ನಟಿ ರಾಧಿಕಾ ಕುಮಾರಸ್ವಾಮಿ ಅವರು ಎರಡು ಚಿತ್ರಗಳೊಂದಿಗೆ ತೆರೆಗೆ ಮರಳಲು ಸಜ್ಜಾಗಿದ್ದಾರೆ. ಅವರ ‘ಭೈರಾದೇವಿ’ ಚಿತ್ರದ ಟೀಸರ್‌ ಮತ್ತು ‘ಅಜಾಗ್ರತ’ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿವೆ. ಎರಡೂ ಸಿನಿಮಾಗಳು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ತೆರೆಕಾಣಲಿವೆ.

ನಟಿ ರಾಧಿಕಾ ಕುಮಾರಸ್ವಾಮಿ ಎರಡು ವಿಶೇಷ ಚಿತ್ರಗಳೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಮೊನ್ನೆ ಅವರ ಹುಟ್ಟುಹಬ್ಬದಂದು ಈ ಎರಡೂ ಚಿತ್ರಗಳ ಅಪ್‌ಡೇಟ್ಸ್‌ ಸಿಕ್ಕಿದೆ. ಅವರ ‘ಭೈರಾದೇವಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ‘ಅಜಾಗ್ರತ’ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದೆ. ಜನರಿಗೆ ದೀಪಾವಳಿ ಶುಭಾಶಯ ಕೋರಿದ ರಾಧಿಕಾ, ‘ಇಂದು ನನ್ನ ಹುಟ್ಟುಹಬ್ಬ. ನೀವೆಲ್ಲಾ ಬಂದಿರುವುದು ಖುಷಿಯಾಗಿದೆ. ಈ ಬಾರಿ ನನ್ನ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಏಕೆಂದರೆ ನನ್ನ ಅಭಿನಯದ ‘ಭೈರಾದೇವಿ’ ಚಿತ್ರದ ಟೀಸರ್ ಹಾಗೂ ‘ಅಜಾಗ್ರತ’ ಪೋಸ್ಟರ್ ಬಿಡುಗಡೆಯಾಗಿದೆ. ಈ ಎರಡು ಚಿತ್ರಗಳು ಶಮಿಕಾ ಎಂಟರ್‌ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿವೆ. ‘ಭೈರಾದೇವಿ’ ನನ್ನ ಇಪ್ಪತ್ತು ವರ್ಷಗಳ ಸಿನಿಜರ್ನಿಯಲ್ಲೇ ವಿಭಿನ್ನವಾದ ಚಿತ್ರ. ಅಘೋರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ‌. ಈ ಚಿತ್ರಕ್ಕೆ ಪಟ್ಟಿರುವಷ್ಟು ಶ್ರಮ ನಾನು ಯಾವ ಚಿತ್ರಕ್ಕೂ ಪಟ್ಟಿಲ್ಲ. ಇಂದು ಟೀಸರ್ ನೋಡಿದಾಗ ತುಂಬಾ ಖುಷಿಯಾಯಿತು’ ಎಂದರು.

ರಾಧಿಕಾರ ‘ಭೈರಾದೇವಿ’ ಚಿತ್ರವನ್ನು ಶ್ರೀಜೈ ನಿರ್ದೇಶಿಸಿದ್ದರೆ, ಮತ್ತೊಂದು ಸಿನಿಮಾ ‘ಅಜಾಗ್ರತ’ ನಿರ್ದೇಶಿಸಿರುವುದು ಶಶಿಧರ್‌. ‘ಭೈರಾದೇವಿ’ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ತೆರೆಕಾಣಲಿದೆ. ಮೂರು ಭಾಷೆಗಳಲ್ಲೂ ಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗಿದೆ. ‘ಸಾಮಾನ್ಯವಾಗಿ ಹೆಣ್ಣು ಅಘೋರಿಗಳು ಕಾಣಿಸುವುದು ಕಷ್ಟ. ನಾನು ಆ ಬಗ್ಗೆ ಹೆಚ್ಚು ತಿಳಿದುಕೊಂಡು ಈ ಚಿತ್ರ ಮಾಡಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಹೆಣ್ಣು ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ’ ಎಂದರು ನಿರ್ದೇಶಕ ಶ್ರೀಜೈ. ಇನ್ನು ‘ಅಜಾಗ್ರತ’, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಮೂಡಿಬರುತ್ತಿರುವ ಚಿತ್ರ. ‘ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಪುಣೆಯಲ್ಲಿ ಎಂಎಸ್‌ಸಿಯಲ್ಲಿ ಫಿಲಂ ಮೇಕಿಂಗ್ ಮಾಡಿದ್ದೇನೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಚಿತ್ರನಟಿಯಾಗಿಯೇ ರಾಧಿಕಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು ಶಶಿಧರ್‌. ಮೊದಲು ‘ಅಜಾಗ್ರತ’ ಸಿನಿಮಾ ತೆರೆಕಾಣಲಿದ್ದು, ನಂತರ ‘ಭೈರಾದೇವಿ’ ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here