PRK ಪ್ರೊಡಕ್ಷನ್ಸ್‌ ನಿರ್ಮಿಸಿರುವ ‘O2’ ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ. ಈ ಚಿತ್ರ ಮಡಿಕಲ್ ಫೀಲ್ಡ್‌ಗೆ ಸಂಬಂಧಿಸಿದ ಕಥಾ ಹಂದರ ಹೊಂದಿದೆ. ಇದು ಪುನೀತ್‌ ಹಾಗೂ ಅಶ್ವಿನಿ ಅವರು ಒಟ್ಟಿಗೆ ಕೇಳಿ ಫೈನಲ್‌ ಮಾಡಿದ ಕೊನೆಯ ಕಥೆ. ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್ ಚಿತ್ರ ನಿರ್ದೇಶಿಸಿದ್ದಾರೆ.

ಹೊಸಬರ ಪ್ರಯತ್ನಗಳಿಗೆ ಪೋತ್ಸಾಹ ನೀಡುವ ಉದ್ದೇಶದಿಂದಲೇ ಆರಂಭವಾಗಿದ್ದು ಪಿಆರ್‌ಕೆ ಪ್ರೊಡಕ್ಷನ್ಸ್. ‘ಕವಲುದಾರಿ’ ಈ ಬ್ಯಾನರ್‌ ಅಡಿ ಪುನೀತ್‌ ರಾಜಕುಮಾರ್‌ ನಿರ್ಮಾಣ ಮಾಡಿದ ಮೊದಲ ಸಿನಿಮಾ. ಮುಂದೆ ಸಾಲಾಗಿ ಚಿತ್ರಗಳು ಮೂಡಿಬಂದವು. ಅಪ್ಪು ಅಕಾಲಿಕ ಅಗಲಿಕೆಯ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರನಿರ್ಮಾಣದ ಜವಾಬ್ದಾರಿ ಹೊತ್ತರು. ಪಿಆ‌ರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ ನಿರ್ಮಾಣದ ಲೇಟೆಸ್ಟ್‌ ಸಿನಿಮಾ ‘O2’ ಚಿತ್ರ ಇದೇ ಏಪ್ರಿಲ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪುನೀತ್ ರಾಜಕುಮಾರ್ ಅವರು ಕೇಳಿ ಮೆಚ್ಚಿಕೊಂಡ ಕೊನೆಯ ಸಿನಿಮಾ ಕಥೆ.

ಪ್ರಶಾಂತ್‌ ರಾಜ್‌ ಮತ್ತು ರಾಘವ್‌ ನಾಯಕ್‌ ಚಿತ್ರ ನಿರ್ದೇಶಿಸಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕರು, ‘ಹೃದಯಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು ’02’ ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ಚಿತ್ರದಲ್ಲಿ ನಾಯಕಿ ಶ್ರದ್ದಾ ಮಾಡುತ್ತಾರೆ. ‘O2′ ಡ್ರಗ್ ಕುರಿತು ಸಂಶೋಧನೆ ನಡೆಸುವಾಗ ಆಕೆ ಸಾಕಷ್ಟು ಸವಾಲುಗಳನ್ನು ಎದರಿಸುತ್ತಾರೆ. ಅಷ್ಟೇ ಅಲ್ಲದೆ ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹುದು’ ಎನ್ನುತ್ತಾರೆ.

ಸಿನಿಮಾ ಬಗ್ಗೆ ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ‘ಇದು ಅಪ್ಪು ಇದ್ದಾಗಲೇ ನಾವಿಬ್ಬರೂ ಒಟ್ಟಿಗೆ ಕೇಳಿದ ಕೊನೆಯ ಕಥೆ. ಕಾರಣಾಂತರಗಳಿಂದ ಸಿನಿಮಾ ವಿಳಂಬವಾಯ್ತು. ಆದರೆ ನಾವು ಅಂದುಕೊಂಡದ್ದಕ್ಕಿಂತ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ‘O2′ ಈಗ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಸಂಗೀತ ಹಾಗೂ ಕ್ಕೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಸದ್ಯದಲ್ಲೇ ನಮ್ಮ ಸಂಸ್ಥೆಯಿಂದ ಮತ್ತೆರೆಡು ಸಿನಿಮಾಗಳನ್ನು ಘೋಷಿಸಲಿದ್ದೇವೆ’ ಎಂದರು. ‘ನಮ್ಮ ಇಡೀ ಕುಟುಂಬದವರು ರಾಜಕುಮಾರ್ ಕುಟುಂಬದ ಅಭಿಮಾನಿಗಳು. ಹೀಗಿರುವಾಗ ನನಗೆ ಪುನೀತ್ ರಾಜಕುಮಾರ್ ನಿರ್ಮಾಣದ ಚಿತ್ರದಲ್ಲಿ ನಟಿಸುವ ಆವಕಾಶ ಸಿಕ್ಕಾಗ ತುಂಬಾ ಸಂತೋಷವಾಯಿತು. ಚಿತ್ರದಲ್ಲಿ ನನಗೆ NRI ವೈದ್ಯನ ಪಾತ್ರ’ ಎಂದು ನಾಯಕ ಪ್ರವೀಣ್ ತೇಜ್ ಸಂತಸ ವ್ಯಕ್ತಪಡಿಸಿದರು.

ನಟಿ ಆಶಿಕಾ ರಂಗನಾಥ್ ಮಾತನಾಡಿ, ‘ಶ್ರದ್ಧಾ ನನ್ನ ಪಾತ್ರದ ಹೆಸರು. ನಾನು ಕೂಡ ಈ ಚಿತ್ರದಲ್ಲಿ ವೈದ್ಯೆ. ಚೆನ್ನಾಗಿ ಓದಿ ಡಾಕ್ಟರ್‌ ಆಗಬೇಕೆನ್ನುವುದು ನನ್ನ ಚಿಕ್ಕಂದಿನ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಸಿನಿಮಾದಲ್ಲಿ ವೈದ್ಯೆಯಾದೆ. ಇಲ್ಲಿ ನನ್ನ ಪಾತ್ರಕ್ಕೆ ತುಂಬಾ ವೇರಿಯೇಷನ್ಸ್‌ ಇದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ’ ಎಂದರು. ಪುಟ್ಟಸ್ವಾಮಿ ಕೆ ಬಿ ಹಾಗೂ ಸತೀಶ್ ವಿ ಕಾರ್ಯಕಾರಿ ನಿರ್ಮಾಪಕರಾಗಿರುವ ‘O2’ ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಹಾಗೂ ಕೆ ಎಂ ಪ್ರಕಾಶ್ ಸಂಕಲನವಿದೆ. ಆಶಿಕಾ ರಂಗನಾಥ್, ಪ್ರವೀಣ್ ತೇಜ್, ರಾಘವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಚಿತ್ರದ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here