ಹಿರಿಯ ನಟ ಅನಂತ್‌ ನಾಗ್‌ ಮತ್ತು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ರಿಕ್ಕಿ ಕೇಜ್‌ ಅವರು ಕನ್ನಡಪ್ರಭ ‘ಅಸಾಮಾನ್ಯ ಕನ್ನಡಿಗರು’ ಗೌರವಕ್ಕೆ ಭಾಜನರಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಸಾಧಕರನ್ನು ಸಮಾರಂಭದಲ್ಲಿ ಗೌರವಿಸಲಾಗಿದೆ.

ಕನ್ನಡಪ್ರಭ – ಏಷ್ಯಾನೆಟ್‌ ಸುವರ್ಣನ್ಯೂಸ್‌ ನೆಟ್‌ವರ್ಕ್‌ ಏರ್ಪಡಿಸುವ ಕರುನಾಡಿನ ‘ಅಸಾಮಾನ್ಯ ಕನ್ನಡಿಗರು’ ಪ್ರಶಸ್ತಿಗೆ ಹಿರಿಯ ನಟ ಅನಂತ್‌ ನಾಗ್‌ ಮತ್ತು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ಸಂಗೀತ ಸಂಯೋಜಕ ರಿಕ್ಕಿ ಕೇಜ್‌ ಅವರು ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ರಕ್ಷಿತ್ ಶೆಟ್ಟಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಶುಕ್ರವಾರ (ಅ.13) ಹೋಟೆಲ್ ಲಲಿತ್ ಅಶೋಕದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಸಾಧಕರನ್ನು ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಗೆ ಮತ್ತು ಈಗಾಗಲೇ ದೇಶ ವಿದೇಶಗಳಲ್ಲಿ ಕನ್ನಡ ನಾಡಿಗೆ ಹಿರಿಮೆ – ಗರಿಮೆ ತಂದು ಕೊಟ್ಟು ಖ್ಯಾತರಾದ, ಹಲವಾರು ಸನ್ಮಾನಗಳಿಗೆ ಭಾಜನರಾದ ಸಾಧಕರಿಗೆ ‘ವಿಶೇಷ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ನಟ ರಕ್ಷಿತ್‌ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ‘ಅನಂತನಾಗ್‌ ಅವರಂತಹ ಮೇರು ನಟನಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ನನ್ನ ಸೌಭಾಗ್ಯ’ ಎಂದಿದ್ದಾರೆ. ರಕ್ಷಿತ್‌ ಶೆಟ್ಟಿ ಅವರು, ‘ನಾನು ನಟನೆಗೆ ಬರಲು ಸ್ಪೂರ್ತಿಯೇ ಅನಂತನಾಗ್‌ ಸರ್‌. ಈ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ಉಂಟುಮಾಡಿದೆ. ಪ್ರತಿ ನಾಯಕನಿಗೂ ಮತ್ತೊಬ್ಬ ನಾಯಕ ಪ್ರೇರಣೆಯಾಗಿರುತ್ತಾನೆ. ಅದರಂತೆ ಅನಂತ್‌ನಾಗ್‌ ಸರ್‌ ನಾನು ನಟನೆಗೆ ಬರಲು ಪ್ರೇರಣೆಯಾದವರು. ಅಂಥವರಿಗೆ ನನ್ನಿಂದ ಪ್ರಶಸ್ತಿ ಪ್ರದಾನ ಮಾಡಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿ. 70 – 80ರ ದಶಕದ ಚಲನಚಿತ್ರಗಳಲ್ಲಿ ಅನಂತನಾಗ್‌ ಸರ್ ಅವರ ನಟನೆಯನ್ನು ಈಗಲೂ ಅನಾಯಸವಾಗಿ, ಯಾವುದೇ ಕಿರಿಕಿರಿ ಅನುಭವಿಸದೆ ವೀಕ್ಷಿಸಬಹುದಾಗಿದೆ. ಅಂತಹ ನಟನಿಗೆ ಹಾಗೂ ತೆರೆಮರೆಯ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವ ಈ ಕಾರ್ಯ ಶ್ಲಾಘನೀಯ’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here