ಆಧುನಿಕ ಬಿಹಾರ ರಾಜಕೀಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ಈ ಸೀಸನ್‌ನಲ್ಲಿದೆ. 2016ರಲ್ಲಿ ನಿತೀಶ್ ಕುಮಾರ್ ಜಾರಿಗೆ ತಂದಂತಹ ಮದ್ಯಪಾನ ನಿಷೇಧ, 2022ರ ಬಿಹಾರದಲ್ಲಿನ ವಿಷ ಮದ್ಯ ದುರಂತದಲ್ಲಿ ಸಾಮೂಹಿಕ ಸಾವು, ಮುಜಾಫರ್‌ಪುರದ ಆಶ್ರಯ ಪ್ರಕರಣವನ್ನು ನೆನಪಿಸುವ ಅತ್ಯಾಚಾರ ಕೇಂದ್ರವಾಗಿ ಕಾರ್ಯನಿರ್ವಹಿಸುವ ಮಹಿಳಾ ಆಶ್ರಯ ಮತ್ತು ದೇವ ಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಲ್ಲವೂ ಇಲ್ಲಿ ಬಂದು ಹೋಗುತ್ತದೆ. ಸೌರಭ್ ಭಾವೆ ನಿರ್ದೇಶನದ ‘ಮಹಾರಾಣಿ’ 3ನೇ ಸೀಸನ್ Sony LIVನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮಹಾರಾಣಿಯ ಎರಡನೇ ಸರಣಿ ಮುಕ್ತಾಯವಾಗಿ ಎರಡು ವರ್ಷಗಳ ನಂತರ ಮೂರನೇ ಸೀಸನ್ ಈಗ ಸೋನಿ ಲೈವ್‌ನಲ್ಲಿ ಪ್ರಸಾರವಾಗುತ್ತಿದೆ. ರಾಣಿ ಭಾರತಿ (ಹುಮಾ ಖುರೇಷಿ) ಜೈಲಿನಲ್ಲಿದ್ದಾಳೆ. ಮೂರನೇ ಸೀಸನ್ ಆರಂಭವಾಗುವುದೇ ಇಲ್ಲಿಂದ. ತನ್ನ ಪತಿಯನ್ನು ಹತ್ಯೆಗೈದ ಆರೋಪದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಈಕೆ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರಾಕರಿಸುತ್ತಾಳೆ. ಈ ಪ್ರಕರಣದಲ್ಲಿ ನಿರಪರಾಧಿ ಎಂದೇ ಹೇಳುತ್ತಿರುವ ಈಕೆ ಬಿಹಾರದ ನ್ಯಾಯಾಲಯ ಈಕೆ ದೋಷಿ ಅಲ್ಲ ಎಂದು ಸಾಬೀತು ಪಡಿಸಲಿ ಎಂದು ತಾಳ್ಮೆಯಿಂದ ಕಾಯುತ್ತಿದ್ದಾಳೆ. ಜೈಲಿನಲ್ಲಿದ್ದರೂ ಈಕೆ ಛಲಗಾತಿ, ಹೊರ ಜಗತ್ತಿನ ಆಗು ಹೋಗುಗಳ ಬಗ್ಗೆ ಅರಿವು ಇದೆ. ಜಾಮೀನು ಬೇಡ ಎಂದು ತನ್ನ ವಕೀಲರಿಗೆ ಹೇಳುವ ಈಕೆಯ ಕುಟುಂಬದ ಬಗ್ಗೆ ವಕೀಲರು ಹೇಳಿದಾಗ ಅದನ್ನು ನೆನಪಿಸಿಕೊಂಡು ಒಂದು ಕ್ಷಣ ಕುಗ್ಗಿ ಹೋಗುತ್ತಾಳೆ. ಮರುಕ್ಷಣದಲ್ಲೇ ಜಾಮೀನು ಬೇಡ ಅಂತಾಳೆ. ಅದೇ ಹೊತ್ತಿಗೆ ಮಾವೋವಾದಿ ಎಂದು ಮುದ್ರೆಯೊತ್ತಿದ ಕಾರಣ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆಗೆ ಜಾಮೀನು ಕೊಡಿಸಲು ಆಕೆ ತನ್ನ ವಕೀಲರಿಗೆ ಹೇಳುತ್ತಾಳೆ. ಆಕೆಗೆ ತಯಾರಿ ನಡೆಸಬೇಕಾಗಿದೆ. ಅದು ಕಲಿಕೆಯ ತಯಾರಿ. ಪರೀಕ್ಷೆಯ ತಯಾರಿ.
ರಾಜಕಾರಣಿ, ಭೀಮಾ ಸಿಂಗ್ ಭಾರತಿ (ಸೋಹುಮ್ ಶಾ) ಅವರ ಪತ್ನಿ, ನಾಲ್ಕನೇ ತರಗತಿಯಲ್ಲಿ ಫೇಲಾದ ಗೃಹಿಣಿ ರಾಣಿ ಭಾರತಿ. ಆಕೆಯಲ್ಲಿ ತನ್ನ ಪತಿಯ ರಾಜಕೀಯ ಸಾಮ್ರಾಜ್ಯದ ನಿಯಂತ್ರಣ ತೆಗೆದುಕೊಳ್ಳಲು ಒತ್ತಾಯಿಸಲಾಯಿತು. ಅದಕ್ಕೆ ಕಾರಣವೂ ಇದೆ. ತನ್ನ ಗಂಡನ ದುಷ್ಕೃತ್ಯಗಳ ಬಗ್ಗೆ ಆಕೆಗೆ ಅರಿವಾಗಿತ್ತು. ಮೊದಲ ಸೀಸನ್‌ನ ಕೊನೆಯಲ್ಲಿ, ಮೇವು ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ತನ್ನ ಪತಿಯನ್ನು ಜೈಲಿಗೆ ಹಾಕುತ್ತಾಳೆ. ಎರಡನೇ ಸೀಸನ್‌ನಲ್ಲಿ, ಆಕೆಯ ಪತಿ ಕೊಲೆಯಾಗುತ್ತಾನೆ. ಕೊಲೆಗಾರ್ತಿ ಆಕೆ ಎಂದು ಶಂಕೆ. ರಾಜಕೀಯಕ್ಕೆ ಧುಮುಕಿರುವ ರಾಣಿ ಭಾರತಿಗೆ ರಾಜಕೀಯ ಎದುರಾಳಿ ಆಗಿರುವುದು ಮುಖ್ಯಮಂತ್ರಿ ನವೀನ್ ಕುಮಾರ್ (ಅಮಿತ್ ಸಿಯಾಲ್). ಇಲ್ಲಿ ಇವರ ಮುಖಾಮುಖಿ ಹೇಗಿರುತ್ತದೆ ಎಂಬ ಕಥಾ ಹಂದರವೇ ಮೂರನೇ ಸೀಸನ್.
ಆಧುನಿಕ ಬಿಹಾರ ರಾಜಕೀಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ಈ ಸೀಸನ್‌ನಲ್ಲಿದೆ. 2016ರಲ್ಲಿ ನಿತೀಶ್ ಕುಮಾರ್ ಜಾರಿಗೆ ತಂದಂತಹ ಮದ್ಯಪಾನ ನಿಷೇಧ, 2022ರ ಬಿಹಾರದಲ್ಲಿನ ವಿಷ ಮದ್ಯ ದುರಂತದಲ್ಲಿ ಸಾಮೂಹಿಕ ಸಾವು, ಮುಜಾಫರ್‌ಪುರದ ಆಶ್ರಯ ಪ್ರಕರಣವನ್ನು ನೆನಪಿಸುವ ಅತ್ಯಾಚಾರ ಕೇಂದ್ರವಾಗಿ ಕಾರ್ಯನಿರ್ವಹಿಸುವ ಮಹಿಳಾ ಆಶ್ರಯ ಮತ್ತು ದೇವ ಮಾನವ ಧೀರೇಂದ್ರ ಕೃಷ್ಣ ಶಾಸ್ತ್ರಿ ಎಲ್ಲವೂ ಇಲ್ಲಿ ಬಂದು ಹೋಗುತ್ತದೆ. ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರನ್ನು ನೆನಪಿಸುವ ರಾಣಿ ಭಾರತಿ ಅವರ ಮುಗ್ಧತೆಯನ್ನು ಇಲ್ಲಿ ತೋರಿಸಿದ್ದರೂ ಹುಮಾ ಖುರೇಷಿ ಗ್ಲಾಮರ್ ಮತ್ತು ದಿಟ್ಟತನಗಳಿಂದ ಭಿನ್ನವಾಗಿ ನಿಲ್ಲುತ್ತಾರೆ.
ರಾಣಿ ಭಾರತಿ ಪ್ರಾಮಾಣಿಕಳು ಎಂಬುದು ನಮಗೆ ಅರಿವಾದರೂ ಅಲ್ಲಿಂದ ಮುಂದಿನ ಬದಲಾವಣೆ ಏನೇನು ಆಗುತ್ತದೆ ಎಂಬುದನ್ನು ನೋಡಲು ಇಡೀ ಸರಣಿ ತಾಳ್ಮೆಯಿಂದ ನಮ್ಮನ್ನು ಕಾಯುವಂತೆ ಮಾಡುತ್ತದೆ. ಆದಾಗ್ಯೂ, ರಾಣಿ ಭಾರತಿಯ ಮೂವರು ಮಕ್ಕಳು ತನ್ನ ಅಪ್ಪನ ಕೊಲೆಯಲ್ಲಿ ಅಮ್ಮ ಭಾಗಿಯಾಗಿದ್ದಾರೆ ಎಂದು ನಂಬಿರುತ್ತಾರೆ. ಇಲ್ಲಿ ಅಸಮಾಧಾನ, ಸಿಟ್ಟು, ಹತಾಶೆ ಎಲ್ಲವೂ ಇದೆ. ಇಲ್ಲಿ ರಾಣಿ ಭಾರತಿಯ ನಿಲುವು ಪ್ರೇಕ್ಷಕರನ್ನು ಹಿಡಿದಿರಿಸುತ್ತದೆ. ತನ್ನ ತಾಯಿ ಮುಗ್ದಳು, ತಪ್ಪಿತಸ್ಥೆಯಲ್ಲ ಎಂದು ಆಕೆಯ ಮಗ ಅರಿಯುತ್ತಾನೆ, ಅದು ತುಂಬಾ ಭಾವನಾತ್ಮಕ ದೃಶ್ಯ. ಆ ಎಲ್ಲಾ ಕೋಪವು ಅಮ್ಮನ ಪ್ರೀತಿಯ ಮುುಂದೆ ಕರಗುತ್ತದೆ. ಈ ಸೀಸನ್‌ನ ಬಹುಪಾಲು ಮುಖ್ಯಮಂತ್ರಿ ನವೀನ್ ಕುಮಾರ್ ಅವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ತಮ್ಮ ಮಾರ್ಗವನ್ನು ರೂಪಿಸುವುದಕ್ಕೆ ಸೀಮಿತ ಆಗಿದೆ. ವಿವಿಧ ಹಗರಣಗಳು ಅವರ ರಾಜಕೀಯ ಜೀವನವನ್ನು ಮುಗಿಸಲು ಪ್ರಯತ್ನಿಸುತ್ತವೆ. ಇಲ್ಲಿ ಎಲ್ಲಾ ಪುರುಷರನ್ನು ಭ್ರಷ್ಟರು, ದುಷ್ಟರು ಮತ್ತು ನೆಗೆಟಿವ್ ರೀತಿಯಲ್ಲಿ ತೋರಿಸಲಾಗಿದೆ. ರಾಣಿ ಭಾರತಿ ಜೈಲಿನಲ್ಲಿದ್ದಾಳೆ, ಸದ್ದಿಲ್ಲದೆ ಸಮಯ ಕಳೆಯುತ್ತಿದ್ದಾಳೆ, ಆದರೆ ಏನೋ ಯೋಜನೆ ನಡೆಯುತ್ತಿರುವಂತೆ ಕಾಣುತ್ತದೆ.
ಮಹಿಳಾ ರಾಜಕಾರಣಿಯ ಸುತ್ತಲೇ ಕತೆ ಸುತ್ತುತ್ತಾ ಇರುತ್ತದೆ. ಹಲವು ಹಗರಣ, ಪ್ರಕರಣಗಳ ಜತೆ ಬದುಕಿನ ಏರಿಳಿತಗಳೂ ಇರುತ್ತವೆ. ಆಕೆ ಜೈಲಿನಲ್ಲಿ ಹಲ್ವಾ ತಯಾರಿಸುತ್ತಾಳೆ. ಸರಣಿ ಮುಂದಕ್ಕೆ ಹೋದಂತೆ ಅವಳ ಅನುಪಸ್ಥಿತಿಯ ನಿರೂಪಣೆಯ ಕಾರಣವನ್ನು ನೀವು ಗ್ರಹಿಸುತ್ತೀರಿ. ಜೊತೆಗೆ, ಎರಡನೇ ಮತ್ತು ಮೂರನೇ ಸೀಸನ್ ನಡುವಿನ ಸಮಯವು ದೀರ್ಘವಾಗಿದ್ದು, ಹೆಚ್ಚಿನದನ್ನು ಇಲ್ಲಿ ತೋರಿಸದೆ ಹೇಳಲಾಗಿದೆ. ಅಂದ ಹಾಗೆ ಪರದೆಯ ಮೇಲೆ ಅವಳ ಅನುಪಸ್ಥಿತಿಯು ಪ್ರಪಂಚದ ರಾಜಕೀಯ ಜೀವನದಲ್ಲಿ ಅವಳ ಅನುಪಸ್ಥಿತಿಯನ್ನು ಸೂಚಿಸುವುದಿಲ್ಲ, ಆದರೆ ಪ್ರದರ್ಶನದ ಮೂಲಕ ಅವಳ ಅನುಪಸ್ಥಿತಿಯು ನಂತರದ ಉಪಸ್ಥಿತಿಯಲ್ಲಿ ಬೇರೆಯೇ ರೀತಿಯಲ್ಲಿ ತೋರಿಸಲಾಗಿದೆ. ಬರವಣಿಗೆ ಚೆನ್ನಾಗಿದ್ದರೂ ಹಾಸ್ಯದ ಸನ್ನಿವೇಶಗಳನ್ನು ಚೆನ್ನಾಗಿ ತೋರಿಸುವ ಪ್ರಯತ್ನ ಇಲ್ಲಿ ಕಂಡು ಬರುವುದಿಲ್ಲ.
ಮತ್ತೊಂದೆಡೆ, ಅಮಿತ್ ಸಿಯಾಲ್ ಅವರು ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಮುಖ್ಯಮಂತ್ರಿಯ ಅಹಂಕಾರ, ಗತ್ತು ಗೈರತ್ತು ಇಲ್ಲಿ ಎದ್ದು ಕಾಣುತ್ತದೆ. ಐಪಿಎಸ್ ಅಧಿಕಾರಿ ಮಾರ್ಟಿನ್ ಎಕ್ಕಾ ಪಾತ್ರದಲ್ಲಿ ದಿಬ್ಯೇಂದು ಭಟ್ಟಾಚಾರ್ಯ ಮತ್ತು ಹಿರಿಯ ಸಚಿವ ಗೌರಿ ಶಂಕರ್ ಪಾಂಡೆ ಪಾತ್ರದಲ್ಲಿ ವಿನೀತ್ ಕುಮಾರ್ ಅವರ ಪಾತ್ರ ನಿರ್ವಹಣೆ ಚೆನ್ನಾಗಿದೆ. ಅವರ ಅಭಿನಯಕ್ಕೆ ಸಹಜವಾದ ಆಕರ್ಷಣೆ ಇದೆ. ವಿಶೇಷವಾಗಿ ಗಂಭೀರ ದೃಶ್ಯಗಳಲ್ಲಿ ಅವರು ಮಿಂಚುತ್ತಾರೆ.
‘ಮಹಾರಾಣಿ 3’ ಸರಣಿಯನ್ನು ಸೌರಭ್ ಭಾವೆ ನಿರ್ದೇಶಿಸಿದ್ದು, ಸುಭಾಷ್ ಕಪೂರ್ ರಚಿಸಿದ್ದಾರೆ, ಇದು ರಾಜಕೀಯ ಥ್ರಿಲ್ಲರ್ ಮೂಲಕ ಪ್ರಸ್ತುತ ಸಂಗತಿಗಳನ್ನು ವಿಮರ್ಶಿಸಲು ಪ್ರಯತ್ನಿಸುತ್ತದೆ. ಆದಾಗ್ಯೂ,ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಮಹಾರಾಣಿ 3’ ಸೇಡು ತೀರಿಸಿಕೊಳ್ಳುವ ಮತ್ತು ಮತ್ತೊಮ್ಮೆ ಅಧಿಕಾರವನ್ನು ಮರಳಿ ಪಡೆಯುವ ಪ್ರಯತ್ನದ ಕತೆಯಾಗಿದ್ದು, ಇದು ಸಾಂಪ್ರದಾಯಿಕ ರಾಜಕೀಯ ನಾಟಕದ ರೀತಿಯಲ್ಲಿ ಇಲ್ಲ. ಆದರೆ ರಾಜಕೀಯ ಕುತಂತ್ರ, ಮೇಲಾಟ, ಹೋರಾಟದ ಕತೆಯನ್ನು 8 ಎಪಿಸೋಡ್‌ಗಳಲ್ಲಿ ತುಂಬಾ ಅದ್ಭುತವಾಗಿ ಕಟ್ಟಿಕೊಡಲಾಗಿದೆ.