ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ವಿಭಾಗದ ಸ್ಪರ್ಧೆಯಲ್ಲಿ ಈ ಬಾರಿ 12 ಸಿನಿಮಾಗಳಿವೆ. ಈ ಪೈಕಿ ರಘು ಶಾಸ್ತ್ರೀ ನಿರ್ದೇಶನದ ‘ಲೈನ್ ಮ್ಯಾನ್’ ಸಿನಿಮಾ ಸ್ಪರ್ಧೆಗಿಳಿಯುತ್ತಿದೆ. ಪರ್ಪಲ್ ರಾಕ್ ಸಂಸ್ಥೆಯಡಿ ತಯಾರಾಗಿರುವ ಈ ಸಿನಿಮಾದ ನಾಯಕನಟನಾಗಿ ತ್ರಿಗುಣ್ ನಟಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ತಿಂಗಳ 29ರಿಂದ ಮಾರ್ಚ್ 7ರವೆರೆಗೆ ನಡೆಯಲಿದೆ. 15ನೇ ಬೆಂಗಳೂರು ಸಿನಿಮೋತ್ಸವದಲ್ಲಿ ಕನ್ನಡ ಸೇರಿದಂತೆ ವಿಶ್ವದ ಹಲವು ಭಾಷೆಗಳ ಸಿನಿಮಾ ಪ್ರದರ್ಶನಗೊಳ್ಳಲಿವೆ. ಜೊತೆಗೆ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗವೂ ಇದ್ದು, ಮೂರು ವಿವಿಧ ಸ್ಪರ್ಧಾ ವಿಭಾಗದಲ್ಲಿ ಹಲವು ಕನ್ನಡ ಸಿನಿಮಾಗಳು ಇತರೆ ಭಾಷೆಯ ಸಿನಿಮಾಗಳೊಟ್ಟಿಗೆ ಪ್ರಶಸ್ತಿಗಾಗಿ ಸೆಣೆಸಲಿವೆ. ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾಗಳಿವೆ. ಈ ಪೈಕಿ ‘ಟಕ್ಕರ್’, ‘ರನ್ ಆಂಟೋನಿ’ ಖ್ಯಾತಿಯ ರಘು ಶಾಸ್ತ್ರೀ ನಿರ್ದೇಶನದ ‘ಲೈನ್ ಮ್ಯಾನ್’ ಸಿನಿಮಾ ಸ್ಪರ್ಧೆಗಿಳಿಯುತ್ತಿದೆ.
‘ಡಿಯರ್ ಸತ್ಯ’ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯಡಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಲೈನ್ ಮ್ಯಾನ್ ಚಿತ್ರಕ್ಕೆ ಹಣ ಹಾಕಿದ್ದಾರೆ. RGV ನಿರ್ದೇಶನದ ‘ಕೊಂಡ’ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಇದು ನಾಯಕನಾಗಿ ಚೊಚ್ಚಲ ಹೆಜ್ಜೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಳ್ಳಿ ಕಡೆ ದಿನಾ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ಸಂಬಂಧಿಸಿ ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಕತೆ ನಡೆಯಲಿದೆ. ತ್ರಿಗುಣ್ ‘ಲೈನ್ ಮ್ಯಾನ್’ ಪಾತ್ರದಲ್ಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಶಾಂತಿ ಸಾಗರ್ ಛಾಯಾಗ್ರಹಣವಿದೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಮುಂದಿನ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ.