ಬುದ್ಧನ ಕಾರುಣ್ಯ ಮತ್ತು ಪ್ರೀತಿ ಮುಖ್ಯ ಎನ್ನುವ ಗುಣ ಮತ್ತು ಕೆಮ ‘ದಮ್ಮಂ’ ಸಿನಿಮಾವನ್ನು ಮತ್ತೊಂದು ಸ್ತರಕ್ಕೆ, ಎತ್ತರಕ್ಕೆ ಕೊಂಡೊಯ್ಯುತ್ತಾರೆ.
ಪ. ರಂಜಿತ್ ಯಾಕೆ ಮಹತ್ವದ ನಿರ್ದೇಶಕ ಎಂಬುದಕ್ಕೆ ‘ದಮ್ಮಂ’ ಕಿರುಚಿತ್ರ ಉದಾಹರಣೆ. ‘Victim – who is next’ ಕಿರುಚಿತ್ರಗಳ ತಮಿಳು ಸಿನಿಮಾ ಸಂಕಲನ SonyLIVನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಕಳೆದ ಎರಡು ವರ್ಷಗಳಿಂದ OTT ಜಗಲಿಗಳಲ್ಲಿ ಕಿರುಚಿತ್ರಗಳ ಸಿನಿಮಾ ಸಂಕಲನ ಕಾಲಕಾಲಕ್ಕೆ ಬಿಡುಗಡೆಯಾಗುತ್ತಿವೆ. ಪ್ರತಿ ಸಂಕಲನಕ್ಕೂ ಒಂದು ವಿಷಯ ಕೇಂದ್ರವಾಗಿರುತ್ತದೆ. ಪ್ರತಿ ಕಿರುಚಿತ್ರವನ್ನು ಆ ಸಂಕಲನದ ಇತರೇ ಕಿರುಚಿತ್ರಗಳೊಂದಿಗೆ ತೌಲನಿಕವಾಗಿ ವಿಮರ್ಶಿಸಲಾಗುತ್ತದೆ. ಅದು ಸ್ವತಂತ್ರವಾಗಿ ಬಿಡುಗಡೆಯಾಗಿದ್ದರೆ ಯಾವ ಅನುಭವ ಕೊಡುತ್ತದೆ ಎಂಬುದೂ ಸಹ ಕುತೂಹಲಕರ

ನಿರೀಕ್ಷೆ ಮೂಡಿಸಿದ್ದ ‘Victim – who is next’ ಸಿನಿಮಾ ಸಂಕಲನ ನಿರಾಸೆ ಮೂಡಿಸುತ್ತದೆ. ಪ.ರಂಜಿತ್ ನಿರ್ದೇಶನದ ‘ದಮ್ಮಂ’ (ಕಾರುಣ್ಯ) ಈ ಸಂಕಲನವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹತ್ತು ಹೆಜ್ಜೆ ಮುಂದೆ ನಡೆಯಲು ಯತ್ನಿಸಿದರೆ, ರಾಜೇಶ್ ನಿರ್ದೇಶನದ ‘ಮಿರೇಜ್’ (ಮರೀಚಿಕೆ) ಈ ಸಂಕಲನವನ್ನು ಇಪ್ಪತ್ತು ಹೆಜ್ಜೆ ಹಿಂದಕ್ಕೊಯ್ದು ಕೆಡವಿ ಬೀಳಿಸುತ್ತದೆ. ಇವೆರಡರ ನಡುವೆ ಬರುವ ಮತ್ತೆರಡು ಕಿರುಚಿತ್ರಗಳು ಗುಣಮಟ್ಟ ಮೀರಲು ತಿಣುಕಾಡುತ್ತವೆ.

ಪ.ರಂಜಿತ್ ಸಮಕಾಲೀನ ಸಂದರ್ಭದ ಮಹತ್ವದ ನಿರ್ದೇಶಕ. ತಾವು ಆಯ್ಕೆ ಮಾಡಿಕೊಳ್ಳುವ ಕತೆಯ ಎಲ್ಲಾ ಆಯಾಮಗಳನ್ನು ಮತ್ತು ಒಳನೋಟಗಳನ್ನು ಸಮಗ್ರವಾಗಿ ಗ್ರಹಿಸುತ್ತಾರೆ. ಇದು ಅವರ ಶಕ್ತಿ. ಹೀಗಾಗಿ ತಲೆದೂಗಿಸುವಂತಹ ಚಿತ್ರಕಥೆ ಇಲ್ಲದೆ ಹೋದರೂ ಸಹ ಘಟನೆಗಳನ್ನು ಪೋಣಿಸುತ್ತಾ ಹೋಗುತ್ತಾರೆ ಮತ್ತು ಆ ಮೂಲಕ ಕತೆಯನ್ನು ವಿಸ್ತರಿಸುತ್ತಾರೆ. ‘ದಮ್ಮಂ’ ಸಿನಿಮಾ ಪ್ರತಿಮಾತ್ಮಕವಾಗಿದೆ. ಇಲ್ಲಿ ಗದ್ದೆಯಲ್ಲಿ ಬೀಡುಬಿಟ್ಟಿರುವ ಬುದ್ಧನಿದ್ದಾನೆ. ಎರಡು ತಲೆಮಾರುಗಳಿವೆ. ಶೋಷಿತ ಸಮುದಾಯದ ಗುಣ ತನ್ನ ಒಂದು ಎಕರೆ ಗದ್ದೆಯಲ್ಲಿ ನಾಟಿ ಮಾಡಲು ಸಿದ್ದತೆ ನಡೆಸುತ್ತಾನೆ. (ಚೋಮನ ಕಾಲ ಮುಗಿಯಿತು, ಹಾಗೆಯೇ ಬೆಳ್ಳಿಯ ಕಾಲವೂ ಸಹ). ಕಾಲ ಬದಲಾದಂತೆ ವ್ಯವಸ್ಥೆ ಬದಲಾಗುತ್ತಿರುವುದು ಗುಣನಿಗೆ ಗೊತ್ತಿದೆ. ಆದರೆ ಅದರ ಆಮೆಯ ವೇಗವೂ ಸಹ ಚಿರಪರಿಚಿತವಾಗಿದೆ.

ಶೋಷಿತರ ಬದುಕಿನಲ್ಲಿ ಮೇಲ್ಮುಖ ಚಲನೆ ಶುರುವಾಗಿದೆ ನಿಜ. ಆದರೆ ಆ assertion ಯಾವ ಹಂತದಲ್ಲಿದೆಯೆಂದು ಗುಣನಿಗೆ ಗೊತ್ತು. ಏಕಾಂಗಿಯಾಗಿರುವ ಅನಿವಾರ್ಯತೆಯೋ, ವೇಗೋತ್ಕರ್ಷಕ್ಕೆ ಅಗತ್ಯವಾದ ಬೆಂಬಲ ಇಲ್ಲದಿರುವುದಕ್ಕೋ ಈ ಎರಡೂ ಕಾರಣದಿಂದ ಸದ್ಯಕ್ಕೆ ಆ assertion ಚಲನೆಯನ್ನು ವೇಗಗೊಳಿಸುವುದಕ್ಕಿಂತಲೂ ಈಗಿರುವ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಗುಣನ ಧ್ಯೇಯ ತನ್ನ ಅಪ್ಪನಿಗಿಂತಲೂ ಕೊಂಚ ಸಹನೀಯವಾದ ಮತ್ತು ಕೊಂಚ ಅನುಕೂಲಕರವಾದ ವಾತಾವರಣದಲ್ಲಿ ಬೆಳೆದ ಆತನ ಸಣ್ಣ ವಯಸ್ಸಿನ ಮಗಳು ಕೆಮಗೆ ಮೇಲ್ಮುಖ ಚಲನೆಯಲ್ಲಿ ಸ್ಥಗಿತಗೊಳ್ಳುವ ಇರಾದೆಯಿಲ್ಲ. ಪುಟ್ಟ ಬಾಲಕಿಗೆ ಸದಾ ಚಲನಶೀಲವಾಗಿರುವುದೇ ಅವಳ ಬದುಕಿನ ಸಂಭ್ರಮ ಮತ್ತು ಆತ್ಮಘನತೆ.

ಗುಣನಿಗೆ ತನ್ನ ಗದ್ದೆಯಲ್ಲಿನ ಬುದ್ಧ ದೇವರಿದ್ದಂತೆ. ಆದರೆ ಕೆಮಳಿಗೆ ‘ಸ್ವತಃ ಬುದ್ಧನೇ ದೇವರಿಲ್ಲವೆಂದಮೇಲೆ ಮತ್ತೆಲ್ಲಿಯ ದೇವರು? ‘ ಎನ್ನುವ ಪ್ರಶ್ನೆ.
ರಂಜಿತ್ ಈ ಕಿರುಚಿತ್ರದ ಆರಂಭದ ಹತ್ತು ನಿಮಿಷದ ದೃಶ್ಯದಲ್ಲಿ ಮೇಲಿನ ಎಲ್ಲಾ ವಿವರಣೆಗಳನ್ನು ಕಟ್ಟುತ್ತಾರೆ. ಒಂದೇ ಸ್ಥಳ, ಒಂದೇ ಸಂಗತಿ ಆದರೆ ಎರಡು ತಲೆಮಾರುಗಳ ಭಿನ್ನ ಗ್ರಹಿಕೆಯನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತಾರೆ.

ದಲಿತ ಸಮುದಾಯದ ಗುಣನ ಒಂದು ಎಕರೆ ಗದ್ದೆ ಮತ್ತು ಸವರ್ಣೀಯರ ನೂರಾರು ಎಕರೆ ಗದ್ದೆಯನ್ನು ಒಂದು ಸಣ್ಣ ಕಿರಿದಾದ ಹಾದಿ ಬೇರ್ಪಡಿಸಿರುತ್ತದೆ. ಇದು ಶತಮಾನಗಳಿಂದ ದಲಿತರನ್ನು ಊರ ಹೊರಗಿಟ್ಟ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಗುಣನಿಗೆ ಈ ಕಿರಿದಾದ ಹಾದಿಯಲ್ಲಿ ಬದಲಾವಣೆಯನ್ನು ಮರೆತು ನಡೆದಾಡಬೇಕು ಎನ್ನುವ ಮೇಲ್ಜಾತಿಗಳ ಅಲಿಖಿತ ನಿಯಮ ಒಪ್ಪಿತವಾಗಿದೆ. ಚೋಮನ ನಂತರದ ತಲೆಮಾರಿನ ಗುಣನಿಗೆ ಸದ್ಯ ಒಂದೆಕರೆ ಗದ್ದೆಯನ್ನು ಕಾಪಾಡಿಕೊಳ್ಳುವುದು, ಮಗಳನ್ನು ಓದಿಸುವುದಷ್ಟೇ ಆದ್ಯತೆ. ಅದರಾಚೆಗಿನ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ನಿರ್ಲಕ್ಷಿಸುತ್ತಾನೆ.

ಆದರೆ ನಿರಂತರ ಚಲನೆಯನ್ನು ಬಯಸುವ ಮಗಳು ಕೆಮಾಗೆ ಜಡ್ಡುಗಟ್ಚಿದ ಜಾತಿಯ ಗೋಡೆಯಂತಿರುವ ಆ ಕಿರಿದಾದ ಹಾದಿಯನ್ನು ದಾಟುವ ಛಾತಿ.
ತನ್ನ ಹಾದಿಯಲ್ಲಿ ಎದುರಾಗುವ ಪ್ರಬಲ ಸವರ್ಣೀಯ ಜಾತಿಯ ನವ ಫ್ಯೂಡಲಿಸ್ಟ್ ಶೇಖರನಿಗೆ ಜಾಗ ಬಿಟ್ಟುಕೊಡಲು ನಿರಾಕರಿಸುವ ಪುಟ್ಟ ಬಾಲಕಿ ಕೆಮ ‘ನಾನ್ಯಾಕೆ ಪಕ್ಕಕ್ಕೆ ಹೋಗಲಿ, ನೀನು ಜಾಗ ಬಿಡು’ ಎನ್ನುತ್ತಾಳೆ. ಶೋಷಿತ ಸಮುದಾಯದ ಬಾಲಕಿಯ ಈ ಆತ್ಮ ಘನತೆಯ ನಡೆ ಮುಂದಿನ ಹದಿನೈದು ನಿಮಿಷಗಳ ದಾರುಣ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಇಲ್ಲಿ ಪ.ರಂಜಿತ್ ನ ಹೇಳಿಕೆ ‘ಹೊಸ ತಲೆಮಾರಿನ ದಲಿತ ಯುವಜನತೆಗೆ to be, not to be ಎನ್ನುವ ದ್ವಂದವಿಲ್ಲ’.

ಈ ಕಿರುಚಿತ್ರದ ಮತ್ತೊಂದು ಮುಖ್ಯ ಪಾತ್ರ ಕೊಮತ. ಈಕೆ ಸವರ್ಣೀಯ ಜಾತಿಗೆ ಸೇರಿದವಳು. ಫ್ಯೂಡಲಿಸ್ಟ್ ಶೇಖರನ ಅತ್ತೆ. ಸಾಮಾನ್ಯ ಸಂದರ್ಭದಲ್ಲಿ ಗುಣ ಮತ್ತು ಕೆಮಗೆ ಹೃದಯವಂತ ಸಂಗಾತಿ. ಅವರ ಕಷ್ಟಸುಖಗಳಲ್ಲಿ ಸಹಾನುಭೂತಿಯಿಂದ ಒಡನಾಡುತ್ತಾಳೆ. ಆದರೆ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ಏರ್ಪಟ್ಟಾಗ ಈಕೆಗೆ ತನ್ನ ಜಾತಿ ಮುಖ್ಯವಾಗುತ್ತದೆ. ತನ್ನ ಅಪ್ತರಾದ ಗುಣ ಮತ್ತು ಕೆಮರನ್ನು ಬಲಿ ಕೊಡುವುದಕ್ಕೂ ಹಿಂಜರಿಯುವುದಿಲ್ಲ. ಇದು ಭಾರತದ caste chemistry ಜಾತಿ ಪ್ರತಿಷ್ಠೆ ಯಾವ ಮಟ್ಟದಲ್ಲಿರುತ್ತದೆಯೆಂದರೆ ಶೇಖರ ಜೀವನ್ಮರಣದಲ್ಲಿ ಹೆಣಗುತ್ತಿದ್ದರೆ ಆತನ ರಕ್ತ ಸಂಬಂದಿ, ತಂದೆಗೆ ಗುಣನ ಮೇಲೆ ಸೇಡು ತೀರಿಸಿಕೊಳ್ಳುವ ಆಕ್ರೋಶ. ಹೆಣ ಬಿದ್ದರೂ ಪರವಾಗಿಲ್ಲ ತನ್ನ ಜಾತಿ ಪ್ರತಿಷ್ಠೆ ಉಳಿಯಬೇಕು ಎನ್ನುವ ಕ್ರೌರ್ಯದ ಅನಾವರಣವಾಗುತ್ತದೆ.

ಆದರೆ ಕಡೆಗೂ ಬುದ್ಧನ ಕಾರುಣ್ಯ ಮತ್ತು ಪ್ರೀತಿ ಮುಖ್ಯ ಎನ್ನುವ ಗುಣ ಮತ್ತು ಕೆಮ ‘ದಮ್ಮಂ’ ಸಿನಿಮಾವನ್ನು ಮತ್ತೊಂದು ಸ್ತರಕ್ಕೆ, ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಪ. ರಂಜಿತ್ ಯಾಕೆ ಮಹತ್ವದ ನಿರ್ದೇಶಕ ಎಂಬುದಕ್ಕೆ ‘ದಮ್ಮಂ’ ಕಿರುಚಿತ್ರ ಉದಾಹರಣೆ. ಇಲ್ಲಿನ ಕತೆ, ನಿರೂಪಣೆ ಎಲ್ಲವೂ ಸರಳವಾಗಿದೆ. ಆದರೆ ನಿರ್ದೇಶಕ ಅದನ್ನು ಗ್ರಹಿಸಿ ರುವ ರೀತಿ ಅನನ್ಯವಾಗಿದೆ. ಪ್ರತಿಮಾತ್ಮಕವಾಗಿ ನಿರೂಪಿಸಿರುವುದು ಪರಿಣಾಮಕಾರಿಯಾಗಿದೆ. ಇದೇ ‘ದಮ್ಮಂ’ ಕಿರುಚಿತ್ರ ಸಂಕಲನದಲ್ಲಿರದೆ ಪ್ರತ್ಯೇಕವಾಗಿದ್ದರೆ ಹೇಗಿರುತ್ತದೆ ಎನ್ನುವ ಪ್ರಶ್ನೆ ಸಹ ಕುತೂಹಲಕರ. ಇನ್ನು ಮಿಕ್ಕ ಕಿರುಚಿತ್ರಗಳ ಕುರಿತು ಹೇಳುವುದೇನೂ ಇಲ್ಲ. ತೀರಾ ಸಾಧಾರಣ.

LEAVE A REPLY

Connect with

Please enter your comment!
Please enter your name here