ಚೀನಾದಲ್ಲಿ ಭಾರತೀಯ ಸಿನಿಮಾಗಳಿಗೆ ಭಾರೀ ಬೇಡಿಕೆ ಇದೆ. ಹಿಂದಿ, ತೆಲುಗು ಸೇರಿದಂತೆ ಸಾಕಷ್ಟು ಸಿನಿಮಾಗಳು ಈಗಾಗಲೇ ಅಲ್ಲಿ ತೆರೆಕಂಡು ಲಾಭಗಳಿಸಿವೆ. ಈಗ ವಿಕ್ರಾಂತ್‌ ಮೆಸ್ಸಿ ಅಭಿನಯದ ’12th ಫೇಲ್‌’ ಸಿನಿಮಾ ಕೂಡ ಚೀನಾದಲ್ಲಿ ದೊಡ್ಡ ಮಟ್ಟದಲ್ಲೇ ರಿಲೀಸ್‌ ಆಗಲಿದೆ.

ಕಳೆದ ವರ್ಷ ತೆರೆಕಂಡು ಹಿಟ್‌ ಆಗಿದ್ದ ಸಿನಿಮಾಗಳಲ್ಲಿ ಹಿಂದಿ ಭಾಷೆಯ ’12th ಫೇಲ್‌’ ಚಿತ್ರ ಸಹ ಒಂದು. 2023ರ ಅಕ್ಟೋಬರ್‌ 27ರಂದು ರಿಲೀಸ್‌ ಆಗಿ ವೀಕ್ಷಕರ ಮೆಚ್ಚುಗೆ ಪಡೆದು ಯಶಸ್ಸು ಕಂಡಿತ್ತು. ಹಿಟ್‌ ಆದರೂ ಭಾರತದಲ್ಲಿ ಹೆಚ್ಚು ಹಣ ಗಳಿಸದ ಈ ಚಿತ್ರ ಈಗ ಚೀನಾದಲ್ಲಿ ತೆರೆಕಾಣಲು ಸಿದ್ಧವಾಗಿದೆ. ವಿಧು ವಿನೋದ್‌ ಚೋಪ್ರಾ ನಿರ್ದೇಶನದ ಈ ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸಿ ಮತ್ತು ಮೇಧಾ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಯಶಸ್ಸು ಕಂಡು ಒಟಿಟಿಗೆ ಬಂದ ನಂತರ ಈ ಚಿತ್ರ ಚೀನಾದ 20 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಲಿದೆಯಂತೆ.

ಕಳೆದ ನಾಲ್ಕು ತಿಂಗಳಿನಿಂದ ಈ ಸಿನಿಮಾ ಚೀನಾದಲ್ಲಿ ತೆರೆ ಕಾಣಲಿರುವ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಈಗ ಸಿನಿಮಾದ ನಾಯಕ ವಿಕ್ರಾಂತ್‌ ಮೆಸ್ಸಿ ಅಧಿಕೃತವಾಗಿ ಈ ಕುರಿತಾಗಿ ಹೇಳಿದ್ದಾರೆ. ಸಿನಿಮಾ ಪ್ರಮೋಷನ್‌ಗಾಗಿ ಚೀನಾಗೆ ಹೋಗುವ ಸಾದ್ಯತೆ ಇದೆ ಎಂದಿದ್ದಾರೆ ವಿಕ್ರಾಂತ್‌. ಇನ್ನು, ಈ ಸಿನಿಮಾ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್‌ ಕಾಣಲಿಲ್ಲವಾದರೂ, ಸಿನಿಮಾಗೆ ಮೆಚ್ಚುಗೆ ಮಾತ್ರ ಅಪಾರ ಪ್ರಮಾಣದಲ್ಲಿ ಸಿಕ್ಕಿತ್ತು.

‘ದಂಗಲ್‌’, ‘ಪಿಕೆ’, ‘ಸೀಕ್ರೆಟ್‌ ಸೂಪರ್‌ ಸ್ಟಾರ್‌’ನಂತಹ ಸಿನಿಮಾಗಳು ಚೀನಾದಲ್ಲಿ ರಿಲೀಸ್‌ ಆಗಿ ಲಾಭ ಮಾಡಿದ ನಿದರ್ಶನಗಳಿವೆ. ಭಾರತ ಹಾಗೂ ಚೀನಾದ ನಡುವೆ ಗಡಿ ವಿಷಯದಲ್ಲಿ ನಡೆದಿದ್ದ ಶೀತಲ ಸಮರದ ಕಾರಣದಿಂದಾಗಿ 2020ರಲ್ಲಿ ಚೀನಾದಲ್ಲಿ ಭಾರತೀಯ ಸಿನಿಮಾಗಳ ರಿಲೀಸ್‌ ಮೇಲೆ ನಿಷೇಧ ಹೇರಲಾಗಿತ್ತು. ನಂತರದಲ್ಲಿ ಈ ನಿಷೇಧವನ್ನು 2022ರಲ್ಲಿ ತೆರವುಗೊಳಿಸಲಾಯಿತು. ಆಗಲೇ ಸುಶಾಂತ್‌ ಸಿಂಗ್‌ ರಾಜಪೂತ್‌ ಅಭಿನಯದ ‘ಚಿಚೋರೆ’ ಸಿನಿಮಾ ಚೀನಾದಲ್ಲಿ ತೆರೆಕಂಡಿತ್ತು.

LEAVE A REPLY

Connect with

Please enter your comment!
Please enter your name here