‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೀಶ್‌ ತಿವಾರಿ ಅವರ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇದ್ದದ್ದು ಹೌದು. ಆದರೆ ಚಿತ್ರ ನಿರೀಕ್ಷೆಯನ್ನು ತುಸು ಹುಸಿ ಮಾಡಿದೆಯಾದರೂ ತುಂಬಾ ಏನೂ ನಿರಾಸೆ ಮಾಡುವುದಿಲ್ಲ. ‘ವಾಹ್’ ಎನಿಸುವಷ್ಟು ಅಲ್ಲದಿದ್ದರೂ ‘ಭೇಷ್, ಪರವಾಗಿಲ್ಲ’ ಎನಿಸುವಂತಹ feel good ಚಿತ್ರ. ಆಮೇಜಾನ್ ಪ್ರೈಮ್‌ನಲ್ಲಿ stream ಆಗುತ್ತಿದೆ ‘ಬವಾಲ್’.

ನಿತೀಶ್ ತಿವಾರಿ ನಿರ್ದೇಶನದ ‘ಬವಾಲ್’ ಚಿತ್ರ ಇತಿಹಾಸ ಪಾಠಮಾಡುವ ಶಿಕ್ಷಕನೊಬ್ಬನ ಕಥೆ ಮತ್ತು ವ್ಯಥೆ.
ಇತ್ತೀಚೆಗಿನ ಬಹುತೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಬರಿಯ ಅನಗತ್ಯ ಅಶ್ಲೀಲತೆಯ ವೈಭವೀಕರಣ, ಅತಿರೇಕದ ಸಂಭಾಷಣೆಗಳು, ಹಸಿಬಿಸಿ ಚಿತ್ರಣ, ನಮ್ಮ ಸಮಾಜದ್ದಲ್ಲದ nativity ಪ್ರದರ್ಶನ ಇವುಗಳಷ್ಟೆ ಎನಿಸಿ ಪ್ರೇಕ್ಷಕ ಒಂದು ಹಂತಕ್ಕೆ ಹತಾಶೆಗೆ ಹೋಗಿದ್ದಾನೆ ಎನುವ ಸಮಯದಲ್ಲೇ ಒಂದು ಸದಭಿರುಚಿಯ ಹಾಯ್ ಎನಿಸುವ ಚಲನಚಿತ್ರ ಭರವಸೆ ಮೂಡಿಸುತ್ತದೆ. ಹಾಗೆಂದು ಈ ಚಲನಚಿತ್ರ ಪರ್ಫೆಕ್ಟ್ ಎಂದು ಹೇಳಲು ಬರುವುದಿಲ್ಲ. ಕಥೆಯಲ್ಲಿ ಹೊಸತು ಅಂತೇನೂ ಇಲ್ಲ. ‘ಧಮ್ ಲಗಾ ಲೇ ಹೈಶಾ’ ಚಿತ್ರದಲ್ಲಿ obesity ಸಮಸ್ಯೆಯನ್ನು ತೆಗೆದುಕೊಂಡಂತೆ ಇಲ್ಲಿ ಮೂರ್ಛೆರೋಗದ ಸಮಸ್ಯೆ ಇರುವ ಪಾತ್ರ ನಿರೂಪಿಸಿದ್ದಾರೆ. ಈ ಸಿನಿಮಾ ‘ಧಮ್ ಲಗಾ ಕೆ ಹೈಶಾ’ವನ್ನು ಬಹಳ ನೆನಪಿಸುತ್ತದೆ. ನಿರೂಪಣೆ ಇನ್ನೂ ಚುರುಕಾಗಿರಬಹುದಿತ್ತು. ಚಿತ್ರದ ಮೊದಲಾರ್ಧ ಬಹಳವೇ ಸಪ್ಪೆ ಎನಿಸುತ್ತದೆ. ದ್ವಿತೀಯಾರ್ಧದಲ್ಲಿ ಕಥೆ ವೇಗ ಮತ್ತು ತೀವ್ರತೆ ಪಡೆಯುತ್ತದೆ.

ಚಿತ್ರದ ನಾಯಕ ತನ್ನ ಬಗೆಗಿನ ಕೀಳರಿಮೆಯಿಂದ ಹೊರಗೆ ಬರಲು ಹೇಗೆ ತನ್ನ ಹೊರಗಿನ ಇಮೇಜ್‌ಗೋಸ್ಕರ ತೋರಿಕೆಯ ಬದುಕನ್ನು ಬಿಗಿದಪ್ಪಿ ವಾಸ್ತವಿಕತೆಯನ್ನು ಮತ್ತು ತನ್ನ ಸುತ್ತಲಿನ ಸಂಬಂಧಗಳನ್ನು ತಿರಸ್ಕರಿಸುತ್ತಿರುತ್ತಾನೆ ಮತ್ತು ತನ್ನ ನಿಜವಾದ ಸತ್ಯವನ್ನು ಎದುರಿಸಲು ಆಗದೇ ಓಡಿಹೋಗುತ್ತಾ ಹತಾಶನಾಗುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನದಲ್ಲಿ ಚಿತ್ರ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಮಕ್ಕಳಿಗೆ ಪುಸ್ತಕದ ಶಿಕ್ಷಣ ಮಾತ್ರವಲ್ಲದೆ ಫೀಲ್ಡ್ ವರ್ಕ್ ಮೂಲಕ ಶಿಕ್ಷಣ ಅದರಲ್ಲೂ ಇತಿಹಾಸವನ್ನು ಕಲಿಸುವುದು ಹೆಚ್ಚು ಪರಿಣಾಮಕಾರಿ ಎಂಬುದನ್ನು ಚಿತ್ರದಲ್ಲಿ ತೋರಿಸಿರುವುದು ಅಭಿನಂದನಾರ್ಹ. ಮಕ್ಕಳನ್ನು ಕೇವಲ ಪುಸ್ತಕದ ಹುಳುಗಳನ್ನಾಗಿ ತಯಾರು ಮಾಡುವ ಯಾಂತ್ರಿಕ ಶಿಕ್ಷಣ ಪದ್ಧತಿಗಿಂತಲೂ ಈ ವಿದ್ಯುನ್ಮಾನ ಯುಗದಲ್ಲಿ ಹೇಗೆ ಬೋರಿಂಗ್ ಸಬ್ಜೆಕ್ಟ್ ಎಂಬ ಕುಖ್ಯಾತಿ ಹೊತ್ತಿರುವ ಇತಿಹಾಸವನ್ನು ಮಕ್ಕಳಿಗೆ ಆಸಕ್ತಿಕರವಾಗಿ ದಾಟಿಸಬಹುದು ಎಂಬುದನ್ನು ತೋರಿಸಿರುವುದು ಪ್ರಶಂಸನೀಯ.

ಜೊತೆಗೆ ಆಂತರಿಕ ಗೊಂದಲಗಳನ್ನು ಶಮನ ಮಾಡಿಕೊಳ್ಳದೇ ಬಾಹ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಅಸಾಧ್ಯ ಎಂಬ ಸೂಕ್ಷ್ಮ ಸಂದೇಶವನ್ನೂ ನೀಡುತ್ತದೆ. ಸಂಗಾತಿಯ ಕುಂದುಕೊರತೆಗಳ ಅಡಿಯಲ್ಲೇ ಅಡಗಿರುವ ಅವರ ಸಾಮರ್ಥ್ಯವನ್ನು, ಶಕ್ತಿಯನ್ನು ಗುರುತಿಸಿ ಅವರನ್ನು ಒಪ್ಪಿಕೊಂಡು ಸಾಗಿದಾಗಲೇ ದಾಂಪತ್ಯದ ಬಂಡಿಗೆ ಗುರಿ ಸಿಗುವುದು, ಅರ್ಥ ಸಿಗುವುದು ಮತ್ತು ಬದುಕು ಸುಂದರ ಅನ್ನಿಸುವುದು ಎಂಬುದನ್ನು ತೋರಿಸುವ ಪ್ರಯತ್ನ ಇದೆ. ತಮ್ಮ ದಾಂಪತ್ಯ ಪಯಣದಲ್ಲಿ ನಾಯಕ ಮತ್ತು ನಾಯಕಿಯು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಎರಡನೇ ಮಹಾಯುದ್ಧದೊಂದಿಗೆ ಸಮೀಕರಿಸಿ ವಿಶ್ಲೇಷಣೆ ಮಾಡುತ್ತಾ ಹೋಗುವ ಒಂದು ವಿಶೇಷ ನಿರೂಪಣೆ ಇದೆ. ನಾಯಕಿಯ ಅಭಿನಯದಲ್ಲಿ ಹೇಳಿಕೊಳ್ಳುವಂತ ವಿಶೇಷತೆ ಏನೂ ಇಲ್ಲ. ನಾಯಕ ವರುಣ್ ಧವನ್ ಅವರದ್ದು ಕೂಡ ಸಾಧಾರಣ ಅನ್ನಿಸುವಂತಹ ನಟನೆ.

ಗ್ಯಾಸ್ ಚೇಂಬರಿನೊಳಗೆ ಉಂಟಾಗುವ ತಲ್ಲಣ, ಆತಂಕ, ಉಸಿರುಗಟ್ಟುವಿಕೆಯನ್ನು ಮನುಷ್ಯನ ಸಂಬಂಧಗಳೊಡನೆ ಸಮೀಕರಿಸಿ ತೋರಿಸಿರುವುದು ವಿಶೇಷವಾಗಿದೆ. ಆದರೆ ಪ್ರತಿ ಸಂಬಂಧವೂ ಗ್ಯಾಸ್ ಚೇಂಬರನ್ನು ಒಳಹೊಕ್ಕು ಆಯಾ ಕಹಿ ಸಮಯವನ್ನು, ಆತಂಕವನ್ನು ದಾಟಿ ಉಳಿದರೆ ಬಾಳುತ್ತದೆ ಎನ್ನುವುದನ್ನೂ ಸೂಚ್ಯವಾಗಿ ನಿರ್ದೇಶಕರು ಹೇಳಲು ಹೊರಟಿದ್ದಾರೆ ಎನ್ನಬಹುದು. ಹಾಡುಗಳು ಮನಸ್ಸಿನಲ್ಲಿ ನಿಲ್ಲುವ ಹಾಗೇನೂ ಇಲ್ಲ, ಸಾಧಾರಣವಾಗಿವೆ. ಯೂರೋಪ್ ಎಂದ ತಕ್ಷಣ ಬರೀ ಕಣ್ಮನ ತಣಿಸುವ ಮನೋಹರ ದೃಶ್ಯಗಳನ್ನೇ ಎಲ್ಲರೂ ತೋರಿಸುವಾಗ ಅದರ ಹಿಂದೆ ಅಡಗಿರುವ ಭೀಕರತೆಯ ಚಿತ್ರಣವನ್ನು ಕಟ್ಟಿಕೊಟ್ಟಿರುವುದು ಚಿತ್ರದ ವಿಶೇಷ.

‘ದಂಗಲ್’ ಖ್ಯಾತಿಯ ನಿರ್ದೇಶಕರ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇದ್ದದ್ದು ಹೌದು. ಆದರೆ ಚಿತ್ರ ನಿರೀಕ್ಷೆಯನ್ನು ತುಸು ಹುಸಿ ಮಾಡಿದೆಯಾದರೂ ತುಂಬಾ ಏನೂ ನಿರಾಸೆ ಮಾಡುವುದಿಲ್ಲ. ‘ವಾಹ್’ ಎನಿಸುವಷ್ಟು ಅಲ್ಲದಿದ್ದರೂ ‘ಭೇಷ್, ಪರವಾಗಿಲ್ಲ’ ಎನಿಸುವಂತಹ feel good ಚಿತ್ರ. ಅಲ್ಲಲ್ಲಿ ತುಸು ಸಪ್ಪೆ ಎನಿಸಿದರೂ ಎಲ್ಲಿಯೂ ಬೋರ್ ಹೊಡೆಸದೆ ನೋಡಿಸಿಕೊಂಡು ಹೋಗುವ ಚಿತ್ರ. ಗಂಡ ಹೆಂಡತಿ ನಡುವೆ mismatch ಇರುವಂತಹ, ಹೋಗ್ತಾ ಹೋಗ್ತಾ ಇಬ್ಬರ ನಡುವೆ ಬಂಧ ಚಿಗುರುವಂತಹ ಸುಮಾರು ಕಥೆಗಳು ಬಂದುಹೋಗಿವೆ. ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ‘ಬವಾಲ್’. ಆದರೆ ಎಲ್ಲಿಯೂ ಸದಭಿರುಚಿ ಕಳೆದುಕೊಳ್ಳದ, ಮನೆಮಂದಿಯೆಲ್ಲ ಒಟ್ಟಿಗೆ ಕೂತು ನೋಡಬಹುದಾದ ಒಂದು ಸರಳ ಚಿತ್ರ ಎಂದು ಹೇಳಬಹುದು. ಆಮೇಜಾನ್ ಪ್ರೈಮ್‌ನಲ್ಲಿ stream ಆಗುತ್ತಿದೆ ‘ಬವಾಲ್’.

LEAVE A REPLY

Connect with

Please enter your comment!
Please enter your name here