ಮನುಷ್ಯರು ಸಿಕ್ಕಿಕೊಂಡಿರುವ ಸಾಮಾಜಿಕ ಸಂಬಂಧಗಳ ಗೋಜಲನ್ನು ಬಿಡಿಸದೇ ಅಪರಾಧ ರಹಸ್ಯವನ್ನು ಬಿಡಿಸುವುದು ಸಾಧ್ಯವೋ ಎಂಬ ಗಹನವಾದ ಪ್ರಶ್ನೆಯನ್ನು ಶ್ರೀರಾಮ್ ರಾಘವನ್‌ರ ಸಿನಿಮಾಗಳು ಯಾವಾಗಲೂ ಕ್ಲೀಷೆಗೊಳಿಸದೇ, ಬೆರಗು ಹುಟ್ಟಿಸುವ ಹಾಗೆ ಅಂತ್ಯದ ಅರ್ಥವನ್ನು ನೋಡುಗರ ವಿವೇಚನೆಗೆ ಚುಚ್ಚುವಂತೆ ಇಟ್ಟು ಕೊನೆಗೊಳ್ಳುತ್ತವೆ. ಇಲ್ಲೂ ಅಂಥದ್ದೇ ಅಚ್ಚರಿಗೊಳಿಸುವ ಅಂತ್ಯವಿದೆ. ಮಧು ನೀಲಕಂದನ್ ಅವರ ದೃಷ್ಯ ರಚನೆ, ಬಹಳ ಮುಖ್ಯವಾಗಿ ಬಣ್ಣ ಮತ್ತು ಬೆಳಕಿನ ಮಾಂತ್ರಿಕ ನಿರ್ವಹಣೆ, ಸಿನಿಮಾದ ಜೀವಾಳವಾಗಿದೆ.
ಆರು ವರ್ಷದ ನಂತರ ಶ್ರೀರಾಮ್ ರಾಘವನ್ ತಮ್ಮ ರುಜು ಶೈಲಿಯ ಮತ್ತೊಂದು ರಹಸ್ಯ ರೋಚಕ ಸಿನಿಮಾ ಕಟ್ಟಿದ್ದಾರೆ. ಶ್ರೀರಾಮ್‌ರ ಸಿನಿಮಾವೆಂದರೆ ಅದು ನಿರೂಪಣಾ ಮೊನಚು, ಸಾಮಾಜಿಕ ವಕ್ರತೆ, ಕಳೆದ ಕಾಲದ ಜನಪ್ರಿಯ ಸಿನಿಮಾಗಳ ನೆನಪುಗಳನ್ನು ಅರ್ಥವತ್ತಾದ ಸೂಚಕಗಳಾಗಿ ಕಥನಕ್ಕೆ ಹೆಣೆಯುವ ಚಾತುರ್ಯ ಮತ್ತು ದ್ರವರೂಪದಿಂದ ಘನರೂಪಕ್ಕೆ ನಿಧಾನಕ್ಕೆ ಹರಳುಗಟ್ಟುವ ಬೆರಗಿನ ಪಾತ್ರ ರಚನೆಗಳ ಹದ ಮಿಶ್ರಣದ ಮುದ ಮತ್ತಿನ ಮದಿರೆ. ‘ಮೇರಿ ಕ್ರಿಸ್ಮಸ್’ ಅಂತಹ ಮತ್ತೊಂದು ರಸದ್ರವ್ಯ.
1980ರ ದಶಕದ ಮುಂಬೈ. ಕ್ರಿಸ್ಮಸ್ ಸಂಭ್ರಮದ ರಾತ್ರಿ. ತನ್ನ ಬದುಕಿನ ರಹಸ್ಯವನ್ನು ಮುಚ್ಚಿಟ್ಟುಕೊಂಡ ಒಂಟಿ ಜೀವಿ ಅಲ್ಬರ್ಟ್, ಸಾಂಸಾರಿಕ ಕೇಡಿನ ಮಡುವಲ್ಲಿ ಅರ್ಧ ಮುಳುಗಿ ಅರ್ಧ ತೇಲುತ್ತಿರುವಂತಿರುವ ಬದುಕಿನ ಮಾರಿಯಾ ಮತ್ತವಳ ಮೂಕ ಮಗಳು ಅ್ಯನಿ – ಇವರುಗಳ ಆಕಸ್ಮಿಕ ಭೇಟಿ ಆಗುತ್ತದೆ. ಅಲ್ಲಿಂದ ತಿಳಿಗೆಂಪು ಮತ್ತು ಹಳದಿ ಬಣ್ಣಗಳ ಮಿಶ್ರಣ ಮಬ್ಬು ಬೆಳಕಿನಲ್ಲಿ ಅನಾವರಣವಾಗುವ ದೃಶ್ಯಿಕೆಗಳು ಒಗರು ಸಿಹಿ ಭಾವವೂ ಮತ್ತು ಯಾವುದೋ ಅನಿರೀಕ್ಷಿತ ಆಘಾತ ಎರಗಲು ಹೊಂಚು ಹಾಕಿ ಕೂತಿರುವಂತಹ ಆತಂಕ ಭಾವವೂ ಕಲಸಿ ಹೋದಂತಹ ರೋಚಕ ಕೌತುಕತೆಯಲ್ಲಿ ನೋಡುಗರನ್ನು ಹಿಡಿದಿಡುತ್ತವೆ.
ಮಾರಿಯಾ ಮತ್ತು ಅಲ್ಬರ್ಟ್ ತಾವು ಹಂಬಲಿಸಿದ ಪ್ರೀತಿ ದೊರಕದೆ ಕನಲುತ್ತಿರುವ ಜೀವಗಳು, ಆಕಸ್ಮಿಕ ಭೇಟಿಯೂ ಇಬ್ಬರಲ್ಲೂ ಹೊಸ ಸಾಂಗತ್ಯದ ಮೊಳಕೆ ಒಡೆಯುತ್ತಿದೆ; ಆದರೆ ಏನೋ ಒಂದು ಅಂತರ ಸೆಳೆತವನ್ನು ತಡೆ ಹಿಡಿಯುತ್ತಿದೆ ಎನ್ನುವಂತಹ ಭಾವದಲ್ಲಿ ಸ್ವಪ್ನದ ಹಾಗೆ ದೃಶ್ಯಗಳು ಬಿಚ್ಚುತ್ತಿದ್ದರೂ ನೋಡುಗರಿಗೆ ಇದರಲ್ಲಿ ಏನೋ ಹೊಂಚಿದೆ, ಹೊಂಚು ಹಾಕುತ್ತಿರುವುದು ಅಲ್ಬರ್ಟನೋ ಮಾರಿಯಾಳೋ ಎಂಬ ತೆಳುವಾದ ಸಂದೇಹ ಪ್ರೇಕ್ಷಕರಲ್ಲಿ ತೆಳುವಾಗಿ ಉಳಿಯುವಂತೆ ನಿರೂಪಣೆಯು ಜತನದಲ್ಲಿ ಕಟ್ಟಿಕೊಳ್ಳುತ್ತಿದ್ದಂತೆ, ಊಹಿಸಿದ ಅಪರಾಧವು ಪ್ರಕಟವಾಗುತ್ತಿದ್ದಂತೆ ಶ್ರೀರಾಮ್ ಮಧ್ಯಂತರ ತರುತ್ತಾರೆ.
ಶ್ರೀರಾಮ್ ಜನಪ್ರಿಯ ಸಿನಿಮಾಗಳಲ್ಲಿ ಮೊದಲರ್ಧ ದ್ವಿತೀಯಾರ್ಧಗಳ ನಡುವೆ ಮಧ್ಯಂತರ ಎನ್ನುವುದು ಒಂದು ಕೊಂಡಿ ಮತ್ತೂ ಅವೆರೆಡರ ನಡುವೆ ಭಾವ ಪಲ್ಲಟಗಳನ್ನು ಸೂತ್ರದ ಹಾಗೆ ಹಿಡಿದಿಡುವ ಅಗತ್ಯ ಛಂದಸ್ಸು ಎಂದು ಬಲ್ಲವರು. ಮಧ್ಯಂತರದ ನಂತರ ನೋಡುಗರಿಗೆ ಪಾತ್ರಗಳ ಮಾನವ ಗುಣ ವಿಶೇಷಗಳ ತಿಕ್ಕಾಟದಲ್ಲಿ ನಡೆದಿರುವುದು ಬರೀ ಕಾನೂನು ರೀತ್ಯಾ ನಡೆದ ದೈಹಿಕ ಅಪರಾಧವೋ ಅಥವ ‘ಬಾಂಬೆ’ಯಂತಹ ನಗರದ ಬದುಕಿನ ತಿರುಗಣಿ ಕಡೆತದಲ್ಲಿ ವಿವಿಧಾಕೃತಿಯಲ್ಲಿ ಪ್ರಕಟವಾಗಬಹುದಾದ ದ್ರವರೂಪಿ ನೈತಿಕತೆಯೋ ಎಂದು ಯೋಚಿಸುವಂತೆ ಪಾತ್ರಗಳ ಭಾವರೂಪವನ್ನು ಚುರುಕಾಗಿ ಬೆಳೆಸಲಾಗಿದೆ.
ಮನುಷ್ಯರು ಸಿಕ್ಕಿಕೊಂಡಿರುವ ಸಾಮಾಜಿಕ ಸಂಬಂಧಗಳ ಗೋಜಲನ್ನು ಬಿಡಿಸದೇ ಅಪರಾಧ ರಹಸ್ಯವನ್ನು ಬಿಡಿಸುವುದು ಸಾಧ್ಯವೋ ಎಂಬ ಗಹನವಾದ ಪ್ರಶ್ನೆಯನ್ನು ಶ್ರೀರಾಮ್ ರಾಘವನ್‌ರ ಸಿನಿಮಾಗಳು ಯಾವಾಗಲೂ ಕ್ಲೀಷೆಗೊಳಿಸದೇ, ಬೆರಗು ಹುಟ್ಟಿಸುವ ಹಾಗೆ ಅಂತ್ಯದ ಅರ್ಥವನ್ನು ನೋಡುಗರ ವಿವೇಚನೆಗೆ ಚುಚ್ಚುವಂತೆ ಇಟ್ಟು ಕೊನೆಗೊಳ್ಳುತ್ತವೆ. ಇಲ್ಲೂ ಅಂಥದ್ದೇ ಅಚ್ಚರಿಗೊಳಿಸುವ ಅಂತ್ಯವಿದೆ. ಅಲ್ಬರ್ಟ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿರುವುದರಲ್ಲಿ ವಿಶೇಷವೇನು ಇಲ್ಲ- ಆತನ ಪ್ರತಿಭೆ ಅಂಥದ್ದು. ಆದರೆ, ಮಾರಿಯಾ ಪಾತ್ರದಲ್ಲಿ ಕತ್ರಿನಾ ನಮ್ಮನ್ನು ಚಕಿತಗೊಳಿಸಿದ್ದಾಳೆ; ‘ನಟನಾ ಪ್ರತಿಭೆಯಿಲ್ಲದ ಗಾಜಿನ ಸುಂದರ ಬೊಂಬೆ’ (bembitte) ಎಂಬ ಅವಗಹನೆಗೆ ಈಡಾಗಿರುವ ಆಕೆಗೆ ತನ್ನ ನಿಜ ಸತ್ವ ಪ್ರಕಟಿಸುವ ಒಳ್ಳೆ ಅವಕಾಶ ಸಿಕ್ಕಿದೆ. ಮಧು ನೀಲಕಂದನ್ ಅವರ ದೃಷ್ಯ ರಚನೆ, ಬಹಳ ಮುಖ್ಯವಾಗಿ ಬಣ್ಣ ಮತ್ತು ಬೆಳಕಿನ ಮಾಂತ್ರಿಕ ನಿರ್ವಹಣೆ, ಸಿನಿಮಾದ ಜೀವಾಳವಾಗಿದೆ.