ತಳ ಸಮುದಾಯದವರನ್ನು ಅಪಹಾಸ್ಯ ಮಾಡುವ ಗಾದೆ ಮಾತು ಬಳಕೆ ಮಾಡಿದ್ದಾರೆ ಎನ್ನುವ ಆರೋಪ ನಟ – ನಿರ್ದೇಶಕ, ‘ಪ್ರಜಾಕೀಯ’ ಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರರಿಗೆ ಸಂಕಷ್ಟ ತಂದೊಡ್ಡಿದೆ. ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಅವರ ವಿರುದ್ಧ ‘ಅಟ್ರಾಸಿಟಿ’ ದೂರುಗಳು ದಾಖಲಾಗಿದ್ದು, ರಾಜ್ಯಾದ್ಯಂತ ಆಕ್ರೋಷ ವ್ಯಕ್ತವಾಗಿದೆ. ಉಪೇಂದ್ರ ಕೋರ್ಟ್‌ ಮೊರೆ ಹೋಗಿದ್ದಾರೆ.

ನಟ ಉಪೇಂದ್ರರ ಮೇಲೆ ಹಲವೆಡೆ ‘ಅಟ್ರಾಸಿಟಿ’ ಪ್ರಕರಣದ ಅಡಿ ದೂರುಗಳು ದಾಖಲಾಗಿದ್ದು ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ವೀಡಿಯೋವೊಂದನ್ನು ಮಾಡಿ ಅವರು ಜಾಲತಾಣದಲ್ಲಿ ಹಾಕಿದ್ದರು. ಮಾತಿನ ಮಧ್ಯೆ ಅವರು ತಳ ಸಮುದಾಯದ ಜನರನ್ನು ಅಪಹಾಸ್ಯ ಮಾಡುವ ಗಾದೆ ಮಾತೊಂದನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿದ್ದು ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ರಾಜ್ಯದ ಹಲವೆಡೆ ಅವರ ಮೇಲೆ ಅಟ್ರಾಸಿಟಿ ಪ್ರಕರಣದಡಿ ದೂರುಗಳು ದಾಖಲಾಗಿವೆ. ಇಂದು ಮಧ್ಯಾಹ್ನ ಸಾಮಾಜಿಕ ಹೋರಾಟಗಾರ, ಕರ್ನಾಟಕ ರಣಧೀರ ಪಡೆ ಮುಖಂಡ ಬೈರಪ್ಪ ಹರೀಶ್ ಕುಮಾರ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ನಟ ಉಪೇಂದ್ರರ ಮೇಲೆ FIR ಕೂಡಾ ದಾಖಲಾಗಿದೆ.

ಪ್ರಕರಣದ ಬಗ್ಗೆ ಮಾತನಾಡಿರುವ ಭೈರಪ್ಪ ಹರೀಶ್‌ ಕುಮಾರ್‌, ‘ತಳ ಸಮುದಾಯ ಎಂದೇ ಗುರುತಿಸಿಕೊಂಡು ಬಂದ ಹೊಲಯ ಸಮುದಾಯದವರು ವಾಸಿಸುವ ಪ್ರದೇಶವನ್ನು ‘ಹೊಲಗೇರಿ’ ಎಂಬ ಪದದಿಂದ ಉಪೇಂದ್ರ ಅವಹೇಳನಕಾರಿಯಾಗಿ ಬಳಸಿದ್ದಾರೆ. ‘ಊರು ಅಂದ್ರೆ ಹೊಲಗೇರಿ ಇರುತ್ತೆ, ನಾವು ಅಂಥವರ ವಿರುದ್ಧ ಇರಬೇಕು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದು ದಲಿತ ನಿಂದನೆ. ಸ್ಪಷ್ಟವಾಗಿ ಇದು ಸಮಾಜವನ್ನು ದಲಿತರ ವಿರುದ್ಧ ಎತ್ತಿ ಕಟ್ಟುವ ಕೆಲಸ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆ ಉಂಟುಮಾಡುವ ಉದ್ದೇಶದಿಂದ, ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸುವುದಾಗಿದೆ‌. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಟ ಉಪೇಂದ್ರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಬೈರಪ್ಪ ಹರೀಶ್ ಕುಮಾರ್ ದೂರಿನಲ್ಲಿ ದಾಖಲಿಸಿದ್ದಾರೆ.

ಇದಕ್ಕೂ ಮೊದಲು ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯೊಬ್ಬರು ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇಲ್ಲೂ ಕೂಡಾ ಉಪೇಂದ್ರ ವಿರುದ್ಧ FIR ದಾಖಲಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ನಟ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪನವರು ಈ ಬಗ್ಗೆ ಮಾತನಾಡಿ, ‘ಉಪೇಂದ್ರ ಅವರಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು, ಸಾಮಾಜಿಕ ಅಸಮಾನತೆಗಳ ಪ್ರಜ್ಞೆಯಿದೆ ಅಂದುಕೊಂಡಿದ್ದೆ. ಆದರೆ ಸಮಾಜದ ಕೆಳವರ್ಗಗಳ ಬಗೆಗಿರುವ ಅವರ ಅಸಹನೆ ಬಗ್ಗೆ ಬಲವಾಗಿ ಖಂಡಿಸುತ್ತೇನೆ. ಅವರೊಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಇಂತಹ ವ್ಯಕ್ತಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು, ಸಾಮಾಜಿಕ ಅಸಮಾನತೆಗಳ ಪ್ರಜ್ಞೆ ಇರಬೇಕಿತ್ತು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ಸಮುದಾಯ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದಿದ್ದಾರೆ.

ಹೈಕೋರ್ಟ್‌ ಮೊರೆ ಹೋದ ನಟ | ತಮ್ಮ ಮಾತುಗಳ ಬಗ್ಗೆ ಆಕ್ರೋಷ ವ್ಯಕ್ತವಾಗುತ್ತಿದ್ದಂತೆ ನಟ ಉಪೇಂದ್ರ ಜಾಲತಾಣದಲ್ಲಿದ್ದ ತಮ್ಮ ವೀಡಿಯೋ ಡಿಲೀಟ್‌ ಮಾಡಿದ್ದರು. ಅಲ್ಲದೆ ಮತ್ತೊಂದು ಪೋಸ್ಟ್‌ ಹಾಕಿ, ಈ ಪ್ರಮಾದಕ್ಕೆ ಕ್ಷಮೆಯಾಚಿದ್ದರು. ಅವರ ಈ ಪೋಸ್ಟ್‌ ಕೂಡ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವಂತಿದೆ ಎಂದು ಹಲವರು ಆರೋಪಿಸಿದ್ದರು. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪರ – ವಿರೋಧದ ಚರ್ಚೆಗಳು ನಡೆದಿದ್ದವು. ಈಗ ದೂರುಗಳು ದಾಖಲಾಗಿ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಉಪೇಂದ್ರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ‘ಅಚಾತುರ್ಯದಿಂದಾಗಿ ಈ ಮಾತುಗಳು ಪ್ರಸ್ತಾಪವಾಗಿವೆ. ಈ ಬಗ್ಗೆ ನಾನು ಈಗಾಗಲೇ ಕ್ಷಮೆಯಾಚಿಸಿದ್ದೇನೆ. ಜಾಲತಾಣದಲ್ಲಿ ನಾನು ಮಾತನಾಡಿದ್ದ ವಿಡಿಯೋ ಕೂಡ ಡಿಲೀಟ್‌ ಮಾಡಿದ್ದೇನೆ’ ಎಂದು FIR ರದ್ದು ಕೋರಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

LEAVE A REPLY

Connect with

Please enter your comment!
Please enter your name here