‘ತಿಥಿ’ ಸಿನಿಮಾ ಖ್ಯಾತಿಯ ರಾಮ್ ರೆಡ್ಡಿ ‘ದಿ ಫೇಬಲ್’ ಹಿಂದಿ ಸಿನಿಮಾ ಸಿದ್ಧಪಡಿಸಿದ್ದಾರೆ. ಈ ಸಿನಿಮಾ 74ನೇ ಬರ್ಲಿನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಲಿದೆ. ಮನೋಜ್ ಬಾಜಪೇಯಿ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡದ ಹೊಸ ಅಲೆಯ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಸಿನಿಮಾ ‘ತಿಥಿ’. ಈ ಚಿತ್ರ ನಿರ್ದೇಶಿಸಿದ್ದ ರಾಮ್‌ರೆಡ್ಡಿ ಇದೀಗ ‘ದಿ ಫೇಬಲ್’ ಹಿಂದಿ ಚಿತ್ರದೊಂದಿಗೆ ಮರಳಿದ್ದಾರೆ. ಈ ಸಿನಿಮಾ 74ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗುತ್ತಿದೆ ಎನ್ನುವುದು ವಿಶೇಷ. ‘ಎನ್‌ಕೌಂಟರ್’ ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರದಲ್ಲಿ ಮನೋಜ್ ಬಾಜಪೇಯಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ 30 ವರ್ಷಗಳಲ್ಲಿ ಬರ್ಲಿನ್ ಪ್ರಮುಖ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರೀಮಿಯರ್ ಆಗುವ ಎರಡನೇ ಭಾರತೀಯ ಚಲನಚಿತ್ರ ಇದಾಗಲಿದೆ ಎನ್ನುವುದು ವಿಶೇಷ.
ಈ ಕುರಿತು ಮಾತನಾಡಿರುವ ಮನೋಜ್ ಬಾಜಪೇಯಿ, ‘ದಿ ಫೇಬಲ್ ಚಿತ್ರ ತಂಡದಲ್ಲಿರುವುದು ಉತ್ತಮ ಅನುಭವ. ರಾಮ್ ರೆಡ್ಡಿ ಅವರಂತಹ ಸೃಜನಶೀಲ ವ್ಯಕ್ತಿಗಳೊಂದಿಗೆ ಕೆಲಸ ಮಾಡುವುದು ಮತ್ತು ಮೊದಲ ಬಾರಿಗೆ ಇಂತಹ ಅಂತರಾಷ್ಟ್ರೀಯ ನಿರ್ಮಾಣ ಸಂಸ್ಥೆಯ ಬೆಂಬಲದೊಂದಿಗೆ ಚಿತ್ರೋತ್ಸವದಲ್ಲಿ ಭಾಗವಹಿಸುವುದು ಸ್ಪೂರ್ತಿದಾಯಕವಾಗಿದೆ. ಇದು ಜಾಗತಿಕವಾಗಿ ಮತ್ತು ಕಲಾತ್ಮಕವಾಗಿ ಭಾರತೀಯರ ಸಾಮರ್ಥ್ಯವನ್ನು ತೋರಿಸುತ್ತದೆ’ ಎಂದಿದ್ದಾರೆ. ಚಿತ್ರಕ್ಕೆ ಹಿರಿಯ ನಿರ್ಮಾಪಕ ಸನ್ಮಿಮ್ ಪಾರ್ಕ್ ಬೆಂಬಲ ಸೂಚಿಸಿದ್ದು, ಸಿನಿಮಾದಲ್ಲಿ ದೀಪಕ್ ಡೊಬ್ರಿಯಾಲ್, ಪ್ರಿಯಾಂಕಾ ಬೋಸ್ ಮತ್ತು ತಿಲೋತ್ತಮಾ ಶೋಮ್ ಜೊತೆಗೆ ಹೀರಾಲ್ ಸಿಧು ಮತ್ತು ಬಾಲ ನಟ ಅವನ್ ಪೂಕೋಟ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 74ನೇ ಬರ್ಲಿನ್ ಚಿತ್ರೋತ್ಸವ ಫೆಬ್ರವರಿ 15ರಿಂದ ಫೆಬ್ರವರಿ 24ರವರೆಗೆ ನಡೆಯಲಿದೆ.