ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’ ಅಕ್ಟೋಬರ್‌ 6ರಂದು ತೆರೆಕಾಣುತ್ತಿದೆ. ರಾಮ್‌ನಾರಾಯಣ್‌ ನಿರ್ದೇಶನದ ಚಿತ್ರವದು. ಚಿರಂಜೀವಿ ಸರ್ಜಾ ಪಾತ್ರಕ್ಕೆ ಅವರ ಕಿರಿಯ ಸಹೋದರ, ನಟ ಧ್ರುವ ಸರ್ಜಾ ಡಬ್‌ ಮಾಡಿದ್ದಾರೆ.

ಅಕಾಲಿಕವಾಗಿ ಅಗಲಿದ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಹೆಚ್ಚು ಆಕ್ಷನ್‌ ಸೀನ್‌ಗಳಿರುವ ಈ ಟ್ರೈಲರ್‌ನಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ನಟ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ರಾಮ್‌ನಾರಾಯಣ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಹಸಮಯ ದೃಶ್ಯಗಳಿರುವ ಟ್ರೈಲರ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟನ ಅಭಿಮಾನಿಗಳು ಟ್ರೈಲರ್‌ ಇಷ್ಟಪಟ್ಟು ‘ಮಿಸ್‌ ಯು ಚಿರು ಅಣ್ಣಾ’ ಎಂದು ಕಾಮೆಂಟ್‌ ಮಾಡಿದ್ದಾರೆ. ಧ್ರುವ ಸರ್ಜಾರ ಹುಟ್ಟುಹಬ್ಬದಂದೇ ಅಣ್ಣ ಚಿರಂಜೀವಿ ಸರ್ಜಾರ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. ಅಣ್ಣ ಅಕಾಲಿಕವಾಗಿ ಮೃತಪಟ್ಟ ಬಳಿಕ ತಮ್ಮ ಧ್ರುವ ಸರ್ಜಾ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು.

‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ. ರಾಜನ ಸ್ನೇಹಿತನೊಬ್ಬ ತಾನೇ ಆ ಊರಿಗೆ ರಾಜ ಆಗಬೇಕು ಎಂದು ಹೊಂಚು ಹಾಕಿ ಸಂಚು ಮಾಡಿದ. ಮುಂದೆ ಏನಾಯ್ತು ಹೇಳು ಅಜ್ಜಿ’ ಎಂದು ಕಥೆ ಹೇಳುವ ಶೈಲಿಯಲ್ಲಿ ಟ್ರೈಲರ್‌ ಆರಂಭವಾಗುತ್ತದೆ. ದೇವರಾಜ್‌, ಶಂಕರ್‌ ಅಶ್ವಥ್‌ ಮೊದಲಾದವರು ಟ್ರೈಲರ್‌ನಲ್ಲಿ ಕಾಣಿಸುತ್ತಾರೆ. ಬಳಿಕ ‘ಈ ಯುವ ಸಾಮ್ರಾಟನ ಮುಂದೆ ನಿಂತು ಸಮರ ಸಾರುತ್ತಿರುವ ಸಿಂಗಳೀಕ’ ಎಂದು ಚಿರಂಜೀವಿ ಸರ್ಜಾರ ಆಕ್ಷನ್‌ ಸೀನ್‌ಗಳು ಆರಂಭವಾಗುತ್ತದೆ. ಫೈಟಿಂಗ್‌ ಸೀನ್‌ ಆದ ಬಳಿಕ ‘ಮೀಸೆ ತಿರುವುವ ಜಟ್ಟಿ ಪೈಲ್ವಾನ್‌’ ಹಾಡಿನ ತುಣುಕು ಇದೆ. ನಾಯಕಿ ದೀಪ್ತಿ ಸಾಥಿ ‘ಅವಳನ್ನು ನೋಡಿದಾಗಿಂದ ನನಗೆ ಒಳ್ಳೆಯದೇ ಆಗುತ್ತಿದೆ’ ಎಂದು ಪ್ರೀತಿ ನಿವೇದನೆ ಮಾಡಿಕೊಳ್ಳುತ್ತಾರೆ. ಬಳಿಕ ಮೆಂಟಲ್‌ ಶಿವನಾಗಿ ಭಜರಂಗಿ ಲೋಕಿಯ ಆಗಮನವಾಗಿದೆ.

ಚಿತ್ರದಲ್ಲಿ ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವತ್ಥ್‌, ವಿನೀತ್ ಕುಮಾರ್ (ಬಾಂಬೆ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದೀಪ್ತಿ‌ ಸಾಥಿ, ಮೇಘಶ್ರೀ, ರುಷಿಕಾ ರಾಜ್ ನಾಯಕಿಯರು. ಕೆ ರಾಮ್‌ ನಾರಾಯಣ್ ಕತೆ, ಚಿತ್ರಕಥೆ ಹಾಗೂ ಸಂಭಾಷಣೆಯಿದೆ. ಪ್ರಣವ್ ಗೌಡ. ಎನ್ ನಿವೇದಿತಾ ಮತ್ತು ಶಿವಕುಮಾರ್ ನಿರ್ಮಾಣದ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಧನು ವಿಶ್‌ ಹಿನ್ನೆಲೆ ಸಂಗೀತ, ಕೆ ಗಣೇಶ್‌ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಚಿತ್ರ ಇದೇ ಅಕ್ಟೋಬರ್‌ 6ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here