2021ರ ಕೊನೆಯಲ್ಲಿ ದೇಶದೆಲ್ಲೆಡೆ ಪ್ರದರ್ಶನಗೊಂಡು ದೊಡ್ಡ ಸದ್ದು ಮಾಡಿದ್ದ ‘ಪುಷ್ಪ’ ಸಿನಿಮಾದ Part 2 ಆಗಸ್ಟ್‌ 15ರಂದು ತೆರೆಕಾಣಲಿದೆ. ಮಹೇಶ್‌ ಬಾಬು ನಟನೆಯ ‘ಗುಂಟೂರು ಖಾರಂ’ ಜನವರಿ 13ರಂದು ತೆರೆಗೆ ಬರುತ್ತಿದ್ದರೆ, ಜ್ಯೂನಿಯರ್‌ NTR ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದೇವರ’ ಬಿಡುಗಡೆ ದಿನಾಂಕ ಏಪ್ರಿಲ್‌ 5 ಎಂದು ನಿಗದಿಯಾಗಿದೆ.

ಹನುಮಾನ್‌ | ಪ್ರಶಾಂತ್‌ ವರ್ಮಾ ಚಿತ್ರಕಥೆ ರಚಿಸಿ, ನಿರ್ದೇಶಿಸಿರುವ ಈ ಸಿನಿಮಾದಲ್ಲಿ ತೇಜ ಸಜ್ಜ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು PrimeShow Entertainment ಬ್ಯಾನರ್‌ ಅಡಿಯಲ್ಲಿ ನಿರಂಜನ್ ರೆಡ್ಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಶಿವೇಂದ್ರ ಛಾಯಾಗ್ರಹಣ, ಗೌರ ಹರಿ ಸಂಗೀತ ಸಂಯೋಜನೆ, ನಾಗೇಂದ್ರ ತಂಗಳ ಪ್ರೊಡಕ್ಷನ್ ಡಿಸೈನ್‌, ಎಸ್‌ ಬಿ ರಾಜು ತಲಾರಿ ಸಂಕಲನ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಅಮೃತ ಅಯ್ಯರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ, ವೆನ್ನೆಲ ಕಿಶೋರ್, ಗೆಟಪ್ ಶ್ರೀನು, ಸತ್ಯ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಇಂಗ್ಲೀಷ್‌, ಸ್ಪಾನಿಷ್‌, ಕೋರಿಯನ್‌, ಚೀನೀಸ್‌ ಮತ್ತು ಜಪಾನೀಸ್ ಭಾಷೆಗಳಲ್ಲಿ ಜನವರಿ 12ರಂದು ಬಿಡುಗಡೆಯಾಗಲಿದೆ.

ಗುಂಟೂರು ಖಾರಂ | ಮಹೇಶ್‌ ಬಾಬು ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಬರೆದು ನಿರ್ದೇಶಿಸಿದ್ದಾರೆ. Haarika ಮತ್ತು Hassine Creations ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುವ ಚಿತ್ರದಲ್ಲಿ ಮೀನಾಕ್ಷಿ ಚೌದರಿ, ಬ್ರಹ್ಮಾನಂದಂ, ರಮ್ಯ ಕೃಷ್ಣ, ಪ್ರಕಾಶ್‌ ರಾಜ್‌, ಜಯರಾಂ, ಜಗಪತಿ ಬಾಬು ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಥಮನ್ ಎಸ್ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾ ಜನವರಿ 13,ರಂದು ಬಿಡುಗಡೆಯಾಗಲಿದೆ.

ಈಗಲ್‌ | ರವಿತೇಜ ಮತ್ತು ಅನುಪಮ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾವನ್ನು ಕಾರ್ತಿಕ್ ಗಟ್ಟಮನೇನಿ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರವಿತೇಜ ಕೊಲೆಗಾರನ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನವದೀಪ್, ಕಾವ್ಯಾ ಥಾಪರ್ ಶ್ರೀನಿವಾಸ್ ಅವಸರಾಳ, ಮಧುಬಾಲಾ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಗಟ್ಟಮನೇನಿ ಮತ್ತು ಮಣಿಬಾಬು ಕರಣಂ ಚಿತ್ರಕಥೆ ರಚಿಸಿದಾರೆ. ದವ್ಜಂಡ್ (Davzand) ಛಾಯಾಗ್ರಹಣ, ಕಾರ್ತಿಕ್ ಗಟ್ಟಮನೇನಿ, ಕರ್ಮ್ ಚಾವ್ಲಾ ಮತ್ತು ಕಾಮಿಲ್ ಪ್ಲೋಕಿ ಛಾಯಾಗ್ರಹಣ ಚಿತ್ರಕ್ಕಿದೆ. People Media Factory ನಿರ್ಮಾಣದ ಸಿನಿಮಾ ಫೆಬ್ರವರಿ 9ರಂದು ತೆರೆಕಾಣುತ್ತಿದೆ.

ಫ್ಯಾಮಿಲಿ ಸ್ಟಾರ್‌ | ವಿಜಯ್ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವನ್ನು ಪರುಶುರಾಮ್‌ ಪೆಟ್ಲ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್‌ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ರಾಜು ಮತ್ತು ಶಿರೀಷ್ ಸಹ-ನಿರ್ಮಾಣ ಮಾಡಿದ್ದಾರೆ. ಗೋಪಿಸುಂದರ್ ಸಂಗೀತ ಸಂಯೋಜನೆ, ಎ ಎಸ್ ಪ್ರಕಾಶ್ ಕಲಾ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಚಿತ್ರಕ್ಕಿದೆ.‌ ಸಿನಿಮಾ ಜನವರಿ 14ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಜಯ್ ದೇವರಕೊಂಡ ಈ ಹಿಂದೆ ‘ಖುಶಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮೃಣಾಲ್‌ ಠಾಕೂರ್‌ ‘ಹಾಯ್‌ ನಾನ್ನಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ನಾ ಸಾಮಿ ರಂಗ | ನಾಗಾರ್ಜುನ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಕನ್ನಡತಿ ಆಶಿಕಾ ರಂಗನಾಥ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಗಾರ್ಜುನ ಅವರು ಹಳ್ಳಿಗಾಡಿನ ವಾತಾವರಣದ ‘ಮ್ಯಾಚೋ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲರಿ ನರೇಶ್, ಮಿರ್ನಾ ಮೆನನ್, ರಾಜ್ ತರುಣ್ ಮತ್ತು ರುಕ್ಸಾರ್ ಧಿಲ್ಲೋನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. Srinivasaa Silver Screen ಬ್ಯಾನರ್‌ ಅಡಿಯಲ್ಲಿ ಶ್ರೀನಿವಾಸ ಚಿತ್ತೂರಿ ಸಿನಿಮಾ ನಿರ್ಮಿಸಿದ್ದಾರೆ. ಪ್ರಸನ್ನ ಕುಮಾರ್ ಬೇಜವಾಡ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಿನಿಮಾ ಜನವರಿ 24 ರಂದು ಸಿನಿಮಾ ತೆರೆಕಾಣಲಿದೆ. ಇದು ಮಲಯಾಳಂನ ‘ಪೊರಿಂಜು ಮರಿಯಂ ಜೋಸ್‌’ ಸಿನಿಮಾದ ರಿಮೇಕ್‌. 2019 ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಜೋಶಿ (Joshiy) ನಿರ್ದೇಶಿಸಿದ್ದಾರೆ.

ಆಪರೇಷನ್ ವ್ಯಾಲೆಂಟೇನ್ | ವರುಣ್ ತೇಜ್ ಮತ್ತು ಮಾನುಷಿ ಛಿಲ್ಲರ್‌ ಅಭಿನಯದ ಸಿನಿಮಾ. ಶಕ್ತಿ ಪ್ರತಾಪ್ ಸಿಂಗ್ ಹಡಾ ನಿರ್ದೇಶನದ ಈ ಚಿತ್ರದ ಮೂಲಕ ಮಾಜಿ ಮಿಸ್‌ ವರ್ಲ್ಡ್ ಮಾನುಷಿ ಛಿಲ್ಲರ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವರುಣ್ ತೇಜ್ ಅವರನ್ನು ಏರ್ ಫೋರ್ಸ್ ಪೈಲಟ್ ಅರ್ಜುನ್ ದೇವ್ ಎಂದು ಪರಿಚಯಿಸಲಾಗಿದೆ. ಮಾನುಷಿ ಚಿಲ್ಲರ್‌ ಏರ್‌ ಪೋರ್ಸ್‌ ಅಧಿಕಾರಿ ಹಾಗೂ ಅರ್ಜುನ್ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವನ್ನು Sony Pictures International ಬ್ಯಾನರ್‌ ಅಡಿಯಲ್ಲಿ ಸಂದೀಪ್ ಮುದ್ದ ನಿರ್ಮಿಸಿದ್ದಾರೆ. ಈ ವರ್ಷ ಆಕ್ಷನ್ ಥ್ರಿಲ್ಲರ್ ‘ಗಾಂಡೀವಧಾರಿ ಅರ್ಜುನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವರುಣ್ ತೇಜ್ ಈ ದ್ವಿಭಾಷಾ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಚಿತ್ರಕ್ಕೆ ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜಿಸಿದ್ದು, ಹರಿ ಕೆ ವೇದಾಂತಂ ಛಾಯಾಗ್ರಹಣವಿದೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದು, ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರವು ಫೆಬ್ರುವರಿ 16ರಂದು ಮೂಲ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

ದೇವರ ಭಾಗ 1 | ಜ್ಯೂನಿಯರ್‌ NTR ಮತ್ತು ಜಾಹ್ನವಿ ಕಪೂರ್‌ ಅಭಿನಯದ ಸಿನಿಮಾವನ್ನು ಕೋರಟಾಲ ಶಿವ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಖಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು Yuvasudha Arts ಮತ್ತು NTR Arts ಬ್ಯಾನರ್‌ ಅಡಿಯಲ್ಲಿ ಸುಧಾಕರ್ ಮಿಕ್ಕಿಲಿನೇನಿ ಮತ್ತು ಕೊಸರಾಜು ಹರಿಕೃಷ್ಣ ನಿರ್ಮಿಸುತ್ತಿದ್ದಾರೆ. ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದು, ಆರ್ ರತ್ನವೇಲು ಛಾಯಾಗ್ರಹಣ, ಎ ಶ್ರೀಕರ್ ಪ್ರಸಾದ್ ಸಂಕಲನ ನಿರ್ವಹಿಸಿದ್ದಾರೆ. ಈ ಚಿತ್ರದ ಮೊದಲ ಭಾಗ ಏಪ್ರಿಲ್‌ 5ರಂದು ಬಿಡುಗಡೆಯಾಗಲಿದೆ.

ಪುಷ್ಪ-ದಿ ರೂಲ್ | ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಸಿನಿಮಾವನ್ನು ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರವನ್ನು Mythri Movie Makers ಬ್ಯಾನರ್‌ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ ಯಲಮಂಚಿಲಿ ನಿರ್ಮಿಸುತ್ತಿದ್ದಾರೆ. ಇದರಲ್ಲಿ ಫಹಾದ್ ಫಾಸಿಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರವು 2021ರಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿದ್ದ ‘ಪುಷ್ಪ: ದಿ ರೈಸ್’ ಸಿನಿಮಾದ ಮುಂದುವರಿದ ಭಾಗ. ದುಬಾರಿ ಬಜೆಟ್‌ ಸಿನಿಮಾ. ಧನಂಜಯ, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಆಗಸ್ಟ್ 15ರಂದು ತೆರೆಕಾಣಲಿದೆ.

ಸರಿಪೋಧಾ ಸನಿವಾರಂ | ವಿವೇಕ್ ಆತ್ರೇಯ ನಿರ್ದೇಶನದ ನಾನಿ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ‘ಅಂತೇ ಸುಂದರಾನಿಕಿ’ ಚಿತ್ರದ ನಂತರ ನಾನಿ ಮತ್ತೊಮ್ಮೆ ನಿರ್ದೇಶಕ ವಿವೇಕ್ ಆತ್ರೇಯ ಅವರೊಂದಿಗೆ ಕೈಜೋಡಿಸಿರುವ ಪ್ರಾಜೆಕ್ಟ್‌ ಇದು. ನಾನಿಯನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣಬಹುದು. ಸಾಯಿ ಕುಮಾರ್‌ ಅವರ ಧ್ವನಿಯಲ್ಲಿ ಈ ಚಲನಚಿತ್ರದ ಟೀಸರ್‌ ಮೂಡಿಬಂದಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ. ತಮಿಳು ನಟ ಎಸ್‌ ಜೆ ಸೂರ್ಯ ಮತ್ತು ಸಾಯಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು DVV Entertainment ಬ್ಯಾನರ್‌ ಅಡಿಯಲ್ಲಿ ಡಿವಿವಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ ನಿರ್ಮಿಸುತ್ತಿದ್ದಾರೆ. ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸುತ್ತಿದ್ದು, ಮುರಳಿ ಜಿ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್ ಸಂಕಲನ ನಿರ್ವಹಿಸಿದ್ದಾರೆ. ಸಿನಿಮಾ ಇದೇ ವರ್ಷ ತೆರೆಕಾಣಲಿದೆ. ಈ ಹಿಂದೆ ‘ದಸರಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಾನಿ ಅವರು ಇತ್ತೀಚೆಗೆ ‘ಹಾಯ್ ನಾನ್ನ’ ಸಿನಿಮಾದಲ್ಲಿ
ಕಾಣಿಸಿಕೊಂಡಿದ್ದರು.

Double Ismart | ರಾಮ್ ಪೋತಿನೇನಿ ಮತ್ತು ಸಂಜಯ್‌ ದತ್‌ ಅಭಿನಯಿಸುತ್ತಿರುವ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ರೆಡ್ಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವು 2019ರ ಸೈಂಟಿಫಿಕ್‌ – ಫಿಕ್ಷನ್‌ ‘iSmart Shankar’ ಚಿತ್ರದ ಮುಂದುವರಿದ ಭಾಗವಾಗಿದ್ದು, ಸಿನಿಮಾ ಶಿವರಾತ್ರಿಯ ಸಂಧರ್ಭದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here