ರೈತರ ಸಮಸ್ಯೆಗಳ ಕುರಿತು ಮಾತನಾಡುವ ‘ದಿಗ್ವಿಜಯ’ ಸಿನಿಮಾ ತೆರೆಗೆ ಸಿದ್ಧವಾಗಿದೆ. ದುರ್ಗಾ ಪಿ ಎಸ್ ಮತ್ತು ಶ್ರೀಕಾಂತ್ ಹೊನ್ನವಳ್ಳಿ ನಿರ್ದೇಶಕರು. ಚಿತ್ರದಲ್ಲಿ ರೈತರ ಆತ್ಯಹತ್ಯೆ, ವ್ಯವಸ್ಥೆಯಲ್ಲಿನ ದೋಷ, ಈ ಸಂಕಷ್ಟಗಳಿಗೆ ಪರಿಹಾರ.. ಹೀಗೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ ಎನ್ನುತ್ತಾರೆ ನಿರ್ದೇಶಕದ್ವಯರು.
ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರಗಳನ್ನು ಚರ್ಚಿಸುವ ಚಿತ್ರವಿದು ಎನ್ನುತ್ತಾರೆ ‘ದಿಗ್ವಿಜಯ’ ಚಿತ್ರದ ನಿರ್ದೇಶಕರು. ದುರ್ಗಾ ಪಿ ಎಸ್ ಮತ್ತು ಶ್ರೀಕಾಂತ್ ಹೊನ್ನವಳ್ಳಿ ಇಬ್ಬರೂ ಸೇರಿ ನಿರ್ದೇಶಿಸಿರುವ ಚಿತ್ರವಿದು. ದುರ್ಗಾ ಪಿ ಎಸ್ ಅವರು ಕಳೆದ ಹದಿನೆಂಟು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಸಂಕಲನಕಾರರಾಗಿ ಗುರುತಿಸಿಕೊಂಡಿರುವ ಅವರು ಚಿತ್ರನಿರ್ದೇಶಕರೂ ಹೌದು. ‘ದಿಗ್ವಿಜಯ’ ಅವರ ನಿರ್ದೇಶನದ ಐದನೇ ಸಿನಿಮಾ. ತಮ್ಮ ಸಿನಿಮಾ ಕುರಿತು ಮಾತನಾಡುವ ದುರ್ಗಾ, ‘ಪರಿಹಾರದ ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ರಾಜಕಾರಣಿಗಳ ಹೇಳಿಕೆ ನನ್ನ ಮನಸ್ಸನ್ನು ಘಾಸಿಗೊಳಿಸಿತು. ರೈತರು ಆತ್ಮಹತ್ಯೆಗೆ ವ್ಯವಸ್ಥೆಯಲ್ಲಿನ ಲೋಪಗಳೇನು? ಈ ಸಂಕಷ್ಟಗಳಿಂದ ಅವರು ಪಾರಾಗುವುದು ಹೇಗೆ ಎನ್ನುವ ಕುರಿತು ಚಿತ್ರದಲ್ಲಿ ಚರ್ಚಿಸಲಾಗಿದೆ’ ಎನ್ನುತ್ತಾರೆ. ಜಯಪ್ರಭು ಲಿಂಗಾಯತ್ ಮತ್ತು ಸ್ನೇಹಾ ಖತ್ರಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಹಿರಿಯ ನಟ ಹೊನ್ನವಳ್ಳಿ ಶ್ರೀಕಾಂತ್ ಅವರ ಪುತ್ರ ಶ್ರೀಕಾಂತ್ ಹೊನ್ನವಳ್ಳಿ ಅವರು ನಿರ್ದೇಶನದಲ್ಲಿ ದುರ್ಗಾ ಅವರಿಗೆ ಜೊತೆಯಾಗಿದ್ದಾರೆ. ‘ನಾನೂ ಒಬ್ಬ ರೈತನಾಗೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ತಂದೆ (ಹೊನ್ನವಳ್ಳಿ ಕೃಷ್ಣ) ಅಪ್ಪನ ಪಾತ್ರ ಮಾಡಿದ್ದಾರೆ’ ಎನ್ನುತ್ತಾರೆ ಶ್ರೀಕಾಂತ್ ಹೊನ್ನವಳ್ಳಿ. ಚಿತ್ರದಲ್ಲಿ ಮೂವತ್ತಕ್ಕೂ ಹೆಚ್ಚು ರೈತರು ಕಾಣಿಸಿಕೊಂಡಿದ್ದಾರೆ. ಸಾಧ್ಯವಾದಷ್ಟೂ ನೈಜತೆಗೆ ಒತ್ತು ಕೊಟ್ಟು ಸಿನಿಮಾ ರೂಪಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕದ್ವಯರು. ಜೆ ಪಿ ಎಂಟರ್‌ಟೇನ್‌ಮೆಂಟ್ ಅಡಿ ಜಯಪ್ರಭು ಆರ್ ಲಿಂಗಾಯತ್, ಅರುಣ್ ಸುಕದರ್ ಹಾಗೂ ಹರೀಶ್ ಆರ್ ಸಿ ಚಿತ್ರ ನಿರ್ಮಿಸಿದ್ದಾರೆ. ದುರ್ಗಾ ಪಿ ಎಸ್ ಮತ್ತು ಹೊನ್ನವಳ್ಳಿ ಶ್ರೀಕಾಂತ್ ಕತೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜೊತೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಜಯಪ್ರಭು, ಸ್ನೇಹ, ಸುಚೇಂದ್ರ ಪ್ರಸಾದ್, ದುಬೈ ರಫೀಕ್, ಪಟ್ರೆ ನಾಗರಾಜ್, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್, ಆಕಾಶ್ ಎಂ ಪಿ ಚಿತ್ರದ ಇತರೆ ಕಲಾವಿದರು. ಹರ್ಷ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.