ಬೆಂಗಳೂರನ್ನ ನಿರ್ಮಿಸಿದ ನಾಡಫ್ರಭು ಕೆಂಪೇಗೌಡರ ಜೀವನ ಆಧಾರಿತ ಕತೆ ಸಿನಿಮಾ ಆಗಲಿದೆ. ಇದೇ ಮೊದಲ ಬಾರಿಗೆ ಚಂದನವನದಲ್ಲಿ ಕೆಂಪೇಗೌಡ ಬಯೋಪಿಕ್ ಸೆಟ್ಟೇರಲಿದ್ದು, ಚಿತ್ರದ ಟೈಟಲ್ ಸಹ ಘೋಷಣೆಯಾಗಿದೆ.
ಚಂದನವನದಲ್ಲಿ ಸಿನಿಮಾವೊಂದಕ್ಕೆ ಕೆಂಪೇಗೌಡರ ಹೆಸರನ್ನು ಟೈಟಲ್ ಆಗಿ ಬಳಸಿಕೊಳ್ಳಲಾಗಿದೆ. ಕೆಲವು ಸಿನಿಮಾಗಳಲ್ಲಿ ಕೆಂಪೇಗೌಡರ ಕುರಿತಾಗಿ ಝಲಕ್‌ಗಳು ಬಂದು ಹೋಗಿವೆ. ಆದರೆ, ಇಲ್ಲಿಯವರೆಗೆ ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾತ್ರ ನಿರ್ಮಾಣವಾಗಿಲ್ಲ. ಈಗ ನಾಡಪ್ರಭುವಿನ ಕಥೆಯನ್ನು ತೆರೆಗೆ ತರುವ ಕಾಲ ಕೂಡಿ ಬಂದಿದೆ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲ ಖ್ಯಾತಿ ಪಡೆದಿರುವ ಬೆಂಗಳೂರನ್ನು ಕಟ್ಟಿ ಬೆಳೆಸಿದ ಕೆಂಪೇಗೌಡರ ಸಾಹಸ ಕಥೆಗೆ ಖ್ಯಾತ ನಿರ್ದೇಶಕ ದಿನೇಶ್ ಬಾಬು ಸಿನಿಮಾ ರೂಪ ಕೊಡುತ್ತಿದ್ದಾರೆ. ಕೆಂಪೇಗೌಡರ ಬಯೋಪಿಕ್‌ಗೆ ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಎಂದು ಟೈಟಲ್ ಕೊಡಲಾಗಿದೆ.
ಸುಪ್ರಭಾತ, ಇನ್ಸ್‌ಪೆಕ್ಟರ್ ವಿಕ್ರಂ, ಅಮೃತವರ್ಷಿಣಿ, ಲಾಲಿ, ಅಭಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿರುವ ದಿನೇಶ್ ಬಾಬು ಈ ಬಯೋಪಿಕ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ, ನಾಡಪ್ರಭು ಕೆಂಪೇಗೌಡರಾಗಿ ಬಣ್ಣ ಹಚ್ಚುತ್ತಿರುವ ಕಲಾವಿದ ಯಾರು ಅನ್ನೋದು ಮಾತ್ರ ಇನ್ನೂ ಗುಟ್ಟಾಗಿಯೇ ಇದೆ. ಈಗಾಗಲೇ ಕಲಾವಿದನ ಆಯ್ಕೆಯಾಗಿದ್ದು, ಆ ನಟ ಪಾತ್ರಕ್ಕಾಗಿ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರಂತೆ. ಮುಂದಿನ ದಿನಗಳಲ್ಲಿ ನಾಯಕ ನಟನ ಪರಿಚಯ ಮಾಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅದರಂತೆ ಈಗ ಕೆಂಪೇಗೌಡರ ಬಯೋಪಿಕ್ ನಿರ್ಮಿಸಲು ಸಜ್ಜಾಗಿದ್ದಾರೆ.