ಸುವರ್ಣ ವಾಹಿನಿಯ ಜನಪ್ರಿಯ ಅಡುಗೆ ಶೋ ‘ಬೊಂಬಾಟ್‌ ಭೋಜನ’ 850 ಕಂತುಗಳನ್ನು ಪೂರೈಸಿದೆ. ನಿರೂಪಕ ಸಿಹಿಕಹಿ ಚಂದ್ರು ಈ ಸಂಭ್ರಮ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸಿಹಿಕಹಿ ಚಂದ್ರು ಅವರು ‘ಬೊಂಬಾಟ್ ಹಲ್ವ’ ಮತ್ತು ‘ಬೊಂಬಾಟ್‌ ಕಾಫಿ’ ಪರಿಚಯಿಸಿರುವುದು ವಿಶೇಷ.

ಕನ್ನಡ ಕಿರುತೆರೆ ಹಾಗೂ ಸಿನಿಮಾ ನಟ ಸಿಹಿಕಹಿ ಚಂದ್ರು ನಿರೂಪಣೆಯ ‘ಬೊಂಬಾಟ್‌ ಭೋಜನ’ ಮತ್ತೊಂದು ಮೈಲುಗಲ್ಲು ತಲುಪಿದೆ. ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮ ಇದೀಗ 850 ಕಂತುಗಳನ್ನು ಪೂರೈಸಿದೆ. ಈ ಕಾರ್ಯಕ್ರಮದಲ್ಲಿ ‘ಬಯಲೂಟ’, ‘ಮನೆಯೂಟ’, ‘ಸವಿಯೂಟ’, ‘ನಮ್ಮೂರ ಊಟ’, ‘ಅತಿಥಿ ದೇವೋ ಭವ’ ವಿಭಾಗಗಳಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ‘ಆರೋಗ್ಯ ಆಹಾರ’ ಹಾಗೂ ‘ಅಂಗೈಯಲ್ಲಿ ಆರೋಗ್ಯ’ ಹೆಸರಿನಲ್ಲಿ ಮನೆಮದ್ದುಗಳ ಕುರಿತು ಡಾ ಗೌರಿ ಸುಬ್ರಹ್ಮಣ್ಯ ಮಾಹಿತಿ ನೀಡುತ್ತಾರೆ. ಎಂ ಎನ್ ನರಸಿಂಹಮೂರ್ತಿ ಅವರು ಹೇಳುವ ‘ಟೈಮ್ ಪಾಸ್ ಜೋಕ್ಸ್’, ಖುಷಿ ಚಂದ್ರಶೇಖರ್ ಅವರು ನೀಡುವ ‘ಬ್ಯೂಟಿ ಟಿಪ್ಸ್’ ಈ ಕಾರ್ಯಕ್ರಮದ ಮತ್ತೆರೆಡು ವಿಶೇಷಗಳು.

ಯಶಸ್ಸಿನ ಕುರಿತು ಮಾತನಾಡಲು ‘ಬೊಂಬಾಟ್‌ ಭೋಜನ’ ತಂಡ ಹಾಗೂ ಸುವರ್ಣ ಚಾನೆಲ್‌ ವತಿಯಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ ಯಶಸ್ಸಿಗೆ ಕಾರಣರಾದ ವೀಕ್ಷಕರಿಗೆ ಧನ್ಯವಾದ ಹೇಳಿದ ಸಿಹಿಕಹಿ ಚಂದ್ರು, ‘ಕಾರ್ಯಕ್ರಮ ಮೂರನೇ ವರ್ಷದಲ್ಲಿ ಮೂರನೇ ಸೀಸನ್‌ನಲ್ಲಿ ಮುಂದುವರೆಯುತ್ತಿದೆ.‌ ನಾನು ಈ ಸೀಸನ್‌ನಲ್ಲಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಆಯಾ ಊರಿನ ಕೆಲವು ಮನೆಗಳಿಗೆ ಹಾಗೂ ಹೋಟಿಲ್‌ಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ಖಾದ್ಯ ತಿಂದಿದ್ದೇನೆ. ಹೋದ ಕಡೆಯಲ್ಲಾ ಸಿಗುತ್ತಿರುವ ಜನಮನ್ನಣೆಗೆ ಮನಸ್ಸು ತುಂಬಿ ಬಂದಿದೆ’ ಎಂದರು. ಸಾವಿರ ಕಂತು ಪೂರೈಸಿದ ಸಂದರ್ಭಕ್ಕೆ ದೊಡ್ಡ ಸಮಾರಂಭ ಆಯೋಜಿಸುವ ಅವರ ಯೋಜನೆ ಅವರದು.

ಕಾರ್ಯಕ್ರಮದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಟಿಪ್ಸ್‌ ಕೊಡುವ ಗೌರಿ ಸುಬ್ರಹ್ಮಣ್ಯ, ‘2014ರಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ‘ತಥಾಸ್ತು’ ನನ್ನ ಮೊದಲ ಕಾರ್ಯಕ್ರಮ. ಆನಂತರ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಕೆಲವು ಮನೆಮದ್ದುಗಳನ್ನು ಪೇಪರ್‌ನಲ್ಲಿ ಬರೆದುಕೊಂಡು ಹೋಗಿ ಕಾರ್ಯಕ್ರಮದಲ್ಲಿ ಹೇಳುತ್ತಿದ್ದೆ. ಆ ಕಾಗದ ಎಷ್ಟೋ ಬಾರಿ ಕಳೆದು ಹೋಗುತ್ತಿತ್ತು. ನನ್ನ ಯಜಮಾನರ ಸಲಹೆ ಮೇರೆಗೆ ಆ ಮನೆಮದ್ದುಗಳನ್ನು ಡೈರಿಯಲ್ಲಿ ಬರೆಯುತ್ತಾ ಬಂದೆ. ಅದು ನಂತರ ಪುಸ್ತಕ ರೂಪದಲ್ಲಿ ಹೊರಬಂತು. ‘ಬೊಂಬಾಟ್ ಭೋಜನ’ದಲ್ಲೂ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳುತ್ತಾ ಬರುತ್ತಿದ್ದೇನೆ. ಅದರಿಂದ ಸಾಕಷ್ಟು ಜನರಿಗೆ ಉಪಯೋಗವಾಗುತ್ತಿದೆ’ ಎಂದರು.

ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುವ ಕಾರ್ಯಕ್ರಮ ನಂಬರ್‌ 1 ಸ್ಥಾನದಲ್ಲಿದೆ ಎನ್ನುತ್ತಾರೆ ವಾಹಿನಿ ಮುಖ್ಯಸ್ಥೆ ವರ್ಷ. ‘ಈ ಕಾರ್ಯಕ್ರಮದ ಬಗ್ಗೆ ಚಂದ್ರು ಬಳಿ ಹೇಳಿದಾಗ ಅವರು ಕೇವಲ ನಲವತ್ತೆಂಟು ಗಂಟೆಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಿದರು. ಕಾರ್ಯಕ್ರಮ ಈಗ ಯಶಸ್ವೀ 850 ಕಂತುಗಳನ್ನು ಪೂರೈಸಿದೆ. ಈ ಸೀಸನ್‌ನ ವಿಶೇಷವೆಂದರೆ ಚಂದ್ರು ಅವರು ವಿಶೇಷವಾದ ‘ಬೊಂಬಾಟ್ ಹಲ್ವ’ ಸಿಹಿತಿಂಡಿ ಹಾಗೂ ‘ಬೊಂಬಾಟ್ ಕಾಫಿ’ ಫಿಲ್ಟರ್ ಕಾಫಿ ಕಂಡುಹಿಡಿದಿದ್ದಾರೆ!’ ಎನ್ನುವುದು ವರ್ಷ ಮಾತು. ಹಾಸ್ಯಸಾಹಿತಿ ಎಂ ಎಸ್ ನರಸಿಂಹಮೂರ್ತಿ, ನಟಿ ಸಿಹಿಕಹಿ ಗೀತಾ, ಖುಷಿ ಚಂದ್ರಶೇಖರ್ ‘ಬೊಂಬಾಟ್ ಭೋಜನ’ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ‘ಬೊಂಬಾಟ್ ಭೋಜನ 2’ ಹಾಗೂ ‘ಆರೋಗ್ಯ ಆಹಾರ’ ಪುಸ್ತಕಗಳು ಬಿಡುಗಡೆಯಾದವು.

Previous article‘ಹಿರಣ್ಯಕಶ್ಯಪ’ ಕಾನ್ಸೆಪ್ಟ್‌ ಟೀಸರ್‌ | ರಾಣಾ ನಟನೆ, ನಿರ್ಮಾಣದ ಪೌರಾಣಿಕ ಸಿನಿಮಾ
Next articleವೈಯಕ್ತಿಕ ಸಮಸ್ಯೆಗಳಿಗೆ 2ನೇ ಮಹಾಯುದ್ಧದ ಸಮೀಕರಣದ ವಿಶೇಷ ನಿರೂಪಣೆ – ‘ಬವಾಲ್’

LEAVE A REPLY

Connect with

Please enter your comment!
Please enter your name here