ನಿತೇಶ್‌ ತಿವಾರಿ ನಿರ್ದೇಶನದ ಬಾಲಿವುಡ್‌ ಮೆಗಾ ಪ್ರಾಜೆಕ್ಟ್‌ ‘ರಾಮಾಯಣ’ ಮತ್ತೆ ಸುದ್ದಿಯಲ್ಲಿದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಇಲ್ಲದಿದ್ದರೂ ಸುದ್ದಿ ಬಹುತೇಕ ಖಚಿತ ಎನ್ನಲಾಗುತ್ತಿದೆ. ಮುಂದಿನ ವರ್ಷ ಆರಂಭದಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ರಾವಣನ ಪಾತ್ರದಲ್ಲಿ ಯಶ್‌ ನಟಿಸಲಿದ್ದಾರೆ. ಸೀತೆ ಪಾತ್ರಕ್ಕೆ ಅಲಿಯಾ ಭಟ್‌ ಬದಲಿಗೆ ಈಗ ಸಾಯಿ ಪಲ್ಲವಿ ಹೆಸರು ಕೇಳಿಬರುತ್ತಿರುವುದು ವಿಶೇಷ.

ಯಶ್ ತಮ್ಮ 19ನೇ ಸಿನಿಮಾದ ಚಿತ್ರೀಕರಣ ಆರಂಭಿಸಲು ತಯಾರಿಯಲ್ಲಿರುವಾಗಲೇ ಅವರ 20ನೇ ಸಿನಿಮಾದ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ. ನಿತೇಶ್‌ ತಿವಾರಿ ಈ ಸಿನಿಮಾ ನಿರ್ಮಾಣ ಮಾಡಲಿದ್ದು, ರಣಬೀರ್‌ ಕಪೂರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸಲಿದ್ದಾರೆ. ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುವುದು ಬಹುತೇಕ ಖಚಿತ. ಸಿನಿಮಾದ ಚಿತ್ರೀಕರಣ 2024ರ ಆರಂಭದಲ್ಲಿ ಪ್ರಾರಂಭವಾಗಲಿದ್ದು, ಜೂನ್ ತಿಂಗಳ ವೇಳೆಗೆ ನಟ ಯಶ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. ಕೆಲ ತಿಂಗಳಿನಿಂದಲೂ ರಾಮಾಯಣ ಕತೆಯನ್ನು ಸಿನಿಮಾ ಆಗಿ ತೆರೆಗೆ ತರುವ ಸಾಹಸದ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇವೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾಕ್ಕೆ ಅಸಮಾಧಾನ ವ್ಯಕ್ತವಾದರೂ ಸಹ ರಾಮಾಯಣವನ್ನು ಮತ್ತೊಮ್ಮೆ ತೆರೆಗೆ ತರುವ ಪ್ರಯತ್ನವಂತೂ ನಡೆದಿದೆ.

ಈ ಹಿಂದೆ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ‘ರಾಮಾಯಣ’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ‘ಆದಿಪುರುಷ್’ ಮಾದರಿಯಲ್ಲಿ ಬಜೆಟ್ ಮಾತ್ರವೇ ಅಲ್ಲದೆ, ಹಲವು ಖ್ಯಾತ ತಂತ್ರಜ್ಞರನ್ನು ಈ ಸಿನಿಮಾಕ್ಕಾಗಿ ನಿತೇಶ್ ತಿವಾರಿ ಆಯ್ಕೆ ಮಾಡಲಿದ್ದಾರೆ. ಸಿನಿಮಾದ ಎಲ್ಲ VFX ಅನ್ನು ಹಲವು ಆಸ್ಕರ್ ವಿಜೇತ ಸಿನಿಮಾಗಳಿಗೆ VFX ಮಾಡಿರುವ DNEG ಸಂಸ್ಥೆ ಮಾಡಲಿದೆ. ಸಂಗೀತ, ಛಾಯಾಗ್ರಹಣಕ್ಕೆ ಸಹ ಭಾರತದ ಅತ್ಯುತ್ತಮ ತಂತ್ರಜ್ಞರನ್ನು ನಿತೇಶ್ ತಿವಾರಿ ಒಪ್ಪಿಸಿದ್ದಾರಂತೆ. ಈ ‘ರಾಮಾಯಣ’ ಕಥೆ ಆಧಾರಿತ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗದಲ್ಲಿ ಯಶ್​ ಪಾತ್ರ ಹೆಚ್ಚು ಕಾಣಿಸುವುದಿಲ್ಲ. ಕೇವಲ 15 ದಿನವಷ್ಟೇ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಯಶ್​ ಅವರ ಭಾಗದ ಚಿತ್ರೀಕರಣ 2024ರ ಜೂನ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಮಧು ಮಂಟೇನಾ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಬಹುಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.

ಇನ್ನು ಯಶ್​ರ 19ನೇ ಸಿನಿಮಾಕ್ಕೆ ತಯಾರಿ ಜೋರಾಗಿಯೇ ಆರಂಭವಾಗಿದ್ದು, ಇತ್ತೀಚೆಗಷ್ಟೆ ಅವರು ಲಂಡನ್​ನಲ್ಲಿ ಹಾಲಿವುಡ್​ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆ ಜೆ ಪೆರ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಸ್ಥಳಗಳನ್ನು ಯಶ್ ಅಂತಿಮಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಕತೆ, ಚಿತ್ರಕಥೆ, ನಿರ್ದೇಶಕರೂ ಅಂತಿಮವಾಗಿದ್ದು, ಶೀಘ್ರದಲ್ಲಿಯೇ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ.

LEAVE A REPLY

Connect with

Please enter your comment!
Please enter your name here