ಡಿ ಸತ್ಯಪ್ರಕಾಶ್ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ‘ಅನ್‌ಲಾಕ್ ರಾಘವ’ ನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರು ಚಿತ್ರದ ಹಾಡಿನ ಮಧ್ಯೆ ಫೈಟ್‌ವೊಂದನ್ನು ಅಳವಡಿಸಿ ಗಮನ ಸೆಳೆದಿದ್ದಾರೆ. ಮಿಲಿಂದ್ ಗೌತಮ್ ಮತ್ತು ರೇಚಲ್ ಡೇವಿಡ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.
‘ಚಿತ್ರದಲ್ಲಿ ನಾಲ್ಕೂವರೆ ಫೈಟ್‌ಗಳಿವೆ! ಈ ಅರ್ಧ ಫೈಟ್ ಒಂದು ಹಾಡಿನ ಮಧ್ಯೆ ಬರುತ್ತದೆ. ಚಿತ್ರಕತೆಯ ಹಂತದಲ್ಲಿ ಈ ಹಾಡನ್ನು ನಾವು ಸೇರಿಸಿರಲಿಲ್ಲ. ಬಳಿಕ, ಆ ಸೀಕ್ವೆನ್ಸ್‌ನಲ್ಲಿ ಒಂದು ಹಾಡಿದ್ದರೆ ಹೇಗೆ ಎಂಬ ಆಲೋಚನೆ ಬಂತು. ಅದನ್ನು ಇನ್‌ಕಾರ್ಪೋರೇಟ್ ಮಾಡಿದಾಗ ಈ ಸೀಕ್ವೆನ್ಸ್ ತುಂಬಾ ಬ್ಯೂಟಿಫುಲ್ ಆಗಿ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಆ ಹಾಡನ್ನು ನೋಡಿ ಬಹಳ ಮೆಚ್ಚಿದ್ದಾರೆ. ಆ ಹಾಡು ಸಿನಿಮಾದ ಟ್ರಂಪ್ ಕಾರ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎನ್ನುತ್ತಾರೆ ‘ಅನ್‌ಲಾಕ್ ರಾಘವ’ ಸಿನಿಮಾ ನಿರ್ದೇಶಕ ದೀಪಕ್ ಮಧುವನಹಳ್ಳಿ. ಅವರ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಈ ಹಾಡನ್ನು ‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡಿದ್ದ ಸಾಯಿ ವಿಘ್ನೇಶ್ ಹಾಡಿದ್ದಾರೆ.
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‌ನಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಚಿತ್ರ ನಿರ್ಮಿಸುತ್ತಿದ್ದಾರೆ. ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲ’ ಸಿನಿಮಾಗಳ ಖ್ಯಾತಿಯ ಡಿ ಸತ್ಯಪ್ರಕಾಶ್ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದು, ದೀಪಕ್ ಮಧುವನಹಳ್ಳಿ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಕ್ಲಾಸ್ ಮತ್ತು ಮಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಸೆಳೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕರು. ಅದಕ್ಕೆ ಬೇಕಾದಂತೆ ಹಣ ವ್ಯಯಿಸಿದ್ದಾರೆ. ನಾಯಕ ಮಿಲಿಂದ್ ಗೌತಮ್ ಅವರಿಗೆ ಸಾಕಷ್ಟು ಆಕ್ಷನ್ ಸನ್ನಿವೇಶಗಳಿವೆ. ಲವಿತ್ ಛಾಯಾಗ್ರಾಹಣ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಮುರಳಿ ಮಾಸ್ಟರ್ ಹಾಗೂ ಧನಂಜಯ್ ಮಾಸ್ಟರ್ ನೃತ್ಯ ಸಂಯೋಜನೆ, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗು ಸುರೇಶ್, ಅಥರ್ವ ಪ್ರಕಾಶ್, ಬೃಂದಾ ವಿಕ್ರಮ್ ಪ್ರಮುಖ ತಾರಾಬಳಗದಲ್ಲಿದ್ದಾರೆ.