‘ಬಿಗ್ಬಾಸ್’ ಖ್ಯಾತಿಯ ಶ್ರುತಿ ಪ್ರಕಾಶ್ ಮತ್ತು ಮಧುಸೂದನ್ ಗೋವಿಂದ್ ನಟನೆಯ ‘ಫ್ರೈಡೇ’ಗೆ ನೂತನ ಸಿನಿಮಾಗೆ ಚಾಲನೆ ಸಿಕ್ಕಿದೆ. ಈ ಹಿಂದೆ ‘ಹೊಸ ದಿನಚರಿ’ ಸಿನಿಮಾ ನಿರ್ದೇಶಿಸಿದ್ದ ಕೀರ್ತಿ ಶೇಖರ್ ಮತ್ತು ವೈಶಾಖ್ ಪುಷ್ಪಲತ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕೀರ್ತಿ ಶೇಖರ್ ಮತ್ತು ವೈಶಾಖ್ ಪುಷ್ಪಲತ ನಿರ್ದೇಶನದ ‘ಫ್ರೈಡೇ’ ನೂತನ ಸಿನಿಮಾಗೆ ಮುಹೂರ್ತ ನೆರವೇರಿದೆ. ‘ಬಿಗ್ಬಾಸ್’ ಖ್ಯಾತಿಯ ಶ್ರುತಿ ಪ್ರಕಾಶ್ ಮತ್ತು ‘ಮೇಡ್ ಇನ್ ಬೆಂಗಳೂರು’ ಚಿತ್ರದ ನಾಯಕ ಮಧುಸೂದನ್ ಗೋವಿಂದ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ನಿರ್ದೇಶಕರಲ್ಲೊಬ್ಬರಾದ ವೈಶಾಖ್ ಪುಷ್ಪಲತ ಚಿತ್ರದ ಬಗ್ಗೆ ಮಾಹಿತಿ ನೀಡಿ, ”ಸಿನಿಮಾದವರಿಗೆ ‘ಫ್ರೈಡೆ’ ಎಂದರೆ ವಿಶೇಷ. ನಮಗೂ ಹಾಗೆ. ಚಿತ್ರ ಬಿಡುಗಡೆಯಾಗುವುದು ‘ಫ್ರೈಡೆ’. ಆ ‘ಫ್ರೈಡೆ’ಗೂ ನಮ್ಮ ಚಿತ್ರಕ್ಕೂ ನಂಟಿದೆ. ‘ಫ್ರೈಡೆ’ ಬಿಡುಗಡೆಯಾದ ಹೊಸ ಚಿತ್ರವನ್ನು ನೋಡಲು ಹೋಗಿದ್ದ ದಂಪತಿ ಜೀವನದಲ್ಲಿ ನಡೆಯಬಾರದ ಘಟನೆ ನಡೆದು ಹೋಗುತ್ತದೆ. ಅದೇ ಚಿತ್ರದ ಕಥಾಹಂದರ’ ಎನ್ನುತ್ತಾರೆ. ನಟ ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Dees films ಸಂಸ್ಥೆ ನಿರ್ಮಾಣದ ನಾಲ್ಕನೇ ಚಿತ್ರ ಹಾಗೂ Dees films ಸಂಸ್ಥೆ, shoolin media ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ ‘ಆಯನ’, ‘ಹೊಸ ದಿನಚರಿ’ ಹಾಗೂ ‘ಗ್ರೇ ಗೇಮ್ಸ್’ ಚಿತ್ರಗಳು Dess films ಸಂಸ್ಥೆಯಡಿ ತಯಾರಾಗಿವೆ. ”ಆಯನ’, ‘ಗ್ರೇ ಗೇಮ್ಸ್’ ಚಿತ್ರಗಳನ್ನು ನಾನೇ ನಿರ್ದೇಶಿಸಿದ್ದೆ. ‘ಫ್ರೈಡೆ’ ಚಿತ್ರವನ್ನು ‘ಹೊಸ ದಿನಚರಿ’ ಚಿತ್ರದ ನಿರ್ದೇಶಕರಾದ ಕೀರ್ತಿ ಹಾಗೂ ವೈಶಾಖ್ ನಿರ್ದೇಶಿಸುತ್ತಿದ್ದಾರೆ’ ಎನ್ನುತ್ತಾರೆ ನಿರ್ಮಾಪಕ ಗಂಗಾಧರ್ ಸಾಲಿಮಠ. ಅಶ್ವಿನ್ ಹೇಮಂತ್ ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದೆ.