ಕೋವಿಡ್‌ ಭಯ 2021ರಲ್ಲೂ ಮುಂದುವರೆಯಿತು. ಥಿಯೇಟರ್‌ನಿಂದ ವಿಮುಖರಾದ ಜನರು ಓಟಿಟಿಗೆ ಹತ್ತಿರವಾದರು. ಚಿತ್ರನಿರ್ಮಾಪಕರು ಓಟಿಟಿ ವೇದಿಕೆಯನ್ನೀಗ ಗಂಭೀರವಾಗಿ ಪರಿಗಣಿಸಿದ್ಧರೆ ಸಿನಿಮಾ ವಿತರಕರು ಹಾಗೂ ಪ್ರದರ್ಶಕರು ಆತಂಕದಲ್ಲಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ವರ್ಷವೊಂದರಲ್ಲಿ ಸರಾಸರಿ ಇನ್ನೂರು ಚಿತ್ರಗಳು ತೆರೆಕಾಣುತ್ತಿದ್ದವು. ಕೋವಿಡ್‌, ಲಾಕ್‌ಡೌನ್‌ನಿಂದಾಗಿ 2020ರಲ್ಲಿ 80 ಸಿನಿಮಾಗಳು ಬಿಡುಗಡೆಯಾದರೆ ಈ ವರ್ಷದ ಸಿನಿಮಾಗಳ ಸಂಖ್ಯೆ 100ರ ಗಡಿ ದಾಟಿದೆ. ಇವುಗಳ ಪೈಕಿ ಶೇ.70ರಷ್ಟು ಹೊಸಬರ ಸಿನಿಮಾಗಳು. ಕೋವಿಡ್‌ನಿಂದಾಗಿ ಸ್ಟ್ರಕ್‌ ಆಗಿದ್ದ ಸಿನಿಮಾಗಳು ಕಳೆದ ಮೂರು ತಿಂಗಳಲ್ಲಿ ವಾರಕ್ಕೆ ನಾಲ್ಕೈದರಂತೆ ತೆರೆಕಂಡವು. ಸಿನಿಮಾ ರಿಲೀಸ್‌ ಮಾಡಿದ ಖುಷಿಯಿತ್ತಾದರೂ ನಿರ್ಮಾಪಕರಿಗೆ ಬಾಕ್ಸ್‌ ಆಫೀಸ್‌ನಲ್ಲೇನೂ ಲಾಭವಾಗಲಿಲ್ಲ. ಜನರು ಇನ್ನೂ ಪೂರ್ಣವಾಗಿ ಕೊರೊನಾ ಭಯದಿಂದ ಮುಕ್ತರಾಗಿಲ್ಲ. ಹಾಗಾಗಿ ಹಿಂದೆ ಥಿಯೇಟರ್‌ಗೆ ಬರುತ್ತಿದ್ದ ದೊಡ್ಡ ಪ್ರೇಕ್ಷಕ ಬಳಗ ಕಾಣಿಸುತ್ತಿಲ್ಲ. ದೊಡ್ಡ ನಟರ ಸಿನಿಮಾಗಳು ಒಂದು ಹಂತಕ್ಕೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ಸಫಲವಾದರೂ ಹೊಸಬರ ಸಿನಿಮಾಗಳು ಕಳೆಗುಂದಿದವು.

ಲಾಕ್‌ಡೌನ್‌ ತೆರವುಗೊಳಿಸುತ್ತಿದ್ದಂತೆ ದೊಡ್ಡ ಹೀರೋಗಳ ಚಿತ್ರಗಳು ಸದ್ದು ಮಾಡಿದವು. ಪೊಗರು, ಯುವರತ್ನ, ಕೋಟಿಗೊಬ್ಬ 3, ಭಜರಂಗಿ 2, ಸಲಗ, ಮದಗಜ ಸೇರಿದಂತೆ ಪ್ರಮುಖ ನಾಯಕನಟರ ಸುಮಾರ ಹದಿನೈದು ಚಿತ್ರಗಳು ತೆರೆಕಂಡವು. ಕಳೆದ ವಾರ ‘ರೈಡರ್‌’ ಮತ್ತು ‘ಬಡವ’ರಾಸ್ಕಲ್‌’ ಚಿತ್ರಗಳು ಬಿಡುಗಡೆಯಾಗಿವೆ. ಇವುಗಳ ಪೈಕಿ ವರ್ಷದ ಕೊನೆಯ ಸೂಪರ್‌ಹಿಟ್‌ ಚಿತ್ರವಾಗಿ ‘ಬಡವ ರಾಸ್ಕಲ್‌’ ದಾಖಲಾಗಿದೆ. ಇನ್ನು ನಾಳೆ ‘ಲವ್‌ ಯೂ ರಚ್ಚು’, ‘ಅರ್ಜುನ್‌ ಗೌಡ’ ಮತ್ತು ‘ಹುಟ್ಟುಹಬ್ಬದ ಶುಭಾಶಯಗಳು’ 2021ರ ಕೊನೆಯ ಚಿತ್ರಗಳಾಗಿ ಬಿಡುಗಡೆಯಾಗುತ್ತಿವೆ. ಮುಂಚೂಣಿ ಹೀರೋಗಳ ಪೈಕಿ ಯಶ್‌, ಉಪೇಂದ್ರ, ರಕ್ಷಿತ್‌ ಶೆಟ್ಟಿ, ಶರಣ್‌ರ ಚಿತ್ರಗಳು ಈ ವರ್ಷ ತೆರೆಕಾಣಲಿಲ್ಲ.

ಗಾಂಧಿನಗರದ ಮೂಲಗಳ ಪ್ರಕಾರ 2021ರ ಬ್ಲಾಕ್‌ ಬಸ್ಟರ್‌ ಎನ್ನುವ ಹೆಗ್ಗಳಿಕೆ ದುನಿಯಾ ವಿಜಯ್‌ ಅಭಿನಯದ ‘ಸಲಗ’ ಚಿತ್ರಕ್ಕೆ ಸಲ್ಲಬೇಕು. ಉಳಿದಂತೆ ದರ್ಶನ್‌ರ ‘ರಾಬರ್ಟ್‌’, ಪುನೀತ್‌ ರಾಜಕುಮಾರ್‌ ಅಭಿನಯದ ‘ಯುವರತ್ನ’, ‘ಗರುಡ ಗಮನ ವೃಷಭ ವಾಹನ’, ‘ಬಡವ ರಾಸ್ಕಲ್‌’ ಚಿತ್ರಗಳು ದೊಡ್ಡಮೊತ್ತದ ಹಣ ಗಳಿಸಿದವು. ಶಿವರಾಜಕುಮಾರ್‌ ಅವರ ‘ಭಜರಂಗಿ 2’ ಸಿನಿಮಾ ಬಿಡುಗಡೆಯಂದೇ ನಟ ಪುನೀತ್‌ ರಾಜಕುಮಾರ್‌ ಅಗಲಿದ್ದು, ಆ ಚಿತ್ರಕ್ಕೆ ಹಿನ್ನೆಡೆಯಾಯ್ತು. ಈ ಸಿನಿಮಾ ಇದೀಗ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ವೀಕ್ಷಿಸುತ್ತಿರುವುದು ವಿಶೇಷ. ಥಿಯೇಟರ್‌ ಗಳಿಕೆಯಲ್ಲಿನ ನಷ್ಟವನ್ನು ಓಟಿಟಿಯಲ್ಲಿ ಇದು ತುಂಬಿಕೊಂಡಿತು. ರಾಬರ್ಟ್‌, ಯುವರತ್ನ ಚಿತ್ರಗಳು ಕೂಡ ಓಟಿಟಿಯಲ್ಲಿ ದೊಡ್ಡ ಮೊತ್ತದ ಹಣ ಪಡೆದಿವೆ. ‘ದೃಶ್ಯ 2’, ‘ಮದಗಜ’ ಚಿತ್ರಗಳು ಓಟಿಟಿಗೆ ಬರಲು ಸಿದ್ಧವಾಗಿವೆ. ಹೀಗೆ, ಓಟಿಟಿ ಮಾಧ್ಯಮ ದೊಡ್ಡ ಚಿತ್ರಗಳ ನಿರ್ಮಾಪಕರಿಗೆ ಪರ್ಯಾಯ ಮಾರುಕಟ್ಟೆಯ ರೂಪದಲ್ಲಿ ಕಾಣಿಸುತ್ತಿದೆ.

ರಮೇಶ್‌ ಅರವಿಂದ್‌ ಅವರ ‘100’ ಚಿತ್ರಕ್ಕೆ ಥಿಯೇಟರ್‌ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಪ್ರೇಮ್‌ ಅಭಿನಯದ ‘ಪ್ರೇಮಂ ಪೂಜ್ಯಂ’ ಸೇರಿದಂತೆ ಇನ್ನು ಕೆಲವು ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸಿನಿಮಾಮಂದಿರಗಳಿಗೆ ಕರೆತರುವಲ್ಲಿ ವಿಫಲವಾದವು. ಕೋವಿಡ್‌ ಭಯ, ಥಿಯೇಟರ್‌ ಲಭ್ಯತೆ, ಪ್ರಚಾರದ ಕೊರತೆ ಹೀಗೆ ಕಾರಣಗಳು ಹಲವು. ಆದರೆ ಫ್ಯಾಮಿಲಿ ಆಡಿಯನ್ಸ್‌ ಹೊಂದಿರುವ ಇವರ ಚಿತ್ರಗಳಿಗೆ ಓಟಿಟಿಯಲ್ಲಿ ಡಿಮ್ಯಾಂಡ್‌ ಬರುವ ಸಾಧ್ಯತೆಗಳಿವೆ. ‘ರತ್ನನ್‌ ಪ್ರಪಂಚʼ, ‘ಇಕ್ಕಟ್‌’, ‘ಕನ್ನಡಿಗ’ ಸೇರಿದಂತೆ ಕೆಲವು ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದವು. ಇದು ಹೊಸ ಅಲೆ ಮತ್ತು ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಪಕರು, ನಿರ್ದೇಶಕರಿಗೆ ಭರವಸೆ ಮೂಡಿಸಿದೆ. ಮುಂದಿನ ವರ್ಷ ಓಟಿಟಿಗಾಗಿಯೇ ತಯಾರಾಗುತ್ತಿರುವ ಸಿನಿಮಾಗಳು ಸ್ಟ್ರೀಮ್‌ ಆಗುವ ಸೂಚನೆ ಸಿಕ್ಕಿದೆ.

“ಕೋವಿಡ್‌ನಿಂದಾಗಿ ಜನರು ಥಿಯೇಟರ್‌ಗೆ ಬರುವುದು ಕಡಿಮೆಯಾಯ್ತು. ಓಟಿಟಿ ಪರ್ಯಾಯ ವೇದಿಕೆಯಾಗಿದ್ದು ಹೌದು. ಇದರಿಂದ ಚಿತ್ರೋದ್ಯಮದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಸರಿಯಾದ ಅಸೆಸ್‌ಮೆಂಟ್‌ ಆಗುತ್ತಿಲ್ಲ” ಎನ್ನುತ್ತಾರೆ ಹಿರಿಯ ಸಿನಿಮಾ ವಿಶ್ಲೇಷಕ ಡಾ.ಕೆ.ಪುಟ್ಟಸ್ವಾಮಿ. ಕನ್ನಡಿಗರು ಓಟಿಟಿಯಲ್ಲಿ ಕನ್ನಡ ಸಿನಿಮಾಗಳನ್ನಲ್ಲದೇ ದಕ್ಷಿಣ ಭಾರತದ ಇತರೆ ಭಾಷೆಯ ಸಿನಿಮಾಗಳು, ಹಿಂದಿ ಚಿತ್ರಗಳನ್ನೂ ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದಾರೆ ಎನ್ನುವುದು ಅವರ ಗ್ರಹಿಕೆ. ಚಿತ್ರಮಂದಿರ ಮಾಲೀಕರಾದ ಮೋಹನ್‌ ಬಾಬು ಅವರ ಅಭಿಪ್ರಾಯದಂತೆ ಓಟಿಟಿಯಿಂದ ಸಾಂಪ್ರದಾಯಕ ಥಿಯೇಟರ್‌ ವ್ಯವಸ್ಥೆಗೆ ಪೆಟ್ಟು ಬಿದ್ದಿರುವುದು ಹೌದು. “ಚಿತ್ರನಿರ್ಮಾಪಕರು ಈಗ ಥಿಯೇಟರ್‌ ರಿಲೀಸ್‌ ಜೊತೆ ಓಟಿಟಿ ಮಾರುಕಟ್ಟೆ ಬಗ್ಗೆಯೂ ಆಲೋಚಿಸುತ್ತಿದ್ದಾರೆ. ಆದರೆ ವಿತರಕರು ಮತ್ತು ಪ್ರದರ್ಶಕರಿಗೆ ಈ ಮೀಡಿಯಾ ಆತಂಕ ತಂದೊಡ್ಡಿದೆ” ಎನ್ನುವುದು ಅವರ ಅನುಭವದ ಮಾತು.

ಯುವ ಚಿತ್ರನಿರ್ದೇಶಕ ಕೆ.ಎಂ.ಚೈತನ್ಯ ಅವರು ಓಟಿಟಿ ಪ್ಲಾಟ್‌ಫಾರ್ಮ್‌ ಎಮರ್ಜ್‌ ಆಗುತ್ತಿರುವ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಾರೆ. ಇದೇ ವೇಳೆ ಕನ್ನಡ ಸಿನಿಮಾ ಮಾರುಕಟ್ಟೆಯಲ್ಲಿ ಓಟಿಟಿ, ಲೆವೆಲ್‌ ಫೀಲ್ಡಿಂಗ್‌ ಮಟ್ಟಕ್ಕೆ ವರ್ಕ್‌ ಆಗುತ್ತಿಲ್ಲ ಎಂದೂ ಗುರುತಿಸುತ್ತಾರೆ. “ನಮ್ಮಲ್ಲಿ ಕಂಟೆಂಟ್‌ ಓರಿಯೆಂಟೆಡ್‌ ಸಿನಿಮಾಗಳಿಗೆ ಮೊದಲಿನಿಂದಲೂ ದೊಡ್ಡ ಸಂಖ್ಯೆಯಲ್ಲಿ ಥಿಯೇಟರ್‌ಗಳು ಸಿಗುತ್ತಿಲ್ಲ. ಒಂದೊಮ್ಮೆ ಸಿಕ್ಕರೂ ಆಡಿಯನ್ಸ್‌ ಬರುತ್ತಿರಲಿಲ್ಲ. ಮಲ್ಟಿಪ್ಲೆಕ್ಸ್‌ಗಳು ಶುರುವಾದಾಗ ಅಂತಹ ಚಿತ್ರಗಳಿಗೆ ಲಾಭವಾಯ್ತು. ಅಫ್‌ಕೋರ್ಸ್‌ ಇದರ ಮುಂದುವರೆದ ಭಾಗ ಓಟಿಟಿ. ಪಿಆರ್‌ಕೆ ಪ್ರೊಡಕ್ಷನ್ಸ್‌, ಹೊಂಬಾಳೆ ಬ್ಯಾನರ್‌ನಂತಹ ದೊಡ್ಡ ನಿರ್ಮಾಣ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸದೃಢಗೊಳ್ಳಬಹುದು. ಫಿಲ್ಮ್‌ ಮೇಕರ್‌ಗಳಿಗೆ ಕನ್ನಡಿಗರಿಗೆ ಇಷ್ಟವಾಗುವಂತಹ ಸಿನಿಮಾಗಳನ್ನು ಮಾಡುವ ಸವಾಲೂ ಇದೆ” ಎನ್ನುತ್ತಾರವರು.

ಬಾಲಿವುಡ್‌ನಲ್ಲಾದರೂ ಚಿತ್ರದ ಗಳಿಕೆ ಕುರಿತಂತೆ ನಿಖರ ಅಂಕಿ – ಅಂಶಗಳು ಸಿಗುತ್ತವೆ. ನಮ್ಮಲ್ಲಿ ಚಿತ್ರದ ಜಯಾಪಜಯಗಳನ್ನು ಅಳೆಯಲು ಸೂಕ್ತ ಮಾನದಂಡಗಳಿಲ್ಲ. ಓಟಿಟಿ ಮಾರುಕಟ್ಟೆಯ ಸಾಧಕ – ಬಾಧಕಗಳ ಕುರಿತೂ ಇದೇ ಅಭಿಪ್ರಾಯವಿದೆ. ಈಗ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ದಕ್ಷಿಣ ಭಾರತದ ಸ್ಟಾರ್‌ ಹೀರೋಗಳ ಸಿನಿಮಾಗಳು ತಯಾರಾಗುತ್ತಿವೆ. ಇದು ಶುರುವಾಗಿದ್ದೇ ರಾಜಮೌಳಿ ಅವರ ‘ಬಾಹುಬಲಿ’ ಮತ್ತು ಯಶ್‌ ಅಭಿನಯದ ‘ಕೆಜಿಎಫ್‌’ ಚಿತ್ರಗಳ ಮೂಲಕ. ಇದರಿಂದ ಕನ್ನಡ ಚಿತ್ರಗಳಿಗೆ ಲಾಭವೇ ಎನ್ನುವ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ.

ಇತ್ತೀಚೆಗೆ ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ತೆಲುಗು ಸಿನಿಮಾದ ಜೊತೆಜೊತೆಗೇ ರಾಜ್ಯದಲ್ಲಿ ಈ ಸಿನಿಮಾದ ಕನ್ನಡ ಅವತರಣಿಕೆಯೂ ತೆರೆಕಂಡಿತು. ಮೂಲ ತೆಲುಗು ಭಾಷೆಯಲ್ಲಿ ಸಿನಿಮಾ ಆರುನೂರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಂಡರೆ ಕನ್ನಡದಲ್ಲಿ ತೆರೆಕಂಡದ್ದು ಎಂಟು ಸ್ಕ್ರೀನ್‌ಗಳಲ್ಲಷ್ಟೆ! ಈ ಬಗ್ಗೆ ಕನ್ನಡ ಚಿತ್ರರಂಗದ ಕೆಲವರು ಚಕಾರ ಎತ್ತಿದ್ದರು. ನೆಪಮಾತ್ರಕ್ಕೆ ಡಬ್ಬಿಂಗ್‌ ಸಿನಿಮಾ ಬಿಡುಗಡೆಗೊಳಿಸಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಮೂಲ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಾರೆ ಎನ್ನುವುದು ಅವರ ಆತಂಕ. ಇದು ತೆರೆಕಾಣಲಿರುವ ‘RRR’, ‘ರಾಧೇ ಶ್ಯಾಮ್‌’ ಚಿತ್ರಗಳ ಸಂದರ್ಭದಲ್ಲೂ ಮುಂದುವರೆಯಲಿದೆ. ಈ ಪ್ಯಾನ್‌ ಇಂಡಿಯಾ ಲೆಕ್ಕಾಚಾರ ಕನ್ನಡ ಚಿತ್ರಗಳ ಮಾರುಕಟ್ಟೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here