ನಟ ರಾಮ್‌ಕುಮಾರ್‌ ಮತ್ತು ಪೂರ್ಣಿಮಾ ಅವರ ಪುತ್ರ ಧೀರೇನ್‌ ಹುಟ್ಟುಹಬ್ಬವಿಂದು. ಅವರು ಬೆಳ್ಳಿತೆರೆಗೆ ಪರಿಚಯವಾದ ‘ಶಿವ 143’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇದೀಗ ಅವರು ತಮ್ಮ ಹೆಸರಿನ ಮುಂದೆ ತಾತ, ವರನಟ ರಾಜಕುಮಾರ್‌ ಅವರ ಹೆಸರು ಸೇರಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. KRG Studio ನಿರ್ಮಿಸಲಿರುವ ನೂತನ ಸಿನಿಮಾದಲ್ಲಿ ಅವರ ಹೆಸರು ‘ಧೀರೇನ್‌ ಆರ್‌ ರಾಜಕುಮಾರ್‌’ ಎಂದಾಗಲಿದೆ.

ಧೀರೇನ್‌ ರಾಮ್‌ಕುಮಾರ್‌ ಚಂದನವನಕ್ಕೆ ಹೊಸಬರೇನಲ್ಲ. ರಾಜಕುಮಾರ್‌ ಅವರ ಮಗಳು ಪೂರ್ಣಿಮಾ ಮತ್ತು ರಾಮ್‌ಕುಮಾರ್‌ ದಂಪತಿಯ ಮಗ. ಈ ಹಿಂದೆ ‘ಶಿವ 143’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ಆದರೆ, ಮಾಡಿದ ಮೊದಲ ಸಿನಿಮಾ ಅವರ ಕೈ ಹಿಡಿಯಲಿಲ್ಲ. ಅನಿಲ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ನಿರ್ಮಾಣ ಮಾಡಲಾಗಿತ್ತು. ಮಾನ್ವಿತಾ ಕಾಮತ್‌ ಈ ಚಿತ್ರದ ನಾಯಕಿಯಾಗಿದ್ದರು. ವಿಭಿನ್ನ ಪ್ರೇಮಕಥೆಯ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಈ ಸಲ ಧೀರೇನ್‌ ರಾಮ್‌ ಕುಮಾರ್‌ ಅಪ್ಪನ ಹೆಸರನ್ನು ಬದಿಗಿಟ್ಟು ತಾತನ ಹೆಸರಿನ ಜೊತೆ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಸಿನಿಮಾ ಮಾಡುತ್ತಿರುವ ಕೆಆರ್‌ಜಿ ಸ್ಟುಡಿಯೋಸ್‌ ಜತೆಗೆ ಧೀರೇನ್‌ ಆರ್‌ ರಾಜಕುಮಾರ್‌ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧೀರೇನ್‌ಗೆ ಹೊಸ ಸಿನಿಮಾ ಪ್ರಕಟಿಸುವ ಮೂಲಕ ಸರ್ಪ್ರೈಸ್‌ ಕೊಟ್ಟಿದೆ ಕೆಆರ್‌ಜಿ ಸ್ಟುಡಿಯೋಸ್‌. ಧೀರೇನ್ ರಾಮ್‌ಕುಮಾರ್ ಅವರನ್ನು ಧೀರೇನ್ ಆರ್ ರಾಜಕುಮಾರ್ ಆಗಿ KRG ಸ್ಟೂಡಿಯೋಸ್ ಮರುಪರಿಚಯಿಸಿದೆ. ಆದರೆ, ಸದ್ಯ ಹೊಸ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ‘ರತ್ನನ್ ಪ್ರಪಂಚ’ ಮೂಲಕ ರೋಹಿತ್ ಪದಕಿ, ‘ಪೌಡರ್’ ಚಿತ್ರದ ಮೂಲಕ ಜನಾರ್ಧನ್‌ ಚಿಕ್ಕಣ್ಣ, ‘ಗುರುದೇವ್ ಹೊಯ್ಸಳ’ ಚಿತ್ರದ ಮೂಲಕ ವಿಜಯ್ ನಾಗೇಂದ್ರ ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಕೀರ್ತಿ KRGಗೆ ಸಲ್ಲುತ್ತದೆ. ಪ್ರಸ್ತುತ ಅವರ ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರ ಸೆಟ್ಟೇರಿದ್ದು, ‘ಪೌಡರ್’ ಚಿತ್ರದ ಡಬ್ಬಿಂಗ್ ಕೆಲಸ ಬಿರುಸಿನಿಂದ ಸಾಗುತ್ತಿದೆ.

LEAVE A REPLY

Connect with

Please enter your comment!
Please enter your name here