ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನೃತ್ಯ ಸಂಯೋಜಕ ಕಲೈ ಮಾಸ್ಟರ್ ಚಿತ್ರನಿರ್ದೇಶಿಸಲಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಕನ್ನಡ ಸಿನಿಮಾಗೆ ಪ್ರಜ್ವಲ್ ಹೀರೋ ಆಗಿ ಆಯ್ಕೆಯಾಗಿದ್ದಾರೆ.
ನೃತ್ಯ ಸಂಯೋಜಕ ಕಲೈ ಮಾಸ್ಟರ್ ಚಿತ್ರನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಅವರ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುವುದು ಖಾತ್ರಿಯಾಗಿದೆ. ಇದೊಂದು ಸಾಮಾಜಿಕ ಕಳಕಳಿಯ ಕಥಾಹಂದರವಾಗಿದ್ದು ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಕಲೈ ಮಾಸ್ಟರ್ ಕಳೆದ 23 ವರ್ಷಗಳಿಂದ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಿಗೆ ಕೆಲಸ ಮಾಡುತ್ತಿದ್ದಾರೆ. ಮದನ್ – ಹರಿಣಿ, ಚಿನ್ನಿಪ್ರಕಾಶ್, ತ್ರಿಭುವನ್, ಫೈವ್ ಸ್ಟಾರ್ ಗಣೇಶ್ ಮುಂತಾದ ಹಿರಿಯ ನೃತ್ಯ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಅನುಭವ ಅವರಿಗಿದೆ. ಜನಪ್ರಿಯ ನಾಯಕರ 300ಕ್ಕೂ ಹೆಚ್ಚು ಹಾಡುಗಳಿಗೆ ಅವರು ನೃತ್ಯ ಸಂಯೋಜನೆ ಮಾಡಿದಾರೆ. ಇದೀಗ ಕನ್ನಡ ಸಿನಿಮಾ ಮೂಲಕ ಚಿತ್ರನಿರ್ದೇಶಕರಾಗುತ್ತಿದ್ದಾರೆ. ಮಂಗಳೂರು ಮೂಲದ ಪ್ರತಿಭಾ ಈ ಚಿತ್ರದ ನಿರ್ಮಾಪಕಿ. ರಾಜಲಕ್ಷ್ಮೀ ಎಂಟರ್ಟೇನ್ಮೆಂಟ್ ಬ್ಯಾನರ್ನಡಿ ಅವರು ಸಿನಿಮಾ ನಿರ್ಮಿಸುತ್ತಿದ್ದಾರೆ. ಇದು ಅವರ ಬ್ಯಾನರ್ನ ಮೂರನೇ ಸಿನಿಮಾ. ಅದ್ಧೂರಿ ಸೆಟ್ಗಳನ್ನು ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತದೆ. ಸುಮಾರು 80 ದಿನಗಳ ಶೂಟಿಂಗ್ ಸೆಟ್ಗಳಲ್ಲೇ ನಡೆಯಲಿದೆ ಎನ್ನುವುದು ವಿಶೇಷ. ಶಂಕರ್ ಮತ್ತು ಚಂದ್ರಮೌಳಿ ಚಿತ್ರಕ್ಕೆ ಸಂಭಾಷಣೆ ರಚಿಸುತ್ತಿದ್ದಾರೆ. ಚಿತ್ರದ ನಾಯಕಿ ಹಾಗೂ ತಂತ್ರಜ್ಞರ ಕುರಿತು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.
	
		









