‘ಅಲೈಕ್ಯಾ’ ಚಿತ್ರದ ಎಲ್ಲ ಕೆಲಸಗಳು ಮುಗಿದಿದ್ದು, ಬಿಡುಗಡೆಯ ಹಂತ ತಲುಪಿದೆ. ಸಾತ್ವಿಕ್ ಎಂ.ಭೂಪತಿ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಜಾಲಿ ಟ್ರಿಪ್ ಹೇಗೆ ಹಾರರ್ ಆಗಿ ಬದಲಾಗುತ್ತೆ ಅನ್ನೋದೇ ಈ ಸಿನಿಮಾದ ಒನ್ ಲೈನ್ ಸ್ಟೋರಿ.
ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅಲೈಕ್ಯಾ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಹಿತೇಶ್ ಮೂವೀಸ್ ಲಾಂಛನದಲ್ಲಿ ಎಂ ಭೂಪತಿ ನಿರ್ಮಿಸಿರುವ ಈ ಚಿತ್ರಕ್ಕೆ ಸಾತ್ವಿಕ್ ಎಂ ಭೂಪತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಕೆಲ ಸ್ನೇಹಿತರು ವೀಕೆಂಡ್ ಕಳೆಯಲು ಜಾಲಿ ಟ್ರಿಪ್ ಹೊರಡುತ್ತಾರೆ. ಗೆಸ್ಟ್ ಹೌಸ್ವೊಂದಕ್ಕೆ ತೆರಳಿ ಅಲ್ಲಿ ತಂಗಿದಾಗ ಅಲ್ಲಿ ಅನಿರೀಕ್ಷಿತವಾಗಿ ನಡೆದ ಕೆಲವು ಘಟನೆಗಳಿಗಳಿಂದ ಆ ಅತಿಥಿ ಗೃಹದಲ್ಲಿ ಆತ್ಮಗಳಿರುವುದು ಗೊತ್ತಾಗುತ್ತದೆ. ಆಗವರು ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅ ಮನೆಯಲ್ಲಿದ್ದ ಬೆಲೆಬಾಳುವ ಅಮೂಲ್ಯ ವಜ್ರವನ್ನು ಆತ್ಮದ ಸಹಾಯದಿಂದ ಅವರು ಹೇಗೆ ವಶಪಡಿಸಿಕೊಂಡು ಹೊರ ಬರುತ್ತಾರೆ. ಅಷ್ಟಕ್ಕೂ ಅವರಿಗೂ 21-21-21 ನಂಬರಿಗೂ ಇರುವ ಸಂಬಂಧವೇನು ಎಂಬುದೇ ಈ ಚಿತ್ರದ ಕಥೆ.
ಇದೇ ವಾರ ತೆರೆಗೆ ಬರಲಿರುವ ಈ ಸಿನಿಮಾಗೆ ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಪಂಚಮಜೀವ, ಸುಪ್ರೀತ್ ಶರ್ಮ ಹಾಗೂ ಸುರಭಿ ಭಾರದ್ವಾಜ್ ಸಿನಿಮಾದ ಹಾಡುಗಳಿಗೆ ಧನಿಯಾಗಿದ್ದಾರೆ. ದರ್ಶಿನಿ ಆರ್ ಒಡೆಯರ್, ನಿಸರ್ಗ, ಮನ್ವೀರ್ ಚವ್ಹಾನ್, ವಿವೇಕ್ ಚಕ್ರವರ್ತಿ, ವಜ್ರ, ಕಾವ್ಯಪ್ರಕಾಶ್, ಜಾಹ್ನವಿ ವಿ, ನಾರಾಯಣ್ ಸ್ವಾಮಿ ಡಿಎಂ., ಸಾತ್ವಿಕ್ ಎಂ.ಭೂಪತಿ, ಶಿವಕುಮಾರ್, ಡಿಕೆ, ಮಂಜು, ಶಿವಮ್ಮ ಪ್ರಮುಖ ತಾರಾಗಣದಲ್ಲಿದ್ದಾರೆ. ಸಾಯಿ ಸೋಮೇಶ್ ಸಂಗೀತ, ಬುಗುಡೆ ವೀರೇಶ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಹರಿಪ್ರಸಾದ್ ಸಾಹಿತ್ಯ ಹಾಗೂ ತೇಜ್ ಆರಾಧ್ಯ ನೃತ್ಯ ನಿರ್ದೇಶನ ಚಿತ್ರಕ್ಕಿದೆ.