ಆಸೆಯ ಬಲೆಯೊಳಗೆ ಸೆಳೆದಿದ್ದ ಕೋಳಿ ಎಸರೇ, ವಿಮೋಚನೆಯ ಮಾರ್ಗವೂ ಆಗುವುದು ಚಿತ್ರದ ಒಂದು ಚಂದದ ತಿರುವು. ಚಂಪಾ ತಮ್ಮ ಈ ಸಿನಿಮಾದ ಮೂಲಕ ಹೆಣ್ತನಕ್ಕೆ, ತಾಯ್ತನದ ಹೋರಾಡುವ ಗುಣಕ್ಕೆ, ಹಣ್ಣಿನ ಆತ್ಮಸ್ಥೈರ್ಯಕ್ಕೆ ಮತ್ತು ಆತ್ಮಗೌರವಕ್ಕೆ ನಮನ ಸಲ್ಲಿಸಿದ್ದಾರೆ. ಇಡೀ ಚಿತ್ರವನ್ನು ಮತ್ತು ಹುಚ್ಚೀರಿಯ ಪಾತ್ರವನ್ನು ಜೀವಂತವಾಗಿಸಿರುವುದು, ಮೇಲಿನ ಸ್ತರಕ್ಕೆ ಕೊಂಡೊಯ್ದಿರುವುದು ಅಕ್ಷತಾ ಪಾಂಡವಪುರ ಅವರ ನಟನೆ.
‘ಅಮ್ಮಚ್ಚಿ ಎಂಬ ನೆನಪು’ ಸಿನಿಮಾದ ಮೂಲಕ ಮಹಿಳಾ ಲೋಕದ ಹಲವು ಮಜಲು ಮತ್ತು ಆಯಾಮಗಳನ್ನು ಹೃದಯಂಗಮವಾಗಿ ತೆರೆಯ ಮೇಲೆ ಬಿಡಿಸಿಟ್ಟಿದ್ದ ಚಂಪಾ ಶೆಟ್ಟಿಯವರ ಎರಡನೇ ಚಿತ್ರ ‘ಕೋಳಿ ಎಸ್ರು’. ಇದರಲ್ಲೂ ಕೂಡ, ನಿರ್ದೇಶಕಿ ಹೆಣ್ಣಿನ ಬದುಕು, ಬವಣೆ, ಭಾವನೆ ಮತ್ತು ಚೈತನ್ಯವನ್ನು ಹಿಡಿದಿಡಲು ಯತ್ನಿಸಿದ್ದಾರೆ. ಆದರೆ, ಬೇರೆಯದೇ ರೂಪ, ರುಚಿ ಮತ್ತು ಸನ್ನಿವೇಶಗಳಲ್ಲಿ. ಕಾ ತಾ ಚಿಕ್ಕಣ ಅವರ ‘ಹುಚ್ಚೀರಿ ಎಸರಿನ ಪ್ರಸಂಗ’ ಕತೆಯನ್ನು ಆಧರಿಸಿದ ಈ ಸಿನಿಮಾ ಸುಮಾರು 80ರ ದಶಕದ ಕಾಲಘಟ್ಟವನ್ನು ತೆರೆಯ ಮೇಲೆ ತಂದಿದೆ. ಚಂಪಾ, ಸರಳ ಕತೆಯೊಂದನ್ನು ಸರಳವಾಗಿ ನಿರೂಪಿಸಿದ್ದರೂ, ಘನವಾದದ್ದನ್ನು ಹೇಳಲು ಯತ್ನಿಸಿದ್ದಾರೆ.
ಕುಡುಕ ಗಂಡ, ವಯಸ್ಸಾದ ಅತ್ತೆ ಮತ್ತು 10 ವರ್ಷದ ಮಗಳ ಸಂಸಾರದ ನೊಗ ಹೊತ್ತಿರುವ ಹುಚ್ಚೀರಿಯದ್ದು ಏಕಾಂಗಿ ಹೋರಾಟ. ಹಳ್ಳಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು ಹೊಟ್ಟೆ ಹೊರೆಯುವ ಹುಚ್ಚೀರಿಗೆ, ಗಂಡನಿಂದ ಯಾವುದೇ ರೀತಿಯ ಬೆಂಬಲವಂತೂ ಇಲ್ಲ. ಬದಲಿಗೆ ತೊಂದರೆ, ಹಿಂಸೆ. ಅವಳ ಪುಡಿಕಾಸನ್ನೇ ಕದ್ದು ಕುಡಿಯುವ ಗಂಡ, ದುಡಿಯುವ ನಾಟಕವನ್ನೂ ಮಾಡುವುದಿಲ್ಲ, ಸೊಸೆಯ ದುಡಿಮೆಯಲ್ಲಿ ಬದುಕಿದ್ದರೂ, ಅತ್ತೆಗೆ ಮಗನ ಮೇಲೆ ಮಮಕಾರ. ಹುಚ್ಚೀರಿಯ ಜೀವನದಲ್ಲಿರುವ ಒಂದೇ ಬೆಳ್ಳಿ ಕಿರಣ ಮಗಳು ಲಕ್ಷ್ಮಿ. ಲಕ್ಷ್ಮಿಗೆ ಕೋಳಿ ಎಸರನ್ನು ಸವಿಯುವ ಆಸೆ. ಮಗಳ ಆ ಸಣ್ಣ ಆಸೆಯನ್ನು ಈಡೇರಿಸಲು ಹುಚ್ಚೀರಿ ಮಾಡುವ ಯತ್ನ, ಎದುರಿಸುವ ಸಮಸ್ಯೆಯೇ ಚಿತ್ರದ ಮುಖ್ಯ ಭಾಗ.
ಹುಚ್ಚೀರಿಯ ಪಾತ್ರ ಗ್ರಾಮೀಣ ಪ್ರದೇಶದ ಹೆಣ್ಣುಗಳ ಚೈತನ್ಯದ ಪ್ರತಿರೂಪದಂತಿದೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿರುವ, ಆದರೆ, ತಾನೇ ಕುಟುಂಬವನ್ನು ಎಲ್ಲಾ ರೀತಿಯಲ್ಲಿ ಸಲಹಬೇಕಿರುವ ತಾಯಿ ಆಕೆ. ಅದಕ್ಕಾಗಿ, ಬೆಳಗ್ಗಿನಿಂದ ರಾತ್ರಿಯವರೆಗೆ ಮನೆಯ ಹೊರಗೆ ಒಳಗೆ ನಿರಂತರವಾಗಿ ದುಡಿಯುವ ಹೆಣ್ಣು. ಸದಾ ಕೆಟ್ಟದಾಗಿ ಬೈದುಕೊಂಡ ಬಿದ್ದಿರುವ, ಅಪ್ರಯೋಜಕ ಗಂಡನಿಗೂ, ಆತನ ಪರವಹಿಸಿ ಸೊಸೆಯನ್ನು ನಿಂದಿಸುವ ಅತ್ತೆಗೂ ತುತ್ತು ಕಾಣಿಸುವುದು ತನ್ನ ಕರ್ತವ್ಯ ಎಂದುಕೊಂಡಿರುವ, ಅವರಿಬ್ಬರು ವಿರುದ್ಧ ಒಂದೂ ಮಾತು ಆಡದ ಹೆಣ್ಣು. ಆದರೆ, ಹೃದಯದಲ್ಲಿರುವ ಬೆಂಕಿಯನ್ನು ಕಣ್ಣುಗಳಲ್ಲೇ ಉಗುಳುವವಳು. ಆ ಕಣ್ಣುಗಳು ಇಡೀ ಚಿತ್ರದಲ್ಲಿ ಹೊಳೆಯುವುದು ಒಮ್ಮೆ ಮಾತ್ರ, ಕೋಳಿ ಎಸರಿನ ನಿರೀಕ್ಷೆಯಲ್ಲಿ ಮಾತ್ರ. ಇಡೀ ಚಿತ್ರವನ್ನು ಮತ್ತು ಹುಚ್ಚೀರಿಯ ಪಾತ್ರವನ್ನು ಜೀವಂತವಾಗಿಸಿರುವುದು, ಮೇಲಿನ ಸ್ತರಕ್ಕೆ ಕೊಂಡೊಯ್ದಿರುವುದು ಅಕ್ಷತಾ ಪಾಂಡವಪುರ ಅವರ ನಟನೆ.
‘ಪಿಂಕಿ ಎಲ್ಲಿ?’ ಚಿತ್ರದ ಮೂಲಕ ನಗರದ ಉದ್ಯೋಗಸ್ಥ ಮಹಿಳೆಯ ಪಾತ್ರದಲ್ಲಿ ಗಮನ ಸೆಳೆದಿದ್ದ ಅಕ್ಷತಾ, ಅದಕ್ಕಿಂತ ತೀರಾ ಭಿನ್ನವಾದ ಈ ಪಾತ್ರದೊಳಗೂ ಅಷ್ಟೇ ಸಹಜವಾಗಿ ಹೊಕ್ಕಿದ್ದಾರೆ. ಅವರ, ಭಾಷೆ, ಹಾವ ಭಾವ, ಮುಖ ಭಾವ, ವೇಷ ಭೂಷಣ ಎಲ್ಲವೂ ಕರಾರುವಕ್ಕಾಗಿದೆ. ಚಿತ್ರದ ಅತೀ ದೊಡ್ಡ ಶಕ್ತಿ ಅಕ್ಷತಾ ಅಭಿನಯ ಎಂದರೆ ಖಂಡಿತಾ ತಪ್ಪಿಲ್ಲ. ಜೊತೆಗೆ, ಮಗಳು ಲಕ್ಷ್ಮಿಯ ಪಾತ್ರದಲ್ಲಿ ನಟಿಸಿರುವ ಅಪೇಕ್ಷಾ ನಾಗರಾಜ್, ಅಕ್ಷತಾಗೆ ಅದ್ಭುತವಾದ ರೀತಿಯಲ್ಲಿ ಸಾಥ್ ನೀಡಿದ್ದಾರೆ. ಅವರಿಬ್ಬರ ಬಾಂಧವ್ಯ ತೀರಾ ಸಹಜವಾಗಿ ಮತ್ತು ಮನಮುಟ್ಟುವ ರೀತಿಯಲ್ಲಿ ಮೂಡಿ ಬಂದಿದೆ. ಅಪೇಕ್ಷಾ ಎಲ್ಲೂ ಹೆಚ್ಚು, ಕಡಿಮೆಯಾಗದಂತೆ ಪ್ರೌಢಿಮೆಯಿಂದ ಆದರೆ ತಮ್ಮ ಮುಗ್ಧತೆಯನ್ನೂ ಕಳೆದುಕೊಳ್ಳದೆ ನಟಿಸಿದ್ದಾಳೆ.
ತಮ್ಮ ಮೊದಲ ಚಿತ್ರದಲ್ಲಿ ಕುಂದ ಕನ್ನಡವನ್ನು ಬಳಸಿದ್ದ ಚಂಪಾ ಇದರಲ್ಲಿ ಮೈಸೂರು ಪ್ರಾಂತ್ಯದ ಡಯಲೆಕ್ಟ್ ಆರಿಸಿಕೊಂಡಿದ್ದಾರೆ. ಭಾಷೆಯ ಸೊಗಡನ್ನು ಸಮರ್ಥವಾಗಿ ಬಳಸಿಕೊಂಡಿರುವ ಅವರು, ಆ ಪ್ರಾಂತ್ಯದ 80ರ ದಶಕದ ಹಳ್ಳಿ, ಹಳ್ಳಿಯ ಜೀವನವನ್ನು ಚಂದವಾಗಿ ಕಟ್ಟಿಕೊಡುವುದರಲ್ಲೂ ಯಶಸ್ವಿಯಾಗಿದ್ದಾರೆ. ಜೊತೆಗೆ, ಜನಪದ ಹಾಡುಗಳನ್ನು ಚಿತ್ರದ ನಿರೂಪಣೆಯ ಜೊತೆಗೆ ಹೆಣೆದಿರುವ ರೀತಿಯೂ ಚೆನ್ನಾಗಿದೆ. ಕತೆಯನ್ನು ಎಲ್ಲೂ ಮೆಲೋಡ್ರಾಮವಾಗಿಸದೆ ಮತ್ತು ಕ್ಲೀಷೆಯಾಗಿಸದೇ ಇರುವುದು ಚಂಪಾ ಅವರ ಮತ್ತೊಂದು ಸಾಧನೆ. ಉದಾಹರಣೆಗೆ, ಕುಡುಕ, ಸದಾ ಕೆಟ್ಟದಾಗಿ ಬೈಯ್ಯುವ ಹುಚ್ಚೀರಿಯ ಗಂಡ, ಹೆಂಡತಿಗೆ ಹೊಡೆಯುತ್ತಾನೆ ಎಂಬ ವಿವರವನ್ನು ಕತೆಯೊಳಗೆ ತರುವುದು ತೀರಾ ನಿರೀಕ್ಷಿತ ಮತ್ತು ಸುಲಭವಾಗಿತ್ತು. ಆದರೆ, ಚಂಪಾ ಅದನ್ನು ಮಾಡುವುದಿಲ್ಲ. ಜೊತೆಗೆ, ಇತರೆಲ್ಲಾ ಮಮತಾಮಯಿ ತಾಯಂದಿರಂತೆ ಹುಚ್ಚೇರಿಗೆ ಮಗಳ ಓದಿನ ಬಗ್ಗೆ ಒಲವಿರುವಂತೆ, ಕನಸಿರುವಂತೆ ಅವರು ತೋರಿಸುವುದಿಲ್ಲ. ಆದರೆ, ಈ ಎರಡೂ ಅಂಶಗಳನ್ನು ಸಿನಿಮಾದ ಕೊನೆಯಲ್ಲಿ ವಿಶೇಷ ಮತ್ತು ಸಮರ್ಥ ರೀತಿಯಲ್ಲಿ ಬಳಸಿಕೊಂಡಿರುವ ನಿರ್ದೇಶಕಿ ಚಿತ್ರಕ್ಕೊಂದು ಹೊಸ ದಿಕ್ಕು ಕೊಡುತ್ತಾರೆಂಬುದು ವಿಶೇಷ.
ತನ್ನ ಪಾಡು ತಾನೇ ನೋಡಿಕೊಳ್ಳಬೇಕಾದ ಹುಚ್ಚೀರಿಗೆ ಬದುಕು ಹಲವು ಪಾಠ ಹೇಳಿಕೊಟ್ಟಿದೆ. ಚಾಲಾಕಿತನವನ್ನೂ ಕಲಿಸಿದೆ. ಉದಾಹರಣೆಗೆ, ಕೋಳಿ ಎಸರಿಗಾಗಿ ಆಕೆ ಹೇಳುವ ಸುಳ್ಳು. ಆದರೆ, ಆ ಚಾಲಾಕಿತನ ಆಕೆಯ ಹೋರಾಟದ ಮನೋಭಾವ ಮತ್ತು ಜೀವ ಚೈತನ್ಯದ ಕುರುಹಾಗಿ ಕಾಣುತ್ತದೆಯೇ ಹೊರತು ಆಕೆಯ ವ್ಯಕ್ತಿತ್ವವನ್ನು ಕೆಳಗಿಳಿಸುವುದಿಲ್ಲ. ಗಂಡನ ಎದುರು ಹುಚ್ಚೀರಿ ಅಳುವುದೂ ಇಲ್ಲ, ಬೈಯುವುದೂ ಇಲ್ಲ, ಜಗಳವಾಡುವುದೂ ಇಲ್ಲ. ತೀಕ್ಷ್ಣವಾಗಿ ನೋಡುತ್ತಾಳೆ ಅಷ್ಟೇ. ಇವೆಲ್ಲವೂ ಹುಚ್ಚೀರಿಯ ಪಾತ್ರಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದೆ.
ಚಿತ್ರದುದ್ದಕ್ಕೂ ನೇರವಾಗಿ ಕತೆ ನಿರೂಪಿಸುವ ಚಂಪಾ, ಕೊನೆಗೊಮ್ಮೆ ಫ್ಲ್ಯಾಷ್‌ಬ್ಯಾಕ್ ತಂತ್ರ ಬಳಸುತ್ತಾರೆ. ಅದು ಚಿತ್ರದ ಹದ ಕೆಡಿಸಿದಂತೆ ಅನಿಸುತ್ತದೆ. ಏಕೆಂದರೆ, ಈ ತಂತ್ರದಿಂದಾಗಿ, ಅದುವರೆಗೂ ತೆರೆಯ ಮೇಲೆ ಪ್ರಮುಖವಾಗಿ ಕಾಣುತ್ತಿದ್ದ ಹುಚ್ಚೀರಿ ಪಾತ್ರ ಒಂದಷ್ಟು ಸಮಯ ಮರೆಯಾಗಿ ಬಿಡುತ್ತದೆ. ಇದರಿಂದ ಪ್ರೇಕ್ಷಕರಿಗೆ ಮತ್ತೇನೋ ನಡೆದಿದೆ ಎಂಬ ಸುಳಿವು ಸಿಗುತ್ತದೆ. ಆದರೆ, ಆ ಘಟನೆಯನ್ನು ಸಸ್ಪೆನ್ಸ್ ಅಂಶವಾಗಿ ನೀಡುವ ನಿರ್ದೇಶಕರ ಯತ್ನ ಯಶಸ್ವಿಯಾಗುವುದಿಲ್ಲ. ಬದಲಾಗಿ ಚಿತ್ರವನ್ನು ಪೂರ್ತಿಯೂಗಿ ಲೀನಿಯರ್ ರೀತಿಯಲ್ಲೇ ನಿರೂಪಿಸಿದ್ದರೆ ಚಿತ್ರಕ್ಕೆ ಮತ್ತಷ್ಟು ತೂಕ ಬರುತ್ತಿತ್ತೇನೋ. ಚಿತ್ರ ಒಂದೂವರೆ ಗಂಟೆಗಳಷ್ಟೇ ಇದ್ದರೂ, ಕೆಲವು ಕಡೆ ಅನಾವಶ್ಯಕ ಉದ್ದವಾದಂತೆ ಅನಿಸುತ್ತದೆ ಮತ್ತು ಇದು ಚಿತ್ರದ ಗತಿಯನ್ನು ನಿಧಾನಗೊಳಿಸುತ್ತದೆ. ಚಿತ್ರದ ಕತೆ ಸಣ್ಣದಾಗಿರುವ ಮತ್ತು ಸರಳವಾಗಿರುವ ಕಾರಣ, ಚಿತ್ರವನ್ನು ಮತ್ತಷ್ಟು ಗಟ್ಟಿಯಾಗಿಸಬಲ್ಲ ಸನ್ನಿವೇಶಗಳನ್ನು ನೀಡಬಹುದಿತ್ತು ಮತ್ತು ಕೆಲವು ಪಾತ್ರಗಳನ್ನು ವಿಸ್ತರಿಸಬಹುದಿತ್ತು.
ಚಿತ್ರದ ಉಳಿದ ಪಾತ್ರಗಳಿಗೆ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಇಲ್ಲದೇ ಹೋದರೂ, ನೆನಪಿನಲ್ಲಿ ಉಳಿಯುವಂತಿವೆ. ಹುಚ್ಚೀರಿಯ ಗಂಡನ ಪಾತ್ರದಲ್ಲಿ ಪ್ರಕಾಶ್ ಶೆಟ್ಟಿ ಸೇರಿದಂತೆ ನಟನಾ ಮಂಜು, ದಾಕ್ಷಾಯಿಣಿ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಫ್ರಾನ್ಸಿಸ್ ರಾಜ್‌ಕುಮಾರ್ ಕ್ಯಾಮೆರಾ ಅಚ್ಚುಕಟ್ಟಾದ ಕೆಲಸ ಮಾಡಿದೆ. ಕೆಲವು ದೃಶ್ಯಗಳನ್ನು ಅವರು ತುಂಬಾ ಸುಂದರವಾಗಿ ಸಂಯೋಜಿಸಿದ್ದಾರೆ. ಹುಚ್ಚೀರಿಯನ್ನು ಆಸೆಯ ಬಲೆಯೊಳಗೆ ಸೆಳೆದಿದ್ದ ಕೋಳಿ ಎಸರೇ, ವಿಮೋಚನೆಯ ಮಾರ್ಗವೂ ಆಗುವುದು ಚಿತ್ರದ ಒಂದು ಚಂದದ ತಿರುವು. ಚಂಪಾ ತಮ್ಮ ಈ ಸಿನಿಮಾದ ಮೂಲಕ ಹೆಣ್ತನಕ್ಕೆ, ತಾಯ್ತನದ ಹೋರಾಡುವ ಗುಣಕ್ಕೆ, ಹಣ್ಣಿನ ಆತ್ಮಸ್ಥೈರ್ಯಕ್ಕೆ ಮತ್ತು ಆತ್ಮಗೌರವಕ್ಕೆ ನಮನ ಸಲ್ಲಿಸಿದ್ದಾರೆ.