‘ಫ್ರೆಂಡ್ಸ್‌’ Sitcom ಸರಣಿ ಖ್ಯಾತಿಯ ಹಾಲಿವುಡ್‌ ನಟ ಮ್ಯಾಥ್ಯು ಪೆರ್ರಿ ಅಗಲಿದ್ದಾರೆ. ‘ಫ್ರೆಂಡ್ಸ್’ ಸರಣಿಯಲ್ಲಿನ ಚಾಂಡ್ಲರ್ ಬಿಂಗ್ ಪಾತ್ರಕ್ಕಾಗಿ ಅವರಿಗೆ ‘ಸ್ಕ್ರೀನ್ ಆಕ್ಟರ್ಸ್ ಗಿಲ್ಡ್’ ಪ್ರಶಸ್ತಿ ಸಂದಿದೆ. ‘ಫೂಲ್ಸ್ ರಶ್ ಇನ್’, ‘ಆಲ್ಮೋಸ್ಟ್ ಹೀರೋಸ್’, ‘ದಿ ಹೋಲ್ ನೈನ್ ಯಾರ್ಡ್ಸ್’, ‘ದಿ ಹೋಲ್ ಟೆನ್ ಯಾರ್ಡ್ಸ್’, ‘ದಿ ರಾನ್ ಕ್ಲಾರ್ಕ್ ಸ್ಟೋರಿ’, ’17 ಎಗೇನ್’ ಅವರ ಕೆಲವು ಪ್ರಮುಖ ಸಿನಿಮಾಗಳು.

ಹಾಲಿವುಡ್‌ ನಟ ಮ್ಯಾಥ್ಯು ಪೆರ್ರಿ (54) ನಿಧನರಾಗಿದ್ದಾರೆ. ಅಮೆರಿಕದ ಜನಪ್ರಿಯ ಟೆಲಿವಿಷನ್​ ಸೀರಿಸ್​ ‘ಫ್ರೆಂಡ್ಸ್​’ (Friends) ಮೂಲಕ ಜನಪ್ರಿಯತೆ ಪಡೆದಿದ್ದ ಅವರು ಶನಿವಾರ (ಅ.28, 2023) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಲಾಸ್ ಏಂಜಲೀಸ್‌ನ ಅವರ ನಿವಾಸದಲ್ಲಿ ಪೆರ್ರಿ ಕೊನೆಯುಸಿರೆಳೆದಿದ್ದು, ಅವರಿಗೆ ಹೃದಯಾಘಾತ ಆಗಿರಬಹುದು ಎಂದು ಹೇಳಲಾಗುತ್ತಿದೆ. ನಟನ ಸಾವಿನ ಬಗ್ಗೆ ಕೆಲವು ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆಯ ಬಳಿಕ ಸ್ಪಷ್ಟ ಚಿತ್ರಣ ಸಿಗಬೇಕಿದೆ. ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ‘ಫೂಲ್ಸ್​ ರಶ್​ ಇನ್​’, ‘ದಿ ಹೋಲ್​ ನೈನ್​ ಯಾರ್ಡ್ಸ್​’ ಸೇರಿದಂತೆ ಒಂದಷ್ಟು ಹಾಲಿವುಡ್​ ಸಿನಿಮಾಗಳಲ್ಲಿ ಅವರು ಅಭಿನಯಿಸಿ, ವಿಶ್ವಾದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. 10 ಸೀಸನ್‌ಗಳಲ್ಲಿ ‘ಫ್ರೆಂಡ್ಸ್’ ಸೀರಿಸ್ ಪ್ರಸಾರವಾಗಿತ್ತು. ಅದರಲ್ಲಿ ಮ್ಯಾಥ್ಯು ಪೆರಿ ನಿರ್ವಹಿಸಿದ್ದ ‘Chandler Bing’ ಪಾತ್ರ ಜನಪ್ರಿಯತೆ ಗಳಿಸಿತ್ತು. ಅಮೆರಿಕದ ಕಿರುತೆರೆ ಲೋಕದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಆ ಮೂಲಕ ವಿಶ್ವಾದ್ಯಂತ ಅವರು ಖ್ಯಾತಿ ಪಡೆದಿದ್ದರು.

ಮ್ಯಾಥ್ಯು ಪೆರ್ರಿ ಮತ್ತು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಶಾಲಾ ಸ್ನೇಹಿತರಾಗಿದ್ದರು. ತಮ್ಮ ಸ್ನೇಹಿತನ ಸಾವಿನ ಸುದ್ದಿ ಇವರಿಗೆ ಆಘಾತವನ್ನುಂಟುಮಾಡಿದೆ. ಈ ಕುರಿತು ಕೆನಡಾ PM ತಮ್ಮ X ನಲ್ಲಿ, ‘ಮ್ಯಾಥ್ಯೂ ಪೆರ್ರಿ ಅವರ ನಿಧನವು ಅತ್ಯಂತ ಆಘಾತಕಾರಿ ಹಾಗೂ ದುಃಖಕರವಾಗಿದೆ. ನಾವು ಶಾಲೆಯ ಅಂಗಳದಲ್ಲಿ ಆಡುತ್ತಿದ್ದ ಆಟಗಳು ಇಂದಿಗೂ ನನಗೆ ನೆನಪಿವೆ. ಪ್ರಪಂಚದಾದ್ಯಂತದ ಜನರು ಮುಖದಲ್ಲಿ ಅವರು ಮೂಡಿಸಿದ್ದ ನಗುವನ್ನು ಎಂದಿಗೂ ಮರೆಯಲಾಗುವುದಿಲ್ಲ. ಆ ಎಲ್ಲಾ ನಗುವಿಗಾಗಿ ನಿಮಗೆ ಧನ್ಯವಾದಗಳು ಮ್ಯಾಥ್ಯೂ. ನೀವು ಎಲ್ಲರಿಂದಲೂ ಪ್ರೀತಿಸಲ್ಪಟ್ಟಿದ್ದೀರಿ’ ಎಂದು ಬರೆದಿದ್ದಾರೆ.

ಆಗಸ್ಟ್ 19, 1969ರಲ್ಲಿ ಜನಿಸಿದ ಮ್ಯಾಥ್ಯು ಅಮೇರಿಕನ್ ಮತ್ತು ಕೆನಡಾ ನಟ ಮತ್ತು ನಿರ್ಮಾಪಕ. ಅವರು 1990ರ ದಶಕದಲ್ಲಿ ಎನ್‌ಬಿಸಿ ಟೆಲಿವಿಷನ್ ಸಿಟ್‌ಕಾಮ್ ‘ಫ್ರೆಂಡ್ಸ್’ನಲ್ಲಿ (1994-2004) ಚಾಂಡ್ಲರ್ ಬಿಂಗ್ ಪಾತ್ರಕ್ಕಾಗಿ ‘ಸ್ಕ್ರೀನ್ ಆಕ್ಟರ್ಸ್ ಗಿಲ್ಡ್’ ಪ್ರಶಸ್ತಿ ಪಡೆದಿದ್ದಾರೆ. ಮ್ಯಾಥ್ಯು ದೂರದರ್ಶನ ಸರಣಿ ‘ಸ್ಟುಡಿಯೋ 60 ಆನ್ ದಿ ಸನ್‌ಸೆಟ್ ಸ್ಟ್ರಿಪ್’, ಮತ್ತು ‘ಫೂಲ್ಸ್ ರಶ್ ಇನ್’, ‘ಆಲ್ಮೋಸ್ಟ್ ಹೀರೋಸ್’, ‘ದಿ ಹೋಲ್ ನೈನ್ ಯಾರ್ಡ್ಸ್’, ‘ದಿ ಹೋಲ್ ಟೆನ್ ಯಾರ್ಡ್ಸ್’, ‘ದಿ ರಾನ್ ಕ್ಲಾರ್ಕ್ ಸ್ಟೋರಿ’, ಮತ್ತು ’17 ಎಗೇನ್’ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 2010 ರಲ್ಲಿ ‘ಫಾಲ್ ಔಟ್:ನ್ಯೂ ವೇಗಾಸ್’ ವಿಡಿಯೋ ಗೇಮ್‌ನಲ್ಲಿ ತಮ್ಮ ಧ್ವನಿ ನೀಡಿದ್ದಾರೆ. ವಿಶ್ವಾದ್ಯಂತ ಸಿನಿಗಣ್ಯರು ಮತ್ತು ಸ್ನೇಹಿತರು ಮತ್ತು ಅವರ ಅಭಿಮಾನಿಗಳು ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here