ಹಲವಾರು ಆಸಕ್ತಿದಾಯಕ ಅಂಶಗಳನ್ನು ಸ್ಪರ್ಶಿಸುವ ಈ ಚಿತ್ರ ಎಲ್ಲೂ ಒಂದು ಕ್ಷಣ ನಿಂತು, ಕಥೆ ಹೇಳುವುದಿಲ್ಲ. ಆವರಣದ ವಿಸ್ತಾರ ಕಥೆಗೆ ಬೇಕಾದ ಆಳವನ್ನು ಕಿತ್ತುಕೊಂಡಿದೆ. ಈ ಮಿತಿಗಳಾಚೆಗೂ ನನಗೆ ಈ ವಸ್ತುವಿನ ಚಿತ್ರಗಳು ಆಸಕ್ತಿ ಹುಟ್ಟಿಸುತ್ತವೆ. – ‘Here Today’ ಇಂಗ್ಲಿಷ್‌ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಚಿತ್ರ ಶುರುವಾಗುವಾಗ ವೃದ್ಧನೊಬ್ಬ ಕನ್ನಡಿಯಲ್ಲಿ ತನ್ನ ಮುಖವನ್ನು ತಾನೇ ಗಮನವಿಟ್ಟು ನೋಡುತ್ತಾ, ನೋಡಿದ್ದನ್ನು ನೆನಪಿನ ಫೈಲ್ ಒಂದರಲ್ಲಿ ದಾಖಲಿಸುತ್ತಾ, ಮುಖ ತೊಳೆಯುತ್ತಿರುತ್ತಾನೆ. ಆಮೇಲೆ ಸಿದ್ಧವಾಗಿ ಮನೆಯಿಂದ ಹೊರಟು, ಬಾಯಲ್ಲಿ ‘ಲೆಫ್ಟ್’ ಎಂದು ಹೇಳಿಕೊಳ್ಳುತ್ತಾ ಎಡಕ್ಕೆ ತಿರುಗುತ್ತಾನೆ. ಎದುರಿಗೆ ಒಂದು ‘ಸ್ಟಾಪ್’ ಸಿಗ್ನಲ್ ಕಾಣಿಸುವವರೆಗೂ ನಡೆದು, ‘ಸ್ಟಾಪ್, ಲೆಫ್ಟ್’ ಎಂದುಕೊಂಡು ತಿರುಗುತ್ತಾನೆ. ಹಾಗೇ ನಡೆಯುತ್ತಾ ಗೋಡೆಯ ಮೇಲೆ ಬರೆದ ಚಿತ್ರಗಳನ್ನು ಒಂದೊಂದಾಗಿ ಎಣಿಸುತ್ತಾ ಮುಂದೆ ಸಾಗುತ್ತಾನೆ. ಆಫೀಸಿನ ಲಿಫ್ಟ್ ಹತ್ತಿ ಮೇಲೆ ಬರುವಾಗ ಅವನ ಚಿತ್ತದೊಳಗಿಂದ ಚಿಮ್ಮಿ ಹೊರಬಂದ ಪೊಲೀಸ್ ಆಕೃತಿಯೊಂದು, ‘ಚಾರ್ಲಿ ಬರ್ನ್ಸ್ ನೀನೇನಾ? ನೀನೇನಾ ಚಾರ್ಲಿ ಬರ್ನ್ಸ್?’ ಎಂದು ಕೇಳುತ್ತದೆ. ಇವನು ಬಲವಂತವಾಗಿ ಆ ಚಿತ್ರವನ್ನು ನಿವಾರಿಸಿಕೊಳ್ಳುತ್ತಾನೆ. ಆಫೀಸಿನಲ್ಲಿ ಅಂದಿನ ಮೀಟಿಂಗ್ ಮರೆತಿರುತ್ತಾನೆ. ಇದೆಲ್ಲಾ ನೋಡುವಾಗ ನಮಗೆ ಅವನಿಗೆ ಏನೋ ಸಮಸ್ಯೆ ಇದೆ ಎನ್ನುವುದು ನಿಧಾನವಾಗಿ ತಿಳಿದುಬರುತ್ತದೆ.

ಆತ ಚಾರ್ಲಿ ಬರ್ನ್ಸ್. ಒಂದು ಕಾಲದ ಯಶಸ್ವೀ ಬರಹಗಾರ, ನಾಟಕಕಾರ, ಟಿವಿಯ ಅನೇಕ ಯಶಸ್ವಿ ಹಾಸ್ಯ ಕಾರ್ಯಕ್ರಮಗಳ ಬರಹಗಾರ. ಆ ಟಿವಿ ಚಾನೆಲ್‌ನಲ್ಲಿ ಹಾಸ್ಯಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆ, ಅದು ತೆಗೆದುಕೊಳ್ಳುವ ನಿಲುವುಗಳ ಬಗ್ಗೆ ಅವನೊಂದು ತರಹ ಸಾಕ್ಷಿಪ್ರಜ್ಞೆ. ಹೆಂಡತಿ ತೀರಿಕೊಂಡಿದ್ದಾಳೆ. ಮಗ, ಮಗಳು ತಮ್ಮ ತಮ್ಮ ಜೀವನದಲ್ಲಿ ವ್ಯಸ್ತರಾಗಿದ್ದಾರೆ. ಮಗನಾದರೂ ವಾರಕ್ಕೊಮ್ಮೆ ಅಪ್ಪನನ್ನು ಭೇಟಿಮಾಡಿ, ಅವನೊಡನೆ ಟೆನಿಸ್ ಆಡುತ್ತಿರುತ್ತಾನೆ, ಮಗಳು ಅಪ್ಪನೊಡನೆ ಮಾತನಾಡುವುದಕ್ಕೂ ಹಿಂಜರೆಯುತ್ತಾಳೆ. ಅಂದು ಮಗನೊಡನೆ ಆಟವಾಡಿದ ನಂತರ, ಮಗ ಹೊರಟ ಮೇಲೂ, ಚಾರ್ಲಿ ಬರ್ನ್ಸ್ ಕ್ಲಬ್ಬಿನ ಲಾಕರ್ ರೂಮಿನ ಬೆಂಚಿನ ಮೇಲೆ ವಿಷಣ್ಣನಾಗಿ ಕುಳಿತೇ ಇದ್ದಾನೆ. ಅವನಿಗೆ ತನ್ನ ಲಾಕರ್ ನಂಬರ್ ಮರೆತು ಹೋಗಿದೆ. ಅವನ ಡಾಕ್ಟರ್ ಹೇಳಿದ ಹಾಗೆ ಅವನು ದಿನನಿತ್ಯದ ಒಂದು ಗೊತ್ತಾದ ರೊಟೀನ್ ಅನುಸರಿಸುತ್ತಿದ್ದಾನೆ, ಅದೇ ರಸ್ತೆಯನ್ನುಬಳಸುತ್ತಾನೆ, ಮಾತ್ರೆ ತೆಗೆದುಕೊಳ್ಳುತ್ತಾನೆ, ವ್ಯಾಯಾಮ ಮಾಡುತ್ತಾನೆ, ಸರಿಯಾಗಿ ಊಟತಿಂಡಿ ಮಾಡುತ್ತಾನೆ, ಆದರೂ…

‘ಬರಹಗಾರನೊಡನೆ ಒಂದು ಊಟ’ ಎನ್ನುವ ಯಾವುದೋ ಚಾರಿಟಿ ಹರಾಜಿನಲ್ಲಿ ಈತನನ್ನು ಬಿಡ್ ಮಾಡಿ ಗೆದ್ದಾತನೊಡನೆ ಊಟಮಾಡಲು ಬಂದ ಚಾರ್ಲಿಗೆ ಅಲ್ಲಿ ಸಿಗುವವಳು ಎಮ್ಮಾ ಪೇಜ್. ಸಬ್ ವೇಗಳಲ್ಲಿ ಪ್ರದರ್ಶನ ನೀಡುವ ಬ್ಯಾಂಡ್ ಒಂದರ ಹಾಡುಗಾರ್ತಿ. ಆಕೆಯ ಮಾಜಿ ಗೆಳೆಯ ಒಬ್ಬ ಚಾರ್ಲ್ಸ್ ಅಭಿಮಾನಿ, ಅವನು ಆ ಬಿಡ್ ಮಾಡಿರುತ್ತಾನೆ. ಈಗ ಇಬ್ಬರೂ ದೂರಾಗಿರುವುದರಿಂದ ಅವನ ಬದಲಾಗಿ ಆಕೆ ಇಲ್ಲಿಗೆ ಬಂದಿದ್ದಾಳೆ. ಅಲ್ಲಿ ಸೀಫುಡ್ ತಿಂದ ಅವಳಿಗೆ ಅಲರ್ಜಿಯಾಗಿ ಮುಖ ಊದಿಕೊಂಡು, ಇವನೇ ಅವಳನ್ನುಆಸ್ಪತ್ರೆಗೆ ಸೇರಿಸುವುದಲ್ಲದೆ, ಅದರ ಖರ್ಚೆಲ್ಲವನ್ನೂ ಭರಿಸುತ್ತಾನೆ. ಹಾಗೆ ಶುರುವಾದ ಅವರ ಸಂಬಂಧ ನಿಧಾನವಾಗಿ ಸ್ನೇಹವಾಗಿ ಬದಲಾಗುತ್ತದೆ. ಅವನ ಮರೆಯುವಿಕೆಗೆ ಅವನು ತಮಾಷೆ ಮಾಡಿ ಕಾರಣ ಹೇಳುವುದನ್ನು ಮೀರಿ, ಇನ್ನೇನೋ ಇದೆ ಎಂದು ಪರಿಚಯದ ಕೆಲವೇ ದಿನಗಳಲ್ಲಿ ಅವಳು ಗುರುತಿಸುತಾಳೆ. ಅವನನ್ನು ಘಟ್ಟಿಸಿ ಕೇಳುತ್ತಾಳೆ.

ಅದುವರೆಗೂ ತುಂಬಿಕೊಂಡ ಹೆದರಿಕೆಯ ತೆರೆಗಳನ್ನು ಸರಿಸಿ ಚಾರ್ಲಿ ಅದನ್ನು ಒಪ್ಪಿಕೊಳ್ಳುತ್ತಾನೆ. ಹೇಗೆ ಮೊದಮೊದಲಿಗೆ ಸಣ್ಣಸಣ್ಣ ಮರೆವು ಪ್ರಾರಂಭವಾಯಿತು ಎಂದು ಹೇಳುತ್ತಾ, ಅದು ತಾರಕಕ್ಕೆ ಹೋದ ಒಂದು ಪ್ರಸಂಗವನ್ನು ಹೇಳುತ್ತಾನೆ. ’ಅವನು ನನ್ನ ಎದುರಿನ ಕುರ್ಚಿಯಲ್ಲಿ ಕುಳಿತಿದ್ದ. ಮಾತನಾಡುತ್ತಲೇ ಇದ್ದ. ನನಗೆ ಆತ ಯಾರೆಂಬುದು ಗೊತ್ತಾಗುತ್ತಿಲ್ಲ. ಅವನೋ ಜೋಕ್ ಮೇಲೆ ಜೋಕ್ ಮಾಡುತ್ತಾ, ನಗುತ್ತಿದ್ದಾನೆ. ನಾನು ಪ್ಯಾನಿಕ್ ಆಗತೊಡಗಿದೆ. ಅವನ್ಯಾರೆಂಬುದು ನನಗೆ ನೆನಪಾಗಲೇ ಇಲ್ಲ…’ ಅವನು ನಿಧಾನವಾಗಿ ಹೇಳುತ್ತಾನೆ. ‘ಯಾರವನು?’ ಎಮ್ಮಾ ಕೇಳುತ್ತಾಳೆ. ‘ನನ್ನ ಮಗ…’ ಎಂದು ಹೇಳುವುದು ಅವನೆಲ್ಲಾ ನೋವು, ವಿಷಾದ, ಹೆದರಿಕೆಗಳು ಹರಳುಗಟ್ಟುವ ಸಂದರ್ಭ. ಆದರೆ ಚಿತ್ರದಲ್ಲಿ ಅದೊಂದು ಪೇಲವವಾದ ಮಾತಾಗಿ ಮುಗಿದು ಹೋಗುತ್ತದೆ. ಆ ಸನ್ನಿವೇಶಕ್ಕೆ ಬೇಕಾದ ಯಾವುದನ್ನೂ ಆ ದೃಶ್ಯ ಹೊಂದಿಲ್ಲ.

ಡಿಮೆನ್ಶಿಯಾ ಒಂದು ಅನೇಕ ಸಾಧ್ಯತೆಗಳ ವಸ್ತು. ಈ ವಿಷಯದ ಮೇಲೆ ಅನೇಕ ಚಿತ್ರಗಳು ಬಂದಿವೆ. ಈ ಕ್ಷಣಕ್ಕೆ ನೆನಪು ಮಾಡಿಕೊಂಡು ಹೇಳುವುದಾದರೆ, ಇಂಗ್ಲೀಷಿನಲ್ಲಿ ನೋಟ್ ಬುಕ್, ಏಜ್ ಓಲ್ಡ್ ಫ್ರೆಂಡ್ಸ್, ಐರಿಸ್ : ಎ ಮೆಮೋಯರ್ ಆಫ್ ಐರಿಸ್ ಮುರ್ಡೋಕ್, ಅವೇ ಫ್ರಂ ಹರ್ ಮತ್ತು ಎ ಸಾಂಗ್ ಫಾರ್ ಮಾರ್ಟಿನ್ ಎನ್ನುವ ಸ್ವೀಡಿಶ್ ಚಿತ್ರ, ಫೈರ್ ಫ್ಲೈ ಡ್ರೀಮ್ಸ್ ಎನ್ನುವ ಜಪಾನ್ ಭಾಷೆಯ ಚಿತ್ರ ನೆನಪಾದರೆ, ನನ್ನನ್ನು ಕಂಗೆಡಿಸುವಂತೆ ಕಾಡಿದ ನಾಟಕ, ದ ಫಾದರ್. ಇದರಲ್ಲಿನ ನಾಸಿರುದ್ದೀನ್ ಶಾ ಅಭಿನಯಕ್ಕೆ ಮನಸ್ಸು ಶರಣಾಗುತ್ತದೆ. ಡಿಮೆನ್ಶಿಶಿಯಾದ ಎದುರಲ್ಲಿ ತನ್ನ ಘನತೆ ಕಾಪಾಡಿಕೊಳ್ಳಲು ವೃದ್ಧನೊಬ್ಬ ನಡೆಸುವ ಹೋರಾಟದ ಎಳೆಎಳೆಯಾದ ಚಿತ್ರಣ ಇಲ್ಲಿ ಕಂಡುಬರುತ್ತದೆ. ಇದು ಈಗ ಚಿತ್ರವಾಗಿ ಬಂದಿದ್ದರೂ ಯಾಕೋ ನೋಡಬೇಕು ಅನ್ನಿಸುತ್ತಿಲ್ಲ. ಅರೆ, ನಾಸಿರುದ್ದೀನ್ ಮಾಡಿದ ಪಾತ್ರವನ್ನು ಇನ್ಯಾರು ಇನ್ನೂ ಚೆನ್ನಾಗಿ ಮಾಡಿಯಾರು ಎನ್ನುವ ಅಹಂ ಕೂಡ ಅದಕ್ಕೆ ಕಾರಣವಿರಬಹುದು!

ಇನ್ನು ಭಾರತೀಯ ಭಾಷೆಯಲ್ಲಿ ಈ ಬಗ್ಗೆ ಬಂದಿರುವ ಚಿತ್ರಗಳನ್ನು ನೋಡುವುದಾದರೆ ಮೊದಲು ನನಗೆ ನೆನಪಾಗುವ ಚಿತ್ರಗಳು ಮರಾಠಿಯ ಅಸ್ತು, ಸ್ಮೈಲ್ ಪ್ಲೀಸ್, ನಮ್ಮ ಗೋದಿಬಣ್ಣ ಸಾಧಾರಣ ಮೈಕಟ್ಟು, ತಮಿಳಿನ ಓ ಕಾದಲ್ ಕಣ್ಮಣಿ, ಮಲಯಾಳಂನ ತನ್ಮಾತ್ರ ಇತ್ಯಾದಿ. ಅಸ್ತು ಚಿತ್ರದಲ್ಲಿ ಮೋಹನ್ ಅಗಾಶೆ ಇದೇ ಸಮಸ್ಯೆಯಲ್ಲಿರುತ್ತಾರೆ. ಆದರೆ ಅವರಿಗೆ ಅದರ ಅರಿವಿರುವುದಿಲ್ಲ. ಅವರು ಮರೆವಿನ ಲೋಕವನ್ನು ಸಂಪೂರ್ಣವಾಗಿ ಸೇರಿರುತ್ತಾರೆ. ಆದರೆ ಸ್ಮೈಲ್ ಪ್ಲೀಸ್ ಹಾಗಲ್ಲ. ಅಲ್ಲಿ ನಂದಿನಿಗೆ ಈ ಸಮಸ್ಯೆ ನಿಧಾನವಾಗಿ ತನ್ನನ್ನು ಆವರಿಸಿಕೊಳ್ಳುವುದರ ಅರಿವಿರುತ್ತದೆ. ಅದಕ್ಕೆ ಆಕೆ ಚಿಕಿತ್ಸೆ ತೆಗೆದುಕೊಳ್ಳುತ್ತಿರುತ್ತಾರೆ. ಅವರ ಮನೆಗೆ ಅತಿಥಿಯಾಗಿ ಬರುವ ಹುಡುಗನೊಬ್ಬ ಅವರಿಗೆ ಸ್ನೇಹಿತನಾಗಿ ನಿಲ್ಲುತ್ತಾನೆ.

ಗೋದಿಬಣ್ಣದಲ್ಲಿ ಅನಂತನಾಗ್ ಡಿಮೆನ್ಶಿಯಾ ಪೀಡಿತರಾಗಿದ್ದರೆ, ಗಿಲ್ಟ್ ಹೊತ್ತ ಅವರ ಮಗನಾಗಿ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಕಾದಲ್ ಕಣ್ಮಣಿ ಡಿಮೆನ್ಶಿಯಾದಿಂದ ಪೀಡಿತರಾದವರನ್ನು ನೋಡಿಕೊಳ್ಳುವವರ ತುಮುಲವನ್ನೂ ಕಟ್ಟಿಕೊಡುತ್ತದೆ. ಆದರೆ ತನ್ಮಾತ್ರ ಎನ್ನುವ ಚಿತ್ರ ಇವೆಲ್ಲಕ್ಕಿಂತ ಭಿನ್ನವಾಗಿದೆ. ಇದು ನಿಧಾನವಾಗಿ ನಮ್ಮ ಮಿದುಳಿನ ಭಾಗಗಳನ್ನು ಆಕ್ರಮಿಸುತ್ತಾ, ನಮ್ಮ ನೆನಪಿನ ಎಳೆಗಳನ್ನು ತುಂಡಾಗಿಸುತ್ತಾ ಇರುವಾಗ ಕಳೆದುಕೊಳ್ಳುವ ವಾಸ್ತವದ ಜಗತ್ತಿನ ಹಾದಿಗಳನ್ನು ಕಟ್ಟಿಕೊಡುತ್ತದೆ. ಮೊದಮೊದಲು ಸಾಧಾರಣ ಮರೆವು ಎಂದುಕೊಂಡಿದ್ದು, ನಂತರ ಅದು ಅಷ್ಟು ಸಾಧಾರಣವಲ್ಲ ಎಂದು ಅರಿವಾದಾಗ ಸಂಬಂಧಪಟ್ಟವರ ಒದ್ದಾಟ, ಹೆದರಿಕೆ ಎಲ್ಲವನ್ನೂ ಮೋಹನ್ ಲಾಲ್ ಎದೆಗೆ ಗುರಿಯಿಟ್ಟಂತೆ ಕಟ್ಟಿಕೊಡುತ್ತಾರೆ.

ಈ ಚಿತ್ರದಲ್ಲೂ ಅಂತಹುದೇ ಒಂದು ಸನ್ನಿವೇಶವಿದೆ. ಈತ ಬಾಯಲ್ಲಿ ಲೆಫ್ಟ್, ಸ್ಟಾಪ್ ಸೈನ್, ಲೆಫ್ಟ್, ಒಂದು, ಎರಡು, ಮೂರು… ಎಂದು ಎಣಿಸುತ್ತಾ ಹೋಗುವ ರಸ್ತೆಯಲ್ಲಿ ದುರಸ್ತಿಕಾರ್ಯ ನಡೆಯುತ್ತಿರುತ್ತದೆ. ‘ಈ ರಸ್ತೆಯಲ್ಲಿ ನೀವು ಹೋಗುವಂತಿಲ್ಲ, ರಸ್ತೆಯ ಆ ಕಡೆ ಹೋಗಿ’ ಎನ್ನುವ ಅತಿ ಸಾಮಾನ್ಯವಾದ ಮಾತು ಡಿಮೆನ್ಶಿಯಾ ವ್ಯಕ್ತಿಗೆ ಅದೆಷ್ಟು ಕಠಿಣವಾಗಬಹುದು ಎನ್ನುವುದನ್ನು ಆ ದೃಶ್ಯ ಹೇಳುತ್ತದೆ. ಇದರ ನಡುವೆ ಕಥೆಗೆ ಇನ್ನೂ ಹಲವು ಎಳೆಗಳಿವೆ. ತಾನು ಈ ಪರಿಸ್ಥಿತಿಯಲ್ಲಿದ್ದೇನೆ ಎನ್ನುವುದು ತಿಳಿದ ನಂತರ ಆತ ಮನೆಯಲ್ಲಿ ಬೆಳ್ಳನೆಯ ನೋಟೀಸ್ ಬೋರ್ಡ್ ಮೇಲೆ ಮಗ, ಮಗಳು, ಅಳಿಯ, ಮೊಮ್ಮಗಳ ಫೋಟೋಗಳನ್ನು ಅಂಟಿಸಿ, ಅದರ ಮೇಲೆ ಅವರವರ ಹೆಸರುಗಳನ್ನು ಬರೆದಿಡುತ್ತಾನೆ. ಅದನ್ನು ಆಗಾಗ ನೋಡುತ್ತಲೇ ಇರುತ್ತಾನೆ.

ತನ್ನಲ್ಲಿರುವ ಪದಗಳೆಲ್ಲಾ ಕಳೆದುಹೋಗುವ ಮೊದಲು ತನ್ನ ಹೆಂಡತಿಗೊಂದು ಪತ್ರ ಬರೆದುಬಿಡಬೇಕೆಂದು ಟೈಪ್ ರೈಟರ್ ಗೆ ಹಾಳೆಯೊಂದನ್ನು ತುರುಕಿ, ‘ಪ್ರಿಯ ಕ್ಯಾರಿ..’ ಎಂದು ಶುರು ಮಾಡುತ್ತಾನಾಗಲೀ ಒಂದು ಪುಟವನ್ನೂ ಬರೆಯಲಾಗಿರುವುದಿಲ್ಲ. ಆದರೆ ಎಮ್ಮಾ ಅವನು ಬರೆಯುವಂತೆ ಒತ್ತಾಯಿಸುತ್ತಾಳೆ. ಅವನ ಜೊತೆ ಅವನ ವೈದ್ಯರಲ್ಲಿಗೆ ಹೋಗುತ್ತಾಳೆ. ತನ್ನ ಸಂಗೀತ ಕಾರ್ಯಕ್ರಮದ ಪ್ರವಾಸ ಬಿಟ್ಟು, ಈತನೊಂದಿಗೆ ನಿಲ್ಲುತ್ತಾಳೆ. ‘ನಿಮ್ಮಿಬ್ಬರ ನಡುವಿನ ಸಂಬಂಧ ಏನು?’ ಎನ್ನುವ ಪ್ರಶ್ನೆಗೆ ಇಬ್ಬರ ಉತ್ತರ, ‘ಗೊತ್ತಿಲ್ಲ’ ಎಂದೇ ಆಗಿರುತ್ತದೆ. ‘ನಿನ್ನ ವಯಸ್ಸಿನ ಅರ್ಧ ಭಾಗಕ್ಕೆ, ನಾಲ್ಕುವರ್ಷ ಸೇರಿಸಿದರೆ ಅದು ನನ್ನ ವಯಸ್ಸು’ ಎಂದು ಅವಳು ಹೇಳುವಷ್ಟು ಅವರಿಬ್ಬರ ನಡುವೆ ವಯಸ್ಸಿನ ಅಂತರ ಇರುತ್ತದೆ. ಆ ಡಾಕ್ಟರಿಗೆ, ಅವನ ಮಗಳಿಗೆ, ಮಗನಿಗೆ ಅವರಿಬ್ಬರ ನಡುವೆ ‘ಏನೋ’ ಇದೆ ಎಂದೇ ಅನ್ನಿಸುತ್ತಿರುತ್ತದೆ. ಆದರೆ ಆ ಏನೋ ಅಂದರೆ ಏನು ಎನ್ನುವುದು ಅವರಿಗೂ ಗೊತ್ತಿರುವುದಿಲ್ಲ. ಇದೊಂದು ಒಳ್ಳೆಯ ಕಥಾವರಣ ಆಗಬಹುದಿತ್ತಾದರೂ ಇದೂ ಸಹ ಒಂದು ಹೇಳಿಕೆಯ ಮಟ್ಟದಲ್ಲೇ ಉಳಿದುಕೊಂಡಿದೆ.

ಬಹುಶಃ ಚಾರ್ಲಿಯ ಪರಿಸ್ಥಿತಿಯನ್ನು ಮತ್ತಷ್ಟು ಪ್ರಖರವಾಗಿಸುವ ಉದ್ದೇಶದಿಂದಲೇ ಆತನನ್ನು ಹಾಸ್ಯಬರಹಗಾರನನ್ನಾಗಿ ಮಾಡಲಾಗಿದೆ. ಆತ ಆಡುವ ಮಾತುಗಳಲ್ಲಿ ಒಳ್ಳೆಯ ಹಾಸ್ಯ ಹಾಸುಹೊಕ್ಕಾಗಿರುತ್ತದೆಯಾಗಲೀ, ಆತನ ಬರವಣಿಗೆಯಲ್ಲಾಗಲೀ, ಆ ಟೀವಿ ಚಾನೆಲ್ ನ ಹಾಸ್ಯಕಾರ್ಯಕ್ರಮದ ಸನ್ನಿವೇಶ, ಸಂಭಾಷಣೆಯಲ್ಲಾಗಲೀ ಹಾಸ್ಯದ ಪರಿಸ್ಥಿತಿ ಚಿಂತಾಜನಕವಾಗಿದೆ. ಚಾರ್ಲಿಯೊಳಗೆ ಇರುವ ಗಿಲ್ಟ್‌ಗೆ ಕಾರಣವನ್ನು ಕೊಡುತ್ತಾರೆ, ಆದರೆ ಅದರ ದುರಂತ ನಮ್ಮೊಳಗೆ ಇಳಿಯುವುದೇ ಇಲ್ಲ. ಆತನ ಮಗಳ ಪಾತ್ರವನ್ನು ಥೇಟ್ ನಮ್ಮ 70-80ರ ದಶಕದ ಸಿನಿಮಾಗಳ ಖಳನಾಯಿಕೆಯಂತೆ ಕಟ್ಟಲಾಗಿದೆ. ಯಹೂದಿ ಸಮುದಾಯಕ್ಕೆ ಸೇರಿದ ಈತನ ಮಗಳು ಮತ್ತು ಅಳಿಯನಿಗೆ ಒಬ್ಬ ಮಗಳಿರುತ್ತಾಳೆ. ಆದರೆ ಅವಳಿಗೆ ಮಂಗೋಲಾಯ್ಡ್ ಚಹರೆ ಇರುತ್ತದೆ. ಹಾಗಾದರೆ ಅವಳನ್ನು ದತ್ತು ಪಡೆದಿರುತ್ತಾರೆಯೆ? ಅದಕ್ಕೆ ಕಾರಣವೇನು? ಕಥೆಗೆ ಅದರ ಅವಶ್ಯಕತೆ ಇದೆಯೆ? ಇವು ಯಾವುದನ್ನೂ ಗಮನಕ್ಕೆ ತಂದುಕೊಂಡಿಲ್ಲ. ಹೀಗೆಯೇ ಅನೇಕ ವಿಷಯಗಳು, ವಿವರಗಳು ಚಿತ್ರವನ್ನು ಮಸುಕಾಗಿಸುತ್ತವೆ. ಡಿಮೆನ್ಶಿಯಾ, ಹಾಸ್ಯ, ಗಿಲ್ಟ್, ಭಿನ್ನಭಿನ್ನ ವಯೊಮಾನದ ನಡುವಿನ ಪ್ರೇಮ, ಸಾಂಸಾರಿಕ ಗಿಲ್ಟ್, ಅಪ್ಪ ಮಕ್ಕಳ ವಿರಸ ಹೀಗೆ ಏನೆನೋ ವಿಷಯಗಳನ್ನು ತುಂಬಿರುವುದರಿಂದ ಚಿತ್ರ ತನ್ನ ಫೋಕಸ್ ಅನ್ನು ಕಂಡುಕೊಳ್ಳುವುದೇ ಇಲ್ಲ. ಒಂದೆರಡು ಸನ್ನಿವೇಶ/ಸಂದರ್ಭಗಳನ್ನು ಹೊರತುಪಡಿಸಿ ಚಿತ್ರ ಎಲ್ಲೂ ನಮ್ಮನ್ನು ಆಳವಾಗಿ ತಾಕುವುದಿಲ್ಲ.

ಚಾರ್ಲಿ ಬರ್ನ್ಸ್ ಆಗಿ ಬಿಲ್ಲಿ ಕ್ರಿಸ್ಟಲ್, ಎಮ್ಮಾ ಪೇಜ್ ಆಗಿ ಟಿಫಾನಿ ಹಡ್ಡಿಶ್ ಸರಾಗವಾಗಿ ನಟಿಸಿ ಆ ಪಾತ್ರಗಳಾಗಿದ್ದಾರೆ. ಬಿಲ್ಲಿ ಈ ಚಿತ್ರಕಥೆಯ ಸಹ ಬರಹಗಾರ ಸಹ ಆಗಿದ್ದು, ಈ ಚಿತ್ರವನ್ನು ತಾವೇ ನಿರ್ದೇಶಿಸಿದ್ದಾರೆ. ಹಲವಾರು ಆಸಕ್ತಿದಾಯಕ ಅಂಶಗಳನ್ನು ಸ್ಪರ್ಶಿಸುವ ಈ ಚಿತ್ರ ಎಲ್ಲೂ ಒಂದು ಕ್ಷಣ ನಿಂತು, ಕಥೆ ಹೇಳುವುದಿಲ್ಲ. ಆವರಣದ ವಿಸ್ತಾರ ಕಥೆಗೆ ಬೇಕಾದ ಆಳವನ್ನು ಕಿತ್ತುಕೊಂಡಿದೆ. ಈ ಮಿತಿಗಳಾಚೆಗೂ ನನಗೆ ಈ ವಸ್ತುವಿನ ಚಿತ್ರಗಳು ಆಸಕ್ತಿ ಹುಟ್ಟಿಸುತ್ತವೆ. ನೆನಪು ಮನುಷ್ಯರ ಅತ್ಯಂತ ಶಕ್ತಿಶಾಲಿ ಪರಿಕರ, ಆಯುಧ. ಅದೇ ಅವರ ಅಸ್ತಿತ್ವ ಸಹ. ಅದನ್ನು ಕಳೆದುಕೊಳ್ಳುವುದು ಮತ್ತು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಅರಿವಿನಲ್ಲಿ ಬದುಕುವುದು ಎರಡೂ ಅದೆಷ್ಟು ದೊಡ್ಡ ಸವಾಲುಗಳು… ಆ ಸವಾಲಿನ ಕಥೆಗಳನ್ನು ನಿರ್ಲಕ್ಷಿಸುವುದು ನನ್ನಿಂದ ಆಗುವುದೇ ಇಲ್ಲ.

LEAVE A REPLY

Connect with

Please enter your comment!
Please enter your name here