ರಾಮ್‌ ಗೋಪಾಲ್‌ ವರ್ಮಾ ಮತ್ತೊಂದು ವಿವಾದಾತ್ಮಕ ತೆಲುಗು ಚಿತ್ರದೊಂದಿಗೆ ಮರಳಿದ್ದಾರೆ. ಅವರ ನಿರ್ದೇಶನದ ‘ವ್ಯೂಹಂ’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗೆಯಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಜೀವನದ ಕೆಲವು ನೈಜ ಘಟನೆಗಳನ್ನು ಆಧರಿಸಿದ ಚಿತ್ರವಿದು. ‘ವ್ಯೂಹಂ’ ನವೆಂಬರ್‌ 10ರಂದು ತೆರೆಕಾಣಲಿದೆ.

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ‘ವ್ಯೂಹಂ’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಜೀವನದ ಕೆಲವು ನೈಜ ಘಟನೆಗಳನ್ನಾಧರಿಸಿ ತಯಾರಾಗಿರುವ ಸಿನಿಮಾದಲ್ಲಿ ಜಗನ್‌ ಮೋಹನ್‌ ರೆಡ್ಡಿ ಪಾತ್ರದಲ್ಲಿ ಅಜ್ಮಲ್‌ ಅಮೀರ್‌, ಮಾನಸಾ ರಾಧಾಕೃಷ್ಣನ್ ಅವರು ಜಗನ್‌ ಪತ್ನಿ ಭಾರತಿ ರೆಡ್ಡಿ ಪಾತ್ರದಲ್ಲಿ ಹಾಗೂ ಧನಂಜಯ್‌ ಪ್ರಭು ಅವರು ಚಂದ್ರಬಾಬು ನಾಯ್ಡು ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಜಗನ್‌ ಮೋಹನ್‌ ಪಾದಯಾತ್ರೆಯನ್ನು ತಡೆಯಲು ಚಂದ್ರಬಾಬು ಮಾಡುವ ಪ್ರಯತ್ನ, ‘ನಿಮ್ಮ ಯಾತ್ರೆಯನ್ನು ತಕ್ಷಣ ನಿಲ್ಲಿಸಿ’ ಎಂದು ಸೋನಿಯಾ ಗಾಂಧಿ ಆದೇಶ ಹೊರಡಿಸುವುದು, ಜಗನ್‌ ಮೋಹನ್‌ ಆಂದ್ರದ ಮುಖ್ಯಮಂತ್ರಿ ಆಗುವುದನ್ನು ನಿರಾಕರಿಸುವ ಪವನ್‌ ಕಲ್ಯಾಣ್‌, ಎಲ್ಲವನ್ನೂ ಮೆಟ್ಟಿ ಅಧಿಕಾರ ಸ್ವೀಕರಿಸಿ ಆಡಳಿತ ಮಾಡುವ ಜಗನ್‌ ಮೋಹನ್‌ ರೆಡ್ಡಿ ಬಂಧಿಯಾಗಿ ಜೈಲಿಗೆ ಹೋಗುವ ದೃಶ್ಯಗಳು ಕಾಣಿಸುತ್ತವೆ.

‘ಇದುವರೆಗೂ ಜಗನ್‌ ಎಂದರೆ ವೈ ಎಸ್‌ ರಾಜಶೇಖರ್‌ ಮಗ ಎಂಬುದು ಮಾತ್ರ ಜನರಿಗೆ ತಿಳಿದಿತ್ತು. ಆದರೆ ಈ ಪಾದಯಾತ್ರೆಯಿಂದ ಜಗನ್‌ ಏನೆಂದು ಜನರಿಗೆ ತಿಳಿಯುವುದು’ ಎಂದು ಜಗನ್‌ ಮೋಹನ್‌ ರೆಡ್ಡಿ ಪತ್ನಿ ಭಾರತಿ ರೆಡ್ಡಿ ಟ್ರೇಲರ್‌ನಲ್ಲಿ ಹೇಳಿದ್ದಾರೆ. ‘ನಾನು ಸಿಎಂ ಆಗದಿದ್ದರೂ ಸರಿ, ಆದರೆ ಆ ಜಗನ್‌ ಮಾತ್ರ ಸಿಎಂ ಆಗಬಾರದು’ ಎಂದು ಪವನ್‌ ಕಲ್ಯಾಣ್‌ ಹೇಳುವ ಸಂಭಾಷಣೆಗಳು ಟ್ರೇಲರ್‌ನಲ್ಲಿ ಮೂಡಿಬಂದಿವೆ. ಚಿತ್ರದ ಟ್ರೇಲರ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರಿಂದ ವಿರೋಧವೂ ವ್ಯಕ್ತವಾಗುತ್ತಿದ್ದು, ರಾಮ್‌ ಗೋಪಾಲ್‌ ವರ್ಮಾಗೆ ಬೆದರಿಕೆ ಕರೆಗಳು ಕೂಡಾ ಬರುತ್ತಿವೆಯಂತೆ. ‘ನಾನು ಯಾವುದಕ್ಕೂ ಹೆದರುವುದಿಲ್ಲ’ ಎಂದು ವರ್ಮಾ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾ 2 ಭಾಗಗಳಲ್ಲಿ ತಯಾರಾಗುತ್ತಿದ್ದು, ದಾಸರಿ ಕಿರಣ್‌ ಕುಮಾರ್‌ ನಿರ್ಮಿಸಿದ್ದಾರೆ. ಸಿನಿಮಾ ನವೆಂಬರ್‌ 10, 2023ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಮುಂದುವರೆದ ಭಾಗ ‘ಶಪಥಂ’ ಜನವರಿ 25, 2024ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here