Side Aಗೆ ಹೋಲಿಸಿದರೆ ಇಲ್ಲಿ ಮನು ಮತ್ತು ಪ್ರಿಯ ಪಾತ್ರಗಳ ಭಾವಾಭಿವ್ಯಕ್ತಿಗೆ ಹೆಚ್ಚು ಸವಾಲುಗಳಿವೆ. ಜವಾಬ್ದಾರಿಯುತ ಗೃಹಿಣಿಯಾಗಿ ಪ್ರಿಯ ಮತ್ತು ದೂರದಿಂದಲೇ ಆಕೆಗೆ ನೆರಳಾಗುವ ಮನು ಪಾತ್ರಗಳಲ್ಲಿ ರುಕ್ಮಿಣಿ ವಸಂತ್ ಮತ್ತು ರಕ್ಷಿತ್ ಶೆಟ್ಟಿ ತೆರೆಯನ್ನು ಆವರಿಸುತ್ತಾರೆ. ಸಾಕಷ್ಟು ಒಳನೋಟಗಳಿರುವ ಸುರಭಿ ಪಾತ್ರವನ್ನು ಚೈತ್ರಾ ಆಚಾರ್ ಸಲೀಸಾಗಿ ತೂಗಿಸಿಕೊಂಡು ಹೋಗಿದ್ದಾರೆ. ಆಕ್ಷನ್ ಭರಾಟೆಯಲ್ಲಿ ಇಂಟೆನ್ಸ್ ಪ್ರೇಮಕತೆಗಳು ವಿರಳವಾಗುತ್ತಿರುವ ಈ ಹೊತ್ತಿನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ದಾಖಲಾರ್ಹ ಸಿನಿಮಾ.
ಎರಡು ಪಾರ್ಟ್ಗಳಲ್ಲಿ ಸಿನಿಮಾ ಮಾಡುವ ಸವಾಲು ದೊಡ್ಡದು. ಸಾಕಷ್ಟು ತಯಾರಿಯೊಂದಿಗೇ ಇಂತಹ ಪ್ರಾಜೆಕ್ಟ್ಗಳಿಗೆ ಸಮಯ, ಹಣ, ಮ್ಯಾನ್ ಪವರ್ ವ್ಯಯಿಸಬೇಕಾಗುತ್ತದೆ. ಮೊದಲನೆಯದಾಗಿ, ಎರಡು ಪಾರ್ಟ್ಗಳನ್ನೂ ತೂಗಿಸುವಂತಹ ಕತೆ ಬೇಕು. ಮೊದಲ ಭಾಗ ವೀಕ್ಷಿಸಿದ ಪ್ರೇಕ್ಷಕ Part 2ಗೆ ಕಾಯುವಂತಹ ನಿರೂಪಣೆ, ನಟನೆ, ಮೇಕಿಂಗ್ ಅತ್ಯವಶ್ಯ. ಇಲ್ಲದಿದ್ದರೆ ಯೋಜನೆ ಕೈಗೂಡದು. ಈ ಯಾದಿಯಲ್ಲಿ ಅದೆಷ್ಟೋ ಬಾರಿ ಭಾಗ 2 ವಿಫಲವಾಗಿವೆ ಇಲ್ಲವೇ ಬಿಡುಗಡೆಯೇ ಆಗಿಲ್ಲ. ಹೀಗೆ, ಇತ್ತೀಚೆಗೆ ಎರಡು ಭಾಗಗಳ ಸಿನಿಮಾ ಆಗಿ ಸುದ್ದಿಯಲ್ಲಿದ್ದುದು ‘ಸಪ್ತ ಸಾಗರದಾಚೆ ಎಲ್ಲೋ’. ನಿರ್ದೇಶಕ ಹೇಮಂತರಾವ್ Side Aನಲ್ಲಿ ಗೆದ್ದಿದ್ದರು. ಈಗ ತೆರೆಕಂಡಿರುವ Side Bನಲ್ಲಿ ಅವರು ತಮ್ಮ ಮೇಲಿನ ನಿರೀಕ್ಷೆಯನ್ನು ಸರಿಗಟ್ಟಿದ್ದಾರೆ. ಎರಡೂ ಪಾರ್ಟ್ಗಳಲ್ಲಿ ಇದೊಂದು ಪರಿಪೂರ್ಣ ಸಿನಿಮಾ ಆಗಿ ರೂಪುಗೊಂಡಿದೆ.
‘ಸಪ್ತ ಸಾಗರದಾಚೆ ಎಲ್ಲೋ’ Side Aನಲ್ಲಿ ತೆರೆಯನ್ನು ಹೆಚ್ಚಾಗಿ ಆವರಿಸಿದ್ದು ಮನು (ರಕ್ಷಿತ್ ಶೆಟ್ಟಿ) ಮತ್ತು ಪ್ರಿಯಾ (ರುಕ್ಮಿಣಿ ವಸಂತ್). ಅವರ ಪ್ರೀತಿಯನ್ನು ಗಟ್ಟಿಗೊಳಿಸುವಂತೆ ಚಿತ್ರಕಥೆಯಲ್ಲಿ ಇತರೆ ಪಾತ್ರಗಳು ಬಂದುಹೋಗಿದ್ದವು. ಇಬ್ಬರೂ ಪರಸ್ಪರರ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಅಲ್ಲೊಂದು ಸ್ಪೇಸ್ ಇತ್ತು. ಅಫ್ಕೋರ್ಸ್, ನಿರ್ದೇಶಕರು ಅವರ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಪ್ರೇಕ್ಷಕರಿಗೂ ಸ್ಪೇಸ್ ಕೊಟ್ಟಿದ್ದರು! ಸಾವಧಾನದಿಂದ ನಿರೂಪಿಸಿದ್ದರು. ದೊಡ್ಡದೊಂದು ತಿರುವಿನೊಂದಿಗೆ ಮೊದಲ ಭಾಗ ಮುಕ್ತಾಯವಾಗಿತ್ತು. ಪ್ರೇಕ್ಷಕರು ಮನು – ಪ್ರಿಯಾ ಪ್ರೀತಿಗೆ ಮರುಗಿದ್ದರು. ಈಗ Side B ನ ಮುಂದುವರೆದ ಕತೆಯಲ್ಲಿ ಇತರೆ ಪಾತ್ರಗಳಿಗೆ ಹೆಚ್ಚಿನ ಸ್ಕ್ರಿನ್ಸ್ಪೇಸ್ ಇದೆ. ಹೆಚ್ಚು ಡ್ರಾಮಾ ಇದ್ದರೂ, ಅದು ಅತಿಯಾಗಿಲ್ಲ. ನಿರ್ದೇಶಕರು ಪ್ರೀತಿಯ ಬುನಾದಿಯ ಮೇಲೆಯೇ ಕತೆಯನ್ನು ಹೇಳುತ್ತಾ ಹೋಗಿದ್ದಾರೆ ಎನ್ನುವುದು ಹೆಗ್ಗಳಿಕೆ.
Side Bನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ಪ್ರಮುಖ ಪಾತ್ರಗಳು ಸುರಭಿ ಮತ್ತು ದೀಪಕ್. ‘ಸುರಭಿ’ಯಾಗಿ ಚೈತ್ರಾ ಆಚಾರ್ ಅವರದ್ದು ಕಾಡುವ ಪಾತ್ರ. ಸಾಕಷ್ಟು ಒಳನೋಟಗಳಿರುವ ಈ ಪಾತ್ರವನ್ನು ಚೈತ್ರಾ ಸಲೀಸಾಗಿ ತೂಗಿಸಿಕೊಂಡು ಹೋಗಿದ್ದಾರೆ. ಈ ಪಾತ್ರಕ್ಕೆ ಒಳ್ಳೆಯ ಸಂಭಾಷಣೆಗಳಿವೆ. ಪ್ರೀತಿ, ವಿಷಾದ, ಆತಂಕದ ಭಾವಗಳೊಂದಿಗೆ ನಗುವ ಚೈತ್ರಾ ಅನುಭವಿ ನಟಿಯಂತೆ ಗೋಚರಿಸುತ್ತಾರೆ. ಪ್ರೀತಿಸಿದ ಹುಡುಗಿಗೆ ಮರುಗುವ ಮನುಗೆ ಸಹಾಯ ಮಾಡುತ್ತಲೇ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಸ್ವಾರ್ಥ ಈ ಪಾತ್ರದ್ದು. ‘ತಲೆದಂಡ’, ‘ಟೋಬಿ’ ಚಿತ್ರಗಳಲ್ಲೇ ಚೈತ್ರಾ ಅವರ ಪ್ರತಿಭೆ ಸಾಬೀತಾಗಿತ್ತು. ಈ ಚಿತ್ರದಲ್ಲಿ ಪಾತ್ರವನ್ನು ಅಂಡರ್ಪ್ಲೇ ಮಾಡುತ್ತಲೇ ಅವರು ಮಿಂಚಿದ್ದಾರೆ. ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಪ್ರಿಯಳ ಗಂಡ ‘ದೀಪಕ್’ ಪಾತ್ರವನ್ನೂ ನಿರ್ದೇಶಕರು ಚೆನ್ನಾಗಿ ಬರೆದಿದ್ದಾರೆ.
Side Aಗೆ ಹೋಲಿಸಿದರೆ ಇಲ್ಲಿ ಮನು ಮತ್ತು ಪ್ರಿಯ ಪಾತ್ರಗಳ ಭಾವಾಭಿವ್ಯಕ್ತಿಗೆ ಹೆಚ್ಚು ಸವಾಲುಗಳಿವೆ. ಜವಾಬ್ದಾರಿಯುತ ಗೃಹಿಣಿಯಾಗಿ ಪ್ರಿಯ ಮತ್ತು ದೂರದಿಂದಲೇ ಆಕೆಗೆ ನೆರಳಾಗುವ ಮನು ಪಾತ್ರಗಳಲ್ಲಿ ರುಕ್ಮಿಣಿ ವಸಂತ್ ಮತ್ತು ರಕ್ಷಿತ್ ಶೆಟ್ಟಿ ತೆರೆಯನ್ನು ಆವರಿಸುತ್ತಾರೆ. ಹತ್ತು ವರ್ಷಗಳ ನಂತರದ ಈ ಪಾತ್ರಕ್ಕಾಗಿ ಅವರ ಬಾಡಿ ಟ್ರಾನ್ಸ್ಫಾರ್ಮೇಷನ್ಗೆ ಪ್ರತ್ಯೇಕ ಮೆಚ್ಚುಗೆ ಸಿಗಬೇಕು. ಸ್ನೇಹಿತನನ್ನು ಬಿಟ್ಟುಕೊಡದ ‘ಪ್ರಕಾಶ’ನ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರದ್ದು ತೂಕದ ಅಭಿನಯ. ಟಾಮ್ & ಜೆರ್ರಿ ಆಟದಲ್ಲಿ ಸಂಭಾಷಣೆ ಹೇಳುವ ರೀತಿಯಲ್ಲೇ ‘ಸೋಮ’ನಾಗಿ ರಮೇಶ್ ಇಂದಿರಾ ಸ್ಕೋರ್ ಮಾಡುತ್ತಾರೆ. ತಮ್ಮ ಧ್ವನಿಯನ್ನು ಅವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಪ್ರಿಯಾಳ ತಮ್ಮ ‘ವಿನೋದ’ನ ಪಾತ್ರ ಚಿಕ್ಕದು. ಆದರೆ ನಿರ್ದೇಶಕ ಕುಸುರಿ ಕೆಲಸದಿಂದ ಈ ಪಾತ್ರದಲ್ಲಿ ಭರತ್ ಜಿ ಬಿ ನೆನಪಿನಲ್ಲುಳಿಯುತ್ತಾರೆ.
‘ಸಪ್ತ ಸಾಗರದಾಚೆ ಎಲ್ಲೋ’ – Side A ಮತ್ತು Side B ಎರಡೂ ಭಾಗಗಳಲ್ಲಿ ಹಿನ್ನೆಲೆ ಸಂಗೀತ ಚಿತ್ರಕ್ಕೆ ವರವಾಗಿದೆ. ಚರಣ್ ರಾಜ್ ಅವರಿಗೆ ಅಭಿನಂದನೆ ಸಲ್ಲಬೇಕು. ಹಾಡುಗಳು ಕತೆಯೊಂದಿಗೆ ಬೆಸೆದುಕೊಂಡಿದ್ದರೆ, ಹಿನ್ನೆಲೆ ಸಂಗೀತ ಕತೆಗೆ ಬೇಕಾದ ಮೂಡ್ ಸೃಷ್ಟಿಸುತ್ತದೆ. ಮೊದಲ ಪಾರ್ಟ್ನಲ್ಲಿ ಮಾಧುರ್ಯಕ್ಕೆ ಒತ್ತುಕೊಟ್ಟಿದ್ದ ಚರಣ್ ರಾಜ್ Side Bನಲ್ಲಿ ಕತೆಯ ತಿರುವುಗಳಿಗೆ ಅಗತ್ಯವಿರುವ ಹಾಂಟಿಂಗ್ ಮ್ಯೂಸಿಕ್ನ ಪ್ರಯೋಗಶೀಲತೆಯಿಂದ ಗಮನ ಸೆಳೆದಿದ್ದಾರೆ. ವಿಫಲ ಪ್ರೀತಿಯಲ್ಲಿ ನಲುಗುವ ಮನು ಪಾತ್ರಕ್ಕೆ ಇಲ್ಲಿ ಬೇಕೆಂದೇ ಹಲವು ಸೀನ್ಗಳಲ್ಲಿ ಗಾಢ ವರ್ಣದ ಹಿನ್ನೆಲೆ ಒದಗಿಸಲಾಗಿದೆ. ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಅವರು ತಮ್ಮ ಲೈಟಿಂಗ್ ಮತ್ತು ಛಾಯಾಗ್ರಹಣದಿಂದ ಪಾತ್ರ ಮತ್ತು ಸನ್ನಿವೇಶಕ್ಕೆ ಅಗತ್ಯವಿರುವ ಫ್ರೇಮ್ ಕಟ್ಟಿಕೊಟ್ಟಿದ್ದಾರೆ. ಆಕ್ಷನ್ ಭರಾಟೆಯಲ್ಲಿ ಇಂಟೆನ್ಸ್ ಪ್ರೇಮಕತೆಗಳು ವಿರಳವಾಗುತ್ತಿರುವ ಈ ಹೊತ್ತಿನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ದಾಖಲಾರ್ಹ ಸಿನಿಮಾ.