‘ನಿನ್ನ ಸನಿಹಕೆ’ ಚಿತ್ರತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರಿಗೆ ಚಿತ್ರದ ಪ್ರೀಮಿಯರ್ ಶೋನ ಮೊದಲ ಟಿಕೆಟ್ ನೀಡಿ ಸ್ವಾಗತಿಸಿದೆ.
ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರಿಗೆ ಟಿಕೆಟ್ ಸಿಗೋದು ಕಾಮನ್. ಆದರೆ ಇಲ್ಲಿ ಫಾರ್ ಎ ಚೇಂಜ್ ಎನ್ನುವಂತೆ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಆದಮೇಲೂ ಟಿಕೆಟ್ ಸಿಕ್ಕಿದೆ. ಆದರೆ ಇದು ಅವರ ಪಕ್ಷದ ವತಿಯಿಂದ ಸಿಕ್ಕಿದ್ದಲ್ಲ. ಬದಲಾಗಿ ‘ನಿನ್ನ ಸನಿಹಕೆ’ ಚಿತ್ರತಂಡದಿಂದ ಸಿಕ್ಕ ಗಿಫ್ಟ್ ಇದು. ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರೋ ‘ನಿನ್ನ ಸನಿಹಕೆ’ ಚಿತ್ರತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಇದೇ ಸಮಯದಲ್ಲಿ ಅವರಿಗೆ ಚಿತ್ರದ ಪ್ರೀಮಿಯರ್ ಶೋನ ಮೊದಲ ಟಿಕೆಟ್ ಅನ್ನು ನೀಡಿ ಸ್ವಾಗತಿಸಿದೆ.
ಚಿತ್ರತಂಡದ ಪರವಾಗಿ ನಾಯಕ ಸೂರಜ್, ನಾಯಕಿ ಧನ್ಯ ರಾಮ್ ಕುಮಾರ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿಗಿ ಈ ಕೆಲಸ ಮಾಡಿದ್ದಾರೆ. ಈ ವಾರ ರಾಜ್ಯದ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗ್ತಾ ಇರೋ ‘ನಿನ್ನ ಸನಿಹಕೆ’ ಚಿತ್ರ ಗುರುವಾರ ಸಂಜೆ 7 ಗಂಟೆಗೆ ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಪ್ರೀಮಿಯರ್ ಶೋ ಇಟ್ಟುಕೊಂಡಿದೆ. ಇದು ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಮತ್ತು ನಟ ರಾಮ್‌ಕುಮಾರ್ ಅವರ ಪುತ್ರಿ ಧನ್ಯ ರಾಮ್ ಕುಮಾರ್ ನಟಿಸಿರುವ ಮೊದಲ ಚಿತ್ರ ಎಂಬ ಕಾರಣಕ್ಕೂ ‘ನಿನ್ನ’ ಸನಿಹಕೆ ಗಾಂಧಿನಗರದಲ್ಲಿ ಸುದ್ದಿ ಮಾಡಿದೆ. ಶಿವರಾಜ್ ಕುಮಾರ್ ಅವರ ಪುತ್ರಿ ‘ಅಂಡಮಾನ್’ ಚಿತ್ರದಲ್ಲಿ ಬಾಲನಟಿಯಾಗಿ ಮಿಂಚಿದ್ದು ಬಿಟ್ಟರೆ ರಾಜ್ ಕುಟುಂಬದಿಂದ ಹೆಣ್ಣುಮಕ್ಕಳು ಸಿನಿಮಾದ ತೆರೆಯ ಮೇಲೆ ಕಾಣಿಸುತ್ತಿರೋ ವಿಶೇಷತೆ ‘ನಿನ್ನ ಸನಿಹಕೆ’ ಚಿತ್ರದ್ದು. ರಘು ದೀಕ್ಷಿತ್ ಸಂಗೀತ ಇರೋ ಈ ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.