ಷನ್ಸ್ ನ ಅಧಿಕೃತ ಚಾನಲ್‌ಗಳ ಮೂಲಕ ಹಾಗೂ PRK ಪ್ರೊಡಕ್ಷನ್ಸ್‌ನ ಅಧಿಕೃತ ವೆಬ್ ಸೈಟ್‌ನಲ್ಲಿ ವೀಕ್ಷಣೆಗೆ ಲಭ್ಯಗೊಳಿಸಿ ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸಲು ತಂಡ ಉತ್ಸುಕವಾಗಿದೆ. ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಹೇಮಾ ಸುವರ್ಣ ಶಬ್ಧ ವಿನ್ಯಾಸ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅಭಿಮನ್ಯು ಸದಾನಂದ್ ಛಾಯಾಗ್ರಹಣ ಚಿತ್ರಕ್ಕಿದೆ.
ಹಾಸ್ಯ ಮತ್ತು ಮನರಂಜನೆಯಿಂದ ತುಂಬಿರುವ 1960ರ ದಶಕದ ಬೆಂಗಳೂರಿನ ನೆನಪಿನ ಹಾದಿ.
— PRK Productions (@PRK_Productions) July 3, 2023
ಚಿತ್ರಮಂದಿರಗಳಲ್ಲಿ ಇದೇ 28ನೇ ಜುಲೈ, 2023ರಂದು ‘ಆಚಾರ್ & ಕೋ’ ಅನುಭವಕ್ಕಾಗಿ ಸಿದ್ಧರಾಗಿ!#AacharAndCo #AacharaVichara pic.twitter.com/MzKA8C7akm