ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರಣ್ಯ ಇಲಾಖೆ ನಡೆಸಿದ್ದ ಕಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರ್ಜುನ ಆನೆ ಸಾವನ್ನಪ್ಪಿತ್ತು. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ದಿನ ಕಳೆದಂತೆ ಈ ಘಟನೆ ಮರೆಯಾಗುತ್ತಾ ಹೋಗಿತ್ತು. ಆದರೆ ಈಗ ನಟ ದರ್ಶನ್‌ ಮತ್ತೆ ಅರ್ಜುನನಿಗಾಗಿ ದನಿ ಎತ್ತಿದ್ದಾರೆ.

ಕನ್ನಡ ನಾಡಿನ ಹಬ್ಬವೆಂದೇ ಕರೆಯಲ್ಪಡುವ ಮೈಸೂರು ದಸರಾದಲ್ಲಿ ಎಂಟು ಸಲ ಅಂಬಾರಿ ಹೊತ್ತಿದ್ದ ಅರ್ಜುನ ಕಳೆದ ವರ್ಷ ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾವನ್ನಪ್ಪಿತ್ತು. ಅರ್ಜುನನ ಅನ್ಯಾಯವಾದ ಸಾವು ಕನ್ನಡಿಗರಿಗೆ ತೀವ್ರವಾಗಿ ನೋವು ನೀಡಿತ್ತು. ಮೂಕಪ್ರಾಣಿಯ ಸಾವಿನಿಂದ ಮನನೊಂದ ಕನ್ನಡಿಗರು ಅರಣ್ಯ ಇಲಾಖೆಯ ವಿರುದ್ಧ ತಿರುಗಿಬಿದ್ದಿದ್ದರು. ಅರ್ಜುನನ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಎಂದು ಪ್ರತಿಭಟನೆಗಿಳಿದಿದ್ದರು. ಅರ್ಜುನನ ಸಾವಿಗೆ ನ್ಯಾಯಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಜಸ್ಟಿಸ್‌ ಫಾರ್‌ ಅರ್ಜುನ ಅಭಿಯಾನ ನಡೆಸಿದ್ದರು. ಆಗ ಇದಕ್ಕೆ ಸೆಲೆಬ್ರಿಟಿಗಳೂ ಜೊತೆಯಾಗಿದ್ದರು.

ಸಮಯ ಕಳೆದಂತೆ ಅರ್ಜುನನ ಸಾವಿನ ವಿಷಯ ತಣ್ಣಗಾಯಿತು. ಆದರೆ, ಪ್ರಾಣಿ ಪ್ರೇಮಿ ದರ್ಶನ್‌ ಈಗ ಅರ್ಜುನನ ಸಮಾಧಿ ವಿಷಯವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಮತ್ತೆ ಆನೆ ಪರವಾಗಿ ದನಿ ಎತ್ತಿದ್ದಾರೆ. ‘ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ’ ಅಂತ ಬರೆದು ಅರ್ಜುನನ ಜೊತೆಗಿನ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಅಂಬಾರಿ ಹೊರುವ ಆನೆಗಳು ಸತ್ತಾಗ ಅಂತ್ಯಕ್ರಿಯೆ ನಡೆಸುವ ಕಡೆಯಲ್ಲೇ ಅರ್ಜುನನ್ನೂ ಮಣ್ಣು ಮಾಡಬೇಕೆಂಬ ಕೂಗು ಆಗಲೇ ಕೇಳಿ ಬಂದಿತ್ತು. ಆದರೆ, ಸರ್ಕಾರ ಈ ವಿಷಯದಲ್ಲಿ ಯಾರ ಮಾತೂ ಕೇಳಿಲ್ಲ. ಜನರ ವಿರೋಧದ ನಡುವೆಯೇ ಅರ್ಜುನ ಸಾವನ್ನಪಿದ ಸ್ಥಳದಲ್ಲೇ ಅಂತ್ಯಕ್ರಿಯೆ ಮಾಡಲಾಗಿತ್ತು. ಈಗ ಅರ್ಜುನನ ಸಮಾಧಿ ವಿಷಯದಲ್ಲೂ ಸಹ ನಿರ್ಲಕ್ಷ್ಯ ವಹಿಸಿರೋದು ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ.

LEAVE A REPLY

Connect with

Please enter your comment!
Please enter your name here