ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್’ ಸಿನಿಮಾ ತಂಡಕ್ಕೆ ನಟಿ ವರಲಕ್ಷ್ಮೀ ಶರತ್‌ಕುಮಾರ್ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ‘ಮಾಣಿಕ್ಯ’ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಎಂಟು ವರ್ಷಗಳ ಬಳಿಕ ‘ಮ್ಯಾಕ್ಸ್’ನಲ್ಲಿ ಮತ್ತೆ ಸುದೀಪ್‌ರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಸುದೀಪ್ ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಚಿತ್ರತಂಡಕ್ಕೆ ಹೊಸದಾಗಿ ಕಲಾವಿದರು ಸೇರ್ಪಡೆ ಆಗುತ್ತಲೇ ಇದ್ದಾರೆ. ವರಲಕ್ಷ್ಮೀ ಶರತ್‌ಕುಮಾರ್ ಸಿನಿಮಾಗೆ ಹೊಸ ಸೇರ್ಪಡೆ. ಚಿತ್ರದಲ್ಲಿ ಅವರು ಸುದೀಪ್‌ರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. ತಮಿಳುನಾಡಿನ ಮಹಾಬಲಿಪುರಂನಲ್ಲಿ ದೊಡ್ಡ ಸೆಟ್ ಹಾಕಿರುವ ಚಿತ್ರತಂಡ ಅಲ್ಲೇ ಚಿತ್ರೀಕರಣ ಮಾಡುತ್ತಿದೆ. ವರಲಕ್ಷ್ಮೀ ಶರತ್‌ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿಸಿದ್ದಾರಂತೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಇದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಸಿನಿಮಾ ಬಹುಭಾಷೆಗಳಲ್ಲಿ ತೆರೆಕಾಣಲಿದೆ.
‘ಅಸುರನ್’, ‘ಥೆರಿ’, ‘ಕಬಾಲಿ’ ಮುಂತಾದ ಸಿನಿಮಾಗಳನ್ನು ನಿರ್ಮಿಸಿರುವ ಕಲೈಪುಲಿ ಎಸ್ ಧಾನು ಅವರು ಈ ಚಿತ್ರವನ್ನು V Creations ಮತ್ತು Kiccha Creations ಬ್ಯಾನರ್ ಅಡಿ ನಿರ್ಮಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು, ಶಿವಕುಮಾರ್ ಕಲಾ ನಿರ್ದೇಶನ ನಿರ್ವಹಿಸುತ್ತಿದ್ದಾರೆ. ಹಿರಿಯ ನಟ ಶರತ್‌ಕುಮಾರ್ ಅವರ ಪುತ್ರಿ ವರಲಕ್ಷ್ಮೀ ‘ಪೋಡಾ ಪೋಡಿ’ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸುದೀಪ್ ಅವರ ‘ಮಾಣಿಕ್ಯ’ ಚಿತ್ರದಲ್ಲಿ ಇವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಸಿನಿಮಾ ಜನಮನ್ನಣೆ ಪಡೆದುಕೊಂಡಿತು. ನಂತರ ‘ರನ್ನ’ ಸಿನಿಮಾದ ಒಂದು ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದರು. ಎಂಟು ವರ್ಷಗಳ ಬಳಿಕ ಈ ಸಿನಿಮಾದಲ್ಲಿ ವರಲಕ್ಷ್ಮೀ ಅವರು ಮತ್ತೆ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.