ಸಿನಿಮಾ ನಮ್ಮ ಕಾಲದ ದಾಖಲೆ ಎಂಬುದು ನಿಜವಾದರೆ, ಅದನ್ನು ಹೇಗೆ ದಾಖಲಿಸಬೇಕು ಎಂಬುದಕ್ಕೆ ‘ಫೋಟೋ’ ಒಂದು ಅತ್ಯುತ್ತಮ ಉದಾಹರಣೆ. ಹಲವು ದಿನಗಳ ಕಾಲ ಕಾಡುವ, ಎಲ್ಲರಲ್ಲೂ ಒಂದು ಮಟ್ಟಿನ ಅಪರಾಧ ಭಾವ ಮೂಡಿಸುವ, ಒಂದು ಕುಟುಂಬದ ಕತೆಯನ್ನು ಹೇಳುವ ಮೂಲಕ ಲಕ್ಷಾಂತರ ಜನರ ಬದುಕನ್ನು ತೆರೆದಿಡುವ ಸಿನಿಮಾ. ಸಿನಿಮಾ ಕತೆ, ಸಿನಿಮಾ ಕಲೆ ಮತ್ತು ಅದು ಹೇಳುವ ವಿಷಯ ಎಲ್ಲಾ ದೃಷ್ಟಿಯಿಂದ ಕನ್ನಡದ ಒಂದು ಅತ್ಯುತ್ತಮ ಸಿನಿಮಾ ಎನಿಸಿಕೊಳ್ಳುವ ‘ಫೋಟೋ’ ಎಲ್ಲಾ ಸಿನಿಮಾಸಕ್ತರು ಖಂಡಿತಾ ನೋಡಲೇಬೇಕಾದ ಚಿತ್ರ.
ಕೊರೋನಾ ವೈರಸ್ ದೇಶದೊಳಗೆ ಕಾಲಿಟ್ಟು, ಲಾಕ್ಡೌನ್ ಘೋಷಣೆಯಾಗಿ, ಎಲ್ಲರೂ ಮನೆಯೊಳಗೆ ಬಂಧಿಯಾಗಿ ಕುಳಿತಾಗ, ಬಹಳಷ್ಟು ಮಂದಿಗೆ ಅದು ಕುಟುಂಬದ ಜೊತೆ ಕಾಲ ಕಳೆಯಲು ಸಿಕ್ಕ ಒಂದು ಸದವಕಾಶ ಎನಿಸಿತು. ಓಡುವ ಬದುಕಿಗೆ ಅಗತ್ಯವಾಗಿ ಬೇಕಿದ್ದ ಒಂದು ಬ್ರೇಕ್ ಅನಿಸಿತ್ತು. ನಾವು ನಮ್ಮ ಬೆಚ್ಚನೆಯ ಸೂರಿನೊಳಗೆ ಕುಳಿತು ಕೌಟುಂಬಿಕ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದಾಗ, ನಮ್ಮ ಸುತ್ತಮುತ್ತ ಲಕ್ಷಾಂತರ ಕುಟುಂಬಗಳು ಹರಿದು ಛಿದ್ರವಾಗುತ್ತಿದ್ದ ಸದ್ದು ನಮಗೆ ಕೇಳಲೇ ಇಲ್ಲ. ನಾವು ಆನಂದಿಸುತ್ತಿರುವ ಸವಲತ್ತುಗಳಿಲ್ಲದ ದಿನಗೂಲಿ ಕಾರ್ಮಿಕರ ಗತಿ ಏನು, ನಗರಗಳಲ್ಲಿ ಇರಲೂ ಆಗದ, ತಮ್ಮೂರಿಗೆ ಮರಳಲೂ ಸಾಧ್ಯವಿಲ್ಲದ ಕಾರ್ಮಿಕರ ಗತಿ ಏನು ಎಂಬ ಪ್ರಶ್ನೆ ಲಾಕಡೌನ್ ಹೇರಿದವರ ಮನಸಲ್ಲೂ ಮೂಡಲಿಲ್ಲ. ಅದೊಂದು ಜೀವಮಾನದಲ್ಲೇ ಮತ್ತೆಂದೂ ಸಿಗಲಾರದ ಹೊಸ ಅನುಭವ ಎಂಬಂತೆ ಉತ್ಸುಕರಾದ ನಮ್ಮನ್ನೂ ಕಾಡಲಿಲ್ಲ.
ನಡೆಯುತ್ತಲೇ ತಮ್ಮ ಸ್ವಂತ ಊರುಗಳತ್ತ ಸಾಗಿದ್ದ ವಲಸಿಗರು, ರೈಲಿನ ಅಡಿಗೆ ಸಿಕ್ಕು ಹಳಿಯ ಮೇಲೆ ಪ್ರಾಣ ಬಿಟ್ಟಂತಹ ಬೆಚ್ಚಿ ಬೀಳಿಸುವ ದುರಂತ ನಡೆಯುವವರೆಗೂ, ಲಾಕ್ಡೌನ್ ಎಲ್ಲರಿಗೂ ಬೇಕಾಗಿದ್ದ ಒಂದು ವೆಕೇಶನ್ ಎಂಬ ಕಲ್ಪನೆ ಹಲವರಲ್ಲಿತ್ತು. ಹೀಗಾಗಿಯೇ, ನಮ್ಮ ಸಿನಿಮಾಗಳೂ ಕೂಡ ಲಾಕ್ಡೌನ್ ಅನ್ನು ಹೊಟ್ಟೆ ತುಂಬಿದ ವರ್ಗದ ದೃಷ್ಟಿಯಿಂದಲೇ ನೋಡಿ, ಕೋವಿಡ್ ಕಾಲದ ಭಾವನಾತ್ಮಕ ಪ್ರೇಮ ಕಥೆ, ಸಂಬಂಧಗಳ ಕತೆ, ಹಾಸ್ಯದ ಕತೆಯನ್ನು ಕೊಟ್ಟಿದ್ದೇ ಹೆಚ್ಚು. ಅಲ್ಲೊಂದು, ಇಲ್ಲೊಂದು ಮಾತ್ರ ವಲಸಿಗರ ಕಷ್ಟವನ್ನು ಹೇಳಿದವಷ್ಟೆ. ಈ ನಿಟ್ಟಿನಲ್ಲಿ ನೋಡಿದಾಗ ‘ಫೋಟೋ’, ಸಿದ್ಧ ಸವಲತ್ತುಗಳಿಂದ, ಸೂಕ್ಷ್ಮತೆ ಕಳೆದುಕೊಂಡ ನಮ್ಮಲ್ಲರ ಪ್ರಜ್ಞೆಗಳಿಗೆ ಛಡಿಯೇಟು ನೀಡುವಂತಹ ಚಿತ್ರ.
ನಿರ್ದೇಶಕ ಉತ್ಸವ್ ಗೋನಾವರ್ ನಿರ್ದೇಶನದ ‘ಫೋಟೋ’ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಸಣ್ಣ ಶಾಲಾ ಬಾಲಕ ದುರ್ಗ್ಯಾ. ದುರ್ಗ್ಯಾನ ಅಪ್ಪ ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕ. ಹಳ್ಳಿಯಲ್ಲಿ ಅಮ್ಮನ ಜೊತೆ ಇರುವ ದುರ್ಗ್ಯಾನ ದೊಡ್ಡ ಕನಸೆಂದರೆ ವಿಧಾನಸೌಧ ನೋಡುವುದು, ನೋಡುವುದಕ್ಕಿಂತ ಮುಖ್ಯವಾಗಿ ಅದರ ಮುಂದೊಂದು ಫೋಟೋ ತೆಗೆಸಿಕೊಳ್ಳುವುದು. ಶಾಲೆಗೆ ರಜ ಸಿಕ್ಕಾಗ ಹಠ ಮಾಡಿ ಬೆಂಗಳೂರು ತಲುಪಿ ಅಪ್ಪನನ್ನು ಸೇರುವ ದುರ್ಗ್ಯಾನ ವಿಧಾನಸೌಧ ನೋಡುವ ಕನಸಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಕೊರೋನಾ ಮತ್ತು ದಿಢೀರ್ ಲಾಕ್ಡೌನ್ ಆತನ ಬೆಂಗಳೂರು ವಾಸವನ್ನು ಸೆರೆಮನೆವಾಸವಾಗಿಸುತ್ತದೆ. ದುರ್ಗ್ಯಾ, ಆತನ ತಂದೆಯ ಜೊತೆ ಊರಿಗೆ ಮರಳುವ ಪ್ರಯಾಣವೇ ಚಿತ್ರದ ಮೂಲ ವಸ್ತು.
‘ಫೋಟೋ’ ಸಿನಿಮಾದ ಕತೆ ದುರ್ಗ್ಯಾನ ಮುಗ್ಧ ದೃಷ್ಟಿಕೋನದಲ್ಲಿ ಆರಂಭವಾಗಿ, ನಿಧಾನಕ್ಕೆ ಸಾರ್ವತ್ರಿಕಗೊಳ್ಳುತ್ತದೆ. ಭಾರತ ಕಂಡ ಕರಾಳ ಅಧ್ಯಾಯವನ್ನು ದಾಖಲಿಸುತ್ತದೆ. ನಿರ್ದೇಶಕರು ತೆರೆಯ ಮೇಲೆ ಕಡಿಮೆ ಹೇಳಿ, ಸಾಕಷ್ಟು ವಿಷಯವನ್ನು ಹೇಳದೆಯೇ ಪ್ರೇಕ್ಷಕರಿಗೆ ದಾಟಿಸಿರುವ ರೀತಿ ಅನನ್ಯ. ನಿರ್ದೇಶಕರು ಸಿನಿಮಾದ ಚಿಕ್ಕ ಪುಟ್ಟ ಪಾತ್ರಗಳನ್ನೂ ಕೂಡ ಮಾನವನ ಒಳ್ಳೆಯತನ, ಸಣ್ಣತನ, ಮನುಷ್ಯತ್ವ ಮತ್ತು ಅಮಾನುಷತೆಯನ್ನು ಹೇಳಲು ಬಳಸಿಕೊಂಡಿದ್ದಾರೆ. ಅಂದರೆ, ಇಲ್ಲಿ ಕ್ಯಾರೇ ಅನ್ನದ ಕರ್ತವ್ಯನಿರತ ನಿರ್ಲಿಪ್ತ ಪೋಲೀಸರೂ ಇದ್ದಾರೆ. ನಿಯಮಗಳನ್ನೂ ಮೀರಿ, ತಮ್ಮ ಕೈಲಾದ ಸಹಾಯ ಮಾಡುವ ಮಾನವೀಯ ಮುಖದ ಪೊಲೀಸರೂ ಇದ್ದಾರೆ. ಜ್ವರವಿದೆ ಎಂದು ಕಾರಿನಲ್ಲಿ ಹತ್ತಿಸಿಕೊಳ್ಳದೆ ಹೋಗುವ ವ್ಯಕ್ತಿಗಳೇ, ತುರ್ತು ಸೇವೆಗೆ ಕರೆ ಮಾಡಿ ವಿಷಯ ತಿಳಿಸಿ ನೆರವಾಗಲು ಯತ್ನಿಸುತ್ತಾರೆ. ಇನ್ಯಾರೋ ಲಿಫ್ಟ್ ಕೊಡುತ್ತಾರೆ. ಮತ್ಯಾರೋ ತಾವು ಮಾಡಿದ ಸಹಾಯವನ್ನು ಹೇಳಿಕೊಂಡು ರೀಲ್ ಮಾಡಿ ಹೀರೋಗಳಾಗುತ್ತಾರೆ. ಮತ್ತೊಂದೆಡೆ ಬಾಕಿ ಸಂಬಳ ಇನ್ನೂ ಕೊಟ್ಟಿಲ್ಲದ ಮೇಸ್ತ್ರಿ ಫೋನ್ ಸ್ವೀಕರಿಸದೆ ‘ಗೋ ಕೋರೋನಾ’ ಎಂದು ಪಟಾಕಿ ಹಚ್ಚಲು ಹೋಗುತ್ತಾನೆ. ಹೀಗೆ, ಹಲವು ಮುಖಗಳು, ಹಲವು ಸನ್ನಿವೇಶಗಳು, ಹಲವು ಪ್ರತಿಕ್ರಿಯೆಗಳು. ಇವನ್ನೆಲ್ಲಾ ಸೆರೆಹಿಡಿದು ಚಿತ್ರಕತೆಯೊಳಗೆ ಸೇರಿಸಿದ್ದಾರೆ ಉತ್ಸವ್. ತಮ್ಮ ಮೊದಲ ಸಿನಿಮಾದಲ್ಲೇ ಈ ಮಾಧ್ಯಮದ ಮೇಲೆ ಅವರು ಪ್ರದರ್ಶಿಸಿರುವ ಹಿಡಿತ ತೀರಾ ಅಪರೂಪದ್ದು.
ಚಿತ್ರಕಥೆಯದ್ದು ಒಂದು ತೂಕವಾದರೆ, ಅದನ್ನು ತೆರೆಗೆ ತಂದಿರುವ ರೀತಿಯೂ ಅದ್ಭುತವಾಗಿದೆ. ಸಿನಿಮಾದ ಭಾವಕ್ಕೆ ತಕ್ಕಂತಿರುವ ಮತ್ತು ಆ ಭಾವವನ್ನು ಮತ್ತಷ್ಟು ಗಾಢವಾಗಿಸುವ ಸರಳವಾದ ಆದರೆ ಅಮೋಘವಾದ ಸಿನಿಮಾಟೋಗ್ರಫಿ ಫೋಟೋದ ಒಂದು ದೊಡ್ಡ ಶಕ್ತಿ. ಅದರಲ್ಲೂ ಮುಖ್ಯವಾಗಿ ಚಿತ್ರದ ದ್ವಿತೀಯಾರ್ಧದ ಯಶಸ್ಸಿನ ದೊಡ್ಡಪಾಲು ಕ್ಯಾಮೆರಾ ಕೆಲಸಕ್ಕೆ ಸಲ್ಲುತ್ತದೆ. ಇಲ್ಲಿ ಸಿನಿಮಾಟೋಗ್ರಫರ್ ದಿನೇಶ್ ದಿವಾಕರನ್ ಬಳಸಿರುವ ಫ್ರೇಮ್ಗಳು, ಸಿನಿಮಾದ ಕಥೆಗೊಂದು ಸೂಕ್ತ ಚೌಕಟ್ಟು ಹಾಕಿದೆ. ಕಿಲೋಮಿಟರ್ಗಟ್ಟಲೆ ವಿಸ್ತಾರವಾದ, ನಿರ್ಜನವಾದ ಖಾಲಿ ಖಾಲಿ ಪ್ರದೇಶಗಳು, ಲಾಂಗ್ ಮತ್ತು ದ್ರೋಣ್ ಶಾಟ್ಗಳು ಖಂಡಿತ ಹಲವು ದಿನಗಳ ಕಾಲ ನಮ್ಮನ್ನು ಕಾಡುತ್ತವೆ.
ಉತ್ಸವ್ ಇಂತಹ ಎದೆ ಕಲಕುವ ಕತೆಯಿದ್ದರೂ, ದುರಂತದ, ಬಡತನದ ವೈಭವೀಕರಣ ಮಾಡಿಲ್ಲ. ಅಂದರೆ, ಎಲ್ಲರನ್ನೂ ಕೆಟ್ಟವರಾಗಿಸಿ, ದುರಂತವೊಂದನ್ನು ಮತ್ತಷ್ಟು ಘೋರವಾಗಿಸಿ ಅದನ್ನು ವಿಜೃಂಭಿಸುವ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವ ಯತ್ನ ನಡೆಸಿಲ್ಲ. ಅದರ ಬದಲಾಗಿ ಕತೆ, ಪಾತ್ರ, ಸನ್ನಿವೇಶಗಳನ್ನು ಆದಷ್ಟು ನೈಜವಾಗಿಟ್ಟಿದ್ದಾರೆ. ಅತಿಯಾದ ಸಂಭಾಷಣೆಗಳನ್ನು ಬಳಸಿಲ್ಲ. ಅಥವಾ ಸಂಭಾಷಣೆ ಬಳಕೆಯಲ್ಲಿ ಜಿಪುಣತನವನ್ನೇ ತೋರಿದ್ದಾರೆ ಎನ್ನಬಹುದು. ಹೀಗಾಗಿ, ಚಿತ್ರದ ಉದ್ದಕ್ಕೂ ಅಂತರ್ಗತವಾಗಿರುವ ಮೌನ, ಅಂತ್ಯದಲ್ಲಿ ಮಾತ್ರ ಕದಡುತ್ತದೆ.
ನಿರ್ದೇಶಕರು ಹಲವು ವೈರುಧ್ಯಗಳನ್ನು, ಸಂಗತಿಗಳನ್ನು ದೃಶ್ಯದ ಮೂಲಕವೇ ಹೇಳುತ್ತಾರೆ. ಉದಾಹರಣೆಗೆ, ಅಪ್ಪ ಮಗ ತಮ್ಮಷ್ಟಕ್ಕೆ ವಿಧಾನಸೌಧವನ್ನು ಹೊರಗಿಂದ ನೋಡಿ ಬರಲು ಬರಲು ತೊಡಕಾಗುವ ಕಾನೂನು, ‘ಗೋ ಕೋರೋನಾ’ ಎಂಬ ಗುಂಪು ಮೆರವಣಿಗೆಗೆ ಅಡ್ಡಿಯಾಗುವುದಿಲ್ಲ, ದುರ್ಗ್ಯಾ ಹೆತ್ತವರು ತಮ್ಮ ಮನೆ ಬೆಳಕನ್ನು ಕಳೆದುಕೊಂಡು ಅಳುತ್ತಿದ್ದರೆ, ಇಡೀ ಜಗತ್ತು ದೀಪ ಹಚ್ಚಿ, ಪಟಾಕಿ ಹೊಡೆದು ಕೋರೋನ ಓಡಿಸುವ ಸಂಭ್ರಮದಲ್ಲಿರುತ್ತದೆ. ಸಿನಿಮಾದ ಕೊನೆಯಲ್ಲಿ ದುರ್ಗ್ಯಾನ ತಾಯಿ ತನ್ನ ಮಗ ತಂದಿಟ್ಟ ವಿಧಾನಸೌಧ ಚಿತ್ರವನ್ನು ಸಿಟ್ಟಿನಿಂದ ಹರಿದು ಎಸಿಯುವ ದೃಶ್ಯ ಅತ್ಯಂತ ಮಾರ್ಮಿಕ ಮತ್ತು ಶಕ್ತಿಯುತವಾಗಿದೆ.
ಅತ್ಯಂತ ಕಡಿಮೆ ಬಜೆಟ್ನಲ್ಲಿ, ಬಹುತೇಕ ತನ್ನ ಊರಿನ ಜನರನ್ನೇ ಸೇರಿಸಿ, ಚಿತ್ರ ನಿರ್ಮಿಸಿರುವ ಉತ್ಸವ್, ಇದ್ಯಾವುದೂ ಚಿತ್ರದ ಗುಣಮಟ್ಟ ಕಡಿಮೆ ಮಾಡದಂತೆ ಎಚ್ಚರಿಕೆಯನ್ನೂ ವಹಿಸಿದ್ದಾರೆ. ಮುಖ್ಯ ಪಾತ್ರದಲ್ಲಿರುವ ವಿರೇಶ್ ಗೋನಾವರ್ ಪ್ರೇಕ್ಷಕರ ಮನಸ್ಸಿನೊಳಗೆ ಉಳಿದು ಬಿಡುತ್ತಾನೆ. ಆತನ ಅಪ್ಪನಾಗಿ ನಟಿಸಿರುವ ಮಹದೇವ್ ಹಡಪದ್ ಆ ಪಾತ್ರವೇ ತಾವಾಗಿದ್ದಾರೆ. ತಾಯಿಯ ಪಾತ್ರದಲ್ಲಿರುವ ಸಂಧ್ಯಾ ಅರಕೆರೆ, ಜಹಾಂಗೀರ್ ಎಂ ಎಸ್ ಉತ್ತಮವಾಗಿ ನಟಿಸಿದ್ದಾರೆ. ಉಳಿದಂತೆ ಸಣ್ಣ ಪುಟ್ಟ ಪಾತ್ರಗಳನ್ನು ಊರಿನವರೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಒಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲವನ್ನೇ ಬಳಸಿಕೊಂಡಿದ್ದರೂ, ಉತ್ಸವ್ ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಂಡಂತೆ ತೆರೆಯ ಮೇಲೆ ಕಾಣುವುದಿಲ್ಲ.
ಸಿನಿಮಾ ನಮ್ಮ ಕಾಲದ ದಾಖಲೆ ಎಂಬುದು ನಿಜವಾದರೆ, ಅದನ್ನು ಹೇಗೆ ದಾಖಲಿಸಬೇಕು ಎಂಬುದಕ್ಕೆ ‘ಫೋಟೋ’ ಒಂದು ಅತ್ಯುತ್ತಮ ಉದಾಹರಣೆ. ಸಿನಿಮಾ ಮುಗಿದ ಮೇಲೆ ಕಣ್ಣೀರು ಒರೆಸಿಕೊಂಡಷ್ಟೇ ಸುಲಭವಾಗಿ ಅದು ಸೃಜಿಸಿದ ಭಾವಗಳನ್ನು ಕೊಡವಲು ಸಾಧ್ಯವಾದರೆ ಸಿನಿಮಾದ ಯಶಸ್ಸು ಪ್ರಶ್ನಾರ್ಹ. ಆದರೆ, ‘ಫೋಟೋ’ ಹಲವು ದಿನಗಳ ಕಾಲ ಕಾಡುವ, ಎಲ್ಲರಲ್ಲೂ ಒಂದು ಮಟ್ಟಿನ ಅಪರಾಧ ಭಾವ ಮೂಡಿಸುವ, ಒಂದು ಕುಟುಂಬದ ಕತೆಯನ್ನು ಹೇಳುವ ಮೂಲಕ ಲಕ್ಷಾಂತರ ಜನರ ಬದುಕನ್ನು ತೆರೆದಿಡುವ ಸಿನಿಮಾ. ಚಿತ್ರೋತ್ಸವಗಳಲ್ಲಿ ಕಳೆದ ವರ್ಷವೇ ಕಾಣಿಸಿಕೊಂಡಿದ್ದ ‘ಫೋಟೋ’ ಚಿತ್ರಕ್ಕೆ, ಈಗ ಬಿಡುಗಡೆಯ ಭಾಗ್ಯ ಕಂಡಿದೆ. ಸಿನಿಮಾ ಕತೆ, ಸಿನಿಮಾ ಕಲೆ ಮತ್ತು ಅದು ಹೇಳುವ ವಿಷಯ ಎಲ್ಲಾ ದೃಷ್ಟಿಯಿಂದ ಕನ್ನಡದ ಒಂದು ಅತ್ಯುತ್ತಮ ಸಿನಿಮಾ ಎನಿಸಿಕೊಳ್ಳುವ ‘ಫೋಟೋ’ ಎಲ್ಲಾ ಸಿನಿಮಾಸಕ್ತರು ಖಂಡಿತಾ ನೋಡಲೇಬೇಕಾದ ಚಿತ್ರ.