ಮೊದಲಾರ್ಧ ಹಾಸ್ಯ ಮತ್ತು ಭಾವನಾತ್ಮಕವಾಗಿದ್ದು ದ್ವಿತೀಯಾರ್ಧವು ಮಾಸ್ ಮತ್ತು ಆಕ್ಷನ್‌ನಿಂದ ಕೂಡಿದೆ. ದ್ವಿತಿಯಾರ್ಧದಲ್ಲಿ ನಾಯಿ ಜಗಳ ಪ್ರೇಕ್ಷಕರ ಗಮನ ಹಿಡಿದಿರಿಸುತ್ತದೆ. ಹಾಸ್ಯ ಮತ್ತು ಮೆಲೊಡ್ರಾಮಾ ಜತೆಗೆ ಮನುಷ್ಯರೊಂದಿಗೆ ಪ್ರಾಣಿಗಳ ಸಂಬಂಧ, ಪ್ರಾಣಿಗಳ ನಡುವಿನ ಸಹಾನುಭೂತಿಯನ್ನು ಇದು ಒತ್ತಿ ತೋರಿಸಿದೆ. ‘ನೇಮರ್’ Disneyplus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮೂಕ ಪ್ರಾಣಿಗಳನ್ನು ಪ್ರೀತಿಸಿದ್ದವರಿಗೆ ಗೊತ್ತಿರುತ್ತದೆ ಅವು ನಮ್ಮನ್ನು ಅದೆಷ್ಟು ಹಚ್ಚಿಕೊಂಡಿರುತ್ತವೆ ಎಂದು. ಪ್ರಾಣಿ ಮತ್ತು ಮನುಷ್ಯನ ನಡುವಿನ ಗಾಢ ಸ್ನೇಹದ ಹಲವಾರು ಸಿನಿಮಾಗಳು ತೆರೆಕಂಡಿವೆ. ಅವುಗಳ ಪಟ್ಟಿಯಲ್ಲಿ ಸೇರುವ ಮಲಯಾಳಂ ಸಿನಿಮಾ ‘ನೇಮರ್’. ಇದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ‘ನೇಮರ್’ ಹೆಸರು ಕೇಳಿದೊಡನೇ ಬ್ರೆಜಿಲ್‌ನ ಫುಟ್ಬಾಲ್ ತಾರೆ ನೇಮರ್ ನೆನೆಪಿಗೆ ಬರುತ್ತಾನೆ. ಕೇರಳ ಫುಟ್ಬಾಲ್ ಪ್ರೇಮಿಗಳ ನಾಡು. ಅಲ್ಲಿ ನೇಮರ್, ಮೆಸ್ಸಿ, ರೊನಾಲ್ಡೋಗೆ ಅಭಿಮಾನಿಗಳು ಜಾಸ್ತಿ. ಬ್ರೆಜಿಲ್ ಮತ್ತು ಅರ್ಜೆಂಟಿನಾ ಅಥವಾ ನೇಮರ್ vs ಮೆಸ್ಸಿ ಎಂದು ಜಗಳವಾಡುವ ಫ್ಯಾನ್‌ಗಳು ಅಲ್ಲಿದ್ದಾರೆ .ಆದರೆ ಇಲ್ಲಿ ಚಿತ್ರದ ಪ್ರಮುಖ ಪಾತ್ರದಲ್ಲಿರುವುದು ನಾಯಿ, ಅದರ ಹೆಸರೇ ನೇಮರ್. ನೇಮರ್ ಸಾದಾ ನಾಯಿ, ಅಂದರೆ ಊರ ನಾಯಿ. ಈ ನೇಮರ್ ಇಬ್ಬರು ಗೆಳೆಯರ ಬದುಕಿಗೆ ಬಂದ ಮೇಲೆ ಏನಾಗುತ್ತದೆ ಎಂಬುದೇ ಸಿನಿಮಾದ ಕಥಾವಸ್ತು.
‘ತಣ್ಣೀರ್ ಮತ್ತನ್ ದಿನಂಞಳ್’ ಸಿನಿಮಾದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಮ್ಯಾಥ್ಯೂ ಥಾಮಸ್ – ನಸ್ಲಿನ್ ಜೋಡಿ ಮತ್ತೆ ಕಾಮಿಡಿ ಎಂಟರ್‌ಟೇನರ್ ಮೂಲಕ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಜೊತೆಯಾದಾಗಲೆಲ್ಲ ನಗುವಿನ ಹಬ್ಬ ಗ್ಯಾರಂಟಿ. ಈ ಬಾರಿ ಈ ಜೋಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಲ್ಲದೆ, ‘ನೇಮರ್’ ಮೂಲಕ ಪ್ರೇಕ್ಷಕರ ಮನ ಮುಟ್ಟುವಲ್ಲಿಯೂ ಯಶಸ್ವಿಯಾಗಿದ್ದಾರೆ. ನೆರಳಿನಂತೆ ಸದಾ ಜತೆಯಾಗಿ ಇರುವ ಇಬ್ಬರು ಸ್ನೇಹಿತರ ಕಥೆಯನ್ನು ಹೇಳುವ ಮೂಲಕ ಚಿತ್ರ ಆರಂಭವಾಗುತ್ತದೆ. ಇಬ್ಬರೂ ಕೂಡ ಕಟ್ಟಾ ಬ್ರೆಜಿಲ್ ಅಭಿಮಾನಿಗಳು. ಕುಂಞಾವಾ ಎಂದು ಕರೆಯುವ ಆಕಾಂಶ್ (ಮ್ಯಾಥ್ಯೂ ಥಾಮಸ್) ಮತ್ತು ಸಿಂಟೊ (ನೆಸ್ಲಿನ್ ಕೆ ಗಫೂರ್) ನಡುವಿನ ಗೆಳೆತನ ಹೇಗೆ ಎಂದರೆ ಕುಂಞಾವಾಗೆ ಅದೇನೇ ಸಮಸ್ಯೆ ಬರಲಿ ಅದಕ್ಕೆ ಪರಿಹಾರ ಸಿಂಟೋ ಕೈಯಲ್ಲಿರುತ್ತದೆ. ಕುಂಞಾವಾ ಸಮಸ್ಯೆಗೆ ಪರಿಹಾರ ಎಂಬಂತೆ ಇಬ್ಬರ ಬದುಕಿನಲ್ಲಿ ಬರುವ ನಾಯಿಯೇ ‘ನೇಮರ್’. ನೇಮರ್ ನಿಧಾನವಾಗಿ ಅವರ ಜೀವನದ ಭಾಗವಾಗುತ್ತದೆ ಮತ್ತು ಅವರಲ್ಲಿ ಒಬ್ಬನಾಗಿ ಬಿಡುತ್ತದೆ. ನಂತರ ಅವರ ಜೀವನದಲ್ಲಿ ಆಗುವ ಬೆಳವಣಿಗೆಗಳು ಚಿತ್ರವನ್ನು ಮುಂದಕ್ಕೆ ಕರೆದೊಯ್ಯುತ್ತದೆ.
ಕುಂಞಾವಾಗೆ ಡೋನ್ನಾ ಎಂಬ ಹುಡುಗಿ ಇಷ್ಟ. ಆಕೆಯಲ್ಲಿ ಈ ಪ್ರೀತಿಯನ್ನು ಹೇಳುವಷ್ಟು ಧೈರ್ಯ ಇಲ್ಲ. ಇದು ಹದಿಹರೆಯದ ಪ್ರೇಮ. ಡೋನ್ನಾ ಬಳಿ ಒಂದು ನಾಯಿ ಇದೆ. ಆಕೆಗೆ ನಾಯಿ ಇಷ್ಟ. ಹೀಗಿರುವಾಗ ಆಕೆಯನ್ನು ಮೆಚ್ಚಿಸುವುದಕ್ಕೆ ಏನು ಮಾಡಬೇಕು ಎಂದು ಕೇಳಿದಾಗ ಗೆಳೆಯ ಸಿಂಟೊ ಕೊಟ್ಟ ಐಡಿಯಾವೇ ನಾಯಿ ಸಾಕುವುದು. ನಾಯಿ ಬೇಕೇಬೇಕು ಎಂದು ಪಟ್ಟು ಹಿಡಿದು ಕೂತ ಮಗನಿಗೆ ಆತನ ಅಮ್ಮ ಹೀಗೊಂದು ಜಾಗಕ್ಕೆ ಹೋಗು, ಅಲ್ಲಿ ಇಂಥವರನ್ನು ಭೇಟಿಯಾದರೆ ಅಲ್ಲಿ ನಿಮಗೆ ನಾಯಿ ಸಿಗುತ್ತದೆ ಎಂದು ಹೇಳಿ ಕಳುಹಿಸುತ್ತಾಳೆ. ಇಬ್ಬರು ಹುಡುಗರು ಅಲ್ಲಿಗೆ ಹುಡುಕಿಕೊಂಡು ಹೋದಾಗ ಅಲ್ಲಿ ವಿಧ ವಿಧ ಬ್ರೀಡ್ ನಾಯಿಗಳು. ಅದಕ್ಕೆ ದುಡ್ಡು ಕೂಡಾ ಬೇಕು. ಕೈಯಲ್ಲಿ ದುಡ್ಡಿಲ್ಲದ ಈ ಹುಡುಗರ ಕೈಗೆ ನಾಯಿ ಮಾರುವ ಆ ಮಾಲೀಕ ಕೊಟ್ಟಿದ್ದು ಊರ ನಾಯಿ. ಮರಿ ಅಲ್ಲ, ಸ್ವಲ್ಪ ದೊಡ್ಡ ನಾಯಿ. ಅದೇ ನೇಮರ್. ಬಹಳ ಮುದ್ದಿನ ನಾಯಿ, ಹಾಗೇಯೇ ತುಂಟಾಟವೂ ಜಾಸ್ತಿ. ಇದರ ಹೆಸರಿನಿಂದಾಗಿ ಫುಟ್ಬಾಲ್ ಕ್ಲಬ್‌ನಿಂದ ಕುಂಞಾವಾನನ್ನು ಹೊರಗಿಡಲಾಗುತ್ತದೆ. ನಾಯಿಯ ತುಂಟಾಟ ಉಪದ್ರವ ಆಗಿ ಕಂಡಾಗ ಕುಂಞಾವಾನ ಅಪ್ಪ ಅದನ್ನು ಊರಿನಿಂದ ಹೊರಗೆ ಬಿಡಲು ಬೇರೊಬ್ಬರಿಗೆ ಹೇಳಿರುತ್ತಾರೆ.
ಅಲ್ಲಿಂದ ನೇಮರ್ ನಾಪತ್ತೆ. ಎಲ್ಲೆಲ್ಲಿ ಹುಡುಕಿದರೂ ನಾಯಿ ಇಲ್ಲ. ಸುಮಾರು ದಿನಗಳ ನಂತರ ನಾಯಿಯನ್ನು ತಮಿಳುನಾಡಿಗೆ ಹೋಗುವ ವಾಹನದಲ್ಲಿ ಹಾಕಿ ಅದನ್ನು ಬಿಟ್ಟು ಬರುವಂತೆ ಅಪ್ಪ ಹೇಳಿರುವುದು ಗೊತ್ತಾಗುತ್ತದೆ. ಹೇಗಾದರೂ ನಾಯಿ ಬೇಕೇಬೇಕು, ನೇಮರ್ ಇಲ್ಲದೆ ಇರಲಾಗುವುದಿಲ್ಲ ಎಂದು ತನ್ನಿಷ್ಟದ ನಾಯಿಯನ್ನು ಹುಡುಕಿಕೊಂಡು ಹೋಗುವ ಕುಂಞಾವಾ ಮತ್ತು ಸಿಂಟೊ. ಇದರೊಂದಿಗೆ ಕಥೆ ಮತ್ತೊಂದು ತಿರುವು ಪಡೆಯುತ್ತದೆ. ಅಲ್ಲಿ ನಾಯಿ ಸಿಕ್ಕರೂ ಅದನ್ನು ವಾಪಸ್ ಊರಿಗೆ ಕರೆದುಕೊಂಡು ಬರುವುದು ಸುಲಭವೇನಲ್ಲ. ಅಲ್ಲಿನ ಅಡೆತಡೆಗಳನ್ನು ಆ ಹುಡುಗರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದೇ ನಂತರದ ಕತೆ.
ನೇಮರ್‌ನಲ್ಲಿನ ಪಾತ್ರವರ್ಗದ ಅಭಿನಯಕ್ಕೆ ಚಪ್ಪಾಳೆ. ಚಿತ್ರದ ಪ್ರಮುಖ ಪಾತ್ರಧಾರಿಗಳ ಜತೆಗೆ ಇತರ ನಟರೂ ಚಂದ ನಟಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಪರ್ಫೆಕ್ಟ್ ಆಗಿ ಮಾಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1’, ‘ಬಿಲ್ಲಾ’ ಮುಂತಾದ ಸಿನಿಮಾಗಳಲ್ಲಿ ಪವರ್‌ಫುಲ್ ಪಾತ್ರಗಳಲ್ಲಿ ಮಿಂಚಿದ್ದ ಯೋಗ್ ಜಪ್ಪಿ ಕೂಡ ಇಲ್ಲಿ ನಟಿಸಿದ್ದಾರೆ. ಆದರ್ಶ್ ಸುಕುಮಾರನ್ ಮತ್ತು ಪಾಲ್ಸನ್ ಸ್ಕಾರಿಯಾ ಅವರ ಚಿತ್ರಕಥೆಯು ಭಾವನಾತ್ಮಕ ಕ್ಷಣಗಳ ಜೊತೆಗೆ ಹಾಸ್ಯದಿಂದ ಕೂಡಿದೆ. ಮೊದಲಿನಿಂದ ಕೊನೆಯವರೆಗೂ ಹಾಸ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಸಾದಾ ನಾಯಿಯ ನಟನೆಯಿಂದ ಭಾವನಾತ್ಮಕ – ಹಾಸ್ಯ ಮನರಂಜನೆ ಕೊಟ್ಟ ನಿರ್ದೇಶಕ ಸುಧೀ ಮ್ಯಾಡಿಸನ್‌ಗೆ ಹ್ಯಾಟ್ಸ್ ಆಫ್.
ಶಾನ್ ರೆಹಮಾನ್ ಸಂಗೀತದಲ್ಲಿ ನೇಮರ್ ಸಿನಿಮಾದ ಹಾಡುಗಳು ಕೂಡಾ ಚಂದ ಮೂಡಿಬಂದಿದೆ. ಛಾಯಾಗ್ರಾಹಕ ಅಲ್ಬಿ ಅವರು ಸುಂದರವಾದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಪಾಂಡಿಚೆರಿಯ ಒಂದು ಪ್ರದೇಶದ ಸುತ್ತಮುತ್ತಲಿನ ಪರಿಸರವನ್ನು ಪ್ರೇಕ್ಷಕರಿಗೆ ಪದಗಳಿಲ್ಲದೆ ಅರ್ಥ ಮಾಡಿಸಿದ್ದರಲ್ಲಿ ಆಲ್ಬಿ ಅವರ ಕೈಚಳಕ ಕಾಣಬಹುದು. ಮ್ಯಾಥ್ಯೂ, ನೆಸ್ಲಿನ್ ಜತೆ ವಿಜಯರಾಘವನ್, ಶಮ್ಮಿ ತಿಲಕನ್, ಜಾನಿ ಆಂಟೋನಿ, ಗೌರಿ ಕೃಷ್ಣ, ಕೀರ್ತನಾ ಶ್ರೀಕುಮಾರ್, ಅಮಲಾ ರೋಸ್, ತುಷಾರ ಪಿಳ್ಳೈ, ರಶ್ಮಿ ಬೋಬನ್ ಮತ್ತು ಬೇಬಿ ದೇವಾನಂದ ಚಿತ್ರದಲ್ಲಿದ್ದಾರೆ.
ಮೊದಲಾರ್ಧ ಹಾಸ್ಯ ಮತ್ತು ಭಾವನಾತ್ಮಕವಾಗಿದ್ದು ದ್ವಿತೀಯಾರ್ಧವು ಮಾಸ್ ಮತ್ತು ಆಕ್ಷನ್‌ನಿಂದ ಕೂಡಿದೆ. ದ್ವಿತಿಯಾರ್ಧದಲ್ಲಿ ನಾಯಿ ಜಗಳ ಪ್ರೇಕ್ಷಕರ ಗಮನ ಹಿಡಿದಿರಿಸುತ್ತದೆ. ಹಾಸ್ಯ ಮತ್ತು ಮೆಲೊಡ್ರಾಮಾ ಜತೆಗೆ ಮನುಷ್ಯರೊಂದಿಗೆ ಪ್ರಾಣಿಗಳ ಸಂಬಂಧ, ಪ್ರಾಣಿಗಳ ನಡುವಿನ ಸಹಾನುಭೂತಿಯನ್ನು ಇದು ಒತ್ತಿ ತೋರಿಸಿದೆ. ಸ್ನೇಹ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಪಾಠ ಹೇಳುವ ‘ನೇಮರ್’ ಮಕ್ಕಳಿಗಾಗಿ ನಿರ್ಮಿಸಿದ ಚಿತ್ರವಾಗಿದ್ದರೂ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿ ಬಿಡುತ್ತದೆ.