ಕಾರ್ತೀಕ್‌ ಮಾರಲಭಾವಿ ಚೊಚ್ಚಲ ನಿರ್ದೇಶನದ ‘ಥಗ್ಸ್ ಆಫ್ ರಾಮಘಡ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗಿರುವ ಚಿತ್ರದ ಹೀರೋಗಳಾಗಿ ಅಶ್ವಿನ್‌ ಹಾಸನ್‌ ಮತ್ತು ಚಂದನ್‌ ರಾಜ್‌ ಅಭಿನಯಿಸಿದ್ದಾರೆ. 2023ರ ಜನವರಿ ಮೊದಲ ವಾರ ಸಿನಿಮಾ ತೆರೆಕಾಣುತ್ತಿದೆ.

“ಚಿತ್ರತಂಡವನ್ನು ನೋಡಿ ತುಂಬಾ ಖುಷಿಯಾಯ್ತು. ನಿರ್ದೇಶಕ ಕಾರ್ತಿಕ್ ತುಂಬಾ ಒಳ್ಳೇ ಟೀಂ ಕಟ್ಟಿಕೊಂಡು, ಒಳ್ಳೆ ಕಲಾವಿದರೊಂದಿಗೆ ನೈಜ ಘಟನೆ ಆಧರಿಸಿದ ಸಿನಿಮಾ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಕೂಡ ತುಂಬಾ ಕ್ರಿಯೇಟಿವ್ ಆಗಿ ಮಾಡ್ತಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆದಾಗ್ಲಿ. ಇದು ವರ್ಷದ ಮೊದಲ ಹಿಟ್ ಸಿನಿಮಾ ಆಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬರಲಿ. ಆ ಭಾಗದ ಕಥೆಗಳನ್ನು ಹೇಳಲಿ” ಎಂದು ‘ಥಗ್ಸ್ ಆಫ್ ರಾಮಘಡ’ ಟ್ರೈಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು ನಟ ಧನಂಜಯ.

ಚಿತ್ರದ ನಿರ್ದೇಶಕ ಕಾರ್ತಿಕ್ ಮಾರಲಭಾವಿ ಮಾತನಾಡಿ, “ಈ ಚಿತ್ರಕ್ಕಾಗಿ ಒಂದೂವರೆ ವರ್ಷದಿಂದ ಇಡೀ ತಂಡ ಕಷ್ಟಪಟ್ಟಿದ್ದೀವಿ. ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುತ್ತಿದೆ. ಟ್ರೈಲರ್‌ ನೋಡಿ ಯಾಕಿಷ್ಟು ವೈಲೆನ್ಸ್ ಎನ್ನೋರಿಗೆ ಸಿನಿಮಾ ನೋಡಿದ ಮೇಲೆ ವೈಲೆನ್ಸ್ ಯಾಕೆ ಎಂದು ಅರ್ಥವಾಗುತ್ತೆ. ನಾನು ಯಾದಗಿರಿಯ ಪುಟ್ಟ ಹಳ್ಳಿಯಿಂದ ಬಂದವನು. ಊರಿನಲ್ಲಿ ನಮ್ಮ ಹಿರಿಯರು ಹಿಂದೆ ನಡೆದ ಘಟನೆಯೊಂದರ ಕುರಿತಾಗಿ ಹೇಳುತ್ತಿದ್ದರು. ಈ ಘಟನೆಯೇ ಸಿನಿಮಾಗೆ ಸ್ಫೂರ್ತಿಯಾಗಿದೆ” ಎಂದರು. ಈ ಮೊದಲು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಕಾರ್ತಿಕ್‌ ಅವರಿಗೆ ಇದು ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ.

ನಟ ಅಶ್ವಿನ್‌ ಹಾಸನ ಅವರಿಗೆ ಚಿತ್ರದಲ್ಲಿ ಮಹತ್ವದ ಪಾತ್ರವಿದೆ. “ಕೋವಿಡ್‌ ಲಾಕ್‌ಡೌನ್‌ನಲ್ಲಿ ಕೇಳಿದ ಕಥೆ ಇದು. ಪಾತ್ರ ಪುಟ್ಟದಿರಲಿ, ದೊಡ್ಡದಿರಲಿ.. ಇಲ್ಲಿಯವರೆಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಈ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದೇನೆ. ಲೀಡ್ ರೋಲ್ ಪಡೆಯೋದು ಸುಲಭವಲ್ಲ. ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಪಾತ್ರ ನೀಡಿದ್ದಾರೆ. ಈ ಸಿನಿಮಾ ನಮ್ಮೆಲ್ಲರ ಕನಸು. ಗೆಲ್ಲಲೇಬೇಕು ಎಂದು ಚಿತ್ರವನ್ನು ಮಾಡಿದ್ದೀವಿ” ಎನ್ನುವುದು ಅಶ್ವಿನ್‌ ಮಾತು. ಚಿತ್ರದ ಇನ್ನೊಬ್ಬ ನಾಯಕನಟ ಚಂದನ್‌ ರಾಜ್‌. ನಾಯಕಿಯಾಗಿ ಮಹಾಲಕ್ಷ್ಮೀ ಇದ್ದಾರೆ. ಜೈ ಕುಮಾರ್ ಮತ್ತು ಕೀರ್ತಿ ರಾಜ್ ನಿರ್ಮಾಣದ ಚಿತ್ರಕ್ಕೆ ವಿವೇಕ್‌ ಚಕ್ರವರ್ತಿ ಸಂಗೀತ, ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್‌ ಸಂಕಲನವಿದೆ.

LEAVE A REPLY

Connect with

Please enter your comment!
Please enter your name here