ಹುಡುಗಿಯೊಬ್ಬಳು ಹುಡುಗರ ಹಾಸ್ಟೆಲ್ ಒಳಗೆ ಸೇರಿಕೊಂಡಾಗ ನಡೆಯುವ ಘಟನೆಗಳು, ಗೊಂದಲ – ಗಡಿಬಿಡಿ, ಆಟ-ಹುಡುಗಾಟವೇ ‘ಅಬ್ಬಬ್ಬ’ ಚಿತ್ರದ ವಸ್ತು. ನಿರ್ದೇಶಕರು ಮೂಲ ಚಿತ್ರಕ್ಕೆ ನಿಷ್ಠರಾಗಿದ್ದು, ಸಂಭಾಷಣೆಗಳೂ ಸೇರಿದಂತೆ, ಬಹುತೇಕ ಎಲ್ಲವನ್ನೂ ಮೂಲಚಿತ್ರದಿಂದ ಪಡೆದುಕೊಂಡಿದ್ದಾರೆ. ‘ಅಬ್ಬಬ್ಬ’ ಎನಿಸುವಂತಹ ಕತೆಯೇನೋ ಇಲ್ಲವಾದ್ದರಿಂದ ಈ ಚಿತ್ರಕ್ಕೆ ಹಾಸ್ಯ ದೃಶ್ಯಗಳೇ ಜೀವಾಳ.

ನಿರ್ದೇಶಕ ಕೆ ಎಂ ಚೈತನ್ಯ ಅವರಿಗೂ, ‘ಅ, ಆ’ ಅಕ್ಷರಕ್ಕೂ ಹಳೆಯ ನಂಟು. ಅವರ ನಿರ್ದೇಶನದ ಹೊಸ ಚಿತ್ರ ‘ಅಬ್ಬಬ್ಬ’ ಕೂಡ ಈ ಬಾಂಧವ್ಯದ ಮುಂದುವರಿಕೆಯಂತಿದೆ. ಜೊತೆಗೆ, ಇದು ಚೈತನ್ಯ ಅವರ ರಿಮೇಕ್ ಚಿತ್ರ ಸರಣಿಯ ಮುಂದುವರಿಕೆಯೂ ಆಗಿದ್ದು, ಅವರು ನಿರ್ದೇಶನದ ಸತತ ನಾಲ್ಕನೇ ರಿಮೇಕ್ ಚಿತ್ರವಾಗಿದೆ. 2015ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ‘ಅದಿ ಕಪ್ಯಾರೆ ಕೂಟಮಣಿ’ ಚಿತ್ರ ಒಂಬತ್ತು ವರ್ಷಗಳ ಬಳಿಕ ಕನ್ನಡಕ್ಕೆ ಬಂದಿದೆ. ಕಾಲೇಜು ವಿದ್ಯಾರ್ಥಿ ದಿಲೀಪ (ಲಿಖಿತ್ ಶೆಟ್ಟಿ) ಹಾಸ್ಟೆಲ್ ನಿವಾಸಿ. ಅವನು ಪ್ರೇಮಿಸುತ್ತಿರುವ ಶರ್ಮಿಳ ಯಾವುದೋಕಷ್ಟಕ್ಕೆ ಸಿಲುಕಿ ಮತ್ತೊಬ್ಬನನ್ನು ಮದುವೆಯಾಗಬೇಕಾದ ಪರಿಸ್ಥಿತಿ ಬಂದಾಗ, ಅವಳನ್ನು ಆ ಪರಿಸ್ಥಿತಿಯಿಂದಹೊರತರುವುದಾಗಿ ಮಾತು ಕೊಡುತ್ತಾನೆ. ಆಗ, ಆತನ ನೆರವಿಗೆ ಬರುವವಳು ಅಖಿಲಾ (ಅಮೃತಾ ಅಯ್ಯಂಗಾರ್). ಆ ಸಹಾಯಕ್ಕೆ ಬದಲಾಗಿ ದಿಲೀಪ ಅವಳನ್ನು ಹುಡುಗರ ಹಾಸ್ಟೆಲ್ ಒಳಗೆ ಕೆಲವು ನಿಮಿಷಗಳ ಕಾಲ ಕರೆದೊಯ್ಯಬೇಕು ಎಂಬ ಒಪ್ಪಂದ ಏರ್ಪಡುತ್ತದೆ.

ಹೀಗೆ, ಹುಡುಗಿಯೊಬ್ಬಳು ಹುಡುಗರ ಹಾಸ್ಟೆಲ್ ಒಳಗೆ ಸೇರಿಕೊಂಡಾಗ ನಡೆಯುವ ಘಟನೆಗಳು, ಗೊಂದಲ – ಗಡಿಬಿಡಿ, ಆಟ-ಹುಡುಗಾಟವೇ ‘ಅಬ್ಬಬ್ಬ’ ಚಿತ್ರದ ವಸ್ತು. ನಿರ್ದೇಶಕರು ಮೂಲ ಚಿತ್ರಕ್ಕೆ ನಿಷ್ಠರಾಗಿದ್ದು, ಸಂಭಾಷಣೆಗಳೂ ಸೇರಿದಂತೆ, ಬಹುತೇಕ ಎಲ್ಲವನ್ನೂ ಮೂಲಚಿತ್ರದಿಂದ ಪಡೆದುಕೊಂಡಿದ್ದಾರೆ. ‘ಅಬ್ಬಬ್ಬ’ ಎನಿಸುವಂತಹ ಕತೆಯೇನೋ ಇಲ್ಲವಾದ್ದರಿಂದ ಈ ಚಿತ್ರಕ್ಕೆ ಹಾಸ್ಯ ದೃಶ್ಯಗಳೇ ಜೀವಾಳ. ಆದರೆ, ಬಹುತೇಕ ಕಡೆ ಹಾಸ್ಯ ನಗು ತರಿಸದೆ ಹೋಗುವುದು ವಿಪರ್ಯಾಸ. ಬಹುಶಃ ಒಂಬತ್ತು ವರ್ಷಗಳ ಹಿಂದಿನ ಜೋಕ್‌ಗಳು ಪ್ರೇಕ್ಷಕರಿಗೆ ಈಗ ಹಳತು ಎನಿಸುವುದು ಇದಕ್ಕೆ ಕಾರಣವಿರಬಹುದು. ಜೊತೆಗೆ, ಇಲ್ಲಿರುವ ಹಾಸ್ಯ, ಬುದ್ಧಿಗೆ ಕಚಗುಳಿಯಿಡುವ ಹಾಸ್ಯವಲ್ಲ. ಎಲ್ಲವನ್ನೂ ಕೊಂಚ ಅತಿಯಾಗಿಸಿದಾಗ ಹುಟ್ಟುವ, ಸಿಚ್ಯುವೇಶನಲ್ ಕಾಮಿಡಿ. ಇಂತಹ ಹಾಸ್ಯ ಹಗ್ಗದ ಮೇಲಿನ ನಡಿಗೆಯಂತೆ. ಹಾಸ್ಯ ಕೆಲಸ ಮಾಡದೇ ಹೋದಾಗ ಹೆಚ್ಚಿನ ಕತೆಯೇನೂ ಇಲ್ಲದ ಚಿತ್ರದಮೊದಲಾರ್ಧ ದೀರ್ಘವೆನಿಸುತ್ತದೆ.

ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವಾಗ ಕೊಂಚ ಚುರುಕಾಗುತ್ತದೆ ಮತ್ತು ಆಸಕ್ತಿ ಕೆರಳಿಸುತ್ತದೆ. ಕತೆ ತಿರುವು ಪಡೆದುಕೊಂಡು ಹಾರರ್ ಅಂಶ ಸೇರಿಕೊಳ್ಳುತ್ತದೆ ಮತ್ತು ಇದು ಚಿತ್ರಕ್ಕೊಂದು ವೇಗವನ್ನು ಕೊಟ್ಟಿದೆ. ಹಾಸ್ಯ ಪ್ರಧಾನ ಚಿತ್ರವಾದ್ದರಿಂದ ನಾಯಕ ಲಿಖಿತ್ ಶೆಟ್ಟಿ ಸೇರಿದಂತೆ ಇಲ್ಲಿನ ಯುವ ನಟರ ಪಡೆಗೆ ಮಿಂಚುವ ಅವಕಾಶವಿದ್ದರೂ ನೆನಪಿನಲ್ಲಿ ಉಳಿಯುವಂತಹ ನಟನೆ ಮೂಡಿಬಂದಿಲ್ಲ. ಅಮೃತ ಅಯ್ಯಂಗಾರ್ ಅಭಿನಯ ಪರವಾಗಿಲ್ಲ. ಹಿರಿಯ ನಟರಾದ ಶರತ್ ಲೋಹಿತಾಶ್ವ, ವಾರ್ಡನ್ ಪಾತ್ರದಲ್ಲಿ ಮತ್ತು ಅವಿನಾಶ್ ಅವರು ಅಖಿಲಾ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದು, ಅವರಿಗಿರುವ ಅನುಭವ ಚಿತ್ರಕ್ಕೆ ನೆರವಾಗಿದೆ.

ಅಖಿಲಾ ತಾಯಿಯ ಪಾತ್ರದಲ್ಲಿ ಅಭಿನಯಿಸಿರುವ ಸುಧಾ ಬೆಳವಾಡಿ ಎರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಂಡು ಮರೆಯಾಗುತ್ತಾರೆ. ಚಿತ್ರಕ್ಕೆ ದೀಪಕ್ ಅಲೆಕ್ಸಾಂಡರ್ ಸಂಗೀತವಿದ್ದು ಹಾಡುಗಳು ಚಿತ್ರದೊಂದಿಗೆ ಸಮರ್ಪಕವಾಗಿ ಮಿಳಿತವಾಗಿವೆ. ಎಲ್ಲಾ ಹಾಸ್ಟೆಲ್, ಕಾಲೇಜು ಚಿತ್ರಗಳಲ್ಲಿ ಇರುವಂತೆ ಹಾಸ್ಟೆಲ್ ದಿನಗಳನ್ನು ವಿವರಿಸುವ ಶೀರ್ಷಿಕೆ ಗೀತೆ ಮತ್ತು ಅಯ್ಯಯ್ಯೊ ಎಂಬ ಮತ್ತೊಂದು ಹಾಡುಗಳು ಕ್ಯಾಚಿಯಾಗಿವೆ. ಚಿತ್ರದ ಹೊರಗೆ ಎಷ್ಟು ಗಮನಸೆಳೆಯುತ್ತವೋ ಗೊತ್ತಿಲ್ಲ ಆದರೆ, ಚಿತ್ರದೊಳಗೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತವೆ. ಮನೋಹರ್ ಜೋಷಿ ಸಿನಿಮಟೋಗ್ರಫಿ ಉತ್ತಮವಾಗಿದೆ.

ಇದೇ ಚಿತ್ರ ತಮಿಳು ಭಾಷೆಯಲ್ಲೂ ‘ಹಾಸ್ಟೆಲ್’ ಹೆಸರಿನಲ್ಲಿ ರಿಮೇಕ್ ಆಗಿ ಎರಡು ವರ್ಷದ ಹಿಂದೆಯೇ ಬಿಡುಗೆಯಾಗಿತ್ತು. ಅಲ್ಲಿ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈಗಿನ ಓಟಿಟಿ ಕಾಲದಲ್ಲಿ, ಪರಭಾಷೆಯ ಎಲ್ಲಾ ಚಿತ್ರಗಳು ಡಬ್ ಆಗಿ ಸಿಗುತ್ತಿರುವಾಗ, ರಿಮೇಕ್ ಎಂಬ ಪರಿಕಲ್ಪನೆ ನಿಧಾನವಾಗಿ ಮರೆಯಾಗುತ್ತಿದೆ ಎಂಬುದು ಸುಳ್ಳಲ್ಲ. ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ‘ಅಬ್ಬಬ್ಬ’ ಚಿತ್ರದ ಮೂಲ ಸಿನಿಮಾ ಕನ್ನಡಿಗರಿಗೆ ಹೆಚ್ಚು ಪರಿಚಿತವಲ್ಲ ಎಂಬುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಬಹುದು. ಆದರೆ, ಇದನ್ನು ಹೊಸ ಚಿತ್ರವಾಗಿಯೇ ನೋಡುವ ಪ್ರೇಕ್ಷಕರನ್ನಾದರೂ ನಗಿಸುವಂತೆ, ಯುವ ಪೀಳಿಗೆಯನ್ನು ಸೆಳೆಯುವಂತೆ ಇಲ್ಲಿನ ಹಾಸ್ಯ ಕೆಲಸ ಮಾಡುತ್ತದೆಯೇ ಎಂಬುದು ಕೊಂಚ ಅನುಮಾನ.

LEAVE A REPLY

Connect with

Please enter your comment!
Please enter your name here