ಒಂದು ವಿಶೇಷವಾದ, ವಿಶಿಷ್ಟವಾದ ಚಿತ್ರವನ್ನು ನೋಡುವ ಹಂಬಲದಲ್ಲದ್ದವರಿಗೆ ಇದು ಹೊಸದೇನನ್ನೂ ನೀಡದೆ ಪೇಲವ ಎನಿಸುವುದು ಖಂಡಿತಾ. ಆದರೆ, ಲಘು ಧಾಟಿಯ, ಕುಟುಂಬದ ಜೊತೆ ಕೂತು ನೋಡಲು ಫೀಲ್ ಗುಡ್ ಸಿನಿಮಾದ ತಲಾಷೆಯಲ್ಲಿದ್ದರೆ ಖಂಡಿತಾ ಇದನ್ನು ನೋಡಬಹುದು. ಟ್ರಯಲ್ ಪಿರಿಯಡ್ JioCinemaದಲ್ಲಿದೆ.

ತಾತ್ಕಾಲಿಕ ಅಥವಾ ಬಾಡಿಗೆ ಗಂಡನ ಕುರಿತ ಸಿನಿಮಾಗಳು ನಮ್ಮ ಭಾರತೀಯ ಚಿತ್ರರಂಗಕ್ಕೆ ಹೊಸದೇನಲ್ಲ. ಕಪ್ಪು ಬಿಳುಪು ಚಿತ್ರಗಳ ಕಾಲದಿಂದಲೇ ಡಾ ರಾಜಕುಮಾರ್‌ ಮತ್ತು ಭಾರತಿ ಅಭಿನಯದ ‘ಸ್ವಯಂವರ’ದಂತಹ ಸಿನಿಮಾಗಳು ಕಾಂಟ್ರ್ಯಾಕ್ಟ್ ಮದುವೆಗಳ ಕತೆಯನ್ನು ತೆರೆಯ ಮೇಲೆ ತಂದಿದ್ದವು. ಈ ಎಳೆಯನ್ನೇ ಹೊಂದಿರುವ ಸಾಕಷ್ಟು ಸಿನಿಮಾಗಳು ನಂತರ ಬಂದು ಹೋಗಿವೆ. ಹೊಸ ಹಿಂದಿ ಸಿನಿಮಾ ‘ಟ್ರಯಲ್ ಪಿರಿಯಡ್’ ಇದಕ್ಕೊಂದು ಹೊಸ ತಿರುವು ನೀಡಿ ಬಾಡಿಗೆ ಗಂಡನ ಬದಲು ಬಾಡಿಗೆ ತಂದೆಯ ಕತೆ ಹೇಳುತ್ತದೆ. ಅಲೆಯಾ ಸೇನ್ ಕತೆ ಬರೆದು ನಿರ್ದೇಶಿಸಿದ್ದಾರೆ.

ತನ್ನ ಪುಟ್ಟ ಮಗನನ್ನು ಏಕಾಂಗಿಯಾಗಿ ಬೆಳೆಸುತ್ತಿರುವ ಆನಾ (ಜೆನಿಲಿಯಾ) ವಿಚ್ಛೇದಿತೆ. ಮಗ ರೋಮಿಗೆ ಶಾಲೆಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ಅಪ್ಪ ಬೇಕೇ ಬೇಕು ಎಂಬ ಹಠ ಆರಂಭವಾಗುತ್ತದೆ. ಪಕ್ಕದ ಮನೆಯ ಮಾಮನ ಟೆಲಿ ಶಾಪಿಂಗ್ ಹುಚ್ಚನ್ನು ನೋಡುತ್ತಲೇ ಬೆಳೆದ ರೋಮಿಗೆ, ಒಂದು ತಿಂಗಳ ಮಟ್ಟಿಗೆ ಟ್ರಯಲ್‌ಗಾಗಿ ಅಪ್ಪನನ್ನು ತರಿಸೋಣ, ಇಷ್ಟವಾಗದೇ ಇದ್ದರೆ ಮರಳಿಸಿದರೆ ಆಯಿತು ಎಂಬ ಯೋಚನೆ ಬಂದು ಅದಕ್ಕಾಗಿ ಪಟ್ಟು ಹಿಡಿಯುತ್ತಾನೆ. ಕೊನೆಗೆ ಮಗನ ಹಠಕ್ಕೆ ಮಣಿಯುವ ಆನಾ ತನ್ನ ಮಗನಿಗೆ ತಂದೆಯ ಬಗ್ಗೆ ಇರುವ ರಮ್ಯ ಕಲ್ಪನೆಗಳನ್ನು ತೆಗೆದುಹಾಕಲು ಆ ಅವಕಾಶ ಬಳಸಿಕೊಳ್ಳಲು ನಿರ್ಧರಿಸುತ್ತಾಳೆ. ಒಂದು ತಿಂಗಳೊಳಗೆ ರೋಮಿಯೇ ‘ಅಪ್ಪ ಬೇಡ’ ಎನ್ನುವಂತೆ ಮಾಡಬಲ್ಲ ಬಾಡಿಗೆ ಅಪ್ಪನಿಗಾಗಿ ಹುಡುಕಾಟ ನಡೆಸುತ್ತಾಳೆ. ಹೀಗೆ, ಆರಂಭವಾಗುವುದೇ ಬಾಡಿಗೆ ತಂದೆಯ ಟ್ರಯಲ್ ಪಿರಿಯಡ್.

ಸಿನಿಮಾ ಯಾವುದೇ ಏರು, ತಗ್ಗು, ತಿರುವುಗಳಿಲ್ಲದೆ ನಿರೀಕ್ಷಿತ ರೀತಿಯಲ್ಲೇ ಸಾಗುತ್ತದೆ. ಕತೆಯ ಆರಂಭದಿಂದ ಅಂತ್ಯದವರೆಗೂ ಇಡೀ ಕತೆಯನ್ನು ಸುಲಭವಾಗಿ ಊಹಿಸಿಬಿಡಬಹುದು. ಬಾಡಿಗೆ ತಂದೆಯ ಐಡಿಯಾ ಮೊದಲಿಗೆ ಸ್ವಲ್ಪ ವಿಭಿನ್ನವೆನಿಸಿದರೂ, ನಾಯಕ ನಾಯಕಿಯ ನಡುವಿನ ಸಂಬಂಧ ಮಾತ್ರ ಈಗಾಗಲೇ ನೋಡಿರುವ ಎಲ್ಲಾ ಹಳೆಯ ಬಾಡಿಗೆ ಗಂಡನ ಕತೆಯಲ್ಲಿ ಇರುವ ಸಿನಿಮಾಗಳ ರೀತಿಯೇ ಬೆಳೆಯುತ್ತದೆ. ಆದರೆ, ಆ ಹಳೆಯ ಸಿನಿಮಾಗಳಷ್ಟು ಆಸಕ್ತಿದಾಯಕವಾಗಿ ಮೂಡಿಬಂದಿಲ್ಲ. ಕತೆ ಹೇಳುವ ರೀತಿ, ನಿರೂಪಣೆ, ಸಂಭಾಷಣೆ, ತಾಂತ್ರಿಕತೆ ಇದ್ಯಾವುದರಲ್ಲೂ ಹೊಸತನವಿಲ್ಲದ ಕಾರಣ ನೀರಸವೆನಿಸುತ್ತದೆ.

ಸಿನಿಮಾದಲ್ಲಿ ವಿಶೇಷವೆನಿಸುವ ಒಂದು ಅಂಶವೆಂದರೆ, ರೋಲ್ ರಿವರ್ಸಲ್. ಹಲವಾರು ಸಿನಿಮಾಗಳಲ್ಲಿ ತಾಯಿಯಿಲ್ಲದ ಮಗುವಿಗೆ ತಾಯಾಗುವ, ಮನೆಯನ್ನು ಸಂಬಾಳಿಸುವ, ಎಲ್ಲರ ಮನ ಗೆಲ್ಲುವ ನಾಯಕಿಯರನ್ನು ನೋಡಿದ್ದೇವೆ. ಇಲ್ಲಿ ಹಳ್ಳಿಯಿಂದ ಬಂದ ನಾಯಕ ಪಿಡಿ (ಮಾನವ್ ಕೌಲ್) ಅಡುಗೆ ಮಾಡುತ್ತಾನೆ, ಮಗುವನ್ನು ನೋಡಿಕೊಳ್ಳುತ್ತಾನೆ, ಮನೆಯನ್ನು ಸುಸ್ಥಿತಿಯಲ್ಲಿಡುತ್ತಾನೆ. ಈ ಮೂಲಕ ಸ್ಟೀರಿಯೋ ಟೈಪ್ ಮುರಿಯುವ ನಿರ್ದೇಶಕರು, ಅದೇ ವೇಳೆ ಹಳ್ಳಿ ವರ್ಸಸ್ ನಗರದ ಸ್ಟೀರಿಯೋಟೈಪ್‌ಗೆ ಜೋತು ಬೀಳುವುದು ವಿಪರ್ಯಾಸ. ಅದೇ ರೀತಿ ಸಾಕಷ್ಟು ದೃಶ್ಯಗಳು ತುಂಬಾ ಕ್ಲೀಷೆಯಿಂದ ಕೂಡಿದ್ದು, ಈಗಾಗಲೇ ಹಲವು ಬಾರಿ ನೋಡಿಬಿಟ್ಟಿರುವ ಭಾವ ಮೂಡಿಸುತ್ತದೆ.

ಮತ್ತೊಂದು ಸಮಾಧಾನದ ಸಂಗತಿಯೆಂದರೆ ನೆನಪಿನಲ್ಲಿ ಉಳಿಯುವಂತಹ ಪೋಷಕ ಪಾತ್ರಗಳು. ಆನಾಳಿಗೆ ದೊಡ್ಡ ಬೆಂಬಲವಾಗಿ ನಿಲ್ಲುವ ಪಕ್ಕದ ಮನೆಯ ಆಂಟಿ, ಅಂಕಲ್ ಪಾತ್ರಗಳಲ್ಲಿ ಶಕ್ತಿ ಕಪೂರ್ ಮತ್ತು ಶೀಬಾ ಚಡ್ಡಾ ತಮ್ಮಅಭಿನಯದ ಮೂಲಕ ಗಮನಸೆಳೆಯುತ್ತಾರೆ. ಆನಾಳ ತಂದೆ ತಾಯಿಯ ಪಾತ್ರಗಳಲ್ಲಿ ಬರುನ್ ಚಂದಾ ಮತ್ತು ಸ್ವರೂಷ್ ಘೋಷ್ ಪಾತ್ರ ಚಿತ್ರಣವೂ ಸೊಗಸಾಗಿದೆ. ಈ ಅನುಭವಿ ಮತ್ತು ಪ್ರತಿಭಾವಂತ ನಟ ನಟಿಯರು ತೆರೆಯ ಮೇಲೆ ಕಾಣಿಸಿಕೊಳ್ಳುವ ಅವಧಿ ಸಣ್ಣದಾದರೂ, ಚಿತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.

ಸಿಂಗಲ್ ಪೇರೆಂಟ್ ಎದುರಿಸುವ ಸಮಸ್ಯೆಯ ಬಗ್ಗೆ ಗಮನಸೆಳೆಯುವ ಅವಕಾಶವಿದ್ದರೂ, ಚಿತ್ರ ಅದನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಸಮಸ್ಯೆಯ ಕೊಂಚ ಆಳಕ್ಕಿಳಿಯುತ್ತಿದೆ ಎನ್ನುವಾಗಲೇ ಮತ್ತೆ ಬೇರೆಯದೇ ದಾರಿ ಹಿಡಿದು ಸಾಗಿಬಿಡುತ್ತದೆ. ಮಗನಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುವ ಆನಾಳಂತಹ ತಾಯಿ ಇರುವಾಗಲೂ ತಂದೆಗಾಗಿ ರೋಮಿ ಏಕೆ ಹಂಬಲಿಸುತ್ತಾನೆ ಎಂಬಂತಹ ಗಂಭೀರ ಪ್ರಶ್ನೆಗೆ ಸಿನಿಮಾ ತೇಲು ಉತ್ತರ ನೀಡಿ ಮುಂದೆ ಹೋಗುತ್ತದೆ. ಒಂದು ದೃಶ್ಯದಲ್ಲಿ ಏಕ ಪೋಷಕತ್ವದ ಸಮಸ್ಯೆಗಳ ಬಗ್ಗೆ ಆನಾ ಮನ ಬಿಚ್ಚಿ ಮಾತಾಡಲು ಆರಂಭಿಸುತ್ತಾಳಾದರೂ, ಸಿನಿಮಾ ಅವಸರದಲ್ಲಿ ಅವಳ ಪೇರೆಂಟಿಗ್ ವಿಧಾನದ ಮೇಲೆಯ ತಪ್ಪು ಹೊರಿಸಿಬಿಡುತ್ತದೆ.

ಹಾಸ್ಯಮಯ ಸಿನಿಮಾ ಆದರೂ, ಎಲ್ಲಿಯೂ ಜೋರಾಗಿ ನಗುವಂತಹ ಹಾಸ್ಯ ದೊರಕುವುದಿಲ್ಲ. ಹೆಚ್ಚೆಂದರೆ, ಗಂಭೀರ ವಿಷಯವೊಂದರ ಲಘು ಧಾಟಿಯ ಸಿನಿಮಾ ಎನ್ನಬಹುದಷ್ಟೆ. ಸಿಂಗಲ್ ಪೇರೆಂಟಿಂಗ್, ಶಾಲೆಗಳಲ್ಲಿ ಮಕ್ಕಳು ನಡೆಸುವ ಬುಲ್ಲೀಯಿಂಗ್, ಅದು ಸಂತ್ರಸ್ತ ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮ ಮುಂತಾದ ಹಲವು ಗಂಭೀರವಾದ ವಿಷಯಗಳು ಸಿನಿಮಾದಲ್ಲಿದೆ. ಆದರೆ, ಎಲ್ಲದಕ್ಕೂ ಒಂದು ರೀತಿಯ ಸಿದ್ಧ ಪರಿಹಾರಗಳನ್ನು ನೀಡುವ ಮೂಲಕ ವಿಷಯದ ಆಳಕ್ಕಿಳಿಯದಂತೆ ತನ್ನನ್ನು ತಾನು ತಡೆಯುತ್ತದೆ. ಇದೇ ವೇಳೆ, ಸಿನಿಮಾ ಅತೀ ನಾಟಕೀಯವಾಗುವ ಅಪಾಯದಿಂದ ತಪ್ಪಿಸಿಕೊಂಡಿರುವುದು ಖುಷಿಯನ್ನೂ ಕೊಡುತ್ತದೆ.

ಅದೇ ರೀತಿ, ಸೂಪರ್ ಹೀರೋ ಅಪ್ಪನನ್ನು ತೋರಿಸುವ ಭರದಲ್ಲಿ, ಇದುವರೆಗೆ ತನ್ನ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದ ತಾಯಿ ಮಹತ್ವ ಕಳೆದುಕೊಂಡಂತೆ ಕೆಲವೆಡೆ ಅನಿಸುತ್ತದೆ. ಅದನ್ನು ಸರಿಪಡಿಸುವ ಒಂದು ಪ್ರಮುಖ ದೃಶ್ಯ ಚಿತ್ರದಲ್ಲಿದೆ. ತನ್ನ ಮಗನಿಗೆ ತೊಂದರೆ ಕೊಡುತ್ತಿರುವ ಹುಡುಗನ ಅಮ್ಮನನ್ನು ಆನಾ ತಾನೇ ನೇರವಾಗಿ ಎದುರಿಸುತ್ತಾಳೆ. ಆಕೆಗೆ ಎಚ್ಚರಿಕೆ ನೀಡುತ್ತಾಳೆ. ತಾಯಿಯಾಗಿ ಆಕೆಯ ಬದ್ಧತೆಯನ್ನು, ಪ್ರೀತಿಯನ್ನು ಎತ್ತಿ ತೋರಿಸುವಂತೆ ಆರಂಭವಾಗುವ ದೃಶ್ಯ, ಅದಕ್ಕೊಂದು ಹಾಸ್ಯ ಲೇಪನ ಮಾಡುವ ಪ್ರಯತ್ನದಲ್ಲಿ ಗಂಭೀರತೆ ಮತ್ತು ಮಹತ್ವ ಎರಡನ್ನೂ ಕಳೆದುಕೊಂಡು ಬಿಡುತ್ತದೆ.

ಚಿತ್ರದ ಕೆಲವೇ ಕೆಲವು ದೃಶ್ಯಗಳು ಭಾವಪೂರ್ಣವಾಗಿ ಮನ್ಸಸ್ಸನ್ನು ತಟ್ಟುತ್ತದೆ. ರೋಮಿ ತಾನು ಶಾಲೆಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಿಡಿಯ ಬಳಿ ಹಂಚಿಕೊಳ್ಳುವ ದೃಶ್ಯ ನಟನೆಯ ಮತ್ತು ಸರಳತೆಯ ದೃಷ್ಟಿಯಿಂದ ಮನ ಗೆಲ್ಲುತ್ತದೆ. ಜೆನಿಲಿಯಾ ಮತ್ತು ಮಾನವ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾನವ್ ತಮ್ಮ ನಟನೆಯ ಸಾಮರ್ಥ್ಯವನ್ನು ಮತ್ತೆ ನಿರೂಪಿಸಿದ್ದಾರೆ. ಬಾಲ ನಟ ಝಿದಾನೆ ಬ್ರಾಝ್ ಕೆಲವು ದೃಶ್ಯಗಳಲ್ಲಿ ಮಿಂಚುತ್ತಾನೆ. ಒಂದು ವಿಶೇಷವಾದ, ವಿಶಿಷ್ಟವಾದ ಚಿತ್ರವನ್ನು ನೋಡುವ ಹಂಬಲದಲ್ಲದ್ದವರಿಗೆ ಇದು ಹೊಸದೇನನ್ನೂ ನೀಡದೆ ಪೇಲವ ಎನಿಸುವುದು ಖಂಡಿತಾ. ಆದರೆ, ಲಘು ಧಾಟಿಯ, ಕುಟುಂಬದ ಜೊತೆ ಕೂತು ನೋಡಲು ಫೀಲ್ ಗುಡ್ ಸಿನಿಮಾದ ತಲಾಷೆಯಲ್ಲಿದ್ದರೆ ಖಂಡಿತಾ ಇದನ್ನು ನೋಡಬಹುದು. ಟ್ರಯಲ್ ಪಿರಿಯಡ್ JioCinemaದಲ್ಲಿದೆ.

LEAVE A REPLY

Connect with

Please enter your comment!
Please enter your name here